ಕಾಲದ ಲೆಕ್ಕಾಚಾರಕ್ಕೂ ಹಾಗೂ ಮನುಷ್ಯನ ಆಯುಷ್ಯಕ್ಕೂ ಸಂಬಂಧವಿದೆ ಎನ್ನಬಹುದು. ಏಕೆಂದರೆ ಮನುಷ್ಯನ ಪೂರ್ಣ ಪ್ರಮಾಣದ ಆಯುಷ್ಯ ಗರಿಷ್ಠ 120 ವರ್ಷಗಳೆಂದು ಹೇಳಲಾಗಿದೆ. ಅದರಲ್ಲಿ ಅರ್ಧ ಭಾಗ 60 ಆಗಿದೆ. ಒಬ್ಬ ವ್ಯಕ್ತಿ ಹುಟ್ಟಿದ ಸಂವತ್ಸರ ಮತ್ತೆ ಬರಬೇಕೆಂದರೆ 60 ವರ್ಷಗಳು ಬೇಕಾಗುತ್ತದೆ (Sanatana Dharma). ಅಂದರೆ ಆ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಸಂಪೂರ್ಣ ಸಂವತ್ಸರಗಳನ್ನು ನೋಡಿರುತ್ತಾನೆ, ಇದೇ ಎರಡನೇ ಬಾರಿ ಪೂರ್ಣಗೊಂಡರೆ ಅಂದರೆ 120 ವರ್ಷಗಳಿಗೆ ಮನುಷ್ಯನಿಗೆ ಎರಡನೇ ಬಾರಿಗೆ ಸಂವತ್ಸರಗಳ ಆವರ್ತ ಪೂರ್ಣಗೊಳ್ಳುತ್ತದೆ. ಆದ್ದರಿಂದ ಒಟ್ಟು 60 ಸಂವತ್ಸರಗಳಿವೆ (Sixty years) ಎನ್ನಲಾಗುತ್ತದೆ.
60 ವರ್ಷಗಳಿಗೊಮ್ಮೆ ಮನೋಧರ್ಮಗಳ ಜೊತೆಗೆ ಮಾನವಧರ್ಮಗಳು ಸಹ ಬದಲಾವಣೆಗೊಳಗಾಗುತ್ತವೆ. ಜಾತಕಚಕ್ರದ ಪ್ರಭಾವವೂ ಬದಲಾಗುತ್ತದೆ. ಋತುಧರ್ಮಗಳಲ್ಲಿಯೂ ವ್ಯತ್ಯಾಸ ಬರುತ್ತದೆ. ಮಾನವರ ವೇಷಭೂಷಣಗಳಲ್ಲಿ, ಭಾಷೆಗಳಲ್ಲಿ ವ್ಯತ್ಯಾಸ ಕಾಣುತ್ತವೆ. ಸಾಗರ, ಸಮುದ್ರಗಳ ಮಧ್ಯದಲ್ಲಿರುವ ಭೂಮಿಯ ಸ್ವರೂಪವೂ ಹೆಚ್ಚು ಕಡಿಮೆ ಆಗುತ್ತದೆ.ಭೂಮಿ ತನ್ನ ಶಕ್ತಿಯಲ್ಲಿ ಏರುಪೇರುಗಳನ್ನು ಕಾಣುತ್ತದೆ. ಮಾನವ ಸ್ವಭಾವದಲ್ಲಿಯೂ, ಸ್ವರೂಪದಲ್ಲಿಯೂ ನೂತನ ಮಾರ್ಪಾಟುಗಳಾಗುತ್ತವೆ.
ಪ್ರಾಚೀನರು ಇದಕ್ಕಾಗಿಯೇ ಈ 60 ವರ್ಷಗಳ ಪದ್ಧತಿಯನ್ನಿಟ್ಟಿದ್ದಾರೆ. ಈ ಪ್ರಾಕೃತಿಕ ಬದಲಾವಣೆಯ ವೈಖರಿಯನ್ನೊಮ್ಮೆ ಪರಿಶೀಲಿಸಿ ನೋಡೋಣ. ಮನುಷ್ಯರ ದೈಹಿಕ ಶಕ್ತಿ 60 ವರ್ಷಗಳಿಗೆ ಮಾತ್ರ ಸೀಮಿತವಾಗಿದೆ. 60 ನಂತರ ದೈಹಿಕ ಶಕ್ತಿಯ ಜೊತೆಗೆ ನೆನಪಿನ ಶಕ್ತಿಯೂ ಕ್ಷೀಣಗೊಳ್ಳುತ್ತದೆ. ನರಗಳು ಬಲಹೀನವಾಗಿ, ಎಲುಬುಗಳು ದುರ್ಬಲವಾಗಿ ಮಾಂಸಖಂಡಗಳು ಕರಗಿ, ಚರ್ಮವು ಮುದುಡಿ ಸುಕ್ಕುಗಟ್ಟಲು ಪ್ರಾರಂಭವಾಗುತ್ತದೆ. ಈ 60 ವರ್ಷಗಳೊಳಗೆ ಅಪಮೃತ್ಯುವು ಒಮ್ಮೆ ತನ್ನ ಪ್ರಭಾವವನ್ನು ತೋರಿಸುತ್ತದೆ. ಅಂದರೆ ಯಾವುದೋ ರೀತಿ ಪ್ರಾಣಾಪಾಯವು ಬಂದುಹೋಗುತ್ತದೆ. 60 ವರ್ಷಗಳ ನಂತರ ಒಂಭತ್ತು ವರ್ಷಗಳಿಗೊಮ್ಮೆ ದೇಹಕ್ಕೆ ಪ್ರಾಣಾಪಾಯಗಳು ಬರುತ್ತಲೇ ಇರುತ್ತವೆಂದು `ಸನಾತನ ಧರ್ಮ ಶಾಸ್ತ್ರ’ ಹೇಳುತ್ತಿದೆ.
ಪ್ರಭವನಾಮ ವರ್ಷದಿಂದ ಅಕ್ಷಯನಾಮ ವರ್ಷಕ್ಕೆ 60 ವರ್ಷಗಳು ಮುಗಿದು ಮತ್ತೇ ಪ್ರಭವನಾಮ ವರ್ಷವು ಪ್ರಾರಂಭವಾಗುತ್ತದೆ. ಇದೇ ರೀತಿ ಮನುಷ್ಯರಿಗೆ 60 ವರ್ಷಗಳು ಮುಗಿದ ನಂತರ ಮತ್ತೆ ಬಾಲ್ಯಾವಸ್ಥೆ ಪ್ರಾರಂಭವಾಗುತ್ತದೆ. ಅಂದರೆ ಚಿಕ್ಕಮಕ್ಕಳಂತೆ ವರ್ತಿಸುತ್ತಾರೆ. ಸಣ್ಣಸಣ್ಣ ವಿಷಯಗಳಿಗೆ ಜಗಳವಾಡುವುದು ಮುನಿಸಿಕೊಳ್ಳುವುದು, ಕಂಡದ್ದನ್ನೆಲ್ಲಾ ತಿನ್ನಬೇಕೆಂದು ಬಯಸುವುದು. ಕೆಲವರಿಗೆ ಸುಳ್ಳು ಹೇಳುವುದು, ಚಾಡಿ ಹೇಳುವುದು, ಅಕಾರಣವಾಗಿ ಅಳುವುದು. ಹೆಚ್ಚು ಸಮಯ ನಿದ್ದೆ ಮಾಡುವುದು ಮುಂತಾದವೆಲ್ಲವೂ 60ರಲ್ಲಿ ಪ್ರಾರಂಭವಾಗುತ್ತವೆ.
ಅದಕ್ಕೆ “ಅರವತ್ತು ಬಂದರೆ ಅರಳು ಮರಳು” ಅನ್ನುವುದು. 60ನೆಯ ವಯಸ್ಸಿನಿಂದ ತಾವು ಹಡೆದ ಮಗಳು/ಮಗನಿಗೆ ತಾವೇ ಮಕ್ಕಳಾಗಿಬಿಡುತ್ತಾರೆ. ಜಗತ್ತಿನ ಎಲ್ಲಾ ಮಕ್ಕಳು 60 ವರ್ಷದ ತಂದೆತಾಯಿಯರನ್ನು ತಾನು ಹಡೆದ ಮಕ್ಕಳಂತೆಯೇ ಪ್ರೀತಿಯಿಂದ, ಆದರದಿಂದ ನೋಡಬೇಕು ಎನ್ನುತ್ತದೆ ‘ಸನಾತನ ಧರ್ಮ ಶಾಸ್ತ್ರ’.
ಪುರುಷಶಕ್ತಿ 60 ವರ್ಷಗಳಿಗೆ ಮುಗಿಯುತ್ತದೆ. ಆದಕಾರಣ ಧನ ವ್ಯಾಮೋಹ, ಸ್ತ್ರೀಚಾಪಲ್ಯ, ಅಧಿಕಾರದಾಹ, ಯಜಮಾನಿಕೆಯು ಮುಂತಾದವುಗಳನ್ನು ಬದಿಗೊತ್ತಿ ಸಾಮಾನ್ಯನಂತೆ ಬಾಳು ಸಾಗಿಸಬೇಕು, ಮಕ್ಕಳನ್ನು ಗೆಳೆಯರಂತೆ, ಮನೆಗೆ ಮಂತ್ರಿಯಂತೆ ನೋಡಿ ನಡೆಯಬೇಕು. ಮನಸ್ಸನ್ನು ಆಧ್ಯಾತ್ಮಿಕತೆಗೆ ಮರಳಿಸಬೇಕು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಧನದಾಸೆ ಬಿಡಬೇಕು. ಎಲ್ಲಾ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು, ಯಜಮಾನಿಕೆಯ ದರ್ಪವನ್ನು ಬಿಡಬೇಕು.
ಸನಾತನ ಧರ್ಮ’ದ 60 ವರ್ಷಗಳ ಅಂತರಾರ್ಥವೇ ಇದು…
ಶತಮಾನಂಭವತು ಎಂದು ಹಿರಿಯರು ಆಶೀರ್ವಾದ ಮಾಡುವುದು ಈ ವೇದ ಸಂಪ್ರದಾಯವಷ್ಟೇ! 6 ದಶಕಗಳ ಜೀವನವನ್ನು ಸಾರ್ಥಕವಾಗಿ, ಸಮಾಧಾನದಿಂದ ಯಾರು ಕಳೆಯುತ್ತಾರೋ ಅವರಿಗಿಂತ ಶ್ರೀಮಂತರು, ಧನ್ಯರೂ ಯಾರೂ ಇಲ್ಲ. 60 ವರ್ಷಗಳ ಧನ್ಯ ಜೀವನದ ಸಾಕಾರಗಳೇ ಮಕ್ಕಳು! ಮತ್ತು ಮೊಮ್ಮಕ್ಕಳು! ಮನೆಯವರೆಲ್ಲರೂ ಸೇರಿ ಬಂಧುಮಿತ್ರರನ್ನು ಕರೆದು ತಂದೆ ತಾಯಂದಿರನ್ನು ಕೂಡಿಸಿ ಷಷ್ಠಿಪೂರ್ತಿ ಅಥವಾ ಷಷ್ಟ್ಯಬ್ಧಿ ಮಹೋತ್ಸವವನ್ನು ಮಾಡುವ ಉದ್ದೇಶದ ಪರಮಾರ್ಥವೇನೆಂದರೆ ನಮ್ಮ ಜನ್ಮದಾತರು 60 ವರ್ಷಗಳ ಸಾರ್ಥಕ ಜೀವನ ನಡೆಸಿದ್ದಾರೆ ಎಂದು ಸಾರ್ವಜನಿಕವಾಗಿ ಹೇಳುವುದಕ್ಕೆ!
ಪಂಚಾಂಗದ ಪ್ರಕಾರವಾಗಿ ಹೇಳುವುದಾದರೆ…
ಒಂದು ಚಾಂದ್ರಮಾನ ವರ್ಷವನ್ನು ಸಂವತ್ಸರ ಎಂದು ಕರೆಯುತ್ತೇವೆ. ಸಂವತ್ಸರ ಎಂದರೆ ಸಂಸ್ಕೃತದಲ್ಲಿ ವರ್ಷವಾಗಿದ್ದು, ಹಿಂದೂ ಸಂಪ್ರದಾಯದಲ್ಲಿ ಒಟ್ಟು 60 ಸಂವತ್ಸರಗಳಿವೆ. ಈ ಪದ್ಧತಿಯಲ್ಲಿ 60 ಸಂವತ್ಸರಗಳ ಒಂದು ಚಕ್ರವನ್ನು ಅನುಸರಿಸುತ್ತೇವೆ. ಈ ಸಂವತ್ಸರಗಳನ್ನು ಪ್ರಭವ, ವಿಭವ, ಶುಕ್ಲ ಇತ್ಯಾದಿ ಹೆಸರುಗಳಿಂದ ಗುರುತಿಸುತ್ತಾರೆ. ಮೊದಲನೆಯ ಸಂವತ್ಸರವು ಪ್ರಭವ ಎಂಬ ಹೆಸರಿನಿಂದ ಕರೆಸಿಕೊಂಡರೆ ಕೊನೆಯ ಅಂದರೆ 60ನೇ ಸಂವತ್ಸರವನ್ನು ಕ್ಷಯ ಅಥವಾ ಅಕ್ಷಯ ಎಂದು ಕರೆಯಲಾಗಿದೆ. ಬೃಹಸ್ಪತಿ ಗ್ರಹವು ಒಂದು ಪ್ರದಕ್ಷಿಣೆ ಮುಗಿಸಲು 12 ವರ್ಷಗಳ ಕಾಲಾವಧಿ ಬೇಕಾಗುತ್ತದೆ. ಇದನ್ನು ಬ್ರಾಹಸ್ಪತ್ಯ ಯುಗ ಎನ್ನುತ್ತಾರೆ. ಇಂತಹ ಐದು ಬ್ರಾಹಸ್ಪತ್ಯ ಯುಗಗಳ ಒಟ್ಟು ಕಾಲಾವಧಿ 60 ವರ್ಷಗಳ ಒಂದು ಚಕ್ರಕ್ಕೆ ಅಷ್ಟು ಸಂವತ್ಸರಗಳೆಂದು ಪರಿಗಣಿಸುತ್ತೇವೆ. ಭಾರತೀಯ ಸಂಪ್ರದಾಯದಲ್ಲಿ 60 ವರ್ಷಗಳನ್ನು ಮಾತ್ರ ನಿರ್ದೇಶಿಸಿದ ನಮ್ಮ ಋಷಿ ಸಂಪ್ರದಾಯದ ಪರಮೋದ್ದೇಶ ಇದಾಗಿದೆ. (ಸದ್ವಿಚಾರ ಸಂಗ್ರಹ)
60 ಸಂವತ್ಸರಗಳ ಪಟ್ಟಿ:
01. ಪ್ರಭವ
02. ವಿಭವ
03. ಶುಕ್ಲ
04. ಪ್ರಮೋದೂತ
05. ಪ್ರಜೋತ್ಪತ್ತಿ
06. ಆಂಗೀರಸ
07. ಶ್ರೀಮುಖ
08. ಭಾವ
09. ಯುವ
10. ಧಾತ್ರಿ
11. ಈಶ್ವರ
12. ಬಹುಧಾನ್ಯ
13. ಪ್ರಮಾಥಿ
14. ವಿಕ್ರಮ
15. ವೃಷ/ ವಿಷು
16. ಚಿತ್ರಭಾನು
17. ಸ್ವಭಾನು
18. ತಾರಣ
19. ಪಾರ್ಥಿವ
20. ವ್ಯಯ
21. ಸರ್ವಜಿತ್
22. ಸರ್ವಧಾರಿ
23. ವಿರೋಧಿ
24. ವಿಕೃತ
25. ಖರ
26. ನಂದನ
27. ವಿಜಯ
28. ಜಯ
29. ಮನ್ಮಥ
30. ದುರ್ಮುಖಿ
31. ಹೇವಿಳಂಬಿ
32. ವಿಳಂಬಿ
33. ವಿಕಾರಿ
34. ಶಾರ್ವರಿ
35. ಪ್ಲವ
36. ಶುಭಕೃತ್
37. ಶೋಭಾಕೃತ್
38. ಕ್ರೋಧಿ
39. ವಿಶ್ವಾವಸು
40. ಪರಾಭವ
41. ಪ್ಲವಂಗ
42. ಕೀಲಕ
43. ಸೌಮ್ಯ
44. ಸಾಧಾರಣ
45. ವಿರೋಧಿಕೃತ್
46. ಪರಿಧಾವಿ
47. ಪ್ರಮಾದೀ
48. ಆನಂದ
49. ರಾಕ್ಷಸ
50. ನಳ
51. ಪಿಂಗಳ
52. ಕಾಳಯುಕ್ತಿ
53. ಸಿದ್ಧಾರ್ಥಿ
54. ರುದ್ರ / ರೌದ್ರಿ
55. ದುರ್ಮತಿ
56. ದುಂದುಭಿ
57. ರುಧಿರೋದ್ಗಾರಿ
58. ರಕ್ತಾಕ್ಷಿ
59. ಕ್ರೋಧನ
60. ಅಕ್ಷಯ/ಕ್ಷಯ