ಕೇವಲ 8 ರನ್​ ನೀಡಿ ಬರೋಬ್ಬರಿ 7 ವಿಕೆಟ್ ಉರುಳಿಸಿದ ಆಸೀಸ್ ವೇಗಿ

|

Updated on: Sep 23, 2024 | 7:06 PM

Sam Elliott: ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟ್ಯಾಸ್ಮೆನಿಯಾ ತಂಡದ ಇಬ್ಬರೂ ಆರಂಭಿಕರು ಬೇಗನೆ ಪೆವಿಲಿಯನ್ ಸೇರಿಕೊಂಡರು. ಇದಾದ ಬಳಿಕ ದಾಳಿಗಿಳಿದ ಸ್ಯಾಮ್ ಎಲಿಯಟ್, ಎದುರಾಳಿ ತಂಡದ ಇನ್ನುಳಿದ 7 ವಿಕೆಟ್​ಗಳನ್ನು ಕಬಳಿಸುವಲ್ಲಿ ಯಶಸ್ವಿಯಾದರು.

ಕೇವಲ 8 ರನ್​ ನೀಡಿ ಬರೋಬ್ಬರಿ 7 ವಿಕೆಟ್ ಉರುಳಿಸಿದ ಆಸೀಸ್ ವೇಗಿ
ಸ್ಯಾಮ್ ಎಲಿಯಟ್
Follow us on

ಒಂದೆಡೆ ಭಾರತ ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ ಅಗ್ರ ಅಂತಾರಾಷ್ಟ್ರೀಯ ತಂಡಗಳು ವಿವಿಧ ಸ್ವರೂಪಗಳ ಸರಣಿಯಲ್ಲಿ ನಿರತವಾಗಿದ್ದರೆ, ಇನ್ನೊಂದೆಡೆ ದೇಶೀಯ ಪಂದ್ಯಾವಳಿಗಳು ಸಹ ನಡೆಯುತ್ತಿವೆ. ಅದರಂತೆ ಭಾರತದಲ್ಲಿ ಇತ್ತೀಚೆಗಷ್ಟೇ ದುಲೀಪ್ ಟ್ರೋಫಿ ಮುಕ್ತಾಯಗೊಂಡಿದ್ದರೆ, ಕ್ರಿಕೆಟ್ ದೈತ್ಯ ಆಸ್ಟ್ರೇಲಿಯದಲ್ಲೂ ಸಹ ದೇಶೀಯ ಲಿಸ್ಟ್-ಎ ಟೂರ್ನಮೆಂಟ್ ಏಕದಿನ ಕಪ್‌ ನಡೆಯುತ್ತಿದೆ. ಈ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್ ಸ್ಯಾಮ್ ಎಲಿಯಟ್ ಕೇವಲ 8 ರನ್‌ ನೀಡಿ 7 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

ಕೇವಲ 8 ರನ್​ ನೀಡಿ 7 ವಿಕೆಟ್

ಮೆಲ್ಬೋರ್ನ್​ನಲ್ಲಿ ನಡೆದ ಏಕದಿನ ಕಪ್ ಪಂದ್ಯದಲ್ಲಿ ವಿಕ್ಟೋರಿಯಾ ತಂಡ, ಟ್ಯಾಸ್ಮೆನಿಯಾ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ವಿಕ್ಟೋರಿಯಾ ತಂಡವನ್ನು ಪ್ರತಿನಿಧಿಸುತ್ತಿರುವ ಸ್ಯಾಮ್ ಎಲಿಯಟ್ ತಮ್ಮ ಮಾರಕ ದಾಳಿಯ ಮೂಲಕ ಎದುರಾಳಿ ತಂಡದ ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಇದಕ್ಕಾಗಿ ಅವರು ವ್ಯಯಿಸಿದ್ದು ಕೇವಲ 8 ರನ್ ಮಾತ್ರ ಎಂಬುದು ಅಚ್ಚರಿಯ ಸಂಗತಿಯಾಗಿದೆ. ಇತ್ತ ಎಲಿಯಟ್ ದಾಳಿಗೆ ನಲುಗಿದ ಇಡೀ ಟ್ಯಾಸ್ಮೆನಿಯಾ ತಂಡವು ಕೇವಲ 126 ರನ್‌ಗಳಿಗೆ ಆಲೌಟ್ ಆಯಿತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟ್ಯಾಸ್ಮೆನಿಯಾ ತಂಡದ ಇಬ್ಬರೂ ಆರಂಭಿಕರು ಬೇಗನೆ ಪೆವಿಲಿಯನ್ ಸೇರಿಕೊಂಡರು. ಇದಾದ ಬಳಿಕ ದಾಳಿಗಿಳಿದ ಸ್ಯಾಮ್ ಎಲಿಯಟ್, ಎದುರಾಳಿ ತಂಡದ ಇನ್ನುಳಿದ 7 ವಿಕೆಟ್​ಗಳನ್ನು ಕಬಳಿಸುವಲ್ಲಿ ಯಶಸ್ವಿಯಾದರು. ಪಂದ್ಯದ 11ನೇ ಓವರ್‌ನಲ್ಲಿ ಬೌಲಿಂಗ್ ಮಾಡಲು ಬಂದ ಎಲಿಯಟ್ ಮೊದಲ ಎಸೆತದಲ್ಲಿಯೇ ವಿಕೆಟ್ ಕಬಳಿಸಿದರು. ಆ ಬಳಿಕವೂ ತಮ್ಮ ವಿಕೆಟ್ ಭೇಟೆ ಮುಂದುವರೆಸಿದ ಅವರು ತಮ್ಮ ಖೋಟಾದ 6.2 ಓವರ್‌ಗಳಲಿ 7 ವಿಕೆಟ್‌ಗಳನ್ನು ಪಡೆದರು. ಅಂತಿಮವಾಗಿ ಎಲಿಯಟ್ 8 ಓವರ್‌ಗಳನ್ನು ಬೌಲ್ ಮಾಡಿ 12 ರನ್‌ ನೀಡಿ 7 ವಿಕೆಟ್‌ಗಳೊಂದಿಗೆ ಇನ್ನಿಂಗ್ಸ್ ಕೊನೆಗೊಳಿಸಿದರು. ಎಲಿಯಟ್ ಅವರ ಈ ಬೌಲಿಂಗ್ 55 ವರ್ಷಗಳ ಏಕದಿನ ಕಪ್ ಇತಿಹಾಸದಲ್ಲಿ ಎರಡನೇ ಅತ್ಯುತ್ತಮ ಪ್ರದರ್ಶನವಾಗಿದೆ.

ಎರಡನೇ ಅತ್ಯುತ್ತಮ ಬೌಲಿಂಗ್ ಪ್ರದರ್ಶನ

ಆದಾಗ್ಯೂ, ಎಲಿಯಟ್ 20 ವರ್ಷಗಳ ಹಿಂದೆ ಮಾಡಿದ ದಾಖಲೆಯನ್ನು ಸರಿಗಟ್ಟುವ ಅವಕಾಶವನ್ನು ಕಳೆದುಕೊಂಡರು. 2004ರಲ್ಲಿ ಆಸ್ಟ್ರೇಲಿಯಾದ ವೇಗಿ ಶಾನ್ ಟೈಟ್ 43 ರನ್ ನೀಡಿ 8 ವಿಕೆಟ್ ಕಬಳಿಸಿದ್ದರು. ಆದಾಗ್ಯೂ ಆಸ್ಟ್ರೇಲಿಯಾದ ಶ್ರೇಷ್ಠ ಬೌಲರ್‌ಗಳಾದ ಜೋಶ್ ಹ್ಯಾಜಲ್‌ವುಡ್ (7/36) ಮತ್ತು ಮಿಚೆಲ್ ಸ್ಟಾರ್ಕ್ (6/25) ಅವರ ದಾಖಲೆ ಮುರಿಯುವಲ್ಲಿ ಎಲಿಯಟ್ ಯಶಸ್ವಿಯಾದರು. ಮೊದಲು ಬೌಲಿಂಗ್​ನಲ್ಲಿ ಮ್ಯಾಜಿಕ್ ಮಾಡಿದ್ದ ಎಲಿಯಟ್, ಆ ಬಳಿಕ ಬ್ಯಾಟಿಂಗ್‌ನಲ್ಲೂ ಪ್ರಮುಖ ಕೊಡುಗೆ ನೀಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಗುರಿ ಬೆನ್ನಟ್ಟುವ ಸಮಯದಲ್ಲಿ, ವಿಕ್ಟೋರಿಯಾ ತಂಡ ಕೇವಲ 72 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ 8 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಎಲಿಯಟ್ 28 ಎಸೆತಗಳಲ್ಲಿ 19 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ