ಮ್ಯಾನ್ಮಾರ್ ಸೇನಾ ದಂಗೆ ಖಂಡಿಸಿದ ವಿಶ್ವಸಂಸ್ಥೆ, ಎಚ್ಚರಿಕೆ ನೀಡಿದ ಅಮೆರಿಕ; ಆದರೆ ಚೀನಾ ಹೇಳಿದ್ದೇ ಬೇರೆ! Myanmar military coup

|

Updated on: Feb 02, 2021 | 2:54 PM

ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬುದನ್ನು ಯುನೈಟೆಡ್​ ಚುನಾವಣಾ ಆಯೋಗ ಅಲ್ಲಗಳೆದಿದೆ. ಸೇನೆ ಮತ್ತು ಪ್ರತಿಪಕ್ಷಗಳು ಹೇಳುವಷ್ಟು ದೊಡ್ಡ ಮಟ್ಟದ ಅಕ್ರಮಗಳು ನಡೆದಿಲ್ಲ ಎಂದು ಪ್ರತಿಪಾದಿಸಿವೆ.

ಮ್ಯಾನ್ಮಾರ್ ಸೇನಾ ದಂಗೆ ಖಂಡಿಸಿದ ವಿಶ್ವಸಂಸ್ಥೆ, ಎಚ್ಚರಿಕೆ ನೀಡಿದ ಅಮೆರಿಕ; ಆದರೆ ಚೀನಾ ಹೇಳಿದ್ದೇ ಬೇರೆ! Myanmar military coup
Follow us on

ಮ್ಯಾನ್ಮಾರ್​ ನಲ್ಲಿ ನಿನ್ನೆ ನಡೆದ ಬೆಳವಣಿಗೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿವೆ. ನ್ಯಾಷನಲ್​ ಲೀಗ್​ ಫಾರ್​ ಡೆಮಾಕ್ರಸಿಯ ಮುಖ್ಯಸ್ಥೆ, ಸ್ಟೇಟ್ ಕೌನ್ಸಿಲರ್​ ಆಂಗ್​ ಸಾನ್​ ಸೂಕಿ aung san suu kyi ಸೇರಿ, ಅಧ್ಯಕ್ಷ ವಿನ್ ಮೈಂಟ್​ ಸೇರಿ ಆ ಪಕ್ಷದ ಹಲವು ಗಣ್ಯರನ್ನು ಸೇನೆ ವಶಕ್ಕೆ ಪಡೆದು ಒಂದು ವರ್ಷ ಗೃಹಬಂಧನ ವಿಧಿಸಿದೆ. ಹಾಗೇ ದೇಶದಲ್ಲಿ ಒಂದು ವರ್ಷ ತುರ್ತು ಪರಿಸ್ಥಿತಿಯನ್ನೂ ಹೇರಲಾಗಿದೆ. ಈ ಮೂಲಕ ದೇಶದ ಆಡಳಿತ ಸೇನಾ ಮುಖ್ಯಸ್ಥರ ಕೈ ಸೇರಿದೆ.

ಕಳೆದ ವರ್ಷ ನವೆಂಬರ್​ನಲ್ಲಿ ಮ್ಯಾನ್ಮಾರ್​​​ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ನ್ಯಾಷನಲ್ ಲೀಗ್​ ಫಾರ್​ ಡೆಮಾಕ್ರಸಿ (NLD)ಗೆ ಸ್ಪಷ್ಟ ಬಹುಮತ ಸಿಕ್ಕಿತ್ತು. ಅಂದಿನಿಂದಲೂ ಆಡಳಿತ ಸರ್ಕಾರ ಮತ್ತು ಸೇನೆಯ ನಡುವೆ ಸಂಘರ್ಷ ತೀವ್ರವಾಗಿಯೇ ಇತ್ತು. ಮ್ಯಾನ್ಮಾರ್​​ನ ಪ್ರಮುಖ ಪ್ರತಿಪಕ್ಷವಾದ ಯೂನಿಯನ್​ ಸಾಲಿಡರಿಟಿ ಆ್ಯಂಡ್ ಡೆವಲೆಪ್​ಮೆಂಟ್​ ಪಾರ್ಟಿ (USDP) ಅಲ್ಲಿನ ಸೇನೆಯೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದು, ಚುನಾವಣೆಯ ಫಲಿತಾಂಶವನ್ನು ಒಪ್ಪುತ್ತಿಲ್ಲ. ಸೇನೆಯೊಂದಿಗೆ ಸೇರಿಕೊಂಡು ಆಡಳಿತ ಪಕ್ಷವನ್ನು ತೀವ್ರವಾಗಿ ವಿರೋಧಿಸುತ್ತಲೇ ಬಂದಿದೆ.

ಯೂನಿಯನ್​ ಚುನಾವಣಾ ಆಯೋಗ ಮತ್ತು ಎನ್​ಎಲ್​ಡಿ ಸೇರಿ ಸಾರ್ವತ್ರಿಕ ಚುನಾವಣೆಯಲ್ಲಿ ಮಸಲತ್ತು ಮಾಡಿವೆ. ವೋಟಿಂಗ್​ ಕಾರ್ಡ್​ಗಳಲ್ಲಿ ಮೋಸ ನಡೆದಿದೆ. ಕೆಲವರು ವೋಟಿಂಗ್ ಕಾರ್ಡ್​ ಇಲ್ಲದೆಯೇ ಮತ ಚಲಾಯಿಸಿದ್ದಾರೆ. ಹಾಗೇ, ಅಪ್ರಾಪ್ತರಿಂದಲೂ ಮತದಾನ ನಡೆಸಲಾಗಿದೆ.

ಈ ಎಲ್ಲ ಕಾರಣಗಳಿಂದಲೇ ಎನ್​ಎಲ್​ಡಿ ಅಧಿಕಾರಕ್ಕೆ ಬಂದಿದೆ ಎಂದು ಪ್ರತಿಪಕ್ಷ ಮತ್ತು ಸೇನೆ ಆರೋಪ ಮಾಡುತ್ತಲೇ ಬಂದಿವೆ. ಇದೇ ಕಾರಣದ ಸಂಘರ್ಷವೀಗ ದೊಡ್ಡಮಟ್ಟಕ್ಕೆ ತಲುಪಿದೆ. ಈ ಹಿಂದೆ ಐದು ದಶಕಗಳ (1962-2011)ಕಾಲ ಮ್ಯಾನ್ಮಾರ್​ ಅನ್ನು ತಮ್ಮ ಕಬ್ಬಿಣದ ಮುಷ್ಟಿಯಲ್ಲಿ ಇಟ್ಟುಕೊಂಡು ಆಳಿದ್ದ ಮಿಲಿಟರಿ ಈಗ ಮತ್ತೆ ಪ್ರತಿಪಕ್ಷ ಯುಎಸ್​ಡಿಪಿ ಸಹಾಯದಿಂದ ದೇಶವನ್ನು ಆಳುವ ಪ್ರಯತ್ನದಲ್ಲಿದೆ.

ಪ್ರತಿಪಕ್ಷ ಹೇಳೋದೇನು?
ಚುನಾವಣೆಯಲ್ಲಿ ನಡೆದ ಅಕ್ರಮಗಳ ಬಗ್ಗೆ ಎಷ್ಟೇ ಆರೋಪ ಮಾಡಿದರೂ ಯೂನಿಯನ್ ಎಲೆಕ್ಷನ್ ಕಮಿಷನ್ ಲಕ್ಷ್ಯ ವಹಿಸುತ್ತಿಲ್ಲ. ಹಾಗಾಗಿ ನಾವು ಮಿಲಿಟರಿ ಹಸ್ತಕ್ಷೇಪ ಬಯಸಿದ್ದೇವೆ. ಚುನಾವಣೆಯಲ್ಲಿ ಮೋಸ ನಡೆದ ಬಗ್ಗೆ ನಾವು ಏನಿಲ್ಲವೆಂದರೂ 1200 ದೂರು, ಆಕ್ಷೇಪಣೆಗಳನ್ನು ಪೊಲೀಸರು, ಇತರ ಚುನಾವಣಾ ಆಯೋಗಕ್ಕೆ ನೀಡಿದ್ದೇವೆ. ಆದರೆ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದೂ ಪ್ರತಿಪಕ್ಷ ಆರೋಪಿಸಿದೆ. ಈಗಾಗಲೇ ಸೇನೆ ಹಣಕಾಸು, ಆರೋಗ್ಯ, ವಿದೇಶಾಂಗ ವ್ಯವಹಾರಗಳ ಇಲಾಖೆಯ ಸಚಿವರು ಮತ್ತು ಡೆಪ್ಯೂಟಿಸ್​ಗಳನ್ನು ಸೇರಿ ಒಟ್ಟು 11 ಮಂದಿಯನ್ನು ಬದಲಿಸಿದೆ.

ವಿಶ್ವಸಂಸ್ಥೆ ಖಂಡನೆ
ಮ್ಯಾನ್ಮಾರ್​ ಸೇನೆಯ ಕ್ರಮವನ್ನು ವಿಶ್ವಸಂಸ್ಥೆ, ಇಂಗ್ಲೆಂಡ್​, ಅಮೆರಿಕ, ಯುರೋಪಿಯನ್ ಒಕ್ಕೂಟಗಳು ಖಂಡಿಸಿವೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅಮೆರಿಕ ನೂತನ ಅಧ್ಯಕ್ಷ ಜೋ ಬೈಡನ್​, ಬಲವು ಎಂದಿಗೂ ಜನರ ಇಚ್ಛೆಯನ್ನು ಹತ್ತಿಕ್ಕಲು ಬಳಕೆಯಾಗಬಾರದು. ಹಾಗೇ, ವಿಶ್ವಾಸಾರ್ಹವಾಗಿ ನಡೆದ ಚುನಾವಣೆಯ ಫಲಿತಾಂಶವನ್ನು ತೊಡೆದು ಹಾಕಲು ಪ್ರಯೋಗವಾಗಬಾರದು.

ಕಳೆದ ಒಂದು ದಶಕದಲ್ಲಿ ಮ್ಯಾನ್ಮಾರ್​ ​ ಪ್ರಜಾಪ್ರಭುತ್ವ ದೇಶವಾಗಿ ಅಭಿವೃದ್ಧಿ ಹೊಂದುತ್ತಿರುವುದನ್ನು ನೋಡಿ ಅಮೆರಿಕ ಅದರ ಮೇಲಿನ ನಿರ್ಬಂಧವನ್ನು ತೆಗೆದುಹಾಕಿತ್ತು. ಆದರೆ ಇದೀಗ ಮತ್ತೆ ಮ್ಯಾನ್ಮಾರ್​ ​ನ ಪ್ರಜಾಪ್ರಭುತ್ವದ ಮೇಲೆ ದಾಳಿಯಾಗುತ್ತಿದೆ. ಹಾಗಾಗಿ ತೆಗೆದು ಹಾಕಿದ ನಿರ್ಬಂಧಗಳನ್ನು ಮತ್ತೊಮ್ಮೆ ಪರಿಶೀಲನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಹಾಗೇ ವಿಶ್ವಸಂಸ್ಥೆಯ ಜನರಲ್ ಆಂಟೋನಿಯೊ ಗುಟೆರೆಸ್ ಕೂಡ ಮ್ಯಾನ್ಮಾರ್​​ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಪ್ರಜಾಪ್ರಭುತ್ವದ ನಿಯಮಗಳಿಗೆ ಬಲವಾದ ಹೊಡೆತ ಬಿದ್ದಿದೆ. ಇನ್ನು 45 ಗಂಟೆಯೊಳಗೆ ಬಂಧಿತರಾದ ಸೂಕಿ ಮತ್ತು ಇತರ ಗಣ್ಯರ ಬಿಡುಗಡೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಇಂಗ್ಲೆಂಡ್ ಪ್ರಧಾನಿ ಬೋರಿಸ್​ ಜಾನ್ಸನ್​ ಕೂಡ ಸೂಕಿ ಬಂಧನವನ್ನು ಬಲವಾಗಿ ಖಂಡಿಸಿದ್ದಾರೆ.

ನಾಜೂಕಾಗಿ ಮಾತನಾಡಿದ ಚೀನಾ
ಮ್ಯಾನ್ಮಾರ್​​ನಲ್ಲಿ ನಡೆದ ಬೆಳವಣಿಗೆ ಬಗ್ಗೆ ಚೀನಾ ಅಂಥ ಖಡಕ್ ಹೇಳಿಕೆಯನ್ನೇನೂ ನೀಡಿಲ್ಲ. ಮಯನ್ಮಾರ್​ ಜತೆಗೆ ನಮಗೆ ಉತ್ತಮ ಸಂಬಂಧವಿದೆ. ಅಲ್ಲಿ ನಡೆಯುತ್ತಿರುವ ಭಿನ್ನಾಭಿಪ್ರಾಯಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳುತ್ತಾರೆ ಎಂಬ ನಂಬಿಕೆಯಿದೆ ಎಂದು ಚೀನಾ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಕಳೆದ ತಿಂಗಳಷ್ಟೇ ಚೀನಾದ ಉನ್ನತ ರಾಯಭಾರಿ ವಾಂಗ್​ ಯಿ ಮತ್ತು ಮಯನ್ಮಾರ್​ ಸೇನಾ ಮುಖ್ಯಸ್ಥ, ಇದೀಗ ಸೂಕಿಯವರಿಂದ ಅಧಿಕಾರ ವಹಿಸಿಕೊಂಡಿರುವ ಜನರಲ್ ಮಿನ್ ಆಂಗ್ ಹ್ಲೇಯಿಂಗ್​ ಭೇಟಿಯಾಗಿದ್ದರು. ಆ ವೇಳೆ ಸಹ ನವೆಂಬರ್​ನಲ್ಲಿ ನಡೆದ ಚುನಾವಣೆಯಲ್ಲಿ ಮೋಸ ನಡೆದ ಬಗ್ಗೆಯೇ ಚರ್ಚೆಯಾಗಿತ್ತು ಎಂದು ಉನ್ನತ ಮೂಲಗಳು ತಿಳಿಸಿವೆ.

ಇನ್ನು ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬುದನ್ನು ಯುನೈಟೆಡ್​ ಚುನಾವಣಾ ಆಯೋಗ ಅಲ್ಲಗಳೆದಿದೆ. ಸೇನೆ ಮತ್ತು ಪ್ರತಿಪಕ್ಷಗಳು ಹೇಳುವಷ್ಟು ದೊಡ್ಡ ಮಟ್ಟದ ಅಕ್ರಮಗಳು ನಡೆದಿಲ್ಲ ಎಂದು ಪ್ರತಿಪಾದಿಸಿವೆ. ಸದ್ಯ ಎನ್​ಎಲ್​ಡಿ ಪಕ್ಷ, ಸೂಕಿ ಮತ್ತು ಇತರ ಗಣ್ಯರ ಬಿಡುಗಡೆಗೆ ಪಟ್ಟುಹಿಡಿದಿದ್ದು, ಮುಂದಿನ ಬೆಳವಣಿಗೆಯನ್ನು ಕಾದು ನೋಡಬೇಕಷ್ಟೇ.

ಮ್ಯಾನ್ಮಾರ್‌ನಲ್ಲಿ ಸೇನಾ ಕ್ರಾಂತಿ.. ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಆಂಗ್ ಸಾನ್ ಸೂಕಿ ಬಂಧನ

Published On - 2:44 pm, Tue, 2 February 21