ಸಣ್ಣ ಉದ್ದಿಮೆಗಳಿಗೆ ಸಿಗಲಿದೆ ದೊಡ್ಡ ಪುಷ್ಟಿ; ಸರ್ಕಾರದಿಂದ 10,000 ಕೋಟಿ ರೂ ‘ಎಸ್​ಎಂಇ ಗ್ರೋತ್ ಫಂಡ್’ ಸ್ಥಾಪನೆಗೆ ನಿರ್ಧಾರ

ಸಣ್ಣ ಉದ್ದಿಮೆಗಳಿಗೆ ಅಗತ್ಯ ಇರುವ ದೀರ್ಘಕಾಲ ಬಂಡವಾಳ ಒದಗಿಸಲು ಸರ್ಕಾರ ದೊಡ್ಡ ನಿಧಿಯೊಂದನ್ನು ಸ್ಥಾಪಿಸುತ್ತಿದೆ. ₹10,000 ಕೋಟಿ 'SME ಗ್ರೋತ್ ಫಂಡ್' (SGF) ಸ್ಥಾಪನೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಆಲ್ಟರ್ನೇಟಿವ್ ಇನ್ವೆಸ್ಟ್​ಮೆಂಟ್ ಫಂಡ್ ಅಥವಾ ಎಐಎಫ್ ಫ್ರೇಮ್​ವರ್ಕ್​ನಲ್ಲಿ ಈ ಫಂಡ್ ರಚನೆಯಾಗಲಿದೆ. ಎಸ್​ಎಂಇಗಳಿಗೆ ಅಗತ್ಯವಿರುವ ದೀರ್ಘಾವಧಿ ಬಂಡವಾಳವನ್ನು ಈ ಫಂಡ್ ಒದಗಿಸುತ್ತದೆ.

ಸಣ್ಣ ಉದ್ದಿಮೆಗಳಿಗೆ ಸಿಗಲಿದೆ ದೊಡ್ಡ ಪುಷ್ಟಿ; ಸರ್ಕಾರದಿಂದ 10,000 ಕೋಟಿ ರೂ ‘ಎಸ್​ಎಂಇ ಗ್ರೋತ್ ಫಂಡ್’ ಸ್ಥಾಪನೆಗೆ ನಿರ್ಧಾರ
ನಿಧಿ
Image Credit source: Getty Images

Updated on: Oct 06, 2026 | 7:55 PM

ನವದೆಹಲಿ, ಅಕ್ಟೋಬರ್ 6: ದೇಶದ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ (SMEs) ಅಗತ್ಯವಾದ ಬಂಡವಾಳ ಸಿಗಲು ಸಾಧ್ಯವಾಗಿಸುವಂತಹ ಮಹತ್ವಪೂರ್ಣವಾದ ಎಸ್​ಎಂಇ ಗ್ರೋತ್ ಫಂಡ್ (SME Growth Fund – SGF) ಸ್ಥಾಪನೆಗೆ ಸರ್ಕಾರ ಅಡಿ ಇಟ್ಟಿದೆ. ಈ ಫಂಡ್​ಗಾಗಿ ಸರ್ಕಾರ 10,000 ಕೋಟಿ ರೂ ಒದಗಿಸಲು ಬದ್ಧವಾಗಿದೆ. ಈ ನಿರ್ಧಾರಕ್ಕೆ ಇಂದು ಮಂಗಳವಾರ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಕೂಡ ಸಿಕ್ಕಿದೆ.

ಕೇಂದ್ರ ಬಜೆಟ್ 2026-27 ರ ಪ್ಯಾರಾ 28 ರಲ್ಲಿ ಘೋಷಿಸಿದಂತೆ, ದೇಶದ ಎಸ್‌ಎಂಇ ವಲಯವನ್ನು ಜಾಗತಿಕ ಮಟ್ಟದ ಉದ್ಯಮಗಳನ್ನಾಗಿ ಬೆಳೆಸುವ ಉದ್ದೇಶದಿಂದ ಈ ಬೃಹತ್ ನಿಧಿಯನ್ನು ಕಾಯ್ದಿರಿಸಲಾಗಿದೆ.

ಪ್ರಸ್ತುತ ಎದುರಾಗುತ್ತಿರುವ ಕೊರತೆ ಹಾಗೂ ಪರಿಹಾರ

ಸದ್ಯ ಚಾಲ್ತಿಯಲ್ಲಿರುವ ಹಲವು ಈಕ್ವಿಟಿ ಫಂಡ್‌ಗಳು ಹೆಚ್ಚಾಗಿ ಆರಂಭಿಕ ಹಂತದ ‘ಸ್ಟಾರ್ಟ್‌ಅಪ್‌ಗಳು’ (Early-stage enterprises) ಹಾಗೂ ಅತಿ ಸಣ್ಣ (Micro) ಉದ್ಯಮಗಳ ಮೇಲೆ ಗಮನಹರಿಸುತ್ತವೆ. ಆದರೆ ಉದಯೋನ್ಮುಖ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (Small and Medium Enterprises) ವ್ಯಾಪಾರ ವಿಸ್ತರಣೆ ಮತ್ತು ತಂತ್ರಜ್ಞಾನ ಅಳವಡಿಕೆಗೆ ಅಗತ್ಯವಿರುವ ದೀರ್ಘಕಾಲೀನ ರಿಸ್ಕ್​ನ ಬಂಡವಾಳದ (Long-term risk capital) ಕೊರತೆ ಇತ್ತು. ಈ ‘ಎಸ್‌ಎಂಇ ಗ್ರೋತ್ ಫಂಡ್’ ಆ ಕೊರತೆಯನ್ನು ನೀಗಿಸಲಿದೆ.

ಪ್ರಧಾನಿ ಮೋದಿ ಪ್ರಶಂಸೆ

ಎಸ್​ಜಿಎಫ್ ಫಂಡ್ ಸ್ಥಾಪನೆಗೆ ಅನುಮೋದಿಸಲು ಕ್ಯಾಬಿನೆಟ್ ಕೈಗೊಂಡಿರುವ ನಿರ್ಧಾರವನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ಮುಂದಿನ ತಲೆಮಾರಿನ ಉದ್ಯಮ ಮುಖಂಡರನ್ನು ಸೃಷ್ಟಿಸಲು ಈ ನಡೆ ಎಡೆ ಮಾಡಿಕೊಡುತ್ತದೆ. ಎಸ್​ಎಂಇಗಳು ತಮ್ಮ ಕಾರ್ಯಾಚರಣೆ ಹೆಚ್ಚಿಸಲು, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಲು, ಜಾಗತಿಕ ಮಾರುಕಟ್ಟೆ ಪ್ರವೇಶಿಸಲು, ಜಾಗತಿಕ ಮೌಲ್ಯ ಸರಪಳಿಯ ಭಾಗವಾಗಲು ಈ ನಿಧಿ ಸಹಾಯವಾಗುತ್ತದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಶೇ. 8ರ ಆರ್ಥಿಕ ಬೆಳವಣಿಗೆ ದರದ ಹೊಸ್ತಿಲಲ್ಲಿ ಭಾರತ: ಪಿಎಂ ಮುಖ್ಯ ಕಾರ್ಯದರ್ಶಿ ಶಕ್ತಿಕಾಂತ ದಾಸ್

ತಯಾರಿಕಾ ವಲಯಕ್ಕೆ ಸಿಗಲಿದೆ ಸಿಂಹಪಾಲು

ಈ ನಿಧಿಯ (SGF) ಬಹುಪಾಲು ಅನುದಾನವನ್ನು ತಯಾರಿಕಾ ವಲಯದ (Manufacturing Sector) ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಮೀಸಲಿಡಲಾಗುತ್ತದೆ. ಇದರೊಂದಿಗೆ ತಂತ್ರಜ್ಞಾನ, ಸೇವಾ ವಲಯ ಹಾಗೂ ಕಾರ್ಯತಂತ್ರ ಮೌಲ್ಯ ಸರಣಿಗಳಲ್ಲಿ ತೊಡಗಿಸಿಕೊಂಡಿರುವ ಮತ್ತು ಬೆಳೆಯುವ ಸಾಮರ್ಥ್ಯವಿರುವ ಉದ್ಯಮಗಳಿಗೂ ನೇರ ಈಕ್ವಿಟಿ ಹೂಡಿಕೆ (Direct equity investment) ಸಿಗಲಿದೆ.

ಶ್ರೇಣಿ-2 ಮತ್ತು ಶ್ರೇಣಿ-3 ನಗರಗಳಿಗೆ ಆದ್ಯತೆ

ದ್ವಿತೀಯ ಮತ್ತು ತೃತೀಯ ಹಂತದ ನಗರಗಳಲ್ಲಿರುವ (Tier II & Tier III Cities) ಕೈಗಾರಿಕಾ ಕ್ಲಸ್ಟರ್‌ಗಳಲ್ಲಿ ಕಾರ್ಯಾಚರಿಸುತ್ತಿರುವ ಎಸ್‌ಎಂಇಗಳಿಗೆ ಈ ನಿಧಿಯಿಂದ ಹೆಚ್ಚಿನ ಆದ್ಯತೆ ನೀಡಲಾಗುವುದು. ಇದರಿಂದ ಪ್ರಾದೇಶಿಕ ಕೈಗಾರಿಕಾ ಅಭಿವೃದ್ಧಿ ಸಮತೋಲನಗೊಳ್ಳಲಿದ್ದು, ಸ್ಥಳೀಯವಾಗಿ ಉನ್ನತ ಮಟ್ಟದ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

ಇದನ್ನೂ ಓದಿ: ಯುಪಿಐ ಪಾವತಿಗಳಿಗೆ ಎಂಡಿಆರ್; ಶೇಕಡವಾರು ಶುಲ್ಕ, ಫ್ಲ್ಯಾಟ್ ಶುಲ್ಕ; ಸಣ್ಣ ವರ್ತಕರೆಂದರೆ ಯಾರು? ಹಲವು ಅನುಮಾನಗಳಿಗೆ ಉತ್ತರ

‘ವಿಕಸಿತ ಭಾರತ 2047’ ದೃಷ್ಟಿಕೋನ

ಆಲ್ಟರ್ನೇಟಿವ್ ಇನ್ವೆಸ್ಟ್‌ಮೆಂಟ್ ಫಂಡ್ (AIF) ಚೌಕಟ್ಟಿನ ಅಡಿಯಲ್ಲಿ ಜಾರಿಯಾಗುವ ಈ ಯೋಜನೆಗೆ ಕೇಂದ್ರ ಸರ್ಕಾರ ₹10,000 ಕೋಟಿ ಒದಗಿಸಲಿದೆ. ಉದ್ಯಮಗಳು ತಮ್ಮ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು, ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲು ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಗೆ ರಫ್ತು ವಿಸ್ತರಿಸಲು ಈ ಬಂಡವಾಳ ನೆರವಾಗಲಿದ್ದು, ‘ವಿಕಸಿತ ಭಾರತ 2047’ (Viksit Bharat 2047) ಗುರಿ ಸಾಧನೆಗೆ ಇದು ಪ್ರಮುಖ ಮೈಲಿಗಲ್ಲಾಗುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us