Credit score: ಸಾಲ, ಕ್ರೆಡಿಟ್ ಕಾರ್ಡ್ ಬಿಲ್ ಸರಿಯಾಗಿ ಪಾವತಿಸಿದರೂ ಕ್ರೆಡಿಟ್ ಸ್ಕೋರ್ ಯಾಕೆ ಕಡಿಮೆ ಆಗುತ್ತೆ?

|

Updated on: May 24, 2021 | 1:52 PM

ಕ್ರೆಡಿಟ್ ಸ್ಕೋರ್ ಕೇಳದೆ ಸಾಲ ನೀಡುವುದುಂಟೆ? ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಅಥವಾ ಸಾಲ ಮರುಪಾವತಿ ಸರಿಯಾಗಿ ಮಾಡಿದ ಹೊರತಾಗಿಯೂ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಆಗುವ ಅಂಶಗಳಿವು.

Credit score: ಸಾಲ, ಕ್ರೆಡಿಟ್ ಕಾರ್ಡ್ ಬಿಲ್ ಸರಿಯಾಗಿ ಪಾವತಿಸಿದರೂ ಕ್ರೆಡಿಟ್ ಸ್ಕೋರ್ ಯಾಕೆ ಕಡಿಮೆ ಆಗುತ್ತೆ?
ಸಾಂದರ್ಭಿಕ ಚಿತ್ರ
Follow us on

“ನಿಮ್ಮ ಕ್ರೆಡಿಟ್ ಸ್ಕೋರ್ ಎಷ್ಟು?” ಎಂಬ ಪ್ರಶ್ನೆ ಸಾಲ ಪಡೆಯುವ ಸಂದರ್ಭದಲ್ಲಿ ಪದೇ ಪದೇ ಕೇಳಿಸಿಕೊಂಡಿರುತ್ತೀರಿ. ಕ್ರೆಡಿಟ್ ಸ್ಕೋರ್ ನಿರ್ಧಾರ ಆಗುವುದು ಹಲವು ಅಂಶಗಳಿಂದಲಾದರೂ ಸಾಲದ ಮರುಪಾವತಿ ಸರಿಯಾದ ಸಮಯಕ್ಕೆ ಮಾಡುವುದು ಗರಿಷ್ಠ ಪ್ರಮಾಣದಲ್ಲಿ ಸಹಾಯ ಮಾಡುತ್ತದೆ ಎಂಬ ಭಾವನೆ ಬಲವಾಗಿ ನಿಮ್ಮಲ್ಲಿ ಬೇರೂರಿರಬಹುದು. ಆದರೆ ನಿಮಗೆ ಗೊತ್ತಿರಲಿ, ಇತರ ಅಂಶಗಳು ಕೂಡ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತವೆ. ನೀವು ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಹಾಗೂ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡಿದ್ದರ ಹೊರತಾಗಿಯೂ ಕ್ರೆಡಿಟ್ ಸ್ಕೋರ್​ ಕಡಿಮೆ ಇದೆ ಎಂದಾದಲ್ಲಿ ಇಲ್ಲಿರುವ ಅಂಶಗಳು ಕಾರಣ ಇರಬಹುದು.

ಕ್ರೆಡಿಟ್ ಕಾರ್ಡ್ ಬಳಕೆ ಮಾಡುವ ಪ್ರಮಾಣ
ಕ್ರೆಡಿಟ್ ಯುಟಿಲೈಸೇಷನ್ ರೇಷಿಯೋ (CUR) ಅಂತಿದೆ. ಹೀಗಂದರೆ ನಿಮಗೆ ಇರುವ ಒಟ್ಟು ಕ್ರೆಡಿಟ್ ಕಾರ್ಡ್ ಮಿತಿಯಲ್ಲಿ ಎಷ್ಟನ್ನು ಬಳಸಿಕೊಂಡಿದ್ದೀರಿ ಎಂಬುದನ್ನು ವಿವರಿಸುವುದಕ್ಕೆ ಬಳಸುವ ತಾಂತ್ರಿಕವಾದ ಪದ ಇದು. ಸಾಮಾನ್ಯವಾಗಿ ಸಾಲ ನೀಡುವ ಸಂಸ್ಥೆಗಳ ಆಲೋಚನೆ ಹೇಗಿರುತ್ತದೆ ಅಂದರೆ, ಯಾರು ತಮ್ಮ ಕ್ರೆಡಿಟ್ ಕಾರ್ಡ್​ ಒಟ್ಟು ಮಿತಿಯ ಶೇ 30ಕ್ಕಿಂತ ಹೆಚ್ಚು ಮೊತ್ತವನ್ನು ಬಳಸುತ್ತಾರೋ ಅಂಥವರನ್ನು ಸಾಲಕ್ಕೆ ಹಪಹಪಿಸುವಂಥರು ಎಂದು ಅಂದುಕೊಳ್ಳಲಾಗುತ್ತದೆ. ಶೇ 30ರ ಬಳಕೆ ಮಿತಿಯನ್ನು ದಾಟಿದಲ್ಲಿ ಕ್ರೆಡಿಟ್​ ಸ್ಕೋರ್​ನ ಕೆಲ ಪಾಯಿಂಟ್​ಗಳನ್ನು ಬ್ಯೂರೋಗಳು ಕಡಿಮೆ ಮಾಡುತ್ತವೆ.

ಹೌದು, ಖರ್ಚುಗಳು ಇರುತ್ತವೆ. ಏನೇನೋ ಅನಿವಾರ್ಯ ಹಾಗೂ ಅನಿಶ್ಚಿತತೆಗಳು ಎದುರಾಗುವುದರಿಂದ ಹೀಗೇ ಆಗುತ್ತಿದೆ. ಶೇ 30ರ ಮಿತಿಯನ್ನು ದಾಟುತ್ತಿದೆ ಅಂತಾದರೆ, ನಿಮ್ಮ ಕ್ರೆಡಿಟ್ ಕಾರ್ಡ್​ ಮಿತಿಯನ್ನು ಹೆಚ್ಚಿಸಿಕೊಳ್ಳಿ. ಅಥವಾ ಹೆಚ್ಚುವರಿ ಕ್ರೆಡಿಟ್ ಕಾರ್ಡ್​ಗೆ ಅಪ್ಲೈ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಕ್ರೆಡಿಟ್ ಮಿತಿ ಹೆಚ್ಚಾಗುತ್ತದೆ ಹಾಗೂ ಕ್ರೆಡಿಟ್ ಬಳಕೆ ಪ್ರಮಾಣ ಕಡಿಮೆ ಆಗುತ್ತದೆ. ಹೆಚ್ಚುವರಿ ಕ್ರೆಡಿಟ್​ ಕಾರ್ಡ್ ಮಿತಿ ಬಂತು ಅನ್ನೋ ಕಾರಣಕ್ಕೆ ಮತ್ತೆ ಖರ್ಚಿನ ಪ್ರಮಾಣ ಜಾಸ್ತಿ ಮಾಡಬೇಡಿ.

ಪದೇ ಪದೇ ಹೊಸ ಕ್ರೆಡಿಟ್​ ಕಾರ್ಡ್​ಗಳ ಬಗ್ಗೆ ವಿಚಾರಣೆ
ಕಡಿಮೆ ಅವಧಿಯಲ್ಲಿ ಹಲವು ಬಾರಿ ಕ್ರೆಡಿಟ್​ ಕಾರ್ಡ್​ಗಳಿಗೆ ಅಪ್ಲೈ ಮಾಡುವುದರಿಂದಲೂ ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತದೆ. ಪ್ರತಿ ಸಲ ಸಾಲಕ್ಕೋ ಅಥವಾ ಕ್ರೆಡಿಟ್ ಕಾರ್ಡ್​ಗೋ ಅಪ್ಲೈ ಮಾಡಿದಾಗ ನಿಮ್ಮ ಸಾಲ ಮರುಪಾವತಿ ಸಾಮರ್ಥ್ಯದ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಅದು ಹೇಗೆಂದರೆ, ಕ್ರೆಡಿಟ್ ಬ್ಯೂರೋಗಳ ಕ್ರೆಡಿಟ್ ವರದಿಗಳ ಮೂಲಕವಾಗಿ. ಸಾಲ ನೀಡುವ ಸಂಸ್ಥೆಗಳು ನಡೆಸುವ ಇಂಥ ವಿಚಾರಣೆಯನ್ನು ಹಾರ್ಡ್ ಎನ್​ಕ್ವೇರೀಸ್ ಎಂದು ಪರಿಗಣಿಸಲಾಗುತ್ತದೆ. ಇದರಿಂದಾಗಿ ಕ್ರೆಡಿಟ್ ಸ್ಕೋರ್ ಪಾಯಿಂಟ್ಸ್ ಸ್ವಲ್ಪ ಮಟ್ಟಿಗೆ ಕಡಿಮೆ ಆಗುತ್ತದೆ.

ಆದ್ದರಿಂದ ನೇರವಾಗಿ ಸಾಲಕ್ಕೋ ಅಥವಾ ಕ್ರೆಡಿಟ್​ ಕಾರ್ಡ್​ಗಳಿಗೋ ಹಲವು ಹಣಕಾಸು ಸಂಸ್ಥೆಗಳು ಹಾಗೂ ಕ್ರೆಡಿಟ್ ಕಾರ್ಡ್​ ವಿತರಕರ ಬಳಿ ಪ್ರಯತ್ನಿಸುವ ಬದಲಿಗೆ ಆನ್​ಲೈನ್ ಫೈನಾನ್ಷಿಯಲ್ ಮಾರ್ಕೆಟ್​ಪ್ಲೇಸ್​ನಲ್ಲಿ ಸಿಗುವ ವಿವಿಧ ಸಾಲ ಅಥವಾ ಕ್ರೆಡಿಟ್​ ಕಾರ್ಡ್ ಅನ್ನು ಪರಿಶೀಲಿಸಿ. ನಿಮ್ಮ ಆದಾಯ, ಕ್ರೆಡಿಟ್ ಸ್ಕೋರ್, ಉದ್ಯೋಗ ಮತ್ತು ಇತರ ಅರ್ಹತಾ ಮಾನದಂಡಗಳಿಗೆ ತಕ್ಕಂತೆ ಅಲ್ಲಿ ಮಾಹಿತಿ ಸಿಗುತ್ತದೆ. ಇನ್ನು ಆನ್​ಲೈನ್ ಮಾರ್ಕೆಟ್ ಪ್ಲೇಸ್​ಗಳಲ್ಲೂ ನಿಮ್ಮ ಕ್ರೆಡಿಟ್ ಕಾರ್ಡ್ ವರದಿಯ ಮಾಹಿತಿಯನ್ನು ತೆಗೆಯಲಾಗುತ್ತದೆ. ಆದರೆ ಅಂಥ ಮನವಿಗಳನ್ನು ಸಾಫ್ಟ್ ಎನ್​ಕ್ವೇರೀಸ್ ಎನ್ನಲಾಗುತ್ತದೆ. ಕ್ರೆಡಿಟ್ ಸ್ಕೋರ್ ಲೆಕ್ಕ ಹಾಕುವಾಗ ಕ್ರೆಡಿಟ್ ಬ್ಯೂರೋಗಳು ಅದನ್ನು ಗಣನೆಗೆ ತೆಗೆದುಕೊಳ್ಳಲ್ಲ.

ಕ್ರೆಡಿಟ್ ವರದಿಯಲ್ಲಿನ ತಪ್ಪುಗಳು
ನೀವು ಸಾಲ ಪಡೆದ ಸಂಸ್ಥೆಯಲ್ಲೋ ಅಥವಾ ಕ್ರೆಡಿಟ್ ಬ್ಯೂರೋದಿಂದಲೋ ಏನಾದರೂ ಕ್ಲರಿಕಲ್ ಎರರ್, ಅಂದರೆ ಇವುಗಳನ್ನೆಲ್ಲ ನಿಗಾ ಮಾಡುವ ವ್ಯಕ್ತಿ ಅಥವಾ ವ್ಯವಸ್ಥೆಯಿಂದಲೇ ತಪ್ಪಾಗಿರುವ ಸಾಧ್ಯತೆ ಇರುತ್ತದೆ. ನಿಮ್ಮ ಹೆಸರಲ್ಲಿ ಇನ್ಯಾರೋ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಪಡೆದಿರುವ ಅಥವಾ ವಹಿವಾಟು ನಡೆಸಿರುವ ಸಾಧ್ಯತೆ ಇರುತ್ತದೆ. ಇಂಥ ತಪ್ಪುಗಳನ್ನು ಸರಿ ಮಾಡುವುದಕ್ಕೆ ಇರುವ ದಾರಿ ಏನೆಂದರೆ, ಆಗಾಗ ಕ್ರೆಡಿಟ್ ರಿಪೋರ್ಟ್​ಗಳನ್ನು ಪರಿಶೀಲಿಸುತ್ತಿರಬೇಕು. ಕನಿಷ್ಠ ಪಕ್ಷ ಮೂರು ತಿಂಗಳಿಗೆ ಒಂದು ಸಲವಾದರೂ ಪರಿಶೀಲಿಸಬೇಕು. ಹೀಗೆ ಮಾಡುವುದರಿಂದ ತಪ್ಪಾದ ಮಾಹಿತಿಗಳು ಅಥವಾ ಕ್ಲರಿಕಲ್ ಎರರ್​ಗಳನ್ನು ಸರಿಪಡಿಸಬಹುದು. ಎಲ್ಲಿ ತಪ್ಪಾಗಿದೆ ಎಂಬುದನ್ನು ಗಮನಿಸಿ, ಸಾಲ ಪಡೆದ ಸಂಸ್ಥೆಯಲ್ಲೋ ಅಥವಾ ಕ್ರೆಡಿಟ್​ ಬ್ಯೂರೋ ಯಾವುದಿದೆಯೋ ಅಲ್ಲಿಯೇ ಸರಿ ಮಾಡಿಸಬೇಕು.

ಕ್ರೆಡಿಟ್ ಬ್ಯೂರೋಗಳು ವರ್ಷಕ್ಕೆ ಒಂದು ವರದಿ ಉಚಿತವಾಗಿ ನೀಡುತ್ತವೆ. ನಾಲ್ಕು ಬೇರೆ ಬೇರೆ ಕ್ರೆಡಿಟ್ ರಿಪೋರ್ಟ್ ಮನವಿಯನ್ನು ಗಮನಿಸಿ, ಒಂದು ಹಣಕಾಸಿನ ವರ್ಷದಲ್ಲಿ ನಾಲ್ಕು ತ್ರೈಮಾಸಿಕದಲ್ಲಿ ಒಂದು ವರದಿ ಪಡೆಯಬಹುದು. ಅದರ ಬದಲಿಗೆ ಆನ್​ಲೈನ್ ಫೈನಾನ್ಷಿಯಲ್ ಮಾರ್ಕೆಟ್​ಪ್ಲೇಸ್​ಗೆ ತೆರಳಿ, ತಿಂಗಳ ಅಪ್​ಡೇಟ್ಸ್ ಜತೆಗೆ ಕ್ರೆಡಿಟ್ ರಿಪೋರ್ಟ್ ಪಡೆಯಬಹುದು.

ಜಾಮೀನಾಗಿ ನಿಂತ ಅಥವಾ ಜಂಟಿ ಜಾಮೀನು ಖಾತೆಯ ಸಾಲ ಮರುಪಾವತಿ ನಿರ್ಲಕ್ಷ್ಯ
ಯಾರದೇ ಸಾಲಕ್ಕೆ ನೀವು ಜಾಮೀನುದಾರರು ಅಥವಾ ಜಂಟಿ ಬಾಧ್ಯಸ್ಥರಾದಾಗ ಆ ಸಾಲವನ್ನು ಸಮಯಕ್ಕೆ ಸರಿಯಾದ ಮರುಪಾವತಿಗೆ ನೀವು ಕೂಡ ಸಮಾನವಾಗಿ ಜವಾಬ್ದಾರರಾಗಿರುತ್ತೀರಿ. ಯಾವುದೇ ತಡವಾದಾಗ ಅಥವಾ ಮರುಪಾವತಿ ಆಗದಿದ್ದಾಗ ಯಾರು ಜಾಮೀನಾಗಿ ನಿಂತಿರುತ್ತಾರೋ ಅಥವಾ ಜಂಟಿ ಬಾಧ್ಯಸ್ಥರಾಗಿರುತ್ತಾರೋ ಅವರು ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಆಗುತ್ತದೆ. ಆದ್ದರಿಂದ ನೀವು ಯಾವ ಸಾಲಕ್ಕಾದರೂ ಜಂಟಿ ಬಾಧ್ಯಸ್ಥರಾಗಿರುತ್ತೀರೋ ಅದು ಮರುಪಾವತಿ ಆಗುತ್ತಿದೆಯೇ ಎಂಬ ಬಗ್ಗೆ ಲಕ್ಷ್ಯ ಇರಲಿ.

ಕ್ರೆಡಿಟ್ ಮಿಕ್ಸ್​ನಲ್ಲಿ ಹೆಚ್ಚು ಅನ್​ಸೆಕ್ಯೂರ್ಡ್ ಲೋನ್ ಪಡೆದುಕೊಂಡಿರುವುದು
ನೀವು ಯಾವ ಪ್ರಮಾಣದಲ್ಲಿ ಸೆಕ್ಯೂರ್ಡ್ ಲೋನ್ ಹಾಗೂ ಅದ್ಯಾವ ಪ್ರಮಾಣದಲ್ಲಿ ಅನ್​ಸೆಕ್ಯೂರ್ಡ್ ಸಾಲ ಪಡೆದಿದ್ದೀರಿ ಎಂಬುದರ ಮಿಶ್ರಣವನ್ನು ಕ್ರೆಡಿಟ್ ಮಿಕ್ಸ್ ಎನ್ನಲಾಗುತ್ತದೆ. ಯಾರು ಹೆಚ್ಚಿನ ಸೆಕ್ಯೂರ್ಡ್ ಲೋನ್ (ಚಿನ್ನ, ಆಸ್ತಿ ಅಡಮಾನ, ಶ್ಯೂರಿಟಿ ಅಥವಾ ಜಾಮೀನು ನೀಡಿ ಪಡೆಯುವ ಸಾಲ) ಪಡೆಯುತ್ತಾರೋ ಅಂಥವರ ಬಗ್ಗೆ ಕ್ರೆಡಿಟ್​ ಬ್ಯೂರೋ ಹೆಚ್ಚು ಪ್ರೀತಿ ಹೊಂದಿರುತ್ತವೆ. ಹೆಚ್ಚು ಪ್ರಮಾಣದಲ್ಲಿ ಅನ್​ಸೆಕ್ಯೂರ್ಡ್ ಲೋನ್ (ಅಡಮಾನ, ಜಾಮೀನ ನೀಡದೆ ಪಡೆಯುವ ಸಾಲ) ಪಡೆದಿದ್ದಲ್ಲಿ ಅಂಥವರನ್ನು ಸಾಲ ನೀಡುವ ಸಂಸ್ಥೆಗಳು ಎಚ್ಚರಿಕೆಯಿಂದ ಗಮನಿಸುತ್ತವೆ. ಆದ್ದರಿಂದ ಸಾಧ್ಯವಾದಷ್ಟೂ ಈ ಪ್ರಮಾಣ ಆರೋಗ್ಯಕರವಾಗಿರಲಿ.

ಇದನ್ನೂ ಓದಿ: ಬ್ಯಾಂಕ್ ನಿಮಗೆ ಲೋನ್ ಕೊಡೋಕೆ ಆಗಲ್ಲ ಅಂತಾ? ಚಿಂತಿಸಬೇಡಿ ಇನ್ನೂ ಒಂದಿಷ್ಟು ದಾರಿಗಳಿವೆ

(Here are the major factors other than credit card bill payment and loan repayment influence on credit score)

Published On - 12:13 pm, Mon, 24 May 21