ನವದೆಹಲಿ, ಜೂನ್. 03: ದೇಶದ ಗಮನ ಲೋಕಸಭೆ ಚುನಾವಣೆ (Lok Sabha Election) ಫಲಿತಾಂಶದತ್ತ ನೆಟ್ಟಿದೆ. ಈ ಮಧ್ಯೆ ಅಮುಲ್ ಕಂಪನಿ (Amul Company) ಇಂದಿನಿಂದಲೇ (ಜೂ. 03 ಸೋಮವಾರ) ಜಾರಿಗೆ ಬರುವಂತೆ ಎಲ್ಲ ರೀತಿಯ ಹಾಲಿನ (Milk) ಬೆಲೆಯನ್ನು ಲೀಟರ್ಗೆ 2 ರೂ.ಗಳಷ್ಟು ಹೆಚ್ಚಿಸಿದೆ. ಈ ಕುರಿತು ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ (GCMMF) ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಉತ್ಪಾದನೆಯ ಒಟ್ಟಾರೆ ವೆಚ್ಚದ ಹೆಚ್ಚಳದಿಂದಾಗಿ ಅಮುಲ್ ಹಾಲಿನ ಬೆಲೆಯನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದೆ.
ಈ ಬೆಲೆ ಏರಿಕೆ ಅಮುಲ್ ಗೋಲ್ಡ್, ಅಮುಲ್ ತಾಜಾ ಮತ್ತು ಅಮುಲ್ ಶಕ್ತಿ ಅಂಗ ಉತ್ಪನ್ನಗಳಿಗೂ ಅನ್ವಯವಾಗಲಿದೆ. ಆದರೆ ಈ ಬೆಲೆ ಏರಿಕೆ ಅಮುಲ್ ತಾಜಾದ ಸಣ್ಣ ಪಾಕೇಟ್ನ ಅನ್ವಯವಾಗುವುದಿಲ್ಲವೆಂದು ಜಿಸಿಎಂಎಂಎಫ್ ಹೇಳಿದೆ. ಪ್ರತಿ ಲೀಟರ್ಗೆ 2 ರೂ. ಹೆಚ್ಚಳದೊಂದಿಗೆ ದರ ಶೇ 3-4ರಷ್ಟು ಅಧಿಕವಾಗಲಿದೆ.
ಈ ಬಗ್ಗೆ ಅಮುಲ್ ಬ್ರ್ಯಾಂಡ್ ಅಡಿಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಜಿಸಿಎಂಎಂಎಫ್ನ ಎಂಡಿ ಜಯೇನ್ ಮೆಹ್ತಾ ಮಾತನಾಡಿ, ಹೆಚ್ಚಿದ ಉತ್ಪಾದಾನಾ ವೆಚ್ಚವನ್ನು ಸರಿದೂಗಿಸಲು ಬೆಲೆ ಏರಿಕೆ ಅನಿವಾರ್ಯ ಎಂದು ಹೇಳಿದ್ದಾರೆ.
500 ಎಂಎಲ್ನ ಅಮುಲ್ ಗೋಲ್ಡ್ ಬೆಲೆ 33ರೂ.ಗೆ ಆಗಿದೆ. ಒಂದು ಲೀಟರ್ಗೆ 64 ರೂ. ನಿಂದ 66 ರೂ.ಗೆ ಆಗಿದೆ.
500 ಎಂಎಲ್ನ ಅಮುಲ್ ಎಮ್ಮೆಯ ಹಾಲಿನ ದರ 36 ರೂ.ಗೆ ಆಗಿದೆ.
500 ಎಂಎಲ್ನ ಅಮುಲ್ ಶಕ್ತಿ ಹಾಲಿನ ಬೆಲೆ 30ರೂ. ಆಗಿದೆ.
ಜೆಸಿಎಂಎಂಎಫ್ ಕೊನೆಯ ಬಾರಿಗೆ ಹಾಲಿನ ಬೆಲೆಯನ್ನು 2023ರ ಫೆಬ್ರವರಿಯಲ್ಲಿ ಹೆಚ್ಚಿಸಿತ್ತು.
ನಂದಿನಿ ಹಾಲಿನ ದರವನ್ನು ಕೆಎಂಎಫ್ ಕಳೆದ ವರ್ಷ ಆಗಸ್ಟ್ನಲ್ಲಿ ಪ್ರತಿ ಲೀಟರ್ಗೆ 3 ರೂ. ಹೆಚ್ಚಳ ಮಾಡಿತ್ತು. ಬೆಲೆ ಏರಿಕೆ ನಂತರ ಲೀಟರ್ ಟೋನ್ಡ್ ಹಾಲಿಗೆ 42 ರೂ., ಹೋಮೋಜೆನೈಸ್ಡ್ ಹಾಲಿಗೆ 43 ರೂ., ಪಾಶ್ಚರೀಕರಿಸಿದ ಹಾಲಿಗೆ 46 ರೂ. ಮತ್ತು ಶುಭಂ ವಿಶೇಷ ಹಾಲಿಗೆ 48 ರೂ. ಆಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:21 am, Mon, 3 June 24