ನವದೆಹಲಿ: ಕ್ರಿಪ್ಟೋಕರೆನ್ಸಿಯ ಒಂದು ತಂತ್ರಜ್ಞಾನ ಆಧರಿಸಿ ಆರ್ಬಿಐ ಡಿಜಿಟಲ್ ರುಪಾಯಿ ಕರೆನ್ಸಿ (CBDC- Central Bank Digital Currency) ಬಿಡುಗಡೆ ಮಾಡಿದೆ. ಕೆಲ ನಿರ್ದಿಷ್ಟ ಬ್ಯಾಂಕ್ ಮತ್ತು ಉದ್ಯಮ ವಲಯದಲ್ಲಿ ಪ್ರಾಯೋಗಿಕವಾಗಿ ಜಾರಿಯಲ್ಲಿದ್ದ ಇ–ರುಪೀ (e-Rupee) ಇದೀಗ ಹಂತ ಹಂತವಾಗಿ ಸಾರ್ವಜನಿಕವಾಗಿ ಚಲಾವಣೆಯಾಗುತ್ತಿದೆ. ಯುಪಿಐ ವಹಿವಾಟುಗಳಿಗೆ ಒಗ್ಗಿಹೋಗಿರುವ ಜನರಿಗೆ ಆರ್ಬಿಐನ ಸಿಬಿಡಿಸಿ ಎನ್ನಲಾಗುವ ಇ–ರುಪಾಯಿಯಲ್ಲಿ ಹೇಗೆ ವಹಿವಾಟು ನಡೆಸಬಹುದು ಎಂಬ ಗೊಂದಲ ಸಹಜ. ಸೋಷಿಯಲ್ ಮೀಡಿಯಾದಲ್ಲಿ ಬಹಳ ಸಕ್ರಿಯವಾಗಿರುವ ಮತ್ತು ಆಗಾಗ್ಗೆ ಜನರೊಂದಿಗೆ ಬಹಳ ಆಪ್ತವಾಗಿ ಸಂವಾದ ನಡೆಸುವ ಖ್ಯಾತ ಉದ್ಯಮಿ ಆನಂದ್ ಮಹೀಂದ್ರ ಇ–ರುಪಾಯಿಯಲ್ಲಿ ವಹಿವಾಟು ನಡೆಸುವುದು ಎಷ್ಟು ಸುಲಭ ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟಿದ್ದಾರೆ. ಇದರ ಒಂದು ವಿಡಿಯೋವನ್ನೂ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರಸ್ತೆಬದಿಯ ತಳ್ಳುಗಾಡಿಯಲ್ಲಿ ಹಣ್ಣು ವ್ಯಾಪಾರಿಯೊಬ್ಬನಿಂದ (Fruit Vendor) ದಾಳಿಂಬೆ ಹಣ್ಣು ಖರೀದಿಸಿ ಅದನ್ನು ಡಿಜಿಟಲ್ ರುಪಾಯಿಯಲ್ಲಿ ಅವರು ಹಣ ಪಾವತಿಸಿದ ವಿಡಿಯೋ ಇದಾಗಿದೆ.
ಟ್ವಿಟ್ಟರ್ನಲ್ಲಿ ವಿಡಿಯೋ ಹಂಚಿಕೊಂಡಿರುವ ಆನಂದ್ ಮಹೀಂದ್ರ, “ಭಾರತೀಯ ರಿಸರ್ವ್ ಬ್ಯಾಂಕ್ನ ಮಂಡಳಿ ಸಭೆಯಲ್ಲಿ ಡಿಜಿಟಲ್ ಕರೆನ್ಸಿ ಇ–ರುಪೀ ಬಗ್ಗೆ ಮಾಹಿತಿ ತಿಳಿಯಿತು. ಆ ಸಭೆ ಬಳಿಕ ನಾನು ಬಚ್ಚೇ ಲಾಲ್ ಸಹಾನಿ ಎಂಬ ಹಣ್ಣು ಮಾರಾಟಗಾರನ ಬಳಿ ಹೋದೆ” ಎಂದು ಹೇಳಿಕೊಂಡಿದ್ದಾರೆ.
ಮಹೀಂದ್ರ ಅಂಡ್ ಮಹೀಂದ್ರ ಕಂಪನಿಯ ಮುಖ್ಯಸ್ಥರಾಗಿರುವ ಆನಂದ್ ಮಹೀಂದ್ರ ಅವರು ಬಚ್ಚೇ ಲಾಲ್ ಸಹಾನಿಯಿಂದ ದಾಳಿಂಬೆ ಖರೀದಿಸಿದ್ದಾರೆ. ಹಣ್ಣು ಅಂಗಡಿಯಲ್ಲಿ ಬೇರೆ ಪೇಟಿಎಂ, ಫೋನ್ಪೇ ಇತ್ಯಾದಿ ಯುಪಿಐ ಕ್ಯೂಆರ್ ಕೋಡ್ ಹಾಕಲಾಗುವಂತೆ ಇ–ರುಪಾಯಿಗೂ ಕ್ಯೂಆರ್ ಬೋರ್ಡ್ ಇಡಲಾಗಿತ್ತು. ಯುಪಿಐ ವಹಿವಾಟಿನಂತೆಯೇ ಇದನ್ನೂ ಕೂಡ ಸ್ಕ್ಯಾನ್ ಮಾಡಿ ಹಣ ಪಾವತಿಸಬಹುದು. ಆನಂದ್ ಮಹೀಂದ್ರ ಕೂಡ ಇದೇ ಪ್ರಕ್ರಿಯೆ ಅನುಸರಿಸಿ ಇ–ರುಪಾಯಿಯಲ್ಲಿ ಪಾವತಿಸುವುದನ್ನು ವಿಡಿಯೋದಲ್ಲಿ ನಾವು ನೋಡಬಹುದು.
ಇದನ್ನೂ ಓದಿ: Rupee vs Dollar: ಡಾಲರ್ನ ಜಾಗತಿಕ ಪ್ರಾಬಲ್ಯ ಮುಗಿಯುತ್ತಿದೆಯಾ? ರುಪಾಯಿ ಕೈಹಿಡಿಯುತ್ತಿರುವ ದೇಶಗಳ ಪಟ್ಟಿ ಬೆಳೆಯುತ್ತಿದೆ
ಇ–ರುಪಾಯಿ ಎಂಬುದು ಡಿಜಿಟಲ್ ರೂಪದ ರುಪಾಯಿ ಕರೆನ್ಸಿ. ನಮ್ಮ ನೋಟುಗಳಿರುವ ಎಲ್ಲಾ ವಿಶೇಷತೆಗಳೂ ಇ–ಕರೆನ್ಸಿಗೂ ಅನ್ವಯ ಆಗುತ್ತದೆ. ಒಂದೇ ಪ್ರಮುಖ ವ್ಯತ್ಯಾಸ ಎಂದರೆ ಭೌತಿಕ ರೂಪದ ನೋಟುಗಳ ಬದಲು ಎಲೆಕ್ಟ್ರಾನಿಕ್ ರೂಪದಲ್ಲಿ ಇದು ಇರುತ್ತದೆ.
ಪೇಟಿಎಂ, ಫೋನ್ಪೇ, ಗೂಗಲ್ ಪೇ ಇತ್ಯಾದಿ ವ್ಯಾಲಟ್ ಆ್ಯಪ್ಗಳು ಯುಪಿಐ ಮೂಲಕ ಪೇಮೆಂಟ್ ವ್ಯವಸ್ಥೆ ಮಾಡುತ್ತವೆ. ಇ–ರುಪಾಯಿಯಲ್ಲೂ ಇದೇ ರೀತಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಯೋ, ಮೊಬೈಲ್ ನಂಬರ್ ಹಾಕಿಯೋ ಹಣ ಪಾವತಿ ಮಾಡಬಹುದು. ಹಾಗಾದರೆ ಯುಪಿಐಗೂ ಇ–ರುಪೀಗೂ ಏನು ವ್ಯತ್ಯಾಸ ಎಂಬ ಅನುಮಾನ ಬರಬಹುದು.
At the Reserve Bank’s board meeting today I learned about the @RBI digital currency-the e-rupee. Right after the meeting I visited Bachche Lal Sahani, a nearby fruit vendor who is one of the first merchants to accept it. #DigitalIndia in action! (Got great pomegranates as well!) pic.twitter.com/OxFRWgI0ZJ
— anand mahindra (@anandmahindra) January 25, 2023
ಇದನ್ನೂ ಓದಿ: Panipuri Business: ಈಕೆ ಬುಲೆಟ್ ರಾಣಿ; ಓದಿದ್ದು ಎಂಜಿನಿಯರಿಂಗ್, ಮಾರೋದು ಪಾನಿಪುರಿ
ಇಲ್ಲಿ ಯುಪಿಐ ಎಂಬುದು ವಿವಿಧ ಬ್ಯಾಂಕುಗಳಲ್ಲಿರುವ ಜನರ ಖಾತೆಗಳಲ್ಲಿನ ಹಣವನ್ನು ವರ್ಗಾವಣೆ ಮಾಡಲು ಇರುವ ಮಾಧ್ಯಮ. ಇಲ್ಲಿ ಮಧ್ಯವರ್ತಿಯಾಗಿ ಬ್ಯಾಂಕುಗಳು ಇರುತ್ತವೆ. ಇ–ರುಪೀ ಹಾಗಲ್ಲ. ಇದು ಒಬ್ಬ ವ್ಯಕ್ತಿಯ ವ್ಯಾಲಟ್ನಿಂದ ಇನ್ನೊಬ್ಬ ವ್ಯಕ್ತಿಯ ವ್ಯಾಲಟ್ಗೆ ನೇರವಾಗಿ ವರ್ಗಾವಣೆ ಆಗುತ್ತದೆ. ಬ್ಯಾಂಕ್ ಮೂಲಕ ಇದು ಹೋಗುವುದಿಲ್ಲ. ಥೇಟ್ ನಗದು ಹಣ ಬಳಸುವ ರೀತಿಯೇ ಎನ್ನಬಹುದು. ನಾವು ಜೇಬಿನಲ್ಲಿ ದುಡ್ಡು ಇಟ್ಟುಕೊಂಡು ಅದನ್ನು ಹಣ್ಣಿನ ಅಂಗಡಿಯವನಿಗೆ ಕೊಡುತ್ತೇವೆ. ಆ ವಹಿವಾಟಿನ ಲೆಕ್ಕ ನಮಗೆ ಗೊತ್ತಿರುತ್ತದೆ, ಆ ಹಣ್ಣಿನ ಅಂಗಡಿಯವನಿಗೆ ಗೊತ್ತಿರುತ್ತದೆ. ಅದು ಬಿಟ್ಟರೆ ಬೇರೆಯರಿಂದ ಅದು ಗೌಪ್ಯವಾಗಿಯೇ ಉಳಿಯುತ್ತದೆ. ಡಿಜಿಟಲ್ ರುಪಾಯಿಯೂ ಅಂಥದ್ದೇ ಒಂದು ವ್ಯವಸ್ಥೆ.
Published On - 11:51 am, Thu, 16 March 23