
ಬಾಲಿವುಡ್ ನಟ-ನಟಿಯರು ಆಗಾಗ ತಮ್ಮ ಲೈಫ್ ಸ್ಟೈಲ್ ನಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ನಟಿ ಜಾಹ್ನವಿ ಕಪೂರ್ ಕೂಡಾ ಹೊಸ ಐಷಾರಾಮಿ ಕಾರು ಮಾದರಿಯೊಂದನ್ನು ಖರೀದಿಸಿ ಸುದ್ದಿಯಲ್ಲಿದ್ದು, ತಮ್ಮ ದುಬಾರಿ ಕಾರುಗಳ ಸಂಗ್ರಹಕ್ಕೆ ಹೊಸದಾಗಿ ಲೆಕ್ಸಸ್ ಎಲ್ಎಂ ಕಾರನ್ನು ಸೇರ್ಪಡೆಗೊಳಿಸಿದ್ದಾರೆ. ಕೆಲವೇ ತಿಂಗಳುಗಳ ಹಿಂದೆಷ್ಟೇ ಬಹುಕೋಟಿ ಮೌಲ್ಯದ ರೇಂಜ್ ರೋವರ್ ಹೆಚ್ಎಸ್ಇ ವೆರಿಯೆಂಟ್ ಖರೀದಿಸಿದ್ದ ಜಾಹ್ನವಿ ಕಪೂರ್ ಇದೀಗ ಲೆಕ್ಸಸ್ ಐಷಾರಾಮಿ ಎಂಪಿವಿ ಮಾಲೀಕತ್ವ ಪಡೆದುಕೊಂಡಿದ್ದಾರೆ.
ಜಾಹ್ನವಿ ಕಪೂರ್ ಬಳಿ ಈಗಾಗಲೇ ರೂ. 2 ಕೋಟಿ ಮೌಲ್ಯದ ಲೆಕ್ಸಸ್ ಎಲ್ಎಕ್ಸ್ 570 ಎಸ್ ಯುವಿ, ಮರ್ಸಿಡಿಸ್ ಬೆಂಝ್ ಜಿಎಲ್ಇ 250ಡಿ, ಬಿಎಂಡಬ್ಲ್ಯು ಎಕ್ಸ್5 ಸೇರಿದಂತೆ ವಿವಿಧ ಐಷಾರಾಮಿ ಕಾರುಗಳ ಸಂಗ್ರಹವಿದ್ದು, ಇದೀಗ ರೂ. 2.50 ಕೋಟಿ ಮೌಲ್ಯದ ಲೆಕ್ಸಸ್ ಎಲ್ಎಂ 350ಹೆಚ್ ಎಂಪಿವಿ ಖರೀದಿಸಿದ್ದಾರೆ.
ಲೆಕ್ಸಸ್ ಎಲ್ಎಂ ಕಾರು ಉತ್ಪಾದನಾ ಪ್ಲ್ಯಾಟ್ ಫಾರ್ಮ್, ಪವರ್ ಟ್ರೈನ್ ಮತ್ತು ವೈಶಿಷ್ಟ್ಯತೆಗಳಲ್ಲಿ ಬಹುತೇಕ ಟೊಯೊಟಾ ವೆಲ್ ಫೈರ್ ಆಧರಿಸಿದ್ದು, ಇದು ಗ್ರಾಹಕರ ಬೇಡಿಕೆ ಆಧರಿಸಿ ಫೋರ್ ಸೀಟರ್ ಮತ್ತು ಸಿಕ್ಸ್ ಸೀಟರ್ ಆವತ್ತಿಗಳಲ್ಲಿ ಖರೀದಿಗೆ ಲಭ್ಯವಿದೆ. ಹೊಸ ಕಾರು ವಿಶೇಷವಾಗಿ ಉದ್ಯಮಿಗಳು, ರಾಜಕಾರಣಿಗಳು ಮತ್ತು ಸಿನಿ ತಾರೆಯರಿಗಾಗಿ ನಿರ್ಮಾಣಗೊಂಡಿದ್ದು, ಇದು ವೆಲ್ ಫೈರ್ ಕಾರಿಗಿಂತಲೂ ಹೆಚ್ಚಿನ ಮಟ್ಟದ ಐಷಾರಾಮಿ ಫೀಚರ್ಸ್ ಒಳಗೊಂಡಿದೆ.
ಹೊಸ ಕಾರು ಟೊಯೊಟಾ ವೆಲ್ ಫೈರ್ ಮಾದರಿಯಂತೆ 5,130 ಎಂಎಂ ಉದ್ದಳತೆಯೊಂದಿಗೆ 1,890 ಎಂಎಂ ಅಗಲ ಮತ್ತು 1,945 ಎಂಎಂ ಎತ್ತರ ಹೊಂದಿದ್ದು, ಆಕರ್ಷಕ ಕ್ಯಾಬಿನ್ ಸೌಲಭ್ಯವನ್ನು ಪಡೆದುಕೊಂಡಿದೆ. 6 ಸೀಟರ್ ಮಾದರಿಗಿಂತಲೂ 4 ಸೀಟರ್ ಆವೃತ್ತಿಯು ಹೆಚ್ಚಿನ ಐಷಾರಾಮಿ ಫೀಚರ್ಸ್ ಹೊಂದಿದ್ದು, ಇದು ಡ್ರೈವರ್ ಕ್ಯಾಬಿನ್ ನಿಂದ ಹಿಂಬದಿಯ ಆಸನವನ್ನು ಪ್ರತ್ಯೇಕಿಸುವುವ ಮೂಲಕ ಬಿಸಿನೆಸ್ ಕ್ಲಾಸ್ ವಿಮಾನಯಾನದ ಅನುಭವ ನೀಡುತ್ತದೆ.
ಹೊಸ ಕಾರಿನಲ್ಲಿ ರಿಕ್ಲೈನ್ ಆಸನಗಳೊಂದಿಗೆ 43 ಇಂಚಿನ ಟಿವಿ, 23 ಇಂಚಿನ ಸರೌಂಡ್ ಆಡಿಯೋ ಸಿಸ್ಟಂ, ಪಿಲ್ಲೋ ಸ್ಟೈಲ್ ಹೆಡ್ ರೆಸ್ಟ್, ಫ್ಲೋಡ್ ಟೇಬಲ್, ಹಿಟೆಡ್ ಆರ್ಮ್ ರೆಸ್ಟ್, ವೈರ್ ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್, ರೀಡಿಂಗ್ ಲೈಟ್ಸ್, ವ್ಯಾನಿಟಿ ಮಿರರ್, ಸಣ್ಣದಾದ ಫ್ರೀಡ್ಜ್, ರಿಯರ್ ಗ್ಲೋ ಬಾಕ್ಸ್, ಅಂಬ್ರೆಲಾ ಹೋಲ್ಡರ್, ಗೌಪ್ಯತೆಗಾಗಿ ಗ್ಲಾಸ್ ಪ್ಯಾನೆಲ್ ನೀಡಲಾಗಿದೆ. ಇದರೊಂದಿಗೆ ಡೋರ್ ಕಂಟ್ರೋಲ್, ಸ್ಟೋರೇಜ್ ಕಂಫಾರ್ಟ್ಮೆಂಟ್ ಮತ್ತು ಕ್ಯಾಬಿನ್ ಟೆಂಪರೇಚರ್ ಕಂಟ್ರೋಲ್ ಹೊಂದಿರುವ ಓವರ್ ಹೆಡ್ ಕನ್ಸೊಲ್ ಮತ್ತು ಸ್ಮಾರ್ಟ್ ಫೋನ್ ಸ್ಟೈಲ್ ಕಂಟ್ರೋಲ್ ಪ್ಯಾನೆಲ್ ನೀಡಲಾಗಿದೆ. ಇದರಲ್ಲಿ ಎನ್ ವಿಹೆಚ್ ಪ್ರಮಾಣವು ಅತಿ ಕಡಿಮೆ ಪ್ರಮಾಣದಲ್ಲಿದ್ದು, ಇದು ಪ್ರಯಾಣಿಕರಿಗೆ ಪ್ರಶಾಂತವಾದ ಕ್ಯಾಬಿನ್ ಒದಗಿಸಲು ಸಹಕಾರಿಯಾಗಿದೆ.
ಈ ಮೂಲಕ ಹೊಸ ಎಲ್ಎಂ ಎಂಪಿವಿಯಲ್ಲಿ ಲೆಕ್ಸಸ್ ಸುರಕ್ಷಿತ ಕಾರು ಪ್ರಯಾಣಕ್ಕಾಗಿ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಜೋಡಣೆ ಮಾಡಿದ್ದು, ಡಿಜಿಟಲ್ ರಿಯರ್ ವ್ಯೂ ಮಿರರ್ ಮತ್ತು ಪನೋರಮಿಕ್ ವ್ಯೂ ಮಾನಿಟರ್ ಮೂಲಕ ಹೆಚ್ಚಿನ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ. ಹಾಗೆಯೇ ಎಲ್ಎಂ ಕಾರಿನಲ್ಲಿ ವೆಲ್ ಫೈರ್ ಮಾದರಿಯಲ್ಲಿರುವಂತೆ 2.5 ಲೀಟರ್ ಫೋರ್ ಸಿಲಿಂಡರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ನೀಡಲಾಗಿದ್ದು, ಇದು ಸೆಲ್ಪ್ ಚಾರ್ಜಿಂಗ್ ವೈಶಿಷ್ಟ್ಯತೆಯೊಂದಿಗೆ ಫೋರ್ ವ್ಹೀಲ್ ಡ್ರೈವ್ ಸಿಸ್ಟಂ ಮೂಲಕ 246 ಹಾರ್ಸ್ ಪವರ್ ಮತ್ತು 239 ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಇದು ಭರ್ಜರಿ ಮೈಲೇಜ್ ನೀಡುತ್ತದೆ.