ಐಸಿಸಿ ಏಕದಿನ ವಿಶ್ವಕಪ್ (ODI World Cup) 13ನೇ ಆವೃತ್ತಿಯಲ್ಲಿ ಇಂದು ಮಹತ್ವದ ಪಂದ್ಯ ನಡೆಯಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ಹಾಗೂ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡ ಮುಖಾಮುಖಿ ಆಗಲಿದೆ. ಉಭಯ ತಂಡಗಳಿಗೂ ಇದು ಮೊದಲ ಪಂದ್ಯ ಆಗಿರುವುದರಿಂದ ಗೆಲುವಿನ ಮೂಲಕ ಯಾರು ಅಭಿಯಾನ ಆರಂಭಿಸುತ್ತಾರೆ ಎಂಬುದು ನೋಡಬೇಕಿದೆ. ಎರಡೂ ತಂಡಗಳಲ್ಲಿ ಸ್ಟಾರ್ ಆಟಗಾರರ ದಂಡೇ ಇದ್ದು, ಚೆನ್ನೈನಲ್ಲಿ ಹೈವೋಲ್ಟೇಜ್ ಮ್ಯಾಚ್ ಆಗುವುದು ಖಚಿತ.
ಭಾರತ ತಂಡ ಶುಭ್ಮನ್ ಗಿಲ್ ಅಲಭ್ಯತೆಯಲ್ಲಿ ಕಣಕ್ಕಿಳಿಯುತ್ತಿದೆ. ರೋಹಿತ್ ಶರ್ಮಾ ಜೊತೆ ಇಶಾನ್ ಕಿಶನ್ ಆರಂಭಿಕರಾಗಿ ಆಡಲಿದ್ದಾರೆ. ಇನ್ಫಾರ್ಮ್ ಬ್ಯಾಟರ್ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದರೆ, ನಾಲ್ಕನೇ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ಕಾಣಿಸಿಕೊಳ್ಳಲಿದ್ದಾರೆ. ವಿಕೆಟ್ ಕೀಪರ್ ಜವಾಬ್ದಾರಿ ಕೆಎಲ್ ರಾಹುಲ್ ಹೊರಲಿದ್ದಾರೆ. ಆಲ್ರೌಂಡರ್ಗಳಾಗಿ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಇದ್ದರೆ ರವಿಚಂದ್ರನ್ ಅಶ್ವಿನ್ ಕೂಡ ಆಡುವುದು ಖಚಿತವಾಗಿದೆ. ಶಾರ್ದೂಲ್ ಥಾಕೂರ್ಗೆ ಈ ಪಂದ್ಯದಲ್ಲಿ ಅವಕಾಶವಿಲ್ಲ ಎನ್ನಲಾಗಿದೆ. ನಂತರದಲ್ಲಿ ಕುಲ್ದೀಪ್ ಯಾದವ್, ಬುಮ್ರಾ ಮತ್ತು ಸಿರಾಜ್ ಇರಲಿದ್ದಾರೆ.
ಚೆನ್ನೈ ಪಿಚ್ ಯಾರಿಗೆ ಹೆಚ್ಚು ಸಹಕಾರಿ? ಭಾರತ- ಆಸೀಸ್ ವಿಶ್ವಕಪ್ ಕದನಕ್ಕೆ ಮಳೆಯ ಆತಂಕ?
ಇತ್ತ ಆಸ್ಟ್ರೇಲಿಯಾ ತಂಡ ವಾರ್ಮ್-ಅಪ್ ಮ್ಯಾಚ್ನಲ್ಲಿ ಅದ್ಭುತ ಪ್ರದರ್ಶನ ತೋರಿತ್ತು. ಅದೇ ಲಯದಲ್ಲಿ ಇಂದುಕೂಡ ಆಡುವ ವಿಶ್ವಾಸದಲ್ಲಿದೆ. ಮಾರ್ಕಸ್ ಸ್ಟೊಯಿನಿಸ್ ಅವರು ಮಂಡಿರಜ್ಜು ಗಾಯಕ್ಕೆ ತುತ್ತಾದ ಕಾರಣ ಇಂದು ಆಡುತ್ತಾರ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ. ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಬ್ಯಾಟಿಂಗ್ ವಿಭಾಗದಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಪ್ಯಾಟ್ ಕಮಿನ್ಸ್ ಆಲ್ರೌಂಡರ್ ಪ್ರದರ್ಶನದ ಮೇಲೆ ಎಲ್ಲರ ಕಣ್ಣಿದೆ. ಮಿಚೆಲ್ ಸ್ಟಾರ್ಕ್ ಹಾಗೂ ಆ್ಯಡಂ ಝಂಪಾ ಭಾರತದಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ.
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂ ಸ್ಪಿನ್ ಬೌಲರ್‌ಗಳಿಗೆ ಹೆಚ್ಚು ಸಹಕಾರಿ ಆಗಲಿದೆ. ಮುಖ್ಯವಾಗಿ ಸ್ಪಿನ್ನರ್‌ಗಳಿಗೆ ಸ್ವರ್ಗ ಎಂಬ ಖ್ಯಾತಿ ಪಡೆದಿದೆ. ಈ ಪಿಚ್ ನಿಧಾನವಾಗಿರುತ್ತದೆ. ಇಲ್ಲಿ ಟಾಸ್ ಗೆದ್ದ ತಂಡಗಳು ಮೊದಲು ಬ್ಯಾಟಿಂಗ್ ಮಾಡುವುದು ಉತ್ತಮ. ಏಕೆಂದರೆ ಪಂದ್ಯ ಸಾಗಿದಂತೆ ಪಿಚ್ ಚೇಸಿಂಗ್ಗೆ ಹೆಚ್ಚು ಕಷ್ಟಕರವಾಗುತ್ತದೆ. ಈ ಪಿಚ್‌ನಲ್ಲಿ, ತಂಡಗಳು 260-270 ಸ್ಕೋರ್ ಗಳಿಸಿದರೆ ಅದು ಸವಾಲಿನ ಮೊತ್ತ ಆಗಲಿದೆ.
ಭಾರತ ಸಂಭಾವ್ಯ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್.
ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಸ್, ಸೀನ್ ಅಬಾಟ್, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಮಾರ್ನಸ್ ಲ್ಯಾಬುಸ್‌ಚಾಗ್ನೆ, ಮಿಚ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆಡಮ್ ಝಂಪಾ, ಮಿಚೆಲ್ ಸ್ಟಾರ್ಕ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ