ದೇಶಿಯ ಕಾರು ಮಾರುಕಟ್ಟೆಯಲ್ಲಿ ಇತ್ತೀಚೆಗೆ ಹಲವಾರು ಹೊಸ ಕಾರುಗಳು (New Cars) ಬಿಡುಗಡೆಯಾಗಿದ್ದರೂ ಕೆಲವು ಕಾರುಗಳ ಮಾದರಿಗಳ ಬೇಡಿಕೆ ಮಾತ್ರ ಹಲವು ವರ್ಷಗಳಿಂದಲೂ ಯಾವುದೇ ಬದಲಾವಣೆಯಿಲ್ಲದೆ ಭರ್ಜರಿಯಾಗಿ ಮಾರಾಟವಾಗುತ್ತಿವೆ. ಇದಕ್ಕೆ ಪ್ರಮುಖ ಕಾರಣ ಕೆಲವು ಕಾರುಗಳ ಮೇಲಿನ ಮಾಲೀಕರ ವಿಶ್ವಾಸ, ಗುಣಮಟ್ಟ ಮತ್ತು ಬಾಳ್ವಿಕೆ ಅಂಶಗಳು ಮುಖ್ಯವಾಗಿದ್ದು, ಇವು ಮರುಮಾರಾಟದ ಸಂದರ್ಭದಲ್ಲೂ ಉತ್ತಮ ಬೆಲೆಯನ್ನು ಹಿಂದಿರುಗಿಸುತ್ತವೆ. ಹಾಗಾದ್ರೆ ಭಾರತದಲ್ಲಿ ಸದ್ಯ ಉತ್ತಮ ಮರುಮಾರಾಟ ಮೌಲ್ಯ ಹೊಂದಿರುವ ಕಾರುಗಳು ಯಾವುವು? ಅವುಗಳ ವಿಶೇಷತೆಗಳೇನು? ಎನ್ನುವ ಮಾಹಿತಿಯಲ್ಲಿ ಇಲ್ಲಿ ಹಂಚಿಕೊಳ್ಳಲಾಗಿದೆ.
ಕಾರುಗಳ ಮರುಮಾರಾಟ ಮೌಲ್ಯವನ್ನು ನಿರ್ಧರಿಸುವಾಗ ಹಲವಾರು ಅಂಶಗಳನ್ನು ಪರಿಗಣಿಸಲಾಗುತ್ತದೆ. ಮರುಮಾರಾಟ ಮೌಲ್ಯವು ಆ ವಾಹನದ ಸ್ಥಿತಿ ಹೇಗಿದೆ ಮತ್ತು ಯಾವ ರೀತಿ ನಿರ್ವಹಣೆ ಮಾಡಲಾಗಿದೆ ಎನ್ನುವುದು ಪ್ರಮುಖವಾಗಿದ್ದು, ಯಾವುದೇ ರೀತಿಯ ಅಪಘಾತಗಳು ಸಂಭವಿಸಿಲ್ಲವಾದರೆ ಹೆಚ್ಚಿನ ಮರುಮಾರಾಟ ಮೌಲ್ಯ ನೀರಿಕ್ಷೆ ಮಾಡಬಹುದಾಗಿದೆ. ಕಾರು ಮರುಮಾರಾಟ ಮೌಲ್ಯವು ಖರೀದಿಸಿದ ಮೂರು ವರ್ಷದ ನಂತರವೂ ಶೇ. 70ಕ್ಕಿಂತಲೂ ಹೆಚ್ಚಿನ ಮೌಲ್ಯ ಹಿಂದಿರುಗಿದರೆ ಅದನ್ನು ಉತ್ತಮ ಎನ್ನಬಹುದಾಗಿದ್ದು, ಈ ಪಟ್ಟಿಯಲ್ಲಿ ಹಲವಾರು ಕಾರುಗಳು ಸದ್ಯ ಮಾರುಕಟ್ಟೆಯಲ್ಲಿವೆ ಎನ್ನಬಹುದು.
ಟೊಯೊಟಾ ಇನೋವಾ ಕ್ರಿಸ್ಟಾ
ಭಾರತದಲ್ಲಿ ಸದ್ಯ ಅತಿ ಹೆಚ್ಚು ಮರುಮಾರಾಟ ಮೌಲ್ಯ ಹೊಂದಿರುವ ಕಾರುಗಳಲ್ಲಿ ಟೊಯೊಟಾ ಇನೋವಾ ಕ್ರಿಸ್ಟಾ ಅಗ್ರಸ್ಥಾನದಲ್ಲಿದೆ. ಇನೋವಾ ಕ್ರಿಸ್ಟಾ ಕಾರನ್ನು ಖರೀದಿ ಮಾಡಿದ ಮೂರು ವರ್ಷಗಳ ನಂತರವೂ ಸುಸ್ಥಿತಿಯಲ್ಲಿದ್ದರೆ ಶೇ. 90 ರಷ್ಟು ಮರುಮಾರಾಟ ಮೌಲ್ಯವನ್ನ ನೀರಿಕ್ಷೆ ಮಾಡಬಹುದಾಗಿದ್ದು, ಇದು ಹಲವಾರು ಅಂಶಗಳೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ನೆಚ್ಚಿನ ಕಾರು ಮಾದರಿಯಾಗಿದೆ.
ಮಾರುತಿ ಸುಜುಕಿ ಬ್ರೆಝಾ
ಬಜೆಟ್ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ನಿರ್ಮಾಣದ ಹಲವು ಕಾರುಗಳು ಮರುಮಾರಾಟ ಮೌಲ್ಯದಲ್ಲಿ ಉತ್ತಮ ಸ್ಥಾನದಲ್ಲಿದ್ದು, ಇದರಲ್ಲಿ ಬ್ರೆಝಾ ಕಂಪ್ಯಾಕ್ಟ್ ಎಸ್ ಯುವಿಯು ಶೇ. 90 ರಷ್ಟು ಮರುಮಾರಾಟ ಮೌಲ್ಯವನ್ನು ಹಿಂದಿರುಸುತ್ತದೆ. ಬಿಡುಗಡೆಯಾದ ಏಳು ವರ್ಷಗಳಲ್ಲಿ ಭಾರೀ ಪ್ರಮಾಣದಲ್ಲಿ ಮಾರಾಟವಾಗಿರುವ ಬ್ರೆಝಾ ಕಾರು ಸಬ್ ಫೋರ್ ಮೀಟರ್ ಕಂಪ್ಯಾಕ್ಟ್ ಎಸ್ ಯುವಿ ಮಾರಾಟದಲ್ಲಿ ಸದ್ಯ ಅಗ್ರಸ್ಥಾನದಲ್ಲಿದ್ದು, ಇದು ಹೆಚ್ಚಿನ ಇಂಧನ ದಕ್ಷತೆ, ಕಡಿಮೆ ನಿರ್ವಹಣೆಯೊಂದಿಗೆ ವಿವಿಧ ವರ್ಗದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಟಾಟಾ ಹ್ಯಾರಿಯರ್, ಸಫಾರಿ ಅದ್ಬುತ ಪ್ರದರ್ಶನ
ಹ್ಯುಂಡೈ ಕ್ರೆಟಾ
ಉತ್ತಮ ಮರುಮಾರಾಟ ಮೌಲ್ಯ ಹೊಂದಿರುವ ಕಾರುಗಳಲ್ಲಿ ಹ್ಯುಂಡೈ ಕ್ರೆಟಾ ಕಂಪ್ಯಾಕ್ಟ್ ಎಸ್ ಯುವಿ ಕೂಡಾ ಪ್ರಮುಖವಾಗಿದ್ದು, ಕ್ರೆಟಾ ಕಾರನ್ನು ಖರೀದಿ ಮಾಡಿದ ಮೂರು ವರ್ಷಗಳ ನಂತರವೂ ಶೇ. 85 ರಷ್ಟು ಮೌಲ್ಯವನ್ನು ಹಿಂದಿರುಗಿಸುತ್ತದೆ. ಮರು ಮೌಲ್ಯವು ಕಾರಿನ ಸ್ಥಿತಿ ಮತ್ತು ಮಾಲೀಕರ ಚಾಲನಾ ಗುಣವನ್ನು ಆಧರಿಸಿ ನಿರ್ಧಾರವಾಗುತ್ತದೆ. ಕ್ರೆಟಾ ಸದ್ಯ ಕಂಪ್ಯಾಕ್ಟ್ ಎಸ್ ಯುವಿ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಹಲವಾರು ಆಕರ್ಷಕ ಫೀಚರ್ಸ್ ಗಳನ್ನು ಹೊಂದಿದೆ.
ಮಾರುತಿ ಸುಜುಕಿ ಡಿಜೈರ್
ಕಂಪ್ಯಾಕ್ಟ್ ಸೆಡಾನ್ ಕಾರುಗಳ ವಿಭಾಗದಲ್ಲಿ ಅಗ್ರಸ್ಥಾನದಲ್ಲಿರುವ ಡಿಜೈರ್ ಕಾರು ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ಶೇ. 85 ರಷ್ಟು ಮರುಮಾರಾಟ ಮೌಲ್ಯವನ್ನು ಹೊಂದಿದ್ದು, ಇವು ವ್ಯಯಕ್ತಿಕ ಬಳಕೆಯ ಜೊತೆಗೆ ವಾಣಿಜ್ಯ ಬಳಕೆಯ ವಿಭಾಗದಲ್ಲೂ ಹೆಚ್ಚಿನ ಬೇಡಿಕೆ ಹೊಂದಿದೆ. ಹೆಚ್ಚಿನ ಮೈಲೇಜ್ ಮತ್ತು ಕಡಿಮೆ ನಿರ್ವಹಣಾ ವೆಚ್ಚದಿಂದಾಗಿ ಡಿಜೈರ್ ಕಾರು ಇತರೆ ಪ್ರತಿಸ್ಪರ್ಧಿ ಮಾದರಿಗಳಿಂತಲೂ ಉತ್ತಮ ಮರುಮಾರಾಟ ಮೌಲ್ಯ ಹೊಂದಿದ್ದು, ಪೆಟ್ರೋಲ್ ಮತ್ತು ಸಿಎನ್ ಜಿ ಎಂಜಿನ್ ಆಯ್ಕೆ ಹೊಂದಿದೆ.
ಹೋಂಡಾ ಸಿಟಿ
ಮಧ್ಯಮ ಕ್ರಮಾಂಕದ ಸೆಡಾನ್ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಸಿಟಿ ಕಾರು ಶೇ. 75 ರಷ್ಟು ಮರುಮಾರಾಟ ಮೌಲ್ಯ ಹೊಂದಿದ್ದು, ಇದರಲ್ಲಿರುವ ಹಲವಾರು ಐಷಾರಾಮಿ ಫೀಚರ್ಸ್ ಗಳು ಹೆಚ್ಚಿನ ಬೇಡಿಕೆಗೆ ಕಾರಣವಾಗಿದೆ. ಇತ್ತೀಚೆಗೆ ಸಿಟಿ ಕಾರಿನಲ್ಲಿ ಬಿಡುಗಡೆಯಾಗಿರುವ ಹೆೈಬ್ರಿಡ್ ಆವೃತ್ತಿಯು ಸಹ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇದು ಅರಾಮದಾಯಕ ಪ್ರಯಾಣದೊಂದಿಗೆ ಅತ್ಯುತ್ತಮ ಪರ್ಫಾಮೆನ್ಸ್ ಮತ್ತು ಇಂಧನ ದಕ್ಷತೆ ನೀಡುತ್ತದೆ.
ಇದನ್ನೂ ಓದಿ: 2023ರಲ್ಲಿ ಬಿಡುಗಡೆಯಾದ ಟಾಪ್ 5 ಅತ್ಯುತ್ತಮ ಎಲೆಕ್ಟ್ರಿಕ್ ಕಾರುಗಳಿವು!
ಮಹೀಂದ್ರಾ ಸ್ಕಾರ್ಪಿಯೋ
ಮಧ್ಯಮ ಕ್ರಮಾಂಕದ ಎಸ್ ಯುವಿ ಕಾರುಗಳ ಮಾರಾಟದಲ್ಲಿ ಭಾರೀ ಜನಪ್ರಿಯತೆ ಹೊಂದಿರುವ ಸ್ಕಾರ್ಪಿಯೋ ಕಾರು ಸದ್ಯ ಶೇ. 75 ರಷ್ಟು ಮರು ಮಾರಾಟ ಮೌಲ್ಯ ಹೊಂದಿದೆ. ಮಹೀಂದ್ರಾ ಕಂಪನಿಗೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿರುವ ಸ್ಕಾರ್ಪಿಯೋ ಕಾರು ಬಿಡುಗಡೆಯಾದ 20 ವರ್ಷಗಳ ನಂತರವೂ ಹೆಚ್ಚಿನ ಬೇಡಿಕೆ ಪಡೆದುಕೊಂಡಿದ್ದು, ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಇತ್ತೀಚೆಗೆ ಭಾರೀ ಬದಲಾವಣೆಯೊಂದಿಗೆ ಮರುಬಿಡುಗಡೆಯಾಗಿದೆ.
ಸ್ಕಾರ್ಪಿಯೋ ಹೊಸ ಆವೃತ್ತಿಯು ಆನ್ ರೋಡ್‌ನಲ್ಲಿ ಮಾತ್ರವಲ್ಲ ಆಫ್ ರೋಡ್‌ನಲ್ಲೂ ಗಮನಸೆಳೆಯುತ್ತಿದ್ದು, ಇದು 2.0-ಲೀಟರ್ ಪೆಟ್ರೋಲ್ ಮತ್ತು 2.2 ಲೀಟರ್ ಡೀಸೆಲ್ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.
Published On - 8:18 pm, Thu, 21 December 23