Tata Harrier vs Tata Safari: ಟಾಟಾ ಹ್ಯಾರಿಯರ್ vs ಟಾಟಾ ಸಫಾರಿ.. ಖರೀದಿಗೆ ಯಾವುದು ಬೆಸ್ಟ್?

ಟಾಟಾ ಮೋಟಾರ್ಸ್ ಕಂಪನಿಯು ಹ್ಯಾರಿಯರ್ ಮತ್ತು ಸಫಾರಿ ಮೂಲಕ ಎಸ್ ಯುವಿ ಕಾರು ಮಾರಾಟದಲ್ಲಿ ಉತ್ತಮ ಬೇಡಿಕೆ ಕಾಯ್ದುಕೊಂಡಿದ್ದು, ಇದೀಗ ಎರಡು ಕಾರುಗಳು ಫೇಸ್‌ಲಿಫ್ಟ್ ಆವೃತ್ತಿಗಳನ್ನು ಪಡೆದುಕೊಂಡಿವೆ.

Tata Harrier vs Tata Safari: ಟಾಟಾ ಹ್ಯಾರಿಯರ್ vs ಟಾಟಾ ಸಫಾರಿ.. ಖರೀದಿಗೆ ಯಾವುದು ಬೆಸ್ಟ್?
ಟಾಟಾ ಹ್ಯಾರಿಯರ್ vs ಟಾಟಾ ಸಫಾರಿ
Praveen Sannamani

Updated on: Oct 20, 2023 | 6:46 PM

ದೇಶದ ಜನಪ್ರಿಯ ಕಾರು ಉತ್ಪಾದನಾ ಕಂಪನಿಯಾಗಿರುವ ಟಾಟಾ ಮೋಟಾರ್ಸ್ (Tata Motors) ತನ್ನ ಹೊಸ ಹ್ಯಾರಿಯರ್ (Harrier) ಮತ್ತು ಸಫಾರಿ (Safari) ಕಾರು ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಹೊಸ ಕಾರುಗಳು ನವೀಕೃತ ವಿನ್ಯಾಸದೊಂದಿಗೆ ಹಲವಾರು ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿವೆ. ಹಾಗೆಯೇ ಎರಡು ಹೊಸ ಕಾರುಗಳು ಒಂದೇ ರೀತಿಯ ಹಲವಾರು ತಾಂತ್ರಿಕ ಸೌಲಭ್ಯಗಳೊಂದಿಗೆ ಎಂಜಿನ್ ಆಯ್ಕೆಯಲ್ಲೂ ಗಮನಸೆಳೆಯುತ್ತಿವೆ. ಹಾಗಾದ್ರೆ ಈ ಹೊಸ ಕಾರುಗಳಲ್ಲಿ ಖರೀದಿಗೆ ಯಾವುದು ಉತ್ತಮ? ಎನ್ನುವ ಪ್ರಶ್ನೆಗೆ ಇಲ್ಲಿ ಕೆಲವು ತಾಂತ್ರಿಕ ಅಂಶಗಳ ಹೋಲಿಕೆಯನ್ನು ಚರ್ಚಿಸಲಾಗಿದೆ.

ಬೆಲೆ ಮತ್ತು ವೆರಿಯೆಂಟ್ ಗಳು

ಹ್ಯಾರಿಯರ್ ಕಾರು ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ಸ್ಮಾರ್ಟ್, ಪ್ಯೂರ್, ಅಡ್ವೆಂಚರ್ ಮತ್ತು ಫಿಯರ್ ಲೆಸ್ ವೆರಿಯೆಂಟ್ ಗಳನ್ನು ಹೊಂದಿದ್ದು, ದೆಹಲಿ ಎಕ್ಸ್ ಶೋರೂಂ ಪ್ರಕಾರ ಇದು ಆರಂಭಿಕವಾಗಿ ರೂ. 15.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 24.49 ಲಕ್ಷ ಬೆಲೆ ಹೊಂದಿದೆ. ಹಾಗೆಯೇ ಸಫಾರಿ ಹೊಸ ಕಾರು ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 16.19 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 25.49 ಲಕ್ಷ ಬೆಲೆ ಹೊಂದಿದ್ದು, ಫೀಚರ್ಸ್ ಗಳಿಗೆ ಅನುಗುಣವಾಗಿ ಇದು ಸ್ಮಾರ್ಟ್, ಪ್ಯೂರ್, ಅಡ್ವೆಂಚರ್ ಮತ್ತು ಅಕಾಂಪ್ಲಿಶ್ಡ್ ಎನ್ನುವ ನಾಲ್ಕು ವೆರಿಯೆಂಟ್ ಗಳನ್ನು ಹೊಂದಿದೆ.

ಹೊಸ ಕಾರಿನ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು

ಹೊಸ ಹ್ಯಾರಿಯರ್ ಮತ್ತು ಫೇಸ್‌ಲಿಫ್ಟ್ ಕಾರು ಮಾದರಿಗಳು ಬಲಿಷ್ಠ ವಿನ್ಯಾಸದೊಂದಿಗೆ ಮತ್ತಷ್ಟು ಸ್ಪೋರ್ಟಿಯಾಗಿ ಮಿಂಚುತ್ತಿದ್ದು, ಮರುವಿನ್ಯಾಸಗೊಳಿಸಲಾದ ಮುಂಭಾಗದ ಸ್ಪ್ಲಿಟ್ ಗ್ರೀಲ್, ಫ್ಲಕ್ಸ್ ಸ್ಕೀಡ್ ಪ್ಲೇಟ್, ಸಂಪೂರ್ಣ ಆಯತಾಕಾರದ ಎಲ್ಇಡಿ ಟೈಲ್ ಲೈಟ್ ಬಾರ್, ಮುಂಭಾಗ ಮತ್ತು ಹಿಂಬದಿಯಲ್ಲಿ ಮರುವಿನ್ಯಾಸಗೊಳಿಸಲಾದ ಬಂಪರ್, ಎಲ್ಇಡಿ ಟೈಲ್ ಲ್ಯಾಂಪ್ಸ್, ಹೊಸ ವಿನ್ಯಾಸದ 19 ಇಂಚಿನ ಅಲಾಯ್ ವ್ಹೀಲ್ ಗಳು ಸೇರಿದಂತೆ ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿವೆ.

ಹೊಸ ಕಾರುಗಳ ಒಳಭಾಗದಲ್ಲೂ ಸಾಕಷ್ಟು ಬದಲಾವಣೆ ತರಲಾಗಿದ್ದು, ಹ್ಯಾರಿಯರ್ ಕಾರು 5 ಸೀಟರ್ ಹೊಂದಿದ್ದರೆ ಸಫಾರಿ ಕಾರು 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಖರೀದಿಗೆ ಲಭ್ಯವಿದೆ. ಹೊಸ ಕಾರುಗಳಲ್ಲಿ ಆಕರ್ಷಕ ಡ್ಯಾಶ್ ಬೋರ್ಡ್ ನೊಂದಿಗೆ ಡ್ಯುಯಲ್ ಜೋನ್ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಪ್ಯಾಡಲ್ ಶಿಫ್ಟರ್ ಸೇರಿದಂತೆ ಹಲವಾರು ಹೊಸ ಫೀಚರ್ಸ್ ನೀಡಿದೆ. ಜೊತೆಗೆ ವಿವಿಧ ವೆರಿಯೆಂಟ್ ಗಳಿಗೆ ಅನುಗುಣವಾಗಿ ಫ್ಲಕ್ಸ್ ವುಡ್ ಡ್ಯಾಶ್ ಬೋರ್ಡ್ ನೊಂದಿಗೆ 10.25-ಇಂಚು ಇಲ್ಲವೇ 12.3-ಇಂಚಿನ ಸೆಂಟ್ರಲ್ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ ನೀಡಲಾಗಿದ್ದು, ಸ್ಪೋರ್ಟಿ ಡ್ರೈವ್ ಅನುಭವಕ್ಕಾಗಿ ಲೆದರ್ ಪ್ಯಾಡಿಂಗ್ ಜೊತೆಗೆ ಕಾಂಟ್ರಾಸ್ಟ್ ಸ್ವೀಚ್ ಮತ್ತು ಎಲ್ಇಡಿ ಆ್ಯಂಬಿಯೆಂಟ್ ಲೈಟಿಂಗ್ಸ್ ಮತ್ತು ಮೂರು ಡ್ರೈವ್ ಮೋಡ್ ಗಳನ್ನು ಹೊಂದಿವೆ.

ಇದನ್ನೂ ಓದಿ: ADAS ಫೀಚರ್ಸ್ ಹೊಂದಿರುವ ಟಾಪ್ 5 ಬಜೆಟ್ ಕಾರುಗಳಿವು!

ಕನೆಕ್ಟಿವಿಟಿ ಸೌಲಭ್ಯಕ್ಕಾಗಿ ಹೊಸ ಕಾರುಗಳಲ್ಲಿ ಆಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಬೆಂಬಲಿಸುವ 10.25 ಇಂಚಿನ ಡಿಜಿಟಲ್ ಇನ್ಟ್ರುಮೆಂಟ್ ಕ್ಲಸ್ಟರ್ ನೀಡಲಾಗಿದ್ದು, ಇದರಲ್ಲಿ ನ್ಯಾವಿಗೇಷನ್ ಜೊತೆಗೆ ಹಲವಾರು ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಮತ್ತೊಂದು ಆಕರ್ಷಕ ತಾಂತ್ರಿಕ ಅಂಶವೆಂದರೆ ಆಟೋಮ್ಯಾಟಿಕ್ ಆವೃತ್ತಿಗಳಲ್ಲಿ ಏರ್ ಕ್ರಾಫ್ಟ್ ಸ್ಟೈಲ್ ಹೊಂದಿರುವ ಗೇರ್ ಲೀವರ್ ನೀಡಲಾಗಿದ್ದು, ಇನ್ನುಳಿದಂತೆ ಲೊಗೊ ಬ್ಲ್ಯಾಕ್ ಲಿಟ್ ಹೊಂದಿರುವ ಫೋರ್ ಸ್ಪೋಕ್ ಸ್ಟೀರಿಂಗ್ ವ್ಹೀಲ್, 10-ಸ್ಪೀಕರ್ಸ್ ಜೆಬಿಎಲ್ ಸೌಂಡ್ ಸಿಸ್ಟಂ, ಮುಂಭಾಗದಲ್ಲಿ ಮೆಮೊರಿ ಫಂಕ್ಷನ್ ಮತ್ತು ವೆಂಟಿಲೆಷನ್ ಹೊಂದಿರುವ ಒಂದನೇ ಮತ್ತು ಎರಡನೇ ಸಾಲಿನ ಆಸನಗಳು, ಪನೊರಮಿಕ್ ಸನ್ ರೂಫ್, ವೈರ್ ಲೇಸ್ ಚಾರ್ಜರ್ ಸೇರಿದಂತೆ ಹಲವು ಫೀಚರ್ಸ್ ಗಳಿವೆ.

ಎಂಜಿನ್ ಮತ್ತು ಪರ್ಫಾಮೆನ್ಸ್

ಟಾಟಾ ಮೋಟಾರ್ಸ್ ಕಂಪನಿ ಹೊಸ ಹ್ಯಾರಿಯರ್ ಮತ್ತು ಸಫಾರಿಯಲ್ಲಿ ಈ ಹಿಂದಿನ 2.0 ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಮುಂದುವರಿಸಿದ್ದು, ಇದು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ವಿವಿಧ ಡ್ರೈವ್ ಮೋಡ್ ಗಳ ಮೂಲಕ 170 ಹಾರ್ಸ್ ಪವರ್ ಮತ್ತು 350 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರೊಂದಿಗೆ ಹೊಸ ಕಾರುಗಳು ಇಂಧನ ದಕ್ಷತೆಯಲ್ಲೂ ಕೂಡಾ ಸಾಕಷ್ಟು ಸುಧಾರಿಸಿದ್ದು, ಆಫ್ ರೋಡ್ ನಲ್ಲೂ ಶಕ್ತಿಶಾಲಿ ಮಾದರಿಗಳಾಗಿವೆ.

ಸುರಕ್ಷಾ ಸೌಲಭ್ಯಗಳು

ಟಾಟಾ ಮೋಟಾರ್ಸ್ ಕಂಪನಿಯು ಹೊಸ ಹ್ಯಾರಿಯರ್ ಮತ್ತು ಸಫಾರಿ ಕಾರುಗಳಲ್ಲಿ ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್ ಜೋಡಣೆ ಮಾಡಿದ್ದು, ಟಾಪ್ ಎಂಡ್ ಮಾದರಿಗೆ ಅನ್ವಯಿಸುವಂತೆ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೌಲಭ್ಯವನ್ನು ಮುಂದುವರಿಸಿದೆ. ಜೊತೆಗೆ ಸ್ಟ್ಯಾಂಡರ್ಡ್ ಆಗಿ 6 ಏರ್ ಬ್ಯಾಗ್ ಗಳನ್ನು ಮತ್ತು ಟಾಪ್ ಎಂಡ್ ಮಾದರಿಯಲ್ಲಿ 7 ಏರ್ ಬ್ಯಾಗ್ ಗಳ ಜೊತೆಗೆ ಎಬಿಎಸ್, ಇಬಿಡಿ, ತ್ರಿ ಪಾಯಿಂಟ್ ಸೀಟ್ ಬೆಲ್ಟ್, ಹಿಲ್ ಹೋಲ್ಡ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, 360 ಡಿಗ್ರಿ ವ್ಯೂ ಕ್ಯಾಮೆರಾ ಸೇರಿದಂತೆ ಹಲವಾರು ಫೀಚರ್ಸ್ ಗಳನ್ನು ನೀಡಲಾಗಿದೆ.

ಇದನ್ನೂ ಓದಿ: ಹೋಂಡಾ ಎಲಿವೇಟ್ Vs ಸಿಟ್ರನ್ ಸಿ3 ಏರ್‌ಕ್ರಾಸ್: ಹೊಸ ಎಸ್ ಯುವಿಗಳಲ್ಲಿ ಯಾವುದು ಖರೀದಿಗೆ ಬೆಸ್ಟ್?

 

ಖರೀದಿಗೆ ಯಾವುದು ಬೆಸ್ಟ್?

ತಾಂತ್ರಿಕವಾಗಿ ಮತ್ತು ಬೆಲೆ ವಿಚಾರದಲ್ಲಿ ಎರಡೂ ಕಾರು ಮಾದರಿಗಳು ತಮ್ಮದೆ ಆದ ವಿಶಿಷ್ಟ್ಯತೆಯನ್ನು ಹೊಂದಿದ್ದು, ವ್ಯಯಕ್ತಿಕ ಬಳಕೆಯೊಂದಿಗೆ ದೂರದ ಪ್ರಯಾಣಕ್ಕೆ ಹ್ಯಾರಿಯರ್ ಉತ್ತಮವಾಗಿದೆ. ಹಾಗೆಯೇ ಕುಟುಂಬಸ್ಥರು ಒಟ್ಟಾಗಿ ಪ್ರಯಾಣಿಸುವ ಸಂದರ್ಭಗಳು ಹೆಚ್ಚಿದ್ದರೆ ಮತ್ತು ಹೆಚ್ಚಿನ ದರ ಪಾವತಿಯೊಂದಿಗೆ ಐಷಾರಾಮಿ ಡ್ರೈವ್ ಅನುಭವ ಬಯಸುವ ಗ್ರಾಹಕರು ಸಫಾರಿ ಆಯ್ಕೆ ಮಾಡಬಹುದಾಗಿದೆ.

ಇನ್ನು ಬೆಲೆ ವಿಚಾರದಲ್ಲಿ ಎರಡು ಕಾರುಗಳನ್ನು ನೋಡುವುದಾದರೆ ವಿವಿಧ ವೆರಿಯೆಂಟ್ ಗಳನ್ನು ಹೊಂದಿರುವ ಎರಡು ಕಾರುಗಳ ನಡುವೆ ಸುಮಾರು ರೂ. 70 ಸಾವಿರದಿಂದ ರೂ. 1.20 ಲಕ್ಷದಷ್ಟು ಬೆಲೆ ವ್ಯತ್ಯಾಸವಿದ್ದು, ಸದ್ಯ ಹ್ಯಾರಿಯರ್ ಮಾದರಿಗೆ ಹೆಚ್ಚಿನ ಬೇಡಿಕೆ ದಾಖಲಾಗುತ್ತಿದೆ.

 

Published On - 6:43 pm, Fri, 20 October 23

Praveen Sannamani

Praveen Sannamani is a enthusiast and passionate Journalist in Kannada Language. Automobile and Current affairs are the interested areas

Follow Us