Mahindra Scorpio N: ಮಹೀಂದ್ರಾ ಸ್ಕಾರ್ಪಿಯೋ ಎನ್ ನಲ್ಲಿ ಐದು ಹೊಸ ವೆರಿಯೆಂಟ್ ಬಿಡುಗಡೆ

| Updated By: Digi Tech Desk

Updated on: Dec 27, 2022 | 5:25 PM

ಮಹೀಂದ್ರಾ ಕಂಪನಿಯು ಹೊಸ ತಲೆಮಾರಿನ ಸ್ಕಾರ್ಪಿಯೋ ಎನ್ ಎಸ್ ಯುವಿಯಲ್ಲಿ ಐದು ಹೊಸ ವೆರಿಯೆಂಟ್ ಬಿಡುಗಡೆ ಮಾಡಿದ್ದು, ಹೊಸ ವೆರಿಯೆಂಟ್ ಗಳು ಈ ಹಿಂದಿನ ಪ್ರಮುಖ ಮಧ್ಯಮ ಕ್ರಮಾಂಕದ ವೆರಿಯೆಂಟ್ ಗಳನ್ನು ಆಧರಿಸಿ ಮಾರುಕಟ್ಟೆ ಪ್ರವೇಶಿಸಿವೆ.

Mahindra Scorpio N: ಮಹೀಂದ್ರಾ ಸ್ಕಾರ್ಪಿಯೋ ಎನ್ ನಲ್ಲಿ ಐದು ಹೊಸ ವೆರಿಯೆಂಟ್ ಬಿಡುಗಡೆ
ಮಹೀಂದ್ರಾ ಸ್ಕಾರ್ಪಿಯೋ ಎನ್ ನಲ್ಲಿ ಐದು ಹೊಸ ವೆರಿಯೆಂಟ್ ಬಿಡುಗಡೆ
Follow us on

ಎಸ್ ಯುವಿ ಕಾರುಗಳ(SUV’s) ವಿಭಾಗದಲ್ಲಿ ಮಹೀಂದ್ರಾ(Mahindra) ಹೊಸ ಸ್ಕಾರ್ಪಿಯೋ ಎನ್(Scorpio N) ಸದ್ಯ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದೆ. ಹೀಗಾಗಿ ಕಂಪನಿಯು ಹೊಸ ಕಾರಿನಲ್ಲಿ ಇದೀಗ ಮತ್ತಷ್ಟು ಹೊಸ ವೆರಿಯೆಂಟ್ ಪರಿಚಯಿಸಿದ್ದು, ಹೊಸ ವೆರಿಯೆಂಟ್ ಗಳು ಹಲವಾರು ವಿಶೇಷತೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಈ ವರ್ಷ ಬಿಡುಗಡೆಯಾದ ಅತ್ಯುತ್ತಮ ಕಾರುಗಳ ಪಟ್ಟಿಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಎನ್ ಸದ್ಯ ಅಗ್ರಸ್ಥಾನದಲ್ಲಿದೆ. ಹೊಸ ಕಾರು ಹಿಂದೆಂಗಿಂತಲೂ ಹಲವಾರು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ. ಇದೀಗ ಹೊಸ ಕಾರಿನಲ್ಲಿ ಗ್ರಾಹಕರ ಬೇಡಿಕೆಯೆಂತೆ ಮತ್ತಷ್ಟು ವೆರಿಯೆಂಟ್ ಗಳನ್ನು ಬಿಡುಗಡೆ ಮಾಡಲಾಗಿದ್ದು, ಎಸ್ ಯುವಿ ಪ್ರಿಯರನ್ನು ಆಕರ್ಷಿಸುತ್ತಿದೆ.

ಮಹೀಂದ್ರಾ ಹೊಸ ವೆರಿಯೆಂಟ್ ಮತ್ತು ಬೆಲೆ

ಹೊಸ ಸ್ಕಾರ್ಪಿಯೋ ಎನ್ ಕಾರಿನಲ್ಲಿ ಮಹೀಂದ್ರಾ ಕಂಪನಿಯು ಐದು ಹೊಸ ವೆರಿಯೆಂಟ್ ಗಳನ್ನು ಬಿಡುಗಡೆ ಮಾಡಿದ್ದು, ಹೊಸ ವೆರಿಯೆಂಟ್ ಗಳು ಈ ಹಿಂದಿನ ಪ್ರಮುಖ ಮಧ್ಯಮ ಕ್ರಮಾಂಕದ ವೆರಿಯೆಂಟ್ ಗಳನ್ನು ಆಧರಿಸಿವೆ. ಇವು ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ ಖರೀದಿಗೆ ಲಭ್ಯವಿವೆ. ಸ್ಕಾರ್ಪಿಯೋ ಎನ್ ಕಾರಿನಲ್ಲಿ ಹೊಸದಾಗಿ ಜೆಡ್ ಟು ಪೆಟ್ರೋಲ್, ಜೆಡ್ ಟು ಡೀಸೆಲ್, ಜೆಡ್ ಫೋರ್ ಪೆಟ್ರೋಲ್, ಜೆಡ್ ಫೋರ್ ಡೀಸೆಲ್ ಮತ್ತು ಜೆಡ್ ಫೋರ್ ಡೀಸೆಲ್ ಆಲ್ ವ್ಹೀಲ್ ಡ್ರೈವ್ ವೆರಿಯೆಂಟ್ ಪರಿಚಯಿಸಲಾಗಿದ್ದು, ಎಕ್ಸ್ ಶೋರೂಂ ಪ್ರಕಾರ ರೂ. 12. 49 ಲಕ್ಷದಿಂದ ರೂ. 16.94 ಲಕ್ಷ ಬೆಲೆ ಹೊಂದಿವೆ.

ಮಹೀಂದ್ರಾ ಕಾರು ಹೊಸ ಫೀಚರ್ಸ್ ಮತ್ತು ಎಂಜಿನ್ ಆಯ್ಕೆ

ಹೊಸ ಸ್ಕಾರ್ಪಿಯೋ ಎನ್ ಕಾರಿನಲ್ಲಿ ಮಹೀಂದ್ರಾ ಕಂಪನಿಯು ಈಗಾಗಲೇ ವಿವಿಧ ಎಂಜಿನ್ ಆಯ್ಕೆ ಆಧರಿಸಿ ಸುಮಾರು 25 ವೆರಿಯೆಂಟ್ ಗಳನ್ನು ಮಾರಾಟ ಮಾಡುತ್ತಿದೆ. ಇದೀಗ ಗ್ರಾಹಕರ ಬೇಡಿಕೆ ಆಧರಿಸಿ ಹೊಸದಾಗಿ ಮತ್ತೆ ಐದು ವೆರಿಯೆಂಟ್ ಗಳನ್ನು ಪರಿಚಯಿಸಿದೆ. ಇದರೊಂದಿಗೆ ಹೊಸ ಕಾರಿನಲ್ಲಿ ಇದೀಗ 30 ವೆರಿಯೆಂಟ್ ಗಳನ್ನು ಹೊಂದಿದಂತಾಗಿದೆ. ಹೊಸದಾಗಿ ಬಿಡುಗಡೆಯಾಗಿರುವ ಐದು ವೆರಿಯೆಂಟ್ ಗಳು ಕೆಲವು ಸಣ್ಣಪುಟ್ಟ ಬದಲಾವಣೆಗಳನ್ನು ಹೊಂದಿದ್ದು, ಪ್ರಮುಖ ವೆರಿಯೆಂಟ್ ಗಳ ನಡುವಿನ ಬೆಲೆ ಅಂತರವನ್ನು ಕಡಿಮೆಗೊಳಿಸಲು ಹೊಸ ವೆರಿಯೆಂಟ್ ಪರಿಚಯಿಸಲಾಗಿದೆ.

ಮಹೀಂದ್ರಾ ಹೊಸ ಸ್ಕಾರ್ಪಿಯೋ ಎನ್ ಕಾರಿನ ಬೆಲೆ:

ಹೊಸ ವೆರಿಯೆಂಟ್ ಹೊರತಾಗಿ ಇನ್ನುಳಿದ ವೆರಿಯೆಂಟ್ ಗಳು ಈ ಹಿಂದಿನಂತೆ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 23.90 ಲಕ್ಷ ಬೆಲೆ ಹೊಂದಿವೆ. ಇನ್ನು ಮಹೀಂದ್ರಾ ಕಂಪನಿಯು ಹೊಸ ಸ್ಕಾರ್ಪಿಯೋ ಎನ್ ಕಾರು ಮಾದರಿಯನ್ನು ಕಳೆದ ಅಗಸ್ಟ್ ನಲ್ಲಿ ಮಾರುಕಟ್ಟೆಗೆ ಪರಿಚಯಿಸಿತ್ತು. ಹೊಸ ಕಾರು ಹಲವಾರು ಹೊಸ ಫೀಚರ್ಸ್ ಗಳೊಂದಿಗೆ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇದುವರೆಗೆ ಸುಮಾರು 1.50 ಲಕ್ಷಕ್ಕೂ ಅಧಿಕ ಗ್ರಾಹಕರಿಂದ ಬುಕಿಂಗ್ ಪಡೆದುಕೊಂಡಿದೆ. ಹೀಗಾಗಿ ಹೊಸ ಕಾರು ಖರೀದಿಸುವ ಗ್ರಾಹಕರು ಸುಮಾರು 17 ತಿಂಗಳಿನಿಂದ 23 ತಿಂಗಳ ಕಾಲ ಕಾಯಬೇಕಿದೆ.

ಮಹೀಂದ್ರಾ ಹೊಸ ಸ್ಕಾರ್ಪಿಯೋ ಎನ್ ಕಾರಿನ ಫೀಚರ್ಸ್

ಹೊಸ ಕಾರಿನಲ್ಲಿರುವ ವಿನೂತನ ಫೀಚರ್ಸ್, ಆಕರ್ಷಕ ಬೆಲೆ ಮತ್ತು ಬಲಿಷ್ಠ ಎಂಜಿನ್ ಆಯ್ಕೆಯಿಂದಾಗಿ ಭರ್ಜರಿ ಬೇಡಿಕೆ ಹರಿದುಬರುತ್ತಿದ್ದು, ಎಸ್ ಯುವಿ ಖರೀದಿದಾರರ ಆಯ್ಕೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಜೊತೆಗೆ ಹೊಸ ಕಾರಿನಲ್ಲಿ ಮಹೀಂದ್ರಾ ಕಂಪನಿಯು ಎಕ್ಸ್ ಯುವಿ700 ಕಾರಿನಲ್ಲಿರುವಂತೆ 2.0 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ನೀಡಿದೆ. ಇದರಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ನೀಡಿದ್ದು, ಟಾಪ್ ಎಂಡ್ ಮಾದರಿಗಳಲ್ಲಿ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಜೋಡಿಸಲಾಗಿದೆ.

ಹೊಸ ಕಾರಿನಲ್ಲಿ ಮಹೀಂದ್ರಾ ಕಂಪನಿಯು ಈ ಬಾರಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಹಲವಾರು ಸೇಫ್ಟಿ ಫೀಚರ್ಸ್ ನೀಡಲಾಗಿದೆ. ಹೊಸ ಕಾರಿನಲ್ಲಿ 6 ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಹೋಲ್ಡ್ ಕಂಟ್ರೋಲ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಸೇರಿದಂತೆ ಹಲವಾರು ಫೀಚರ್ಸ್‌ ನೀಡಿದೆ. ಇದರಿಂದ ಕಳೆದ ತಿಂಗಳು ನಡೆದ ಗ್ಲೋಬಲ್ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಹೊಸ ಕಾರು ಗರಿಷ್ಠ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡಿದೆ. ಇದೇ ಕಾರಣಕ್ಕೆ ಹೊಸ ಕಾರಿನ ಬೇಡಿಕೆಯು ನಿರಂತವಾಗಿ ಹೆಚ್ಚಳವಾಗುತ್ತಿದ್ದು, ಇದೀಗ ಹೊಸ ವೆರಿಯೆಂಟ್ ಗಳು ಮತ್ತಷ್ಟು ಬೇಡಿಕೆ ತಂದುಕೊಡುವ ನೀರಿಕ್ಷೆಯಿದೆ.

Published On - 4:06 pm, Tue, 27 December 22