
ಬೆಂಗಳೂರು, ಜೂನ್ 22: ಬೆಂಗಳೂರು ಮೂಲದ ಬಯೋಟೆಕ್ ಸ್ಟಾರ್ಟ್‌ಅಪ್ ‘ಬಯೋಕಂಪ್ಯೂಟ್’ (BioCompute) ನ 24 ವರ್ಷದ ಸಂಸ್ಥಾಪಕಿ ಅನಘಾ ರಾಜೇಶ್ (Anagha Rajesh) ಅವರು ತಮ್ಮ ಕಂಪನಿಯನ್ನು ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋಗೆ ಸ್ಥಳಾಂತರಿಸಲು ನಿರ್ಧರಿಸಿದ್ದಾರೆ. ಭಾರತದಲ್ಲಿ ಪ್ರತಿಭೆಯ ಕೊರತೆಯಿಲ್ಲದಿದ್ದರೂ, ತಾಂತ್ರಿಕವಾಗಿ ಅತ್ಯಂತ ಸಂಕೀರ್ಣವಾದ ‘ಡೀಪ್-ಟೆಕ್’ (Deep-tech) ಕಂಪನಿಗಳಿಗೆ ಬೇಕಾದ ರಿಸ್ಕ್ ತೆಗೆದುಕೊಳ್ಳುವ ಮನೋಭಾವ ಮತ್ತು ದೀರ್ಘಾವಧಿಯ ತಾಳ್ಮೆ ಭಾರತದ ಮಾರುಕಟ್ಟೆಯಲ್ಲಿ ಇನ್ನೂ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ. ಅವರ ಪ್ರಕಾರ, ಈಕೆಯ ಕಂಪನಿಗೆ ಅಗತ್ಯವಾಗಿರುವ ಡೀಪ್ಟೆಕ್ ಪ್ರಯೋಗಗಳಿಗೆ ಭಾರತದ ಇಕೋಸಿಸ್ಟಂ ಇನ್ನೂ ಸಜ್ಜಾಗಿಲ್ಲವಂತೆ.
2024ರಲ್ಲಿ ಆರಂಭವಾದ ಈ ಕಂಪನಿಯು ಭವಿಷ್ಯದ ಡೇಟಾ ಸ್ಟೋರೇಜ್ ತಂತ್ರಜ್ಞಾನದ ಮೇಲೆ ಕೆಲಸ ಮಾಡುತ್ತಿದೆ. ಇದು ಸಾಂಪ್ರದಾಯಿಕ ಹಾರ್ಡ್‌ವೇರ್ ಬದಲಿಗೆ ಡಿಎನ್‌ಎ (DNA) ಬಳಸಿ ಡಿಜಿಟಲ್ ಡೇಟಾವನ್ನು ಸಂಗ್ರಹಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಸಾಮಾನ್ಯ ಸರ್ವರ್‌ಗಳಿಗಿಂತ ಅತ್ಯಂತ ಕಡಿಮೆ ಜಾಗವನ್ನು ತೆಗೆದುಕೊಳ್ಳುತ್ತದೆ ಮತ್ತು ವಿದ್ಯುತ್ ಬಳಕೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಕಳೆದ ಎರಡು ವರ್ಷಗಳಲ್ಲಿ ಬೆಂಗಳೂರಿನ ಪ್ರಯೋಗಾಲಯದಲ್ಲೇ ಸಾವಿರಾರು ಪ್ರಯೋಗಗಳನ್ನು ನಡೆಸಿ, ಈ ತಂತ್ರಜ್ಞಾನದ ಆರಂಭಿಕ ಮಾದರಿಯನ್ನು (Prototype) ಇವರು ಯಶಸ್ವಿಯಾಗಿ ಸಿದ್ಧಪಡಿಸಿದ್ದರು.
ಅವರು ಹೇಳಿಕೊಳ್ಳುವ ಪ್ರಕಾರ, ಬಯೋಕಂಪ್ಯೂಟ್ನ ತಂತ್ರಜ್ಞಾನ ಅದೆಷ್ಟು ಪರಿಣಾಮಕಾರಿ ಎಂದರೆ, ಸಾಂಪ್ರದಾಯಿಕ ಹಾರ್ಡ್ವೇರ್ನಲ್ಲಿ ಒಂದು ಎಂಬಿ ಡೇಟಾ ಸಂಗ್ರಹಿಸಲು ಬೇಕಾದ ಬೆಲೆ 3.5 ಲಕ್ಷ ರೂ ಇರುತ್ತದೆ. ಅದೇ ಇವರ ಡಿಎನ್‌ಎ ತಂತ್ರಜ್ಞಾನದಲ್ಲಿ ಇದರ ವೆಚ್ಚ ಕೇವಲ 100 ರೂ ಆಗುತ್ತದೆ.
ಇದನ್ನೂ ಓದಿ: ಆರ್ಥಿಕತೆಗಳನ್ನು ನುಂಗುವ ಎಐ ಮಾಡಲ್ಗಳು: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲ ಕಳವಳ
ಅನಘಾ ರಾಜೇಶ್ ಅವರ ಪ್ರಕಾರ, ಭಾರತದಲ್ಲಿ ಹೂಡಿಕೆ ಮಾಡಲು ಹಣ ಜಾಸ್ತಿ ಇದೆ. ಆದರೆ, ತಾಳ್ಮೆ ಮತ್ತು ಆತ್ಮವಿಶ್ವಾಸ ಕಡಿಮೆ ಇದೆ. ಭಾರತದಲ್ಲಿರುವ ಹೂಡಿಕೆದಾರರು ತುಂಬಾ ಬೇಗನೆ ಆದಾಯ (Revenue) ಮತ್ತು ಲಾಭವನ್ನು ನಿರೀಕ್ಷಿಸುತ್ತಾರೆ. ಆದರೆ ಡಿಎನ್‌ಎ ಡೇಟಾ ಸ್ಟೋರೇಜ್‌ನಂತಹ ಸಂಕೀರ್ಣ ವೈಜ್ಞಾನಿಕ ಆವಿಷ್ಕಾರಗಳು ಮಾರುಕಟ್ಟೆಗೆ ಬರಲು ಮತ್ತು ಲಾಭ ತರಲು ವರ್ಷಗಳ ಸಂಶೋಧನೆ ಮತ್ತು ತಾಳ್ಮೆಯ ಅಗತ್ಯವಿರುತ್ತದೆ ಎಂದು ಅನಘಾ ಹೇಳುತ್ತಾರೆ.
ಇನ್ಸ್ಟಾಗ್ರಾಮ್ನಲ್ಲಿ ಅನಘಾ ಮಾತನಾಡಿರುವ ಒಂದು ಪೋಸ್ಟ್
ಆದರೆ, ಭಾರತಕ್ಕಿಂತ ಅಮೆರಿಕದಲ್ಲಿ ಹೂಡಿಕೆದಾರರ ಮನಸ್ಥಿತಿ ಹೇಗಿದೆ ಎನ್ನುವುದನ್ನು ಅನಘಾ ಬಹಳ ಸೂಕ್ಷ್ಮವಾಗಿ ವಿವರಿಸುತ್ತಾರೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಬಹಳ ಅದ್ಭುತವಾದ ಸ್ಟಾರ್ಟಪ್ ಇಕೋಸಿಸ್ಟಂ ಇದೆ. ಅನಘಾ ಅವರು ಅಲ್ಲಿನ ಹೂಡಿಕೆದಾರರಿಗೆ ತಮ್ಮ ಪ್ರಾಜೆಕ್ಟ್ಗಳ ಬಗ್ಗೆ ಹೇಳಿದಾಗ ಬಹಳ ಬೇಗ ಅರ್ಥ ಮಾಡಿಕೊಂಡರಂತೆ. ಅಲ್ಲಿನವರಿಗೆ ಅನಘಾ ಅವರ ಸ್ಟಾರ್ಟಪ್ನಿಂದ ತತ್ಕ್ಷಣಕ್ಕೆ ಆದಾಯದ ಅಪೇಕ್ಷೆ ಇಲ್ಲ. ಬದಲಾಗಿ, ಅವರಿಗೆ ಡೀಪ್ಟೆಕ್ ಆವಿಷ್ಕಾರದಲ್ಲಿ ಮುಂದುವರಿಯಲು ಏನು ವ್ಯವಸ್ಥೆ ಮಾಡಬೇಕು ಎಂಬುದೇ ಚಿಂತೆಯಂತೆ.
“ಭಾರತೀಯ ಸ್ಟಾರ್ಟ್‌ಅಪ್ ಇಕೋಸಿಸ್ಟಂ ಹೆಚ್ಚಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ ಯಶಸ್ವಿಯಾದ ಮಾದರಿಗಳನ್ನು ಭಾರತಕ್ಕೆ ತಕ್ಕಂತೆ ಅಳವಡಿಸಿ ಸುರಕ್ಷಿತವಾಗಿ ಆಟವಾಡಲು ಬಯಸುತ್ತದೆ. ಆದರೆ ಐಬಿಎಂ (IBM) ನಂತಹ ಜಾಗತಿಕ ದೈತ್ಯ ಕಂಪನಿಗಳಿಗೆ ಪೈಪೋಟಿ ನೀಡುವಂತಹ ಹೊಸ ಹಾರ್ಡ್‌ವೇರ್ ಕಂಪನಿಯನ್ನು ಕಟ್ಟಲು ನಮಗೆ ದೊಡ್ಡ ಮಟ್ಟದ ರಿಸ್ಕ್ ತೆಗೆದುಕೊಳ್ಳುವ ವ್ಯವಸ್ಥೆ ಬೇಕು” ಎಂದು ಅನಘಾ ಅವರು ತಮ್ಮ ಬ್ಲಾಗ್ ಪೋಸ್ಟ್‌ನಲ್ಲಿ ಬರೆದಿದ್ದಾರೆ. 2024ರಲ್ಲಿ ಆರಂಭಗೊಂಡ ಅನಘಾ ಅವರಿಗೆ ಈ ಎರಡು ವರ್ಷದಲ್ಲಿ ಹೂಡಿಕೆ ಸಿಕ್ಕಿದ್ದು 5 ಕೋಟಿ ರೂಗಿಂತ ತುಸು ಹೆಚ್ಚು.
ಇದನ್ನೂ ಓದಿ: ನೌಕರನ ತಪ್ಪಿಗೆ ಕಂಪನಿ ಸಿಇಒ ಹಾಗೂ ಹಿರಿಯ ಉದ್ಯೋಗಿಗಳಿಗೆ ಪೇಮೆಂಟ್ ಕಟ್; ಜಪಾನ್ ಏರ್ಲೈನ್ಸ್ನಲ್ಲೊಂದು ಘಟನೆ
ಕಂಪನಿಯನ್ನು ಅಮೆರಿಕಾಗೆ ಸ್ಥಳಾಂತರಿಸುತ್ತಿರುವುದರಿಂದ, ಬೆಂಗಳೂರಿನಲ್ಲಿದ್ದ ತಮ್ಮ ಅತ್ಯುತ್ತಮ ತಂಡವನ್ನು ಕೈಬಿಡಬೇಕಾಗಿ ಬಂದಿದೆ. ಇದು ತಮ್ಮ ಇಡೀ ಉದ್ಯಮಶೀಲತೆಯ ಪಯಣದಲ್ಲೇ ಅತ್ಯಂತ ಕಠಿಣ ಮತ್ತು ಬೇಸರದ ನಿರ್ಧಾರವಾಗಿತ್ತು ಎಂದು ಅನಘಾ ಹಂಚಿಕೊಂಡಿದ್ದಾರೆ.
ಈ ಘಟನೆಯು ಭಾರತೀಯ ಸ್ಟಾರ್ಟ್‌ಅಪ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಭಾರತದಲ್ಲಿ ಇತ್ತೀಚೆಗೆ ಡೀಪ್-ಟೆಕ್ ಮತ್ತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಗಳಿಗೆ ಹೂಡಿಕೆ ಉತ್ತೇಜನ ಸಿಗುತ್ತಿದ್ದರೂ, ಇನ್ನೂ ನೂರಕ್ಕೂ ಹೆಚ್ಚು ಭಾರತೀಯ ತಂತ್ರಜ್ಞಾನ ಸಂಸ್ಥಾಪಕರು ಸುಲಭವಾಗಿ ಸಿಗುವ ಜಾಗತಿಕ ಗ್ರಾಹಕರು, ಹೂಡಿಕೆ ಮತ್ತು ಸೂಕ್ತ ವಾತಾವರಣಕ್ಕಾಗಿ ಅಮೆರಿಕಾದತ್ತ ಮುಖ ಮಾಡುತ್ತಿರುವುದನ್ನು ಇದು ಎತ್ತಿ ತೋರಿಸುತ್ತದೆ. ಭವಿಷ್ಯದಲ್ಲಿ ಬಯೋಕಂಪ್ಯೂಟ್ ಕಂಪನಿಯು ತನ್ನ ಮೊದಲ ‘ಡೀಪ್-ಟೆಕ್ ಡಿಎನ್‌ಎ ಚಿಪ್’ ಅನ್ನು ಸ್ಯಾನ್ ಫ್ರಾನ್ಸಿಸ್ಕೋದಿಂದಲೇ ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:47 pm, Mon, 22 June 26