ರೈತರ ನಿರಾಸಕ್ತಿ! ಮಾಯವಾಗುತ್ತಿದೆ ಮೈಸೂರು ಮಲ್ಲಿಗೆ.. ಪರಿಮಳವೇ ಇಲ್ಲದ ಮದುರೈ ಮಲ್ಲಿಗೆ ಆಟಾಟೋಪ ಜಾಸ್ತಿಯಾಗಿದೆ!

| Updated By: ಸಾಧು ಶ್ರೀನಾಥ್​

Updated on: Jan 22, 2021 | 5:42 PM

ಮೈಸೂರು ಮಲ್ಲಿಗೆಯ ಜಾಗವನ್ನು ಈಗ ಮಧುರೈ ಮಲ್ಲಿಗೆ ಆವರಿಸಿದೆ. ಮೈಸೂರಿನ ಬಹುತೇಕ ಮಾರುಕಟ್ಟೆಗಳಲ್ಲಿ ಸಿಗುತ್ತಿರುವುದು ಮಧುರೈ ಮಲ್ಲಿಗೆ ಹೂವು.

ರೈತರ ನಿರಾಸಕ್ತಿ! ಮಾಯವಾಗುತ್ತಿದೆ ಮೈಸೂರು ಮಲ್ಲಿಗೆ.. ಪರಿಮಳವೇ ಇಲ್ಲದ ಮದುರೈ ಮಲ್ಲಿಗೆ ಆಟಾಟೋಪ ಜಾಸ್ತಿಯಾಗಿದೆ!
ಮೈಸೂರು ಮಲ್ಲಿಗೆ
Follow us on

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಅಂದರೆ ಥಟ್ಟನೆ ನೆನಪಾಗೋದು‌ ಅರಮನೆ, ಚಾಮುಂಡಿ ಬೆಟ್ಟ, ಮೃಗಾಲಯ. ಇದರ ಜೊತೆಗೆ ಮೈಸೂರಿನ ಬ್ರ್ಯಾಂಡ್‌ಗಳಾದ ಮೈಸೂರು ಪಾಕ್, ಮೈಸೂರು ಶ್ರೀಗಂಧ, ಮೈಸೂರು ವೀಳ್ಯದೆಲೆ, ಮೈಸೂರು ಬದನೆ ಹಾಗೂ ಮೈಸೂರು ಮಲ್ಲಿಗೆ. ಆದರೆ ಇದೀಗ ಮೈಸೂರು ಮಲ್ಲಿಗೆ ಮೆಲ್ಲಗೆ ಮರೆಯಾಗುತ್ತಿದೆ. ಇದು ಹೀಗೆ ಮುಂದುವರೆದರೆ ನಮ್ಮ ಮುಂದಿನ ಪೀಳಿಗೆ ಮೈಸೂರು ಮಲ್ಲಿಗೆಯನ್ನು ನೋಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ.

ಮೈಸೂರು ಮಲ್ಲಿಗೆಯ ಹಿನ್ನೆಲೆ
ಮೈಸೂರು ಮಲ್ಲಿಗೆ ಮೈಸೂರಿನ ಪ್ರಮುಖ ಬ್ರ್ಯಾಂಡ್‌ಗಳಲ್ಲಿ ಒಂದು. ಇದರ ಸುವಾಸನೆಯಿಂದಲೇ ಹಲವರ ಮನಸೂರೆಗೊಂಡ ಖ್ಯಾತಿ ಇದಕ್ಕಿದೆ. ಹೂವುಗಳಲ್ಲೇ ಅತ್ಯಂತ ವಿಶಿಷ್ಟ ಹಾಗೂ ಶ್ರೇಷ್ಠ ಸ್ಥಾನವನ್ನು ಮೈಸೂರು ಮಲ್ಲಿಗೆಗೆ ನೀಡಲಾಗಿದೆ. ಇದಕ್ಕೆ ರಾಜರ ಕಾಲದಿಂದಲೂ ಮಾನ್ಯತೆ ಇದೆ. ಮೈಸೂರು ಹಾಗೂ ಮೈಸೂರಿನ ಸುತ್ತಮುತ್ತಲಿನ ಪ್ರದೇಶಗಳಾದ ಟಿ.ನರಸೀಪುರ, ಶ್ರೀರಂಗಪಟ್ಟಣ ಸೇರಿ ಹಲವು ಕಡೆ ರಾಜರ ಕಾಲದಿಂದಲೂ ಮಲ್ಲಿಗೆ ಬೆಳೆಯಲಾಗುತ್ತಿದೆ. ಈ ಮಲ್ಲಿಗೆಯ ಸುಗಂಧವು ರಾಜರಿಗೆ ಅತ್ಯಂತ ಪ್ರಿಯವಾಗಿತ್ತು. ಮೈಸೂರು ಅರಸರ ಪೂಜೆಗೆ, ಹಬ್ಬಗಳಲ್ಲಿ, ಅರಮನೆಯ ದೇವರ ಮನೆಗೆ, ಅರಮನೆ ಅಲಂಕಾರಕ್ಕೆ, ವಿಶೇಷ ಸಂದರ್ಭಗಳಲ್ಲಿ ಮಲ್ಲಿಗೆ ಹೂವನ್ನು ಹೆಚ್ಚು ಹೆಚ್ಚು ಬಳಸಲಾಗುತ್ತಿತ್ತು. ಇದೇ ಕಾರಣಕ್ಕಾಗಿ ರೈತರು ಮಲ್ಲಿಗೆ ಹೂವನ್ನು ಅತ್ಯಂತ ಮುತುವರ್ಜಿಯಿಂದ ಬೆಳೆಯುತ್ತಿದ್ದರು.

ಮೈಸೂರು ಮಲ್ಲಿಗೆ ಬೆಳೆಯಲು ನಿರಾಸಕ್ತಿ
ಇತ್ತೀಚೆಗೆ ಮೈಸೂರು ಮಲ್ಲಿಗೆಯನ್ನು ಬೆಳೆಯಲು ರೈತರು ನಿರಾಸಕ್ತಿ ತೋರಿಸುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಅದರ ನಿರ್ವಹಣಾ ವೆಚ್ಚ ಹೆಚ್ಚಾಗಿರುವುದು. ಮಲ್ಲಿಗೆ ತಳಿಯನ್ನು ದುಬಾರಿ ಹಣ ಕೊಟ್ಟು ಖರೀದಿಸಬೇಕು, ಬೆಳೆಯಲು ಸಾಕಷ್ಟು ಮುತುವರ್ಜಿ ಹಾಗೂ ತಾಳ್ಮೆ ಇರಬೇಕು, ಮಗುವಿನಂತೆ ಆರೈಕೆ ಮಾಡಬೇಕು, ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕು, ಕೀಟಗಳಿಂದ ರಕ್ಷಣೆ ನೀಡಬೇಕು, ರೋಗ ತಗುಲದಂತೆ ಎಚ್ಚರಿಕೆ ವಹಿಸಬೇಕು. ಇಷ್ಟೆಲ್ಲಾ ಆದ ಮೇಲೂ ಇವುಗಳ ಕೊಯ್ಲು ಮಾಡಲು ಹೆಚ್ಚಿನ ಜನರ ಅವಶ್ಯಕತೆ ಇದೆ. ಇಷ್ಟು ಹರಸಾಹಸಪಟ್ಟು ಮಾರುಕಟ್ಟೆಗೆ ಮೈಸೂರು ಮಲ್ಲಿಗೆ ತಂದರೂ ಸೂಕ್ತ ಬೆಲೆ ಸಿಗುವುದಿಲ್ಲ. ಇದು ಸಹಜವಾಗಿ ಬೆಳೆಗಾರರು ಮಲ್ಲಿಗೆಯಿಂದ ವಿಮುಖರಾಗುವಂತೆ ಮಾಡಿದೆ.

ಮೈಸೂರು ಮಲ್ಲಿಗೆ ಜಾಗಕ್ಕೆ ಬಂತು ಮದುರೈ ಮಲ್ಲಿಗೆ
ಮೈಸೂರು ಮಲ್ಲಿಗೆಯ ಜಾಗವನ್ನು ಈಗ ಮದುರೈ ಮಲ್ಲಿಗೆ ಆವರಿಸಿದೆ. ಮೈಸೂರಿನ ಬಹುತೇಕ ಮಾರುಕಟ್ಟೆಗಳಲ್ಲಿ ಸಿಗುತ್ತಿರುವುದು ಮದುರೈ ಮಲ್ಲಿಗೆ ಹೂವು. ನೋಡಲು ಮೈಸೂರು ಮಲ್ಲಿಗೆ ಹೂವಿನಂತೆಯೇ ಇರುವ ಮದುರೈ ಮಲ್ಲಿಗೆಯಲ್ಲಿ ಮೈಸೂರು ಮಲ್ಲಿಗೆಯ ಘಮ ಇರುವುದಿಲ್ಲ. ಮೈಸೂರು ಮಲ್ಲಿಗೆ ಹಾಗೂ ಮದುರೈ ಮಲ್ಲಿಗೆಯ ಕೆಲ ಪ್ರಮುಖ ವ್ಯತ್ಯಾಸಗಳನ್ನು ನೋಡುವುದಾದರೆ,

ಮೈಸೂರು ಮಲ್ಲಿಗೆ
ಮೈಸೂರು ಮಲ್ಲಿಗೆಯ ವೈಜ್ಞಾನಿಕ ಹೆಸರು ಜಾಸ್ಮಿನಿಂ ಗ್ರಾಂಡಿಪ್ಲೋರಿಯಂ.
ಇದು ವಿಶಿಷ್ಟವಾದ ಹಾಗೂ ಗಾಢ ಸುಗಂಧ ಹೊಂದಿದೆ.
ಒಂದು, 3,  7 ದಳಗಳನ್ನು ಹೊಂದಿದೆ.
ಬೇರೆ ಮಲ್ಲಿಗೆಗಳಿಗಿಂತ ಗುಂಡಾಗಿರುತ್ತದೆ.
ಸುಗಂಧ ದ್ರವ್ಯ, ಮೇಕ್‌ಅಪ್ ತಯಾರಿಕೆಗೆ ಬಳಕೆಯಾಗುತ್ತದೆ.

ಮದುರೈ ಮಲ್ಲಿಗೆ
ಮದುರೈ ಮಲ್ಲಿಗೆಯ ವೈಜ್ಞಾನಿಕ ಹೆಸರು ಜಾಸ್ಮೇನಿಯಂ
ಇದರಲ್ಲಿ ಸುವಾಸನೆ ಇರುವುದಿಲ್ಲ
ಇದು ಮೊಗ್ಗಿನಂತೆ ಕಾಣುತ್ತದೆ
ಇದನ್ನು ಕೇವಲ ಹಾರಗಳಿಗೆ ಮಾತ್ರ ಬಳಸಲಾಗುತ್ತದೆ.

ಮಾರ್ಗದರ್ಶನ ನೀಡಲು ತಯಾರಿದ್ದೇವೆ:

ಮೈಸೂರು ಮಲ್ಲಿಗೆ ತಳಿಗಳು ಕುಕ್ಕರಹಳ್ಳಿ ಕೆರೆಯ‌ ನರ್ಸರಿಯಲ್ಲಿ ಸಿಗುತ್ತಿದೆ. ಖರ್ಚು ಹೆಚ್ಚು ಎಂಬ ಕಾರಣಕ್ಕೆ ರೈತರು ಖರೀದಿಗೆ ಮುಂದೆ ಬರುತ್ತಿಲ್ಲ. ಮೈಸೂರು ಮಲ್ಲಿಗೆ ಬೆಳೆಯಲು ನಿರಾಸಕ್ತಿ ತೋರುತ್ತಿದ್ದಾರೆ. ಮೈಸೂರು ಮಲ್ಲಿಗೆ ಬೆಳೆಯುವ ರೈತರಿಗೆ ನಮ್ಮ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ. ರೈತರಿಗೆ ಬೇಕಾದ ಮಾರ್ಗದರ್ಶನವನ್ನು ನಾವು ನೀಡಲು ಸಿದ್ಧರಿದ್ದೇವೆ.

-ಕೆ ರುದ್ರೇಶ್, ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ ಮೈಸೂರು

ಬೇರೆಯವರಿಗೆ ಪರಿಮಳ ನೀಡಲು ಹೋಗಿ ನಮ್ಮ ಬಾಳು ಗಬ್ಬೆದ್ದಿದೆ:

ಈಗಾಗಲೇ ಮೈಸೂರು ಮಲ್ಲಿಗೆಯಿಂದ ಸಾಕಷ್ಟು ಕೈ ಸುಟ್ಟುಕೊಂಡಿದ್ದೇವೆ. ಬೇರೆಯವರಿಗೆ ಸುವಾಸನೆ ನೀಡಲು ಹೋಗಿ ನಮ್ಮ ಬಾಳು ಗಬ್ಬೆದ್ದು ನಾರುತ್ತಿದೆ. ಅಕಾಲಿಕ ಮಳೆ, ಹವಾಮಾನ ವೈಪರೀತ್ಯಗಳಿಂದ ಮಲ್ಲಿಗೆ ಬೆಳೆ ರಕ್ಷಿಸುವುದು ತುಂಬಾ ಕಷ್ಟ.
ಇನ್ನು ಬೆಳೆ ನಷ್ಟವಾದಾಗ ಸರ್ಕಾರ ಸೂಕ್ತ ಪರಿಹಾರವಾಗಲಿ ಅಥವಾ ಬೆಲೆ ಕುಸಿದಾಗ ಸೂಕ್ತ ಬೆಂಬಲ ಬೆಲೆಯನ್ನಾಗಲೀ ನೀಡುವುದಿಲ್ಲ. ಮೈಸೂರು ಮಲ್ಲಿಗೆಗೆ ಬೇರೆ ಬೇರೆ ಜಿಲ್ಲೆ ಹಾಗೂ ಹೊರ ರಾಜ್ಯದಲ್ಲೂ ಬೇಡಿಕೆ ಇದೆ. ಸರ್ಕಾರ ಈ ಬಗ್ಗೆ ಗಮನಹರಿಸಿ ನಮಗೆ ಸಹಕಾರ ನೀಡಿದರೆ ನಾವು ಮೈಸೂರು ಮಲ್ಲಿಗೆ ಬೆಳೆಯಲು ಧೈರ್ಯ ಮಾಡುತ್ತೇವೆ.
-ಬಸವರಾಜು, ರೈತ

ಮೈಸೂರು ಮಲ್ಲಿಗೆ ಬೆಳೆಯಲು ರೈತರು ಉತ್ಸುಕರಾಗಿದ್ದಾರೆ. ಅಧಿಕಾರಿಗಳು ಸಹಕಾರ ನೀಡಲೂ ಸಿದ್ದರಾಗಿದ್ದಾರೆ. ಆದರೆ ಇಬ್ಬರ ನಡುವೆ ಸಮನ್ವಯದ ಕೊರತೆ ಇರುವಂತೆ ಕಾಣುತ್ತಿದೆ. ಹೀಗಾಗಿ ಅಧಿಕಾರಿಗಳು ಮತ್ತು ರೈತರು ಪರಸ್ಪರ ಚರ್ಚಿಸಿ ವೈಜ್ಞಾನಿಕ ವಿಧಾನಗಳ ಮೂಲಕ ಕಡಿಮೆ ಖರ್ಚಿನಲ್ಲಿ ಮೈಸೂರು ಮಲ್ಲಿಗೆ ಬೆಳೆದು ಮಾರಾಟ ಮಾಡುವಂತೆ ಆಗಬೇಕು. ಆಗ ಮತ್ತೆ ಮೈಸೂರು ಮಲ್ಲಿಗೆಯ ಘಮಲು ಎಲ್ಲೆಡೆ ಪಸರಿಸುತ್ತದೆ‌. ಇದು ಆದಷ್ಟು ಬೇಗ ಆಗಲಿ. ನಮ್ಮ ಮೈಸೂರು ಮಲ್ಲಿಗೆಯ ಕಂಪು ದೇಶ ವಿದೇಶಗಳಿಗೂ ವ್ಯಾಪಿಸಲಿ ಎನ್ನುವುದೇ ಟಿವಿ9 ಡಿಜಿಟಲ್‌ನ ಆಶಯ.

ವಿಕಲಚೇತನನಾದ್ರೂ ಕೃಷಿ ಕಾಯಕದಲ್ಲಿ ತೊಡಗಿ ಇತರರಿಗೆ ಮಾದರಿ.. ಇಲ್ಲಿದೆ ನೋಡಿ ವಿಶೇಷ ರೈತನ ಕೃಷಿ ಬದುಕು

Published On - 3:51 pm, Fri, 22 January 21