ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ (Mahindra) ಕಂಪನಿಯು ತನ್ನ ಜನಪ್ರಿಯ ಎಕ್ಸ್‌ಯುವಿ700 (XUV700) ಮಾದರಿಯಲ್ಲಿ ಹೊಸದಾಗಿ ಎಎಕ್ಸ್5 ಸೆಲೆಕ್ಟ್ ವೆರಿಯೆಂಟ್ ಬಿಡುಗಡೆ ಮಾಡಿದ್ದು, ಹೊಸ ವೆರಿಯೆಂಟ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಆಕರ್ಷಕ ಬೆಲೆ ಹೊಂದಿದೆ.
ಎಕ್ಸ್‌ಯುವಿ700 ಎಎಕ್ಸ್5 ಸೆಲೆಕ್ಟ್ ವೆರಿಯೆಂಟ್ ನಲ್ಲಿರುವ ಪೆಟ್ರೋಲ್ ಮ್ಯಾನುವಲ್ ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 16.89 ಲಕ್ಷ ಬೆಲೆ ಹೊಂದಿದ್ದರೆ ಆಟೋಮ್ಯಾಟಿಕ್ ಆವೃತ್ತಿಯು ರೂ. 17.49 ಲಕ್ಷ ಬೆಲೆ ಹೊಂದಿದೆ. ಹಾಗೆಯೇ ಎಎಕ್ಸ್5 ಸೆಲೆಕ್ಟ್ ವೆರಿಯೆಂಟ್ ನಲ್ಲಿರುವ ಡೀಸೆಲ್ ಮ್ಯಾನುವಲ್ ಮಾದರಿಯು ರೂ. 18.49 ಲಕ್ಷ ಬೆಲೆ ಹೊಂದಿದ್ದರೆ ಆಟೋಮ್ಯಾಟಿಕ್ ಮಾದರಿಯು ರೂ. 19.09 ಲಕ್ಷ ಬೆಲೆ ಹೊಂದಿದೆ.
ಹೊಸ ಎಎಕ್ಸ್5 ಸೆಲೆಕ್ಟ್ ವೆರಿಯೆಂಟ್ ಈ ಹಿಂದಿನ ಎಎಕ್ಸ್3 ವೆರಿಯೆಂಟ್ ಗಿಂತಲೂ ತುಸು ದುಬಾರಿ ಹೊಂದಿದ್ದು, ಹೊಸ ವೆರಿಯೆಂಟ್ ನಲ್ಲಿ 7 ಸೀಟರ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದೆ. ಸದ್ಯ ಎಎಕ್ಸ್3 ವೆರಿಯೆಂಟ್ ನಲ್ಲಿ 5 ಸೀಟರ್ ಸೌಲಭ್ಯ ನೀಡುತ್ತಿರುವ ಮಹೀಂದ್ರಾ ಕಂಪನಿಯು 7 ಸೀಟರ್ ಬಯಸುವ ಗ್ರಾಹಕರಿಗೆ ಹೆಚ್ಚುವರಿ ಮೊತ್ತದೊಂದಿಗೆ ಮೂರನೇ ಸಾಲಿನ ಆಸನವನ್ನು ನೀಡುತ್ತಿದೆ. ಹೀಗಾಗಿ 7 ಸೀಟರ್ ಬಯಸುವ ಗ್ರಾಹಕರಿಗೆ ಎಎಕ್ಸ್5 ಸೆಲೆಕ್ಟ್ ವೆರಿಯೆಂಟ್ ಗಳು ಉತ್ತಮ ಆಯ್ಕೆಯಾಗಿದ್ದು, ಇದರಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್ ನೀಡಲಾಗಿದೆ.
ಇದನ್ನೂ ಓದಿ: ಕೋಟಿ ಬೆಲೆಯ ಪವರ್ ಫುಲ್ ಐಷಾರಾಮಿ ಕಾರು ಖರೀದಿಸಿದ ‘ಸಿಂಹಪ್ರಿಯಾ’ ಜೋಡಿ
ಎಎಕ್ಸ್5 ಸೆಲೆಕ್ಟ್ ವೆರಿಯೆಂಟ್ ನಲ್ಲಿ ಮಹೀಂದ್ರಾ ಕಂಪನಿಯು 7 ಸೀಟರ್ ಸೌಲಭ್ಯದ ಜೊತೆಗೆ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ಜೋಡಣೆ ಮಾಡಿದೆ. ಜೊತೆಗೆ ಹೊಸ ವೆರಿಯೆಂಟ್ ನಲ್ಲಿ ಪನೊರಮಿಕ್ ಸನ್ ರೂಫ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಎರಡನೇ ಸಾಲಿನ ಆಸನಗಳಲ್ಲೂ ಮ್ಯಾಪ್ ಲ್ಯಾಂಪ್ಸ್ ಸೇರಿದಂತೆ ವಿವಿಧ ಫೀಚರ್ಸ್ ನೀಡುತ್ತಿದೆ. ಈ ಮೂಲಕ ಎಸ್ ಯುವಿ ಪ್ರಿಯರ ಆಯ್ಕೆ ಹೆಚ್ಚಿಸಲು ಯತ್ನಿಸುತ್ತಿರುವ ಮಹೀಂದ್ರಾ ಕಂಪನಿ ಮುಂಬರುವ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.
ಇನ್ನು ಹೊಸ ಎಎಕ್ಸ್5 ಸೆಲೆಕ್ಟ್ ವೆರಿಯೆಂಟ್ ನಲ್ಲಿ ಗ್ರಾಹಕರು 2.0 ಲೀಟರ್ ಪೆಟ್ರೋಲ್ ಮತ್ತು 2.2 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಸಬಹುದಾಗಿದ್ದು, ಎರಡೂ ಎಂಜಿನ್ ಆಯ್ಕೆಗಳಲ್ಲೂ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಗಳನ್ನು ಖರೀದಿಸಬಹುದಾಗಿದೆ. ಇದರಲ್ಲಿ ಪೆಟ್ರೋಲ್ ವೆರಿಯೆಂಟ್ 200 ಹಾರ್ಸ್ ಪವರ್ ಉತ್ಪಾದನೆ ಮಾಡಿದ್ದಲ್ಲಿ ಡೀಸೆಲ್ ವೆರಿಯೆಂಟ್ ಗಳು ಎರಡು ರೀತಿಯಲ್ಲಿ ಟ್ಯೂನ್ ಮಾಡಲಾದ ಪರ್ಫಾಮೆನ್ಸ್ ಹೊಂದಿವೆ. ಇವುಗಳಲ್ಲಿ ಆರಂಭಿಕ ವೆರಿಯೆಂಟ್ ನಲ್ಲಿರುವ ಡೀಸೆಲ್ ವೆರಿಯೆಂಟ್ ಗಳು 155 ಹಾರ್ಸ್ ಪವರ್ ಉತ್ಪಾದಿಸಿದರೆ ಹೈ ಎಂಡ್ ವೆರಿಯೆಂಟ್ ನಲ್ಲಿರುವ ಡೀಸೆಲ್ ವೆರಿಯೆಂಟ್ ಗಳು 185 ಹಾರ್ಸ್ ಪವರ್ ಉತ್ಪಾದನಾ ಸಾಮರ್ಥ್ಯ ಹೊಂದಿವೆ.
ಇದನ್ನೂ ಓದಿ: ಎಡಿಎಎಸ್ ಸೌಲಭ್ಯ ಹೊಂದಿರುವ ಭಾರತದ ಬಜೆಟ್ ಕಾರುಗಳಿವು!
ಇದರೊಂದಿಗೆ ಹೊಸ ಎಕ್ಸ್‌ಯುವಿ700 ನಲ್ಲಿ ಹಲವಾರು ಸುರಕ್ಷಾ ಫೀಚರ್ಸ್ ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಆಲ್ ವ್ಹೀಲ್ ಡಿಸ್ಕ್ ಬ್ರೇಕ್, ಆರು ಏರ್ ಬ್ಯಾಗ್ ಗಳು ಸೇರಿದಂತೆ ಹಲವು ಸುರಕ್ಷಾ ಫೀಚರ್ಸ್ ಗಳಿವೆ. ಹೊಸ ಕಾರಿನಲ್ಲಿ ಇನ್ನು ಹೆಚ್ಚಿನ ಸುರಕ್ಷತೆ ಬಯಸುವ ಗ್ರಾಹಕರು ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೌಲಭ್ಯ ಹೊಂದಿರುವ ಟಾಪ್ ಎಂಡ್ ವೆರಿಯೆಂಟ್ ಗಳನ್ನು ಖರೀದಿಸಬಹುದಾಗಿದ್ದು, ಎಡಿಎಎಸ್ ಫೀಚರ್ಸ್ ಹೊಂದಿರುವ ವೆರಿಯೆಂಟ್ ಗಳು ತುಸು ದುಬಾರಿಯಾಗಿರಲಿವೆ.
Published On - 6:50 pm, Wed, 22 May 24