ದೇಶಿಯ ಮಾರುಕಟ್ಟೆಯಲ್ಲಿನ ಎಲೆಕ್ಟ್ರಿಕ್ ಕಾರು(Electric Cars) ಮಾರಾಟದಲ್ಲಿ ಸದ್ಯ ಅಗ್ರಸ್ಥಾನ ಹೊಂದಿರುವ ಟಾಟಾ ಮೋಟಾರ್ಸ್(Tata Motors) ಕಂಪನಿಯು ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಇವಿ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದೆ. ನೆಕ್ಸಾನ್ ಇವಿ, ಟಿಗೋರ್ ಇವಿ ಮತ್ತು ಟಿಯಾಗೋ ಇವಿ ಬಿಡುಗಡೆಯ ಯಶಸ್ವಿ ನಂತರ ಇದೀಗ ಪಂಚ್ ಇವಿ(Punch Electric) ಬಿಡುಗಡೆಯ ಯೋಜನೆಯಲ್ಲಿದೆ.
ಹೆಚ್ಚುತ್ತಿರುವ ಇಂಧನಗಳ ಬೆಲೆ ಪರಿಣಾಮ ಹೊಸ ಕಾರು ಖರೀದಿದಾರರು ಇವಿ ಕಾರುಗಳತ್ತ ಗಮನಸರಿಸುತ್ತಿದ್ದಾರೆ. ಗ್ರಾಹಕರ ಬೇಡಿಕೆಯೆಂತೆ ವಿವಿಧ ಇವಿ ಕಾರು ಮಾದರಿಗಳ ಮೂಲಕ ಟಾಟಾ ಮೋಟಾರ್ಸ್ ಕಂಪನಿಯು ಸದ್ಯ ಅಗ್ರಸ್ಥಾನ ಕಾಯ್ದುಕೊಂಡಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಟಾಟಾ ಕಂಪನಿಯು ನೆಕ್ಸಾನ್ ಇವಿ, ಟಿಗೋರ್ ಇವಿ ಮತ್ತು ಟಿಯಾಗೋ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಪಂಚ್ ಇವಿ ಕೂಡಾ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.
ಎಲೆಕ್ಟ್ರಿಕ್ ಇವಿ ವಿಭಾಗದಲ್ಲಿ ವಿವಿಧ ಮಾದರಿಗಳೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಿರುವ ಟಾಟಾ ಮೋಟಾರ್ಸ್ ಮುಂದಿನ ಕೆಲವೇ ದಿನಗಳಲ್ಲಿ ಪಂಚ್ ಇವಿ ಬಿಡುಗಡೆ ಮಾಡುವ ಸುಳಿವು ನೀಡಿದೆ. ಬಜೆಟ್ ಬೆಲೆಯೊಂದಿಗೆ ಸದ್ಯ ಸಣ್ಣ ಕಾರುಗಳ ಮಾರಾಟದಲ್ಲಿ ಭರ್ಜರಿ ಮಾರಾಟವಾಗುತ್ತಿರುವ ಪಂಚ್ ಕಾರು ಎಲೆಕ್ಟ್ರಿಕ್ ಮಾದರಿಯಲ್ಲೂ ಕಮಾಲ್ ಮಾಡುವ ನೀರಿಕ್ಷೆಯಿದೆ. ಇದಕ್ಕಾಗಿ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಕಾರಿನ ಟೆಸ್ಟಿಂಗ್ ಪ್ರಕ್ರಿಯೆ ನಡೆಸುತ್ತಿದ್ದು, ಹೊಸ ಕಾರು ಟಿಗೋರ್ ಇವಿ ಮತ್ತು ಟಿಯಾಗೋ ಇವಿ ಮಾದರಿಯನ್ನು ಆಧರಿಸಿ ನಿರ್ಮಾಣಗೊಳ್ಳುತ್ತಿದೆ. ಹೊಸ ಕಾರು ಮುಂದಿನ ತಿಂಗಳು ಜನವರಿಯಲ್ಲಿ ನಡೆಯಲಿರುವ 2023ರ ದೆಹಲಿ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳ್ಳುವ ಸಾಧ್ಯತೆಗಳಿದ್ದು, ಅನಾವರಣಗೊಂಡ ನಂತರ ಜೂನ್ ವೇಳೆಗೆ ಅಧಿಕೃತವಾಗಿ ಬಿಡುಗಡೆಯಾಗಬಹುದಾಗಿದೆ.
ಹೊಸ ಪಂಚ್ ಕಾರಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಟಿಯಾಗೋ ಇವಿ ಕಾರಿನಲ್ಲಿರುವಂತೆ ಎರಡು ಮಾದರಿಯ ಬ್ಯಾಟರಿ ಆಯ್ಕೆ ನೀಡಬಹುದಾಗಿದೆ. ಆರಂಭಿಕ ಮಾದರಿಯಲ್ಲಿ 19.2kWh ಬ್ಯಾಟರಿ ಪ್ಯಾಕ್ ಹೊಂದಿರಲಿದ್ದರೆ ಟಾಪ್ ಎಂಡ್ ಮಾದರಿಯು 24kWh ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಬಹುದಾಗಿದೆ. ಈ ಮೂಲಕ ಇದು ಪ್ರತಿ ಚಾರ್ಜ್ ಗೆ 280 ಕಿ.ಮೀ ನಿಂದ 350 ಕಿ.ಮೀ ಮೈಲೇಜ್ ನೀಡಬಹುದಾಗಿದೆ.
ಸದ್ಯ ಮಾರುಕಟ್ಟೆಯಲ್ಲಿ ಪಂಚ್ ಕಾರು ಮಾದರಿಯು ಪೆಟ್ರೋಲ್ ವರ್ಷನ್ ನಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ.6 ಲಕ್ಷದಿಂದ ರೂ. 10 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುತ್ತಿದೆ. ಹೀಗಾಗಿ ಹೊಸದಾಗಿ ಬಿಡುಗಡೆಯಾಗಲಿರುವ ಎಲೆಕ್ಟ್ರಿಕ್ ಆವೃತ್ತಿಯು ಆರಂಭಿಕವಾಗಿ ರೂ. 9 ಲಕ್ಷದಿಂದ ರೂ. 13 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದ್ದು, ಎಂಟ್ರಿ ಲೆವಲ್ ಇವಿ ಕಾರುಗಳಲ್ಲಿಯೇ ಇದು ಅತಿ ಹೆಚ್ಚು ಪ್ರೀಮಿಯಂ ಕಾರು ಮಾದರಿಯಾಗಿರಲಿದೆ. ಜೊತೆಗೆ ಹೊಸ ಕಾರಿನಲ್ಲಿ IP67 ಮಾನದಂಡಗಳನ್ನು ಪೂರೈಸಿರುವ ಎಲೆಕ್ಟ್ರಿಕ್ ಬ್ಯಾಟರಿ ಮತ್ತು ಮೋಟಾರ್ ಜೋಡಿಸಲಾಗಿದ್ದು, ಇದು ಧೂಳು ಮತ್ತು ತುಕ್ಕು ನಿರೋಧಕ ವೈಶಿಷ್ಟ್ಯತೆ ಹೊಂದಿರಲಿದೆ. ಇದರೊಂದಿಗೆ ಹೊಸ ಕಾರಿನ ಬ್ಯಾಟರಿ ಮತ್ತು ಮೋಟಾರ್ ಮೇಲೆ ಕಂಪನಿಯು ಗರಿಷ್ಠ 8 ವರ್ಷಗಳ ವಾರಂಟಿ ನೀಡಲಿದ್ದು, ನಗರಪ್ರದೇಶಗಳಲ್ಲಿ ಸಂಚಾರಕ್ಕೆ ಅತ್ಯುತ್ತಮ ಆಯ್ಕೆಯಾಗಲಿದೆ.
Published On - 1:56 pm, Mon, 26 December 22