ಇಂದು ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ಐಸಿಸಿ ಏಕದಿನ ವಿಶ್ವಕಪ್ ಪಂದ್ಯವು ಚೆನ್ನೈನ ಐಕಾನಿಕ್ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ಗೆಲುವಿನ ಮೂಲಕ ಟೂರ್ನಿಯನ್ನು ಆರಂಭಿಸಲು ಎರಡೂ ತಂಡಗಳು ಎದುರು ನೋಡುತ್ತಿವೆ. ವಿಶೇಷ ಎಂದರೆ ಆಸ್ಟ್ರೇಲಿಯನ್ನರು ಚೆನ್ನೈನಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಹಾಗಾದರೆ, ಚೆನ್ನೈನಲ್ಲಿ ಭಾರತ-ಆಸ್ಟ್ರೇಲಿಯಾದ ಹೆಡ್ ಟು ಹೆಡ್ ರೆಕಾರ್ಡ್ ಅನ್ನು ನೋಡೋಣ.
ಎಂಎ ಚಿದಂಬರಂ ಸ್ಟೇಡಿಯಂನಲ್ಲಿ 36 ವರ್ಷಗಳಿಂದ ಒಟ್ಟು 23 ಪಂದ್ಯಗಳನ್ನು ಆಡಲಾಗಿದೆ. ಈ ಮೈದಾನದಲ್ಲಿ ಮೊದಲ ಪಂದ್ಯವನ್ನು 1987 ರಲ್ಲಿ ಆಡಲಾಯಿತು. ಆತಿಥೇಯ ಭಾರತ ತಂಡವು ಚೆನ್ನೈನಲ್ಲಿ 15 ಪಂದ್ಯಗಳನ್ನು ಆಡಿದೆ ಮತ್ತು ಏಳು ಪಂದ್ಯಗಳಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಮತ್ತೊಂದೆಡೆ, ಆಸೀಸ್ ಈ ಮೈದಾನದಲ್ಲಿ ಅತ್ಯುತ್ತಮ ದಾಖಲೆಯನ್ನು ಕಾಯ್ದುಕೊಂಡಿದೆ. ಆರು ಪಂದ್ಯಗಳಲ್ಲಿ ಕಾಂಗರೂ ಪಡೆ ಐದು ಪಂದ್ಯಗಳನ್ನು ಗೆದ್ದಿದ್ದಾರೆ.
Asian Games: ಫೈನಲ್ ಪಂದ್ಯ ರದ್ದು: ಟೀಮ್ ಇಂಡಿಯಾಗೆ ಚಿನ್ನದ ಪದಕ
ಭಾರತ-ಆಸ್ಟ್ರೇಲಿಯಾ ಒಟ್ಟಾರೆ ಏಕದಿನ ದಾಖಲೆಯ ಕುರಿತು ಹೇಳುವುದಾದರೆ, 149 ಪಂದ್ಯಗಳಲ್ಲಿ ಆಸ್ಟ್ರೇಲಿಯನ್ನರು 83 ಗೆಲುವಿನೊಂದಿಗೆ ಪ್ರಾಬಲ್ಯ ಸಾಧಿಸಿದ್ದಾರೆ, ಆದರೆ ಭಾರತ 56 ಗೆಲುವುಗಳನ್ನು ಪಡೆದುಕೊಂಡಿದೆ. ಹತ್ತು ಪಂದ್ಯಗಳು ಫಲಿತಾಂಶವಿಲ್ಲದೆ ಅಂತ್ಯಗೊಂಡಿವೆ. ಉಭಯ ತಂಡಗಳ ನಡುವಿನ 12 ವಿಶ್ವಕಪ್ ಪಂದ್ಯಗಳಲ್ಲಿ, ಆಸ್ಟ್ರೇಲಿಯಾ ಎಂಟು ಪಂದ್ಯಗಳನ್ನು ಗೆದ್ದಿದೆ ಮತ್ತು ಭಾರತ ನಾಲ್ಕು ಸಂದರ್ಭಗಳಲ್ಲಿ ಗೆದ್ದಿದೆ.
ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 233 ಆಗಿದೆ. 233 ರನ್‌ಗಳನ್ನು ಕಡಿಮೆ ಸ್ಕೋರ್ ಎಂದು ನೋಡಲಾಗಿದ್ದರೂ, ಬೌಲಿಂಗ್ ಸ್ನೇಹಿ ಪಿಚ್ ಆಗಿರುವುದರಿಂದ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು 14 ಪಂದ್ಯಗಳನ್ನು ಗೆದ್ದಿವೆ. 1997ರಲ್ಲಿ ಪಾಕಿಸ್ತಾನದ ಮಾಜಿ ಆರಂಭಿಕ ಆಟಗಾರ ಸಯೀದ್ ಅನ್ವರ್ ಗಳಿಸಿದ 194 ರನ್‌ಗಳು ಅತ್ಯುತ್ತಮ ವೈಯಕ್ತಿಕ ಬ್ಯಾಟಿಂಗ್ ಸ್ಕೋರ್ ಆಗಿದೆ. ಅಂತೆಯೇ, 2011 ರಲ್ಲಿ ರವಿ ರಾಂಪಾಲ್ ಅವರ 10-0-51-5 ಅತ್ಯುತ್ತಮ ಬೌಲಿಂಗ್ ಅಂಕಿಅಂಶವಾಗಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಇಂದಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇಲ್ಲ. ವೆದರ್‌ಕಾಮ್ ನೀಡಿರುವ ಹವಾಮಾನ ಮುನ್ಸೂಚನೆಯ ಪ್ರಕಾರ, ಭಾನುವಾರದಂದು ಚೆನ್ನೈನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 27 ಡಿಗ್ರಿ ಸೆಲ್ಸಿಯಸ್ ಇರಲಿದೆ. ಪಂದ್ಯದುದ್ದಕ್ಕೂ ಮಳೆ ಮತ್ತು ಮೋಡ ಕವಿದ ವಾತಾವರಣದ ಸಾಧ್ಯತೆ ಶೇ. 20 ಇರಲ್ಲಿದ್ದು, ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಗಳಿಲ್ಲ ಎಂದು ವರದಿ ಮಾಡಿದೆ. ಹೀಗಾಗಿ ಪ್ರೇಕ್ಷಕರು ಮಳೆಯ ಆತಂಕವಿಲ್ಲದೆ ಪಂದ್ಯವನ್ನು ಸಂಪೂರ್ಣವಾಗಿ ನೋಡಬಹುದು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ