ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಟಾಟಾ ಮೋಟಾರ್ಸ್(Tata Motors) ಕಂಪನಿಯು ನೆಕ್ಸಾನ್(Nexon) ಕಂಪ್ಯಾಕ್ಟ್ ಎಸ್ ಯುವಿ ಬೆಲೆಯನ್ನು ದೆಹಲಿ ಎಕ್ಸ್ ಶೋರೂಂ ಪ್ರಕಾರ ವಿವಿಧ ವೆರಿಯೆಂಟ್ ಗಳನ್ನು ಆಧರಿಸಿ ರೂ. 6 ಸಾವಿರದಿಂದ ರೂ. 18 ಸಾವಿರ ತನಕ ಹೆಚ್ಚಳ ಮಾಡಲಾಗಿದೆ. ಹೊಸ ದರಪಟ್ಟಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಕಾರಿನ ಪೆಟ್ರೋಲ್ ಮತ್ತು ಡೀಸೆಲ್ ಎರಡು ವೆರಿಯೆಂಟ್ ಗಳಲ್ಲೂ ದರ ಹೆಚ್ಚಿಸಿದ್ದು, ಕಾಜಿರಂಗ್ ಮತ್ತು ಡಾರ್ಕ್ ಎಡಿಷನ್ ಹೆಚ್ಚಿನ ಬೆಲೆ ಏರಿಕೆ ಪಡೆದುಕೊಂಡಿವೆ.
ಬೆಲೆ ಹೆಚ್ಚಳ ನಂತರ ಟಾಟಾ ನೆಕ್ಸಾನ್ ಕಾರು ಮಾದರಿಯು ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.70 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 14.18 ಲಕ್ಷ ಬೆಲೆ ಪಡೆದುಕೊಂಡಿದ್ದು, ಪೆಟ್ರೋಲ್ ಮಾದರಿಗಳ ಬೆಲೆಯು ರೂ. 7.70 ಲಕ್ಷದಿಂದ ಆರಂಭವಾದರೆ ಡೀಸೆಲ್ ವೆರಿಯೆಂಟ್ ಬೆಲೆ ರೂ. 10 ಲಕ್ಷದಿಂದ ಆರಂಭವಾಗಲಿದೆ.
ಹೊಸ ದರಪಟ್ಟಿಯಲ್ಲಿ ಪ್ರಮುಖ ವೆರಿಯೆಂಟ್ ಗಳು ರೂ. 6 ಸಾವಿರ, ರೂ. 9 ಸಾವಿರ, 10 ಸಾವಿರ ಮತ್ತು ಮಧ್ಯಂತರ ವೆರಿಯೆಂಟ್ ಗಳು ರೂ. 18 ಸಾವಿರ ತನಕ ಬೆಲೆ ಹೆಚ್ಚಳ ಪಡೆದುಕೊಂಡಿದ್ದು, ಇದು ಈ ವರ್ಷದ ಮೂರನೇ ಬೆಲೆ ಹೆಚ್ಚಳವಾಗಿದೆ. 2022ರಲ್ಲಿಯೇ ಈಗಾಗಲೇ ಎರಡು ಬಾರಿ ಹೆಚ್ಚಳ ಬೆಲೆ ಪಡೆದುಕೊಂಡಿದ್ದು, ಇದೀಗ ಮೂರನೇ ಬಾರಿ ಬೆಲೆ ಹೆಚ್ಚಿಸಲಾಗಿದೆ.
ವೆರಿಯೆಂಟ್ ಮತ್ತು ಎಂಜಿನ್ ಆಯ್ಕೆ
ಟಾಟಾ ನೆಕ್ಸಾನ್ ಮಾದರಿಯು ವಿವಿಧ ತಾಂತ್ರಿಕ ಅಂಶಗಳು ಮತ್ತು ಎಂಜಿನ್ ಆಯ್ಕೆಗೆ ಅನುಗುಣವಾಗಿ ಎಕ್ಸ್ಇ, ಎಕ್ಸ್ಎಂ, ಎಕ್ಸ್ಎಂ(ಎಸ್), ಎಕ್ಸ್ ಜೆಡ್ ಪ್ಲಸ್, ಎಕ್ಸ್ ಜೆಡ್ ಪ್ಲಸ್ ಡ್ಯುಯಲ್ ಟೋನ್, ಎಕ್ಸ್ ಜೆಡ್ ಪ್ಲಸ್ ಆಪ್ಷನ್, ಎಕ್ಸ್ ಜೆಡ್ ಕಾಜಿರಂಗ, ಎಕ್ಸ್ ಜೆಡ್ ಎ ಕಾಜಿರಂಗ, ಎಕ್ಸ್ ಜೆಡ್ ಪ್ಲಸ್ ಆಪ್ಷನ್ ಡ್ಯುಯಲ್ ಟೋನ್, ಎಕ್ಸ್ ಜೆಡ್ ಪ್ಲಸ್ ಡಾರ್ಕ್ ಎಡಿಷನ್ ಮತ್ತು ಎಕ್ಸ್ ಜೆಡ್ ಪ್ಲಸ್ ಆಪ್ಷನ್ ಡಾರ್ಕ್ ಎಡಿಷನ್ ವೆರಿಯೆಂಟ್ ಗಳನ್ನು ಹೊಂದಿದೆ.
ಹೊಸ ನೆಕ್ಸಾನ್ ಕಾರಿನಲ್ಲಿ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಜೋಡಿಸಲಾಗಿದ್ದು, ಇದರಲ್ಲಿರುವ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ 120 ಹಾರ್ಸ್ ಪವರ್ ಮತ್ತು 170 ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದರೆ ಡೀಸೆಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ 110 ಹಾರ್ಸ್ ಪವರ್ ಮತ್ತು 260 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.
ಇನ್ನು ಹೊಸ ನೆಕ್ಸಾನ್ ಕಾರು ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದ ನಂತರ ಮಾರಾಟದಲ್ಲಿ ನಿರಂತವಾಗಿ ಮುಂಚೂಣಿ ಸಾಧಿಸುತ್ತಿದ್ದು, ಸ್ವದೇಶಿ ಕಂಪನಿಗಳ ನಿರ್ಮಿತ ವಾಹನ ಬಳಕೆಗೆ ಗ್ರಾಹಕರ ಒಲವು ತೋರುತ್ತಿರುವುದು ಕೂಡಾ ಟಾಟಾ ಕಾರುಗಳ ಮಾರಾಟ ಬೆಳವಣಿಗೆ ಮತ್ತೊಂದು ಪ್ರಮುಖ ಕಾರಣವಾಗಿದೆ.
ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರುಗಳಲ್ಲಿ ಐಷಾರಾಮಿ ವಿನ್ಯಾಸ, ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡುವುದರ ಜೊತೆಗೆ ಎಂಜಿನ್ ಕಾರ್ಯಕ್ಷಮತೆಯಲ್ಲೂ ಗಮನಸೆಳೆಯುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಕಾರು ಉತ್ಪಾದನೆಯಲ್ಲಿ ಹೊಸ ದಾಖಲೆಗೂ ಕೂಡಾ ಕಾರಣವಾಗಿದ್ದು, ಇದುವೆರೆಗೆ ನೆಕ್ಸಾನ್ ಕಾರು 4 ಲಕ್ಷಕ್ಕೂ ಹೆಚ್ಚು ಯುನಿಟ್ ಮಾರಾಟ ದಾಖಲೆಯನ್ನು ಹೊಂದಿದೆ.
Published On - 5:10 pm, Tue, 29 November 22