ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ಬಹುನಿರೀಕ್ಷಿತ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ (WTC Final 2023) ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಜೂನ್ 7 ರಿಂದ 11 ರ ವರೆಗೆ ಈ ಮಹತ್ವದ ಪಂದ್ಯ ನಡೆಯಲಿದ್ದು, ಇನ್ನು ಕೇವಲ ಒಂದು ದಿನವಷ್ಟೇ ಬಾಕಿಯಿದೆ. ಈಗಾಗಲೇ ಉಭಯ ತಂಡಗಳು ಲಂಡನ್ನ ಪ್ರತಿಷ್ಠಿತ ಕೆನ್ನಿಂಗ್ಟನ್ ಓವಲ್ ಮೈದಾನಕ್ಕೆ (The Oval) ತಲುಪಿದ್ದು ಅಭ್ಯಾಸದಲ್ಲಿ ನಿರತರಾಗಿದ್ದಾರೆ. ರೋಹಿತ್ ಪಡೆ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
143 ವರ್ಷಗಳ ಇತಿಹಾಸ ಹೊಂದಿರುವ ಓವಲ್ ಗ್ರೌಂಡ್‌ನಲ್ಲಿ ಇದೇ ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ನಡೆಯುತ್ತಿದೆ. ಅಲ್ಲದೆ ಈ ಅಂಗಳದಲ್ಲಿ ಬೌಲರ್‌ಗಳಿಗೆ ಪಿಚ್ ಹೇಗೆ ವರ್ತಿಸುತ್ತದೆ ಎಂಬುದು ಇನ್ನೂ ಗೊತ್ತಾಗದ ಸಂಗತಿ. ಮಿಸ್ಟ್ರಿ ಪಿಚ್ ಎಂದೇ ಹೇಳಲಾಗುವ ಕೆನ್ನಿಂಗ್ಟನ್ ಓವಲ್‌ನಲ್ಲಿ ವಿಶ್ವದ ಎರಡನೇ ಅತ್ಯಂತ ಹಳೆಯ ಕ್ರೀಡಾಂಗಣ. ಈ ಪಿಚ್ ಹಿಂದೆ ವೇಗಿಗಳಿಗೆ ಅನುಕೂಲಕರವಾಗಿದ್ದರೆ, ಕಳೆದ ಆರು ಪಂದ್ಯಗಳು ಇದಕ್ಕೆ ವಿರುದ್ಧವಾಗಿ ಕಂಡಿವೆ. 2016 ರಿಂದ ಓವಲ್‌ನಲ್ಲಿ ನಡೆದ ಕೊನೆಯ 6 ಟೆಸ್ಟ್‌ಗಳು ದಿನಗಳು ಕಳೆದಂತೆ ಪಿಚ್ ಕ್ರಮೇಣ ಉತ್ತಮಗೊಳ್ಳುತ್ತವೆ ಎಂದು ತೋರಿಸಿದೆ.
Fact Check: ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ಎಂಎಸ್ ಧೋನಿ; ವೈರಲ್ ಪೋಸ್ಟ್ Fake
ಕೆನ್ನಿಂಗ್ಟನ್ ಓವಲ್ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಯೋಜಿಸಿದ ದಾಖಲೆಯನ್ನು ಕೂಡ ಹೊಂದಿದೆ. ಇಂಗ್ಲೆಂಡಿನ ಹವಾಮಾನವು ಯಾವಾಗಲೂ ಬದಲಾಗುತ್ತಿರುತ್ತದೆ ಮತ್ತು ಅನಿರೀಕ್ಷಿತವಾಗಿರುವುದರಿಂದ ಚೆಂಡು ಮತ್ತು ಬ್ಯಾಟ್ನ ಕಾಳಗದಲ್ಲಿ ಯಾರು ಗೆಲ್ಲುತ್ತಾರೆ ಎಂದು ನಿರೀಕ್ಷಿಸುವುದು ಕಷ್ಟ. ಟಾಸ್‌ನ ಫಲಿತಾಂಶ ನಿರ್ಣಾಯಕ ಎಂದು ಹೇಳಬಹುದು. ಪಂದ್ಯದ ಅಂತಿಮ ಎರಡು ದಿನಗಳಲ್ಲಿ ಸ್ಪಿನ್ನರ್‌ಗಳು ಹೆಚ್ಚು ಪರಿಣಾಮಕಾರಿ ಆಗುತ್ತಾರೆ. ಹಸಿರು ಮೇಲ್ಮೈ ಕೊರತೆಯಿಂದಾಗಿ ಇಲ್ಲಿ ವೇಗದ ಬೌಲರ್‌ಗಳ ದಾಖಲೆಗಳು ಉತ್ತಮವಾಗಿಲ್ಲ.
ವಿಶೇಷ ಎಂದರೆ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಗೆಲ್ಲುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾದರೆ ಇದುವರೆಗಿನ ಕ್ರಿಕೆಟ್ ಇತಿಹಾಸದಲ್ಲಿ ಯಾವ ತಂಡವೂ ಮಾಡಲಾಗದ ಅಪರೂಪದ ದಾಖಲೆಯೊಂದನ್ನು ಬರೆಯಲಿದೆ. ಆಸೀಸ್ ವಿರುದ್ಧ ಭಾರತ ಟೆಸ್ಟ್ ಚಾಂಪಿಯನ್ಶಿಪ್ ಗೆದ್ದರೆ, ಏಕದಿನ, ಟಿ20 ಮತ್ತು ಟೆಸ್ಟ್ ಮೂರು ಮಾದರಿಗಳಲ್ಲಿ ವಿಶ್ವಕಪ್ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ತದ್ವಿರುದ್ಧವಾಗಿ ಆಸ್ಟ್ರೇಲಿಯಾ ಗೆದ್ದರೆ, ಆಸ್ಟ್ರೇಲಿಯಾ ಕೂಡ ಇದೇ ದಾಖಲೆ ಬರೆಯಲಿದೆ. ಜೊತೆಗೆ ಭಾರತ ತಂಡ 2013ರ ಬಳಿಕ ಒಂದೇ ಒಂದು ಐಸಿಸಿ ಟ್ರೋಫಿ ಗೆಲ್ಲದ ಬರವನ್ನು ನೀಗಿಸಿಕೊಳ್ಳಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಸ್ಟಾರ್ ಸ್ಪೋರ್ಟ್ಸ್ ಟೆಲಿವಿಷನ್ ವಾಹಿನಿಯಲ್ಲಿ ನೇರ ಪ್ರಸಾರವಾಗಲಿದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 3 ಗಂಟೆಗೆ ಶುರುವಾಗಲಿದೆ. ಲೈವ್ ಸ್ಟ್ರೀಮಿಂಗ್ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮೊಬೈಲ್ ಅಪ್ಲಿಕೇಷನ್‌ನಲ್ಲಿ ನೋಡಬಹುದು.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಇಶಾನ್ ಕಿಶನ್ (ವಿಕೆಟ್ ಕೀಪರ್), ಆರ್. ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕೆಎಸ್ ಭರತ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಮತ್ತು ಜಯದೇವ್ ಉನದ್ಕಟ್.
ಮೀಸಲು ಆಟಗಾರರು: ಸೂರ್ಯಕುಮಾರ್ ಯಾದವ್, ಯಶಸ್ವಿ ಜೈಸ್ವಾಲ್ ಮತ್ತು ಮುಖೇಶ್ ಕುಮಾರ್
ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೇನ್, ನಾಥನ್ ಲಿಯಾನ್, ಮಿಚೆಲ್ ಮಾರ್ಷ್, ಟಾಡ್ ಮರ್ಫಿ, ಮಿಚೆಲ್ ಸ್ಟಾರ್ಕ್ ಮತ್ತು ಮ್ಯಾಥ್ಯೂ ರೆನ್ಶಾ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ