ಚೀನಾ ಗಡಿ ಪ್ರದೇಶದಲ್ಲಿ ಅಂದರೆ ಭಾರತದ ಗಡಿ ಎಲ್ಎಸಿ (ವಾಸ್ತವಿಕ ನಿಯಂತ್ರಣ ರೇಖೆ) ಬಳಿ ದ್ವಿ ಬಳಕೆ ನೆಲೆಯನ್ನು ನಿರ್ಮಿಸುತ್ತಿದೆ. ಎಲ್ಎಸಿ (LAC) ಬಳಿ ಚೀನಾ ಹಳ್ಳಿಗಳನ್ನು ನಿರ್ಮಿಸುತ್ತಿರುವ ಬಗ್ಗೆ ಆಗಾಗ ವರದಿಯಾಗುತ್ತಲೇ ಇದೆ. ಆದರೆ ಈ ಹಳ್ಳಿಗಳು ಮಿಲಿಟರಿ ಸಿಬ್ಬಂದಿ ಮತ್ತು ನಾಗರಿಕರು ಇಬ್ಬರಿಗೂ ಅನುಕೂಲವಾಗುವಂತೆ ಕಟ್ಟಡಗಳ ನಿರ್ಮಾಣ ಮಾಡುತ್ತಿದೆ. ಅಷ್ಟೇ ಅಲ್ಲ, ಮೂಲಸೌಕರ್ಯಗಳನ್ನು ನಿರಂತರವಾಗಿ ಅಭಿವೃದ್ಧಿಪಡಿಸುತ್ತಿದೆ. ಆದರೆ ಇದರೊಂದಿಗೆ ಇನ್ನೂ ಒಂದಷ್ಟು ಹೊಸ ಮಾಹಿತಿಗಳು ಹೊರಬಿದ್ದಿವೆ. ಎಲ್ಎಸಿ ಬಳಿ ಇರುವ ಚೀನಾದ ಹಳ್ಳಿಗಳಲ್ಲಿರುವ ಟಿಬೆಟಿಯನ್ ನಾಗರಿಕರು ಮತ್ತು ಮಿಲಿಟರಿ ಸೈನಿಕರ ನಡುವೆ ಬಾಂಧವ್ಯ ಗಟ್ಟಿಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಲ್ಲಿನ ಹಳ್ಳಿಗಳಲ್ಲಿರುವ ಟಿಬೇಟಿಯನ್ನರಿಗೆ ಚೀನಾದ ಪ್ರಸಿದ್ಧ ಭಕ್ಷ್ಯಗಳನ್ನು ತಯಾರಿಸುವುದನ್ನು ಕಲಿಸಲು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಅಡುಗೆಯವರನ್ನೂ ನೇಮಕ ಮಾಡಿದೆ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಎಲ್ಎಸಿ ಒಂದು ವಿವಾದಾತ್ಮಕ ಗಡಿ ಪ್ರದೇಶ. ಇಲ್ಲಿ ಚೀನಾ ಸೈನ್ಯ ಮತ್ತು ಭಾರತೀಯ ಯೋಧರ ನಡುವೆ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಜಟಾಪಟಿ ನಡೆಯುತ್ತಿದೆ. ಈ ಮಧ್ಯೆ ಎಲ್ಎಸಿ ಸಮೀಪ ಚೀನಾ ತನ್ನ ವ್ಯಾಪ್ತಿ ಹೆಚ್ಚಿಸುತ್ತಿದೆ. ಇನ್ನು ಎಲ್ಎಸಿ ಸಮೀಪ ಟಿಬೆಟಿಯನ್ನರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದು, ಅವರೊಂದಿಗೆ ಸ್ನೇಹದಿಂದ ಇರಲಿ ಪಿಎಲ್ಎ ಪ್ರಯತ್ನ ಮಾಡುತ್ತಿದೆ. ಎಲ್ಎಸಿಯಲ್ಲಿ ಚೀನಾದ ಬದಿಯಲ್ಲಿ ಇರುವ ಕೊನೇ ಗಡಿ ಗ್ರಾಮ ಯುಮೈ, ಅರುಣಾಚಲ ಪ್ರದೇಶದ ಅಪ್ಪರ್ ಸುಬಾನ್ಸಿರಿ ಜಿಲ್ಲೆಯಿಂದ ಕೇವಲ ಒಂದು ಕಿಮೀ ದೂರದಲ್ಲಿದೆ. ಅಂದಹಾಗೇ, ಯುಮೈ ಎಂಬುದು ಭಾರತ -ಭೂತಾನ್ ಗಡಿಯಲ್ಲಿರುವ ಟಿಬೆಟ್ ಸ್ವಾಯತ್ತ ಪ್ರದೇಶದ ಶಾನನ್ ಎಂಬಲ್ಲಿರುವ ಲಾಂಗ್ಜಿ ಕೌಂಟಿಯಲ್ಲಿದೆ. ಇದನ್ನು ಚೀನಾದ ಅತ್ಯುತ್ತಮ ಗ್ರಾಮ ಎಂದೂ ಪರಿಗಣಿಸಲಾಗಿದೆ. ಇದೀಗ ಚೀನಾ ಸೇನೆ ಈ ಗ್ರಾಮದಲ್ಲಿ ವಾಸವಾಗಿರುವ ಟಿಬೆಟಿಯನ್ನರ ಓಲೈಕೆಯಲ್ಲಿ ತೊಡಗಿದೆ.
ಕೆಲವೇ ವರ್ಷಗಳ ಹಿಂದೆ ಯುಮೈನಲ್ಲಿ ಒಂದೆರಡು ಮನೆಗಳಷ್ಟೇ ಇದ್ದವು. ಆದರೆ ಈಗ ಅಲ್ಲಿ ಅನೇಕ ನಿರ್ಮಾಣವಾಗಿವೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಅಲ್ಲಿ ಡಾಂಬರು ರಸ್ತೆ, ಯೋಗಕ್ಷೇಮ ಕೇಂದ್ರಗಳು ಪೊಲೀಸ್ ಠಾಣೆ, ಕಾಲೇಜುಗಳು, ವಿವಿಧ ಸಾರ್ವಜನಿಕ ಸೇವಾ ಸಂಸ್ಥೆಗಳು ನಿರ್ಮಾಣವಾಗಿವೆ ಎಂದು ಚೀನಾ ಸೇನಾ ಮಾಧ್ಯಮವೊಂದು ವರದಿ ಮಾಡಿದೆ. 2021ರಲ್ಲಿ ಚೀನಾದ ದಿನಪತ್ರಿಕೆಯೊಂದು ವರದಿ ಮಾಡಿ, ಯುಮೈನಲ್ಲಿ 1999ರಲ್ಲಿ 20 ಜನರು ಇದ್ದರು. 2009ರಲ್ಲಿ 30 ಜನರು ವಾಸಿಸುತ್ತಿದ್ದರು. ಈಗಂತೂ 200 ಮಂದಿ ವಾಸಿಸುತ್ತಿದ್ದಾರೆ. ಮನೆ, ಇತರ ಕಚೇರಿ, ಸಂಸ್ಥೆಗಳೆಲ್ಲ ಸೇರಿ 67 ಕಟ್ಟಡಗಳು ನಿರ್ಮಾಣವಾಗಿವೆ ಎಂದು ವರದಿ ಮಾಡಿದೆ. ಗಡಿ ಗ್ರಾಮವನ್ನು ಚೀನಾ ಹೇಗೆ ವಿಸ್ತರಿಸುತ್ತದೆ ಎಂಬುದಕ್ಕೆ ಇದೊಂದು ಸಾಕ್ಷಿಯಾಗಿದೆ.
ಯುಮೈ ನಿವಾಸಿಗಳು ಕೆಲವರು 5 ಹೋಂಸ್ಟೇಗಳನ್ನು ತೆರೆದಿದ್ದಾರೆ. ಇದಕ್ಕೆ ಟಿಬೆಟ್ ನೇವಿ ಪ್ರದೇಶದ ಸಿಬ್ಬಂದಿ ಸಹಕಾರ ನೀಡಿದ್ದಾರೆ. ಅಲ್ಲಿನ ಕೋಣೆಗಳಲ್ಲಿ ಟಿವಿ, ವೈಫೈ, ಆಕ್ಸಿಜನ್ ಟರ್ಬೈನ್ಗಳು ಇವೆ. ಇಲ್ಲೀಗ ಚೀನಾ ಸೇನೆ ವೈದ್ಯರನ್ನೂ ನೇಮಕ ಮಾಡಿದೆ. ಒಂದಿಬ್ಬರು ವೈದ್ಯರು ಕಾಲಕಾಲಕ್ಕೆ ಹಳ್ಳಿಗೆ ಭೇಟಿ ಕೊಡುತ್ತಾರೆ ಎಂದೂ ಹೇಳಲಾಗಿದೆ. ಯುಮೈ ಒಂದಲ್ಲ, ಹೀಗೆ ಗಡಿ ಗ್ರಾಮಗಳಲ್ಲಿ ಚೀನಾ ಸೇನೆ ವ್ಯವಸ್ಥೆಗಳನ್ನು ಹೆಚ್ಚಿಸುವ ಮೂಲಕ ತಮಗೆ ಅನುಕೂಲವಾಗುವಂತೆ ನೋಡಿಕೊಳ್ಳುತ್ತಿದೆ ಎಂದು ಹೇಳಲಾಗಿದೆ.