I can’t breath | ಮನುಷ್ಯರು ಮನುಷ್ಯರಾಗಿ ಬಾಳಲು ಅದೆಷ್ಟು ಸವಾಲುಗಳು?

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 10, 2020 | 10:51 AM

ಶ್ರೀಮಂತ -ಬಡವರ ನಡುವಿನ ವ್ಯತ್ಯಾಸದ ಗೆರೆ ಕೋವಿಡ್ ಕಾಲದಲ್ಲಿ ಮತ್ತಷ್ಟು ಅಂತರ ಪಡೆದುಕೊಂಡಾಗ ಮಾನವ ಹಕ್ಕುಗಳ ಉಲ್ಲಂಘನೆ ಸಾಧ್ಯತೆಯೂ ಜಾಸ್ತಿ

I cant breath | ಮನುಷ್ಯರು ಮನುಷ್ಯರಾಗಿ ಬಾಳಲು ಅದೆಷ್ಟು ಸವಾಲುಗಳು?
ಪ್ರಾತಿನಿಧಿಕ ಚಿತ್ರ
Follow us on

‘I can’t breath’ (ಉಸಿರಾಡಲು ಆಗ್ತಿಲ್ಲ) ನಿಮಗೆ ಈಗಾಗಲೇ ಈ ಪದದ ಪರಿಚಯ ಇರಬಹುದು. ಕೇವಲ ಏಳು ತಿಂಗಳ ಹಿಂದೆ ಅಮೆರಿಕದ ಬಿಳಿ ಮೈಬಣ್ಣದ ಪೊಲೀಸ್ ಅಧಿಕಾರಿಯೊಬ್ಬ ತನ್ನ ಎಡ ಮೊಣಕಾಲಿನಿಂದ ಕಪ್ಪು ವರ್ಣೀಯನೊಬ್ಬನ ಕತ್ತು ಒತ್ತಿ ಹಿಡಿದಾಗ, ಕೆಳಗೆ ಬಿದ್ದಿದ್ದ ವ್ಯಕ್ತಿ ಜೀವ ಬಿಡುವ ಮೊದಲು ಹೇಳಿದ ಮಾತುಗಳಿವು.

ಅಮೆರಿಕದಲ್ಲಿ ಬಿಳಿ ಜನಾಂಗದ ಪೊಲೀಸ್ ಅಧಿಕಾರಿ ಎಡ ಮೊಣಕಾಲಿನಿಂದ ಕತ್ತು ಒತ್ತಿಹಿಡಿದಾಗ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಹೇಳಿದ ಮಾತು ಇದು. ಮೇ 25, 2020 ಅಮೆರಿಕದ ಮಿನ್ನಿಯಪೊಲಿಸ್​​ನಲ್ಲಿ ನಡೆದ ಈ ಕ್ರೌರ್ಯವನ್ನು ಯಾರೋ ಮೊಬೈನ್​ನಲ್ಲಿ ಚಿತ್ರೀಕರಿಸಿದ್ದ ಕಾರಣ ಅದು ಜಗತ್ತಿಗೆ ತಿಳಿಯಿತು. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಬಿಳಿಯರ ದಬ್ಬಾಳಿಕೆಯ ವಿರುದ್ಧ ‘ಬ್ಲಾಕ್ ಲೈವ್ಸ್ ಮ್ಯಾಟರ್’ ಎಂಬ ಘೋಷಣೆಯೊಂದಿಗೆ ಜನರು ಬೀದಿಗಿಳಿದರು.

ಹೀಗೆ ಪ್ರತಿಭಟನೆ ನಡೆಸಿದವರಲ್ಲಿ ಹಲವು ವರ್ಣಗಳ, ವರ್ಗದ, ದೇಶದ ಜನರು ಇದ್ದರು. ಸೇನಾಪಡೆ, ಪೊಲೀಸ್, ಕೋವಿಡ್ ಮಹಾಮಾರಿಯನ್ನೂ ಲೆಕ್ಕಿಸದೆ ಜನರು ಪ್ರತಿಭಟನೆಯ ದನಿಯಾದರು. ಅಮೆರಿಕದ ಹಲವು ನಗರಗಳಲ್ಲಿ ಕ್ಷಿಪ್ರಗತಿಯಲ್ಲಿ ಪ್ರತಿಭಟನೆಗಳು ವ್ಯಾಪಿಸಿದ್ದು, ಪೊಲೀಸರು ಮೊಣಕಾಲೂರಿ ತಪ್ಪಾಯಿತು ಎಂದು ಒಪ್ಪಿಕೊಂಡಿದ್ದು ನಮ್ಮ ಕಣ್ಣೆದುರು ದಾಖಲಾದ ಇತಿಹಾಸ. ಮಾನವ ಹಕ್ಕುಗಳ ರಕ್ಷಣೆಗಾಗಿ ಇತ್ತೀಚೆಗೆ ನಡೆದ ಅತಿ ದೊಡ್ಡ ಪ್ರತಿಭಟನೆಯೂ ಇದಾಗಿದೆ.

ಇಂದು World Human Rights Day 2020 ವಿಶ್ವ ಮಾನವ ಹಕ್ಕುಗಳ ದಿನ. ಈ ಹಿನ್ನೆಲೆಯಲ್ಲಿ ಅಮೆರಿಕದ ಘಟನೆಯನ್ನು ಅವಲೋಕಿಸಿದರೆ ಹತ್ತಾರು ಅರ್ಥಗಳು ಹೊಳೆಯುತ್ತವೆ.

ಕೋವಿಡ್ ಕಾಲದಲ್ಲಿ ಮಾನವ ಹಕ್ಕುಗಳು
ಕೋವಿಡ್ ಸಾಂಕ್ರಾಮಿಕದ ನಡುವೆ ಈಗ ನಾವು ಬದುಕುತ್ತಿದ್ದೇವೆ. ಈ ಸಾಂಕ್ರಾಮಿಕ ರೋಗದಿಂದಾಗಿ ಹಲವು ಜನರ ಜೀವನಮಾರ್ಗವೇ ಇಲ್ಲದಾಯಿತು. ದೇಶದ ಆರ್ಥಿಕ ವ್ಯವಸ್ಥೆ ಕುಸಿಯಿತು. ಶ್ರೀಮಂತ-ಬಡವರ ನಡುವಿನ ಅಂತರ ಹೆಚ್ಚಾದಂತೆ ಮಾನವ ಹಕ್ಕು ಉಲ್ಲಂಘನೆಯ ಸಾಧ್ಯತೆಯೂ ಜಾಸ್ತಿ. ಈ ವರ್ಷ ಮಾನವ ಹಕ್ಕುಗಳ ದಿನಾಚರಣೆಯ ಆಶಯ ‘Recover Better — Stand Up For Human Rights’ (ಚೇತರಿಸಿಕೊಳ್ಳಿ, ಮಾನವ ಹಕ್ಕುಗಳಿಗಾಗಿ ಮೇಲೆದ್ದು ನಿಲ್ಲಿ) ಎಂಬುದಾಗಿದೆ.

ಕೋವಿಡೋತ್ತರ ಜಗತ್ತಿನಲ್ಲಿ ನಾವು ತಾರತಮ್ಯ ಹೋಗಲಾಡಿಸಿ ಉತ್ತಮ ಸಮಾಜದ ನಿರ್ಮಾಣ ಮಾಡಬೇಕಿದೆ ಎಂದು ವಿಶ್ವಸಂಸ್ಥೆ ಸಂದೇಶ ಸಾರಿದೆ. ದೇಶಗಳು ತಮ್ಮ ಆರ್ಥಿಕ ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ಕಾಪಾಡಲು ಕ್ರಮ ಕೈಗೊಳ್ಳಬೇಕು. ಜನರು ಪರಸ್ಪರ ಬೆಂಬಲವಾಗಿ ನಿಲ್ಲಬೇಕಾದ ಅಗತ್ಯವೂ ಇಲ್ಲಿದೆ ಎಂದು ಹೇಳಿರುವ ವಿಶ್ವಸಂಸ್ಥೆ ಸುಸ್ಥಿರ ಅಭಿವೃದ್ಧಿಗೆ ಉತ್ತೇಜನ ನೀಡಬೇಕೆಂದು ಹೇಳಿದೆ.

ಇದನ್ನೂ ಓದಿ: Explainer | ಸ್ವಾಭಿಮಾನದ ಬಾಳ್ವೆಯ ತಳಹದಿ ಮಾನವ ಹಕ್ಕುಗಳು 

ಪ್ರಾತಿನಿಧಿಕ ಚಿತ್ರ

ಫ್ರೆಡ್ರಿಕ್ ಡೌಗ್ಲಸ್ ಹೀಗೆ ಹೇಳಿದ್ದರು

‘ಒಬ್ಬ ವ್ಯಕ್ತಿ ಹೇಗೆ ಗುಲಾಮನಾಗುತ್ತಾನೆ ಎಂಬುದನ್ನು ನೀವು ನೋಡಿದ್ದೀರಿ. ಒಬ್ಬ ಗುಲಾಮ ಹೇಗೆ ಮನುಷ್ಯನಾಗುತ್ತಾನೆ ಎಂಬುದನ್ನೂ ನೀವು ನೋಡುತ್ತೀರಿ’ ಎಂದಿದ್ದರು ಫ್ರೆಡ್ರಿಕ್ ಡೌಗ್ಲಸ್ (frederick douglass). ಗುಲಾಮರ ಕುಟುಂಬದಲ್ಲಿ ಹುಟ್ಟಿ ಅಸಾಧಾರಣ ಇಚ್ಛಾಶಕ್ತಿಯಿಂದ ಸ್ವಾತಂತ್ರ್ಯದ ಹೊಸ ಬೆಳಕು ಹರಿಸಿ ಗುಲಾಮಗಿರಿ ವಿರುದ್ಧ ಹೋರಾಡಿದ ಅಮೆರಿಕದ ನಾಯಕರಾಗಿದ್ದರು ಫ್ರೆಡ್ರಿಕ್.

ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್​​ಗೆ ಇವರೇ ಪ್ರೇರಣೆ. ಮಾನವ ಹಕ್ಕುಗಳ ಹೋರಾಟದ ಇತಿಹಾಸದಲ್ಲಿ ಕಪ್ಪು ಜನಾಂಗೀಯರ ದಿಟ್ಟವಾದ ನಡೆಗೆ ಕಾರಣರಾದವರು ಇವರೇ. ಜಗತ್ತಿನಾದ್ಯಂತ ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳು ಆಗಾಗ ವರದಿಯಾಗುತ್ತಿವೆ. ಬಾಲ ಕಾರ್ಮಿಕರ ಮೇಲೆ ದೌರ್ಜನ್ಯ, ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕಾಗಿ ಕೊಲೆಯಾಗುವ ವ್ಯಕ್ತಿಗಳು, ಹುಟ್ಟಿದ ನೆಲ ಬಿಟ್ಟು ವಲಸೆ ಹೋಗಬೇಕಾಗಿ ಬಂದವರು, ಮೈ ಬಣ್ಣದ ಆಧಾರದ ಮೇಲೆ ಜನಾಂಗೀಯ ನಿಂದನೆಗೊಳಗಾದವರು, ಲಿಂಗ ತಾರತಮ್ಯಕ್ಕೆ ಬಲಿಯಾದವರು. ಇವರೆಲ್ಲರೂ ಮಾನವ ಹಕ್ಕುಗಳಿಂದ ವಂಚಿತರಾದವರೇ ಆಗಿದ್ದಾರೆ.

ಇದನ್ನೂ ಓದಿ: ಗುಲಾಮಗಿರಿಯ ನಾನಾ ರೂಪ: ಸಿಗುವುದೇ ಆಧುನಿಕ ಗುಲಾಮಗಿರಿಯಿಂದ ಮುಕ್ತಿ

ಬ್ಲಾಕ್ ಲೈವ್ಸ್ ಮ್ಯಾಟರ್ಸ್

ವ್ಯಕ್ತಿ ಸ್ವಾತಂತ್ರ್ಯದ ಸೋಪಾನ

ಮಾನವ ಹಕ್ಕುಗಳ ಇತಿಹಾಸದಲ್ಲಿ ಅತಿ ಮಹತ್ತವಾದ ಅಧ್ಯಾಯ ಶುರುವಾಗಿದ್ದು 1215ರಲ್ಲಿ. ಇಂಗ್ಲೆಂಡಿನ ಮ್ಯಾಗ್ನಕಾರ್ಟ (ಇಂಗ್ಲೆಂಡ್​​ನ ಜಾನ್ ದೊರೆ ಹೊರಡಿಸಿದ ಮಹಾಸನ್ನದು) ಮನುಷ್ಯನ ವ್ಯಕ್ತಿ ಸ್ವಾತಂತ್ರ್ಯ, ಹಕ್ಕುಗಳಿಗೆ ಸೋಪಾನವಾಯಿತು. 1688ರಲ್ಲಿ ನಾಗರಿಕರ ಮೂಲ ಹಕ್ಕುಗಳನ್ನು ಎತ್ತಿ ಹಿಡಿಯುವ ‘ಬಿಲ್ ಆಫ್ ರೈಟ್ಸ್ 1688’ ಕಾಯ್ದೆಗೆ ಅಂಗೀಕಾರ ಸಿಕ್ಕಿದ್ದು ಮಹತ್ತರವಾದ ಘಟನೆ ಎಂದೇ ಉಲ್ಲೇಖಿಸಲ್ಪಡುತ್ತದೆ. ಇಂಗ್ಲೆಂಡ್​​ನ ರಾಜಕೀಯ ಶಕ್ತಿಕೇಂದ್ರವಾಗಿ ಪಾರ್ಲಿಮೆಂಟ್ ಸ್ಥಾಪಿಸಲು ಶಾಂತಿಯುತ ರೀತಿಯಲ್ಲಿ ನಡೆಸಿದ ಕ್ರಾಂತಿ ಇದಾಗಿತ್ತು.

1776ರಲ್ಲಿ ಅಮೆರಿಕದಲ್ಲಿ ಸ್ವಾತಂತ್ಯದ ಘೋಷಣೆ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವಕ್ಕೆ ಎಂಬೀ ಆಶಯಗಳನ್ನು ಎತ್ತಿ ಹಿಡಿದ ಫ್ರೆಂಚ್ ವಿಪ್ಲವ ಮಾನವ ಹಕ್ಕುಗಳ ಇತಿಹಾಸದಲ್ಲಿ ಮೈಲಿಗಲ್ಲುಗಳಾಗಿವೆ. ಭಾರತಕ್ಕೆ ಸ್ವಾತಂತ್ರ್ಯ ಲಭಿಸುವ ಮೊದಲೇ ಅಂದರೆ 1928ರಲ್ಲಿ ಮೋತಿಲಾಲ್ ನೆಹರು ಕಮಿಟಿಯು ಭಾರತೀಯರಿಗೂ ವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳನ್ನು ಭಾರತೀಯರಿಗೆ ನೀಡುವಂತೆ ವಸಾಹತು ಆಡಳಿತಕ್ಕೆ ಒತ್ತಾಯಿಸಿತ್ತು.

ಎರಡನೇ ಜಾಗತಿಕ ಮಹಾಯುದ್ಧದ ವೇಳೆ ಆಶ್ವಿಝ್ (Auschwitz concentration camp), ಬುಹೇನ್ ವಾಲ್ಡ್, ಬೆರ್ಗೆನ್ ಬೆಲ್ಸನ್ ಮೊದಲಾದ ನಾಝಿ ಸಾವಿನ ಶಿಬಿರಗಳಲ್ಲಿ ನಡೆದಿದ್ದು ಲೆಕ್ಕಕ್ಕೆ ನಿಲುಕದಷ್ಟು ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣ. ಅಡೋಲ್ಫ್ ಹಿಟ್ಲರ್​​ನ ಜನಾಂಗೀಯ ದ್ವೇಷದಿಂದಾಗಿ ಅದೆಷ್ಟೋ ಮನುಷ್ಯರು ಬದುಕುವ ಹಕ್ಕುಗಳನ್ನು ಕಳೆದುಕೊಂಡರು. ಯುದ್ಧಭೂಮಿಗಳಲ್ಲಿ ಹೋರಾಡಿ ಸತ್ತವರೆಷ್ಟೋ. ಅದಕ್ಕಿಂತ ಹೆಚ್ಚು ಮಂದಿ ಅಂಗವಿಕಲರಾದರು. ಆ ಕ್ರೌರ್ಯಕ್ಕೆ ಕೊನೆಗಾಣಿಸುವ ನಿಟ್ಟಿನಲ್ಲಿಯೇ ಮಾನವ ಹಕ್ಕುಗಳ ದಿನ ಘೋಷಣೆ ಆಗಿದ್ದು.

ಜನ ಸಾಮಾನ್ಯರಿಂದಲೂ ಸಂವಿಧಾನ ಕರ್ತೃವಿನ ಸ್ಮರಣೆ: #BharathRatna ಟ್ರೆಂಡಿಂಗ್

Published On - 9:39 am, Thu, 10 December 20