ಮಾರ್ಡನ್ ಕ್ಲಾಸಿಕ್ ವಿನ್ಯಾಸದ ಬೈಕ್ ಮಾದರಿಗಳೊಂದಿಗೆ ರಾಯಲ್ ಎನ್‌ಫೀಲ್ಡ್ ಗೆ ಉತ್ತಮ ಪೈಪೋಟಿ ನೀಡುತ್ತಿರುವ ಕ್ಲಾಸಿಕ್ ಲೆಜೆಂಡ್ಸ್ ಒಡೆತನದ ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ಕಂಪನಿಯು ಹೊಸದಾಗಿ ಜಾವಾ 42 ಎಫ್‌ಜೆ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದೆ. ಹೊಸ ಬೈಕ್ ಮಾದರಿಯು ವಿವಿಧ ವೆರಿಯೆಂಟ್ ಗಳೊಂದಿಗೆ ಎಕ್ಸ್ ಶೋರೂಂ ಪ್ರಕಾರ ರೂ. 1.99 ಲಕ್ಷದಿಂದ ರೂ. 2.20 ಲಕ್ಷ ಬೆಲೆ ಪಡೆದುಕೊಂಡಿದೆ.
ಸ್ಪೋರ್ಟಿಯರ್ ಮತ್ತು ಹೆಚ್ಚು ಶಕ್ತಿಶಾಲಿ ಜಾವಾ 42 ಎಫ್‌ಜೆ ಬೈಕ್ ಮಾದರಿಯು ಅರೊರಾ ಗ್ರೀನ್ ಮ್ಯಾಟೆ ಸ್ಪೋಕ್, ಅರೊರಾ ಗ್ರೀನ್ ಮ್ಯಾಟೆ ಅಲಾಯ್, ಮಿಸ್ಟಿಕ್ಯೂ ಕಾಪರ್ ಮತ್ತು ಕ್ಮಾಸ್ಮೊ ಬ್ಯೂ ಮ್ಯಾಟೆ ಎನ್ನುವ ನಾಲ್ಕು ವೆರಿಯೆಂಟ್ ಹೊಂದಿದ್ದು, ಇದು ಸಾಮಾನ್ಯ ಜಾವಾ 42 ಬೈಕಿಗಿಂತಲೂ ರೂ. 26 ಸಾವಿರದಷ್ಟು ದುಬಾರಿ ಬೆಲೆ ಪಡೆದುಕೊಂಡಿದೆ.
ಹೊಸ ಜಾವಾ 42 ಎಫ್‌ಜೆ ಬೈಕ್ ಮಾದರಿಯು ಯೆಜ್ಡಿ ರೋಡ್ ಸ್ಟರ್ ಬೈಕಿನ ವಿನ್ಯಾಸ ಪ್ರೇರಣೆಯೊಂದಿಗೆ ನಿರ್ಮಾಣಗೊಂಡಿದ್ದು, ಜಾವಾ ಮೋಟಾರ್‌ಸೈಕಲ್‌ಗಳ ಸಂಸ್ಥಾಪಕರಾಗಿದ್ದ ಫ್ರಾಂಟಿಸೆಕ್ ಜಾನೆಕೆಕ್ ಅವರ ನೆನಪಿಗಾಗಿ ಎಫ್‌ಜೆ ಬ್ಯಾಡ್ಜ್ ಬಳಕೆ ಮಾಡಲಾಗಿದೆ. ಇದರೊಂದಿಗೆ ಆಧುನಿಕ ರೆಟ್ರೊ ವಿನ್ಯಾಸದೊಂದಿಗೆ ಮಿಂಚುತ್ತಿರುವ ಹೊಸ ಬೈಕಿನಲ್ಲಿ ಅಲ್ಯುನಿಯಂನಿಂದ ನಿರ್ಮಾಣದ ಟ್ಯಾಂಕ್ ಕ್ಲಾಡಿಂಗ್, ಎಲ್ಇಡಿ ಹೆಡ್ ಲ್ಯಾಂಪ್, ಯೆಜ್ಡಿ ಬೈಕಿನಲ್ಲಿರುವಂತೆ ಇನ್ಸ್ಟುಮೆಂಟ್ ಕ್ಲಸ್ಟರ್ ಮತ್ತು ಸ್ವಿಚ್ ಗೇರ್ ನೀಡಲಾಗಿದೆ.
ಡಬಲ್ ಕ್ರೇಡಲ್ ಫ್ರೇಮ್ ಚಾಸಿಸ್ ಹೊಂದಿರುವ ಜಾವಾ 42 ಎಫ್‌ಜೆ ಬೈಕಿನಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸ್ಪೋಕ್ ಅಥವಾ ಅಲಾಯ್ ವ್ಹೀಲ್ಸ್ ಆಯ್ಕೆ ಕೂಡಾ ಲಭ್ಯವಿದ್ದು, ಜೊತೆಗೆ ಸ್ಟ್ಯಾಂಡರ್ಡ್ ಆಗಿ ಡ್ಯುಯಲ್ ಚಾನಲ್ ಎಬಿಎಸ್, ಬ್ಲ್ಯಾಕ್ಡ್ ಔಟ್ ಎಂಜಿನ್ ಮತ್ತು ಅಪ್‌ಸ್ವೆಪ್ಟ್ ಎಕ್ಸಾಸ್ಟ್ ಪೈಪ್ ಸೇರಿದಂತೆ ಹಲವಾರು ಸ್ಪೋರ್ಟಿ ಅಂಶಗಳನ್ನು ಹೊಂದಿದೆ.
ಇದನ್ನೂ ಓದಿ: ನಮ್ಮ ಬೆಂಗಳೂರಿಗೂ ಎಂಟ್ರಿ ಕೊಟ್ಟ ಬಜಾಜ್ ಫ್ರೀಡಂ 125 ಸಿಎನ್ಜಿ ಬೈಕ್
ಇನ್ನು ಹೊಸ ಬೈಕಿನ ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೋಪಿಕ್ ಸಸ್ಪೆನ್ಷನ್ ನೀಡಲಾಗಿದ್ದರೆ ಹಿಂಬದಿಯಲ್ಲಿ ಟ್ವಿನ್ ಶಾಕ್ ಅಬ್ಸಾರ್ವರ್ ನೀಡಲಾಗಿದ್ದು, ಇದು 790 ಎಂಎಂ ಆಸನ ಎತ್ತರ ಮತ್ತು 178 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ನೊಂದಿಗೆ ಬರೋಬ್ಬರಿ 184 ಕೆ.ಜಿ ಒಟ್ಟಾರೆ ತೂಕವನ್ನು ಹೊಂದಿದೆ. ಆದರೆ ಹೊಸ ಬೈಕಿನ ಎಂಜಿನ್ ಆಯ್ಕೆಯಲ್ಲಿ ಯಾವುದೇ ಬದಲಾವಣೆ ಮಾಡದ ಯೆಜ್ಡಿ ಮೋಟಾರ್‌ಸೈಕಲ್ಸ್ ಕಂಪನಿಯು ಸಾಮಾನ್ಯ ಜಾವಾ 42 ಬೈಕಿನಲ್ಲಿರುವಂತೆಯೇ 334 ಸಿಸಿ ಎಂಜಿನ್ ಜೋಡಣೆ ಮಾಡಿದೆ. ಇದು 6 ಸ್ಪೀಡ್ ಗೇರ್‌ಬಾಕ್ಸ್ ನೊಂದಿಗೆ 22.57 ಹಾರ್ಸ್ ಪವರ್ ಮತ್ತು 28.1 ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಹೊಸ ರೈಡಿಂಗ್ ಅನುಭವ ನೀಡಲಿದೆ.