ನವದೆಹಲಿ: ರೈಲ್ವೆ ಟಿಕೆಟ್ ಬುಕಿಂಗ್ ಮಾಡುವ ಟ್ರೈನ್ಮ್ಯಾನ್ ಆ್ಯಪ್ (Trainman) ಅನ್ನು ಅದಾನಿ ಗ್ರೂಪ್ ಖರೀದಿಸಲು ಹೊರಟಿರುವ ಸುದ್ದಿ ಬಹಳಷ್ಟು ರಾಜಕೀಯ ಸಂಚನಲಕ್ಕೂ ಕಾರಣವಾಗಿದೆ. ಟ್ರೈನ್ಮ್ಯಾನ್ ಆ್ಯಪ್ನ ಮಾಲೀಕಸಂಸ್ಥೆ ಸ್ಪಾರ್ಕ್ ಎಂಟರ್ಪ್ರೈಸಸ್ನ ಶೇ. 100ರಷ್ಟು ಪಾಲನ್ನು ತಾನು ಖರೀದಿಸುತ್ತಿರುವುದಾಗಿ ಅದಾನಿ ಗ್ರೂಪ್ ಜೂನ್ 16ರಂದು ಹೇಳಿತ್ತು. ಅದಾನಿ ಎಂಟರ್ಪ್ರೈಸಸ್ ಸಂಸ್ಥೆಯ ಅಧೀನದಲ್ಲಿರುವ ಅದಾನಿ ಡಿಜಿಟಲ್ ಲ್ಯಾಬ್ಸ್ ಸಂಸ್ಥೆ ಸ್ಪಾರ್ಕ್ ಎಂಟರ್ಪ್ರೈಸಸ್ (Spark Enterprises) ಅನ್ನು ಖರೀದಿಸುತ್ತಿದೆ. ಟ್ರೈನ್ಮ್ಯಾನ್ ಆ್ಯಪ್ ಅನ್ನು ಖರೀದಿಸುವ ಮೂಲಕ ಉದ್ಯಮಿ ಗೌತಮ್ ಅದಾನಿ ರೈಲ್ವೆ ಇಲಾಖೆಗೆ ಸೇರಿದ ಐಆರ್ಸಿಟಿಸಿಯ ಆದಾಯಕ್ಕೆ ಕೊಕ್ಕೆ ಹಾಕುತ್ತಿದ್ದಾರೆ ಎಂಬ ಆರೋಪವನ್ನು ವಿಪಕ್ಷಗಳು ಮಾಡುತ್ತಿವೆ. ಆದರೆ, ಈ ಬಗ್ಗೆ ಐಆರ್ಸಿಟಿಸಿ ಸ್ಪಷ್ಟನೆ ನೀಡಿದ್ದು, ಅದಾನಿಯಿಂದಾಗಲೀ, ಟ್ರೈನ್ಮ್ಯಾನ್ನಿಂದಲಾಗಲೀ ಐಆರ್ಸಿಟಿಸಿಗೆ ಏನೂ ಹಾನಿ ಆಗುವುದಿಲ್ಲ ಎಂದಿದೆ.
ಐಆರ್ಸಿಟಿಸಿ ಎಂಬುದು ಭಾರತೀಯ ರೈಲ್ವೆಗೆ ಸೇರಿದ ಒಂದು ಸಂಸ್ಥೆ. ಟಿಕೆಟ್ ಬುಕಿಂಗ್ನಿಂದ ಹಿಡಿದು ವಿವಿಧ ಪ್ರವಾಸಗಳನ್ನು ಇದು ಆಫರ್ ಮಾಡುತ್ತದೆ. ರೈಲ್ವೆ ಟಿಕೆಟ್ ಬುಕಿಂಗ್ನಲ್ಲಿ ಇದು ನೂರು ಪ್ರತಿಶತದಷ್ಟು ಸ್ವಾಮ್ಯ ಇರುವ ಸಂಸ್ಥೆ. ಟ್ರೈನ್ಮ್ಯಾನ್, ಪೇಟಿಎಂ, ಮೈಕ್ ಮೈ ಟ್ರಿಪ್ ಇತ್ಯಾದಿ ಪ್ಲಾಟ್ಫಾರ್ಮ್ಗಳಲ್ಲಿ ರೈಲ್ವೆ ಟಿಕೆಟ್ ಬುಕಿಂಗ್ ಮಾಡಬಹುದಾದರೂ ಎಲ್ಲವೂ ಕೂಡ ಐಆರ್ಸಿಟಿಸಿ ಪ್ಲಾಟ್ಫಾರ್ಮ್ ಮೂಲಕವೇ ಸಾಗಬೇಕು. ಐಆರ್ಸಿಟಿಸಿ ಒಟ್ಟು 32 ಕಂಪನಿಗಳಿಗೆ ಎಪಿಐ (ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್) ಒದಗಿಸಿದೆ. ಇದರಲ್ಲಿ ಪೇಟಿಎಂ, ಟ್ರೈನ್ಮ್ಯಾನ್ ಇತ್ಯಾದಿಯೂ ಸೇರಿವೆ.
ಇದನ್ನೂ ಓದಿ: iPhone Exports: ಏಪ್ರಿಲ್ ಮೇ, ಎರಡು ತಿಂಗಳಲ್ಲಿ ಭಾರತದಿಂದ ಆ್ಯಪಲ್ ಐಫೋನ್ ರಫ್ತು 20,000 ಕೋಟಿ ರೂ
ಈ ಪ್ಲಾಟ್ಫಾರ್ಮ್ಗಳಲ್ಲಿ ಬುಕ್ ಆಗುವ ಒಂದು ಟಿಕೆಟ್ಗೆ ಐಆರ್ಸಿಟಿಸಿ ನಿರ್ದಿಷ್ಟ ಕಮಿಷನನ್ ಪಡೆಯುತ್ತದೆ. 2021-22ರ ಹಣಕಾಸು ವರ್ಷದಲ್ಲಿ ಪೇಟಿಎಂನಲ್ಲಿ ಬುಕ್ ಆದ ರೈಲ್ವೆ ಟಿಕೆಟ್ಗಳಿಂದ ಐಆರ್ಸಿಟಿಸಿಗೆ ಸಿಕ್ಕ ಕಮಿಷನ್ ಹಣವೇ ಬರೋಬ್ಬರಿ 70 ಕೋಟಿ ರೂ.
32 ಕಂಪನಿಗಳಿಗೆ ಎಪಿಐ ನೀಡಲಾಗಿದ್ದರೂ ಐಆರ್ಸಿಟಿಸಿಯ ಅಧಿಕೃತ ಪ್ಲಾಟ್ಫಾರ್ಮ್ ಮೂಲಕವೇ ಶೇ. 81ರಷ್ಟು ರೈಲ್ವೆ ಟಿಕೆಟ್ಗಳು ಬುಕ್ ಆಗುತ್ತವೆ. ಇನ್ನು ಟ್ರೈನ್ಮ್ಯಾನ್ ಆ್ಯಪ್ನಲ್ಲಿ ಬುಕ್ ಆಗುವ ರೈಲ್ವೆ ಟಿಕೆಟ್ ಕೇವಲ ಶೇ. 0.13 ಮಾತ್ರ. ಅಂದರೆ ಆನ್ಲೈನ್ನಲ್ಲಿ ಬುಕ್ ಆಗುವ ಪ್ರತೀ 10,000 ರೈಲ್ವೆ ಟಿಕೆಟ್ಗಳಲ್ಲಿ ಟ್ರೈನ್ಮ್ಯಾನ್ ಮೂಲಕ ಬುಕ್ ಆಗುವುದು 13 ಟಿಕೆಟ್ ಮಾತ್ರವೇ.
ಹೀಗಾಗಿ, ಐಆರ್ಸಿಟಿಸಿ ಇತ್ತೀಚೆಗೆ ನಷ್ಟ ಕಂಡಿದ್ದೇ ಇಲ್ಲ. 2022-23ರ ಹಣಕಾಸು ವರ್ಷದಲ್ಲಿ ಐಆರ್ಸಿಟಿಸಿಯ ಆದಾಯ ಶೇ. 87ರಷ್ಟು ಹೆಚ್ಚಾಗಿ 3,661 ಕೋಟಿ ರೂ ಆಗಿತ್ತು. ನಿವ್ವಳ ಲಾಭ ಬರೋಬ್ಬರಿ 1,005 ರೂ ಆಗಿತ್ತು. ಐಆರ್ಸಿಟಿಸಿ ಷೇರುಪೇಟೆಯಲ್ಲೂ ಗಣನೀಯವಾಗಿ ವೃದ್ಧಿಸುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ