Jwala Gutta: ಟ್ರೋಲಿಗರಿಗೆ ಝಾಡಿಸಿದ ಜ್ವಾಲಾ ಗುಟ್ಟಾ, ಎರಡು ವರ್ಷಗಳ ನಂತರ ಮತ್ತೆ ವೈರಲ್​ ಆದ ವಿಡಿಯೋ

|

Updated on: Feb 22, 2021 | 6:44 PM

Jwala Gutta Viral Video: ಜ್ವಾಲಾ ಗುಟ್ಟಾರ ತಾಯಿಯ ಮೂಲ ಚೀನಾ ಆಗಿದ್ದರಿಂದ ಈ ಯುವಕ ಜ್ವಾಲಾರ ಬಗ್ಗೆ ಚೀನಾ ಮಾಲ್​ ಎಂದು ಕೀಳಾಗಿ ಕಮೆಂಟ್ ಮಾಡಿದ್ದ. ಅದನ್ನೇ ಇಟ್ಟುಕೊಂಡು ಮರುಪ್ರಶ್ನೆ ಕೇಳಿದ ಜ್ವಾಲಾ ಹಾಗೂ ನಿರೂಪಕ ರಣ್​ವಿಜಯ್​ ಸಿಂಗ್​ ಆತನ ಉದ್ದೇಶದ ಕುರಿತು ಗಂಭೀರವಾಗಿ ಪ್ರಶ್ನಿಸಿ ಬೆವರಿಳಿಸಿದ್ದಾರೆ.

Jwala Gutta: ಟ್ರೋಲಿಗರಿಗೆ ಝಾಡಿಸಿದ ಜ್ವಾಲಾ ಗುಟ್ಟಾ, ಎರಡು ವರ್ಷಗಳ ನಂತರ ಮತ್ತೆ ವೈರಲ್​ ಆದ ವಿಡಿಯೋ
ಜ್ವಾಲಾ ಗುಟ್ಟಾ
Follow us on

ಭಾರತದ ಮಾಜಿ ಬ್ಯಾಡ್ಮಿಂಟನ್​ ಆಟಗಾರ್ತಿ ಜ್ವಾಲಾ ಗುಟ್ಟಾ (Jwala Gutta) ಮತ್ತೆ ಸುದ್ದಿಯಲ್ಲಿದ್ದಾರೆ. ವಿವಿಧ ಕಾರಣಗಳಿಗಾಗಿ ಹಲವು ಬಾರಿ ಟ್ರೋಲ್​ ಆಗಿದ್ದ ಜ್ವಾಲಾ ಗುಟ್ಟಾ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದಷ್ಟು ಜನ ಕೀಳು ಪರಿಭಾಷೆಯಲ್ಲಿ ಈ ಹಿಂದೆ ಕಮೆಂಟ್​ ಮಾಡಿದ್ದರು. ಅಷ್ಟೇ ಅಲ್ಲದೇ ಜ್ವಾಲಾ ಗುಟ್ಟಾ ಅವರ ಬಟ್ಟೆ, ಆಟದ ಶೈಲಿ, ಮೂಲ, ಚರ್ಮದ ಬಣ್ಣ ಹೀಗೆ ತೀರಾ ವೈಯಕ್ತಿಕ ವಿಚಾರಗಳನ್ನೂ ಎಳೆದು ತಂದು ಟೀಕಿಸಿದ್ದರು. ಇದನ್ನೆಲ್ಲಾ ಇಟ್ಟುಕೊಂಡು ಎಂಟಿವಿ ವಾಹಿನಿಯ ಟ್ರೋಲ್​ ಪೊಲೀಸ್​ ಕಾರ್ಯಕ್ರಮದಲ್ಲಿ ಜ್ವಾಲಾ ಗುಟ್ಟಾ ತನ್ನನ್ನು ಟ್ರೋಲ್​ ಮಾಡಿದ ಶಿವಂ ಎಂಬ ಯುವಕನಿಗೆ ನೇರಾನೇರ ಪ್ರಶ್ನೆ ಕೇಳಿ ನೀರಿಳಿಸಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗುತ್ತಿದ್ದು, ಟ್ರೋಲ್​ ಮಾಡುವವರಿಗೆ ಹೀಗೇ ಮಂಗಳಾರತಿ ಮಾಡಬೇಕೆಂದು ಜನ ಅಭಿಪ್ರಾಯಪಟ್ಟಿದ್ದಾರೆ.

ಜ್ವಾಲಾ ಗುಟ್ಟಾರನ್ನು ಟ್ರೋಲ್ ಮಾಡಿದ 19 ವರ್ಷದ ಶಿವಂ ಎಂಬಾತನನ್ನು ಕಾರ್ಯಕ್ರಮದ ಸೆಟ್​ಗೆ ಕರೆತರಲಾಗುತ್ತದೆ. ಕಾರ್ಯಕ್ರಮದ ನಿರೂಪಕ ಮತ್ತು ಜ್ವಾಲಾ ಗುಟ್ಟಾ ಇಬ್ಬರೂ ಶಿವಂ ಎಂಬಾತನನ್ನು ನಿಧಾನಕ್ಕೆ ಮಾತಿಗೆಳೆಯುತ್ತಾರೆ. ನನ್ನನ್ನು ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಟ್ರೋಲ್ ಮಾಡಿದ್ದು ನೀವೇ ಅಲ್ಲವೇ? ಎಂಬಲ್ಲಿಂದ ತುಸು ಖಾರವಾಗಿ ಮಾತು ಆರಂಭಿಸುವ ಜ್ವಾಲಾ, ನನಗೆ ಬ್ಯಾಡ್ಮಿಂಟನ್​ ಆಟದಲ್ಲಿ 25 ವರ್ಷದ ಅನುಭವ ಇದೆ. ಆದರೆ, ನಿಮಗೆ ಅಷ್ಟು ವಯಸ್ಸೂ ಆಗಿಲ್ಲ ಎಂದು ಝಾಡಿಸಲಾರಂಭಿಸಿದ್ದಾರೆ. ಅವರಿಗೆ ಸಾಥ್​ ನೀಡಿದ ಕಾರ್ಯಕ್ರಮ ನಿರೂಪಕ ರಣ್​ವಿಜಯ್​ ಸಿಂಗ್​ ಟ್ರೋಲ್​ ಮಾಡಿದಾತನಿಗೆ ತಿರುಗುಬಾಣ ಬಿಟ್ಟು ಉತ್ತರ ಕೇಳಿದ್ದಾರೆ.

ಜ್ವಾಲಾ ಗುಟ್ಟಾ

ಒಂದಷ್ಟು ಪ್ರಶ್ನೆಗಳಿಗೆ ಶಿವಂ ಉತ್ತರಿಸಿ, ಸಮಜಾಯಿಷಿ ನೀಡಲು ಯತ್ನಿಸಿದ್ದರೂ ನಿಧಾನಕ್ಕೆ ಆತನಿಗೆ ತನ್ನ ತಪ್ಪಿನ ಅರಿವಾಗಲು ಆರಂಭಿಸಿದೆ. ಮೇಲಿಂದ ಮೇಲೆ ಎದುರಾಗುತ್ತಿದ್ದ ಪ್ರಶ್ನೆಗಳು, ತಾನೇ ಮಾಡಿದ ಹಳೆಯ ಟ್ರೋಲ್​ಗಳ ಸಾಕ್ಷಿ ತನಗೆ ತಿರುಗುಬಾಣವಾಗಲು ಆರಂಭಿಸಿದಾಗಿ ಸಹಜವಾಗಿ ಬೆವರಿಳಿಯಲು ಆರಂಭವಾಗಿದೆ. ಜ್ವಾಲಾರ ಮೇಕಪ್​ ಬಗ್ಗೆ ಮಾತನಾಡಿದ್ದ ಯುವಕನಿಗೆ ನೀವು ಗಡ್ಡ ಬಿಟ್ಟಿದ್ದೇಕೆ? ನಾನು ಹೇಗಿದ್ದರೂ ನಿಮಗೇನು ಸಮಸ್ಯೆ ಎಂದು ತಿರುಗೇಟು ನೀಡಿದ್ದಾರೆ.

ಅಷ್ಟೇ ಅಲ್ಲದೇ ಜ್ವಾಲಾರ ತಾಯಿಯ ಮೂಲ ಚೀನಾ ಆಗಿದ್ದರಿಂದ ಈ ಯುವಕ ಜ್ವಾಲಾರ ಬಗ್ಗೆ ಚೀನಾ ಮಾಲ್​ ಎಂದು ಕೀಳಾಗಿ ಕಮೆಂಟ್ ಮಾಡಿದ್ದ. ಅದನ್ನೇ ಇಟ್ಟುಕೊಂಡು ಮರುಪ್ರಶ್ನೆ ಕೇಳಿದ ಜ್ವಾಲಾ ಹಾಗೂ ನಿರೂಪಕ ರಣ್​ವಿಜಯ್​ ಸಿಂಗ್​ ಆತನ ಉದ್ದೇಶದ ಕುರಿತು ಗಂಭೀರವಾಗಿ ಪ್ರಶ್ನಿಸಿ ಬೆವರಿಳಿಸಿದ್ದಾರೆ. ಹೀಗೆ ಒಂದಾದ ಮೇಲೊಂದು ಬೆಂಕಿ ಉಂಡೆಯಂತಹ ಪ್ರಶ್ನೆಗಳು ಬಂದ ನಂತರ ಯುವಕ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಈ ವಿಡಿಯೋ ಸುಮಾರು ಎರಡು ವರ್ಷ ಹಳೆಯದಾದರೂ ಈಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ಇದನ್ನು ನೋಡಿದ ಜನಸಾಮಾನ್ಯರು ಟ್ರೋಲ್​ ಮಾಡುವವರಿಗೆ ಹೀಗೇ ಬೆವರಿಳಿಸಬೇಕೆಂದು ಸಹಮತ ವ್ಯಕ್ತಪಡಿಸಿದ್ದಾರೆ.

ಜ್ವಾಲಾ ಗುಟ್ಟಾ

ಇದನ್ನೂ ಓದಿ: ಸಾಮಾಜಿಕ ಮಾಧ್ಯಮ ನಿಯಂತ್ರಣಕ್ಕೆ ಸರ್ಕಾರದ ಆಲೋಚನೆ; ಬಿಜೆಪಿ ನಾಯಕ ರಾಮ್ ಮಾಧವ್