SCO Summit 2023: ಇಂದು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಎಸ್​ಸಿಒ ಶೃಂಗಸಭೆ, ಒಕ್ಕೂಟಕ್ಕೆ ಮತ್ತೊಂದು ದೇಶದ ಸೇರ್ಪಡೆ

| Updated By: ನಯನಾ ರಾಜೀವ್

Updated on: Jul 04, 2023 | 7:32 AM

ಶಾಂಘೈ ಸಹಕಾರ ಒಕ್ಕೂಟ (SCO) ಶೃಂಗಸಭೆ 2023 ಇಂದು (ಜುಲೈ 4) ನಡೆಯಲಿದ್ದು, ಇದರ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಲಿದ್ದಾರೆ. ಈ ಶೃಂಗಸಭೆಯಲ್ಲಿ ಪಾಕ್ ನಾಯಕರು ಭಾಗಿಯಾಗಲಿದ್ದು, ಇರಾನ್ ಅನ್ನು ಒಕ್ಕೂಟದ ಒಂಬತ್ತನೇ ಸದಸ್ಯ ದೇಶವನ್ನಾಗಿ ಸೇರ್ಪಡೆ ಮಾಡಲಾಗುತ್ತಿದೆ.

SCO Summit 2023: ಇಂದು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಎಸ್​ಸಿಒ ಶೃಂಗಸಭೆ, ಒಕ್ಕೂಟಕ್ಕೆ ಮತ್ತೊಂದು ದೇಶದ ಸೇರ್ಪಡೆ
ಎಸ್​​ಸಿಒ ಶೃಂಗಸಭೆ 2023 (ಸಾಂದರ್ಭಿಕ ಚಿತ್ರ)
Follow us on

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜುಲೈ 4 ರಂದು ನಡೆಯುವ ಶಾಂಘೈ ಸಹಕಾರ ಒಕ್ಕೂಟ (SCO) ಶೃಂಗಸಭೆಯ (SCO Summit 2023) ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಆರಂಭಗೊಳ್ಳಲಿರುವ ಈ ಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಸೇರಿದಂತೆ ಎಲ್ಲಾ ಎಂಟು ದೇಶಗಳ ನಾಯಕರು ಭಾಗವಹಿಸಲಿದ್ದಾರೆ. ಇದೇ ವೇಳೆ ಒಕ್ಕೂಟದ ಒಂಬತ್ತನೇ ಸದಸ್ಯ ರಾಷ್ಟ್ರವನ್ನಾಗಿ ಇರಾನ್​ ಅನ್ನು ಸೇರ್ಪಡೆಗೊಳಿಸಲಾಗುತ್ತಿದೆ.

1996ರಲ್ಲಿ ರೂಪುಗೊಂಡ ಈ ಒಕ್ಕೂಟದಲ್ಲಿ ಭಾರತ 2017ರಲ್ಲಿ ಪೂರ್ಣ ಸದಸ್ಯತ್ವವನ್ನು ಪಡೆಯಿತು. ಇದೀಗ ಮೊದಲ ಬಾರಿ ಭಾರತ ಎಸ್​ಸಿಒ ಶೃಂಗಸಭೆಯ ಅಧ್ಯಕ್ಷತೆಯನ್ನು ವಹಿಸುತ್ತಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಉಜ್ಬೇಕಿಸ್ತಾನದಲ್ಲಿ ನಡೆದ ಸಮರ್ಕಂಡ್ ಸಮ್ಮೇಳನದ ನಂತರ ಭಾರತವು ಎಸ್‌ಸಿಒ ಅಧ್ಯಕ್ಷ ಸ್ಥಾನವನ್ನು ಪಡೆದುಕೊಂಡಿತು. ಆರಂಭದಲ್ಲಿ, ಒಕ್ಕೂಟವು ಚೀನಾದ ಕೂಸು ಎಂದು ಕರೆಯಲಾಗುತ್ತಿದ್ದರೂ, ಒಕ್ಕೂಟದಲ್ಲಿ ಭಾರತ ಸ್ಥಾನ ಪಡೆಯುತ್ತಿದ್ದಂತೆ ಭಾರತ ಮತ್ತು ರಷ್ಯಾ ಒಟ್ಟಾಗಿ ಒಕ್ಕೂಟವನ್ನು ಚೀನಾದ ಹಿಡಿತದಿಂದ ಮುಕ್ತಗೊಳಿಸಿದವು.

ಒಕ್ಕೂಟದ ಒಂಬತ್ತನೇ ಸದಸ್ಯ ರಾಷ್ಟ್ರವಾಗಿ ಇರಾನ್ ಸೇರ್ಪಡೆ

ಸದ್ಯ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಎಸ್‌ಸಿಒ ಶೃಂಗಸಭೆಯಲ್ಲಿ ಇರಾನ್ ಅನ್ನು ಒಕ್ಕೂಟದ ಒಂಬತ್ತನೇ ಸದಸ್ಯ ರಾಷ್ಟ್ರವನ್ನಾಗಿ ಸೇರ್ಪಡೆ ಮಾಡಲಾಗುತ್ತಿದೆ. ಈ ಒಕ್ಕೂಟದಲ್ಲಿ ಬೆಲಾರಸ್ ಸೇರ್ಪಡೆಗೆ ರಷ್ಯಾ ಬಲವಾಗಿ ಬೆಂಬಲ ನೀಡಿದೆ. ಇದಲ್ಲದೇ ಅಫ್ಘಾನಿಸ್ತಾನ ಮತ್ತು ಮಂಗೋಲಿಯಾ ದೇಶಗಳು ಕೂಡ ಎಸ್​ಸಿಒಗೆ ಸೇರಲು ಬಯಸುತ್ತಿವೆ. ಆದರೆ ಬೆಲಾರಸ್ ಮತ್ತು ಮಂಗೋಲಿಯಾವನ್ನು ವೀಕ್ಷಕ ರಾಜ್ಯಗಳಾಗಿ ಆಹ್ವಾನಿಸಲಾಗಿದೆ. ಮಾಹಿತಿ ಪ್ರಕಾರ, ತುರ್ಕಮೆನಿಸ್ತಾನವನ್ನು ಸಹ ಅತಿಥಿಯಾಗಿ ಆಹ್ವಾನಿಸಲಾಗಿದೆ.

ಇದನ್ನೂ ಓದಿ: PM Modi in Shahdol: ಪಕಾರಿಯಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ದೊರೆಯಿತು ಬುಡಕಟ್ಟು ಶೈಲಿಯ ಸ್ವಾಗತ; ಇಲ್ಲಿದೆ ಫೋಟೋಗಳು

ಈ ಬಾರಿಯ ಥೀಮ್ ಅನ್ನು 2018 ರ SCO ಕಿಂಗ್ಡಾವೋ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಚಿಸಿದ ಸಂಕ್ಷಿಪ್ತ ರೂಪವಾಗಿದೆ. S: ಭದ್ರತೆ, E: ಆರ್ಥಿಕ ಅಭಿವೃದ್ಧಿ, C: ಸಂಪರ್ಕ, U: ಏಕತೆ, R: ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವ, E: ಪರಿಸರ ರಕ್ಷಣೆ

SCO ಅನ್ನು NATO ನಂತಹ ಮಿಲಿಟರಿ ಸಂಘಟನೆಯಾಗಿ ಮಾಡಲಾಗಿಲ್ಲವಾದರೂ, SCO ಅನ್ನು ಕ್ರಮೇಣವಾಗಿ ಭದ್ರತಾ ಆಧಾರಿತ ಸಂಘಟನೆಯನ್ನಾಗಿ ಮಾಡುವಲ್ಲಿ ಶ್ರಮಿಸಲಾಗುತ್ತಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಜಂಟಿ ಮಿಲಿಟರಿ ವ್ಯಾಯಾಮಗಳು ಎಸ್‌ಸಿಒವನ್ನು ಈ ದಿಕ್ಕಿನಲ್ಲಿ ಮುನ್ನಡೆಸಲಾಗುತ್ತಿದೆ. SCO ನಲ್ಲಿ ಭಾರತದ ಉಪಸ್ಥಿತಿಯಿಂದಾಗಿ NATO ಸದಸ್ಯ ರಾಷ್ಟ್ರಗಳು ಸಹ ನಿರಾಳವಾಗಿವೆ. ಗಮನಿಸಬೇಕಾದ ಅಂಶವೆಂದರೆ, SCO ಮತ್ತು NATO ದ ಹೆಚ್ಚಿನ ಸದಸ್ಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುವ ಏಕೈಕ ದೇಶ ಭಾರತ.

ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:50 pm, Mon, 3 July 23