ದೇಶದ ಅಗ್ರ ಕಾರು ಉತ್ಪಾದನಾ ಕಂಪನಿಯಾಗಿರುವ ಮಾರುತಿ ಸುಜುಕಿ(Maruti Suzuki) ತನ್ನ ಹೊಸ ತಲೆಮಾರಿನ ವಾಹನ ಉತ್ಪನ್ನಗಳ ಮೂಲಕ ಗ್ರಾಹಕರ ಆಯ್ಕೆಗಳನ್ನು ಹೆಚ್ಚಿಸುತ್ತಿದ್ದು, ಇದೀಗ ಮೊದಲ ಬಾರಿಗೆ ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (Advance Driving Assistance System) ಸೌಲಭ್ಯ ಹೊಂದಿರುವ ಕಾರು ಬಿಡುಗಡೆಗಾಗಿ ಸಿದ್ದತೆ ನಡೆಸುತ್ತಿದೆ. ಮಾಹಿತಿಗಳ ಪ್ರಕಾರ, ಮಾರುತಿ ಸುಜುಕಿ ಕಂಪನಿಯು ತನ್ನ ಜನಪ್ರಿಯ ಎಸ್‍ಯುವಿ ಆವೃತ್ತಿಯಾಗಿರುವ ಗ್ರ್ಯಾಂಡ್ ವಿಟಾರಾದಲ್ಲಿ ಎಡಿಎಎಸ್ ಜೋಡಣೆ ಮಾಡುತ್ತಿದ್ದು, ಹೊಸ ಸುರಕ್ಷಾ ಫೀಚರ್ಸ್ ಹೊಂದಿರುವ ಕಾರು ಶೀಘ್ರದಲ್ಲಿಯೇ ಮಾರುಕಟ್ಟೆಗೆ ಲಗ್ಗೆಯಿಡುವ ಸಿದ್ದತೆಯಲ್ಲಿದೆ.
ಕಾರುಗಳಲ್ಲಿ ಗರಿಷ್ಠ ಸುರಕ್ಷತೆಗಾಗಿ ವಿಶ್ವಾದ್ಯಂತ ಪ್ರಮುಖ ಕಾರು ಉತ್ಪಾದನಾ ಕಂಪನಿಗಳು ಎಡಿಎಎಸ್ ಸೌಲಭ್ಯವನ್ನು ತಮ್ಮ ಪ್ರಮುಖ ಕಾರು ಮಾದರಿಗಳಲ್ಲಿ ಹಂತ-ಹಂತವಾಗಿ ಜೋಡಣೆ ಮಾಡುತ್ತಿದ್ದು, ಭಾರತದಲ್ಲೂ ಕೂಡಾ ಹೊಸ ಫೀಚರ್ಸ್ ಹೊಂದಿರುವ ಹಲವು ಕಾರು ಮಾದರಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಹೀಗಾಗಿ ಗರಿಷ್ಠ ಸುರಕ್ಷತೆ ಬಯಸುವ ಗ್ರಾಹಕರು ಎಡಿಎಎಸ್ ಪ್ರೇರಿತ ಕಾರುಗಳ ಖರೀದಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಮಾರುತಿ ಸುಜುಕಿ ಸಹ ತನ್ನ ಗ್ರ್ಯಾಂಡ್ ವಿಟಾರಾದಲ್ಲಿ ಹೊಸ ಸೌಲಭ್ಯದ ಮೂಲಕ ಮತ್ತಷ್ಟು ಗ್ರಾಹಕರನ್ನು ಸೆಳೆಯುವ ತವಕದಲ್ಲಿದೆ.
ಮಧ್ಯಮ ಕ್ರಮಾಂಕದಲ್ಲಿರುವ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್, ಎಂಜಿ ಆಸ್ಟರ್, ಟಾಟಾ ಸಫಾರಿ, ಟಾಟಾ ಹ್ಯಾರಿಯರ್ ಮತ್ತು ಮಹೀಂದ್ರಾ ಎಕ್ಸ್ ಯುವಿ700 ಕಾರುಗಳಲ್ಲಿ ಈಗಾಗಲೇ ಎಡಿಎಎಸ್ ಸುರಕ್ಷಾ ಸೌಲಭ್ಯವನ್ನು ನೀಡಲಾಗುತ್ತಿದ್ದು, ಮಾರುತಿ ಸುಜುಕಿ ಸಹ ಇದೀಗ ಗ್ರ್ಯಾಂಡ್ ವಿಟಾರಾದಲ್ಲಿ ಹೊಸ ಸುರಕ್ಷಾ ಸೌಲಭ್ಯ ನೀಡುವ ಮೂಲಕ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ಯೋಜನೆ ರೂಪಿಸಿದೆ.
ಇದನ್ನೂ ಓದಿ: ಕೋಟಿ ಬೆಲೆಯ ಪವರ್ ಫುಲ್ ಐಷಾರಾಮಿ ಕಾರು ಖರೀದಿಸಿದ ‘ಸಿಂಹಪ್ರಿಯಾ’ ಜೋಡಿ
ಪ್ರಸ್ತುತ ಮಾರುಕಟ್ಟೆಯಲ್ಲಿ ಕಡಿಮೆ ನಿರ್ವಹಣೆ, ಉತ್ತಮ ಇಂಧನ ದಕ್ಷತೆ ಹೊರತಾಗಿಯೂ ಕಳಪೆ ಗುಣಮಟ್ಟ ಕಾರುಗಳ ಉತ್ಪಾದನೆಯ ಪಟ್ಟ ಹೊತ್ತಿರುವ ಮಾರುತಿ ಸುಜುಕಿಯು ಇತ್ತೀಚೆಗೆ ಗುಣಮಟ್ಟದ ಕಾರಗಳನ್ನು ಪರಿಚಯಿಸುತ್ತಿರುವ ಉತ್ತಮ ನಡೆ ಎನ್ನಬಹುದಾಗಿದೆ. ಹೊಸ ತಲೆಮಾರಿನ ಕಾರು ಮಾದರಿಗಳಾದ ಗ್ರ್ಯಾಂಡ್ ವಿಟಾರಾ, ಫ್ರಾಂಕ್ಸ್, ಹೊಸ ಸ್ವಿಫ್ಟ್ ಕಾರುಗಳಲ್ಲಿ ಮಹತ್ವದ ಬದಲಾವಣೆ ತರಲಾಗಿದ್ದು, ಇವುಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಹಲವು ಸುರಕ್ಷಾ ಫೀಚರ್ಸ್ ಗಳ ಜೊತೆಗೆ ಉತ್ಪಾದನೆಯಲ್ಲೂ ಸಾಕಷ್ಟು ಸುಧಾರಣೆ ತರಲಾಗಿದೆ.
ಹೊಸ ಕಾರುಗಳಲ್ಲಿ ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್ ಗಳ ಜೊತೆಗೆ ಇದೀಗ ಅತ್ಯುನ್ನತ ಸುರಕ್ಷಾ ಸೌಲಭ್ಯವಾದ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಪರಿಚಯಿಸುತ್ತಿದ್ದು, ಹೊಸ ಸುರಕ್ಷಾ ಸೌಲಭ್ಯವು ಸಂಭಾವ್ಯ ಅಪಘಾತಗಳನ್ನು ತಗ್ಗಿಸುವ ಮೂಲಕ ಪ್ರಯಾಣಿಕರ ಜೀವಹಾನಿ ಪ್ರಕರಣಗಳನ್ನು ಗಣನೀಯವಾಗಿ ತಗ್ಗಿಸಲಿದೆ. ಎಡಿಎಎಸ್ ಸೌಲಭ್ಯವು ಸಂಪೂರ್ಣವಾಗಿ ರಡಾರ್ ಆಧರಿಸಿ ಕಾರ್ಯನಿರ್ವಹಿಸಲಿದ್ದು, ಇದು ಭವಿಷ್ಯದ ಆಟೊನೊಮಸ್ ಕಾರುಗಳಲ್ಲೂ ನಿರ್ಣಾಯಕ ಪಾತ್ರವಹಿಸಲಿದೆ. ಇನ್ನು ಆಟೋನೊಮಸ್ ಕಾರುಗಳಲ್ಲಿ ಸದ್ಯಕ್ಕೆ ಲೆವಲ್ 5 ಎಡಿಎಎಸ್ ಸೌಲಭ್ಯವನ್ನು ಬಳಕೆ ಮಾಡಲಾಗುತ್ತಿದ್ದು, ಭಾರತದಲ್ಲಿರುವ ಹೊಸ ಕಾರುಗಳಲ್ಲಿ ಲೆವಲ್ 1 ಮತ್ತು ಲೆವಲ್ 2 ಸೌಲಭ್ಯವನ್ನು ಬಳಕೆ ಮಾಡಲಾಗುತ್ತಿದೆ.
ಇದನ್ನೂ ಓದಿ: ಎಡಿಎಎಸ್ ಸೌಲಭ್ಯ ಹೊಂದಿರುವ ಭಾರತದ ಬಜೆಟ್ ಕಾರುಗಳಿವು!
ಮಾರುತಿ ಸುಜುಕಿ ಕಂಪನಿಯು ನವೀಕೃತ ಗ್ರ್ಯಾಂಡ್ ವಿಟಾರಾದಲ್ಲಿ ಲೆವಲ್ 2 ಎಡಿಎಎಸ್ ಸೌಲಭ್ಯವನ್ನು ನೀಡಬಹುದಾಗಿದ್ದು, ಲೆವಲ್ 2 ಎಡಿಎಎಸ್ ಪ್ಯಾಕೇಜ್ ನಲ್ಲಿ 360 ಡಿಗ್ರಿ ಕ್ಯಾಮೆರಾ ನೊಂದಿಗೆ ಆಟೋಮ್ಯಾಟಿಕ್ ಎರ್ಮಜೆನ್ಸಿ ಬ್ರೇಕಿಂಗ್, ಟ್ರಾಫಿಕ್ ಸಿಗ್ನಲ್ ಡಿಟೆಕ್ಷನ್ ಅಂಡ್ ವಾರ್ನಿಂಗ್, ರಿಯರ್ ಟ್ರಾಫಿಕ್ ಕ್ರಾಸಿಂಗ್ ಅಲರ್ಟ್, ಪಾರ್ಕಿಂಗ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ರಿಯರ್ ಕೂಲಿಷನ್ ವಾರ್ನಿಂಗ್, ಲೈನ್ ಡಿಪಾರ್ಚರ್ ವಾರ್ನಿಂಗ್ ಅಲರ್ಟ್ ಸೌಲಭ್ಯಗಳಿರಲಿವೆ. ಈ ಮೂಲಕ ಎಡಿಎಎಸ್ ನಲ್ಲಿ ವಿವಿಧ ಸುರಕ್ಷಾ ಸೌಲಭ್ಯಗಳು ಚಾಲಕನ ಗಮನಕ್ಕೆ ಬಾರದೆ ಆಗಬಹುದಾದ ಅಪಘಾತಗಳನ್ನು ತಗ್ಗಿಸಲು ನೆರವಾಗಲಿದ್ದು, ಅಪಘಾತದ ಸಾಧ್ಯತೆಗಳ ಬಗ್ಗೆ ಚಾಲಕನಿಗೆ ಎಚ್ಚರಿಕೆ ನೀಡುವ ಮೂಲಕ ಅಪಘಾತಗಳನ್ನು ಸಂಖ್ಯೆ ತಗ್ಗಿಸುತ್ತದೆ.