ಬ್ಯಾಂಕ್ ನಿಮಗೆ ಲೋನ್ ಕೊಡೋಕೆ ಆಗಲ್ಲ ಅಂತಾ? ಚಿಂತಿಸಬೇಡಿ ಇನ್ನೂ ಒಂದಿಷ್ಟು ದಾರಿಗಳಿವೆ
ನಿಮ್ಮ ಕ್ರೆಡಿಟ್ ಸ್ಕೋರ್ ಎನ್ನುವುದು ಹಲವು ಅಂಶಗಳನ್ನು ಆಧರಿಸಿರುತ್ತದೆ. ಒಂದು ವೇಳೆ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಿದ್ದರೂ ಸಾಲ ಪಡೆಯಲು ಕೆಲವು ಅವಕಾಶಗಳಿವೆ. ಅಂಥ ಸಾಧ್ಯತೆಗಳ ಮಾಹಿತಿ ಇಲ್ಲಿದೆ.
ವಾಣಿಜ್ಯ ಬ್ಯಾಂಕ್ಗಳು, ಅತಿಸಣ್ಣ ಹಣಕಾಸು ಸಂಸ್ಥೆಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಹಾಗೂ ಸಹಕಾರಿ ಬ್ಯಾಂಕ್ ಸಾಲ ನೀಡುವಾಗ ಅರ್ಜಿದಾರರ ಅರ್ಹತೆಯನ್ನು ಕ್ರೆಡಿಟ್ ಸ್ಕೋರ್ ಮೇಲೆ ಅಳೆಯುತ್ತವೆ. ವ್ಯಕ್ತಿಯೊಬ್ಬರು ಹಾಲಿ ಇರುವ ಸಾಲದ ಕಂತುಗಳು ಹಾಗೂ ಬಿಲ್ಗಳನ್ನು ಸಕಾಲಕ್ಕೆ ಪಾವತಿಸುವುದು, ಈಗಾಗಲೇ ಅವರು ಹೊಂದಿರುವ ಸಾಲಗಳು, ಒಟ್ಟು ಆದಾಯ, ಹೊಂದಿರುವ ಕ್ರೆಡಿಟ್ ಕಾರ್ಡ್ಗಳು, ಸಾಲ ಬಳಕೆ ವಿಧಾನ ಆಧರಿಸಿ ಕ್ರೆಡಿಟ್ ಸ್ಕೋರ್ ಅಳೆಯಲಾಗುತ್ತದೆ.
ಕ್ರೆಡಿಟ್ ಸ್ಕೋರ್ ತಕ್ಕಷ್ಟು ಇಲ್ಲದಿರುವವರ ಸಾಲದ ಅರ್ಜಿಗಳನ್ನು ಬ್ಯಾಂಕ್ಗಳು ತಿರಸ್ಕರಿಸುತ್ತವೆ. ಇಂಥವರು ಸಕಾಲಕ್ಕೆ ಸಾಲದ ಕಂತು ತೀರಿಸುವುದಿಲ್ಲ ಎಂದು ಬ್ಯಾಂಕ್ಗಳು ನಂಬುತ್ತವೆ. ಪಡೆದುಕೊಂಡ ಸಾಲವನ್ನು ಪ್ರಾಮಾಣಿಕವಾಗಿ ತೀರಿಸುವ ಮನಸ್ಥಿತಿಯಲ್ಲಿಯೂ ಸಮಸ್ಯೆಗಳಿವೆ ಎಂದು ಬ್ಯಾಂಕ್ಗಳು ಇಂಥವರನ್ನು ಕಾಣುವ ಅಪಾಯವಿದೆ.
ನಿಮ್ಮ ಕ್ರೆಡಿಟ್ ಸ್ಕೋರ್ ಸುಧಾರಿಸಿಕೊಳ್ಳಲು ಗಮನಕೊಡುವುದು ಎಲ್ಲಕ್ಕಿಂತ ಮುಖ್ಯ. ನಿಮ್ಮ ಕರೆಂಟ್ ಬಿಲ್, ಕ್ರೆಡಿಟ್ ಕಾರ್ಡ್ ಬಿಲ್ ಅಥವಾ ಇತರೆ ಬಾಧ್ಯತೆಗಳನ್ನು ಹೇಗೆ ನಿರ್ವಹಿಸುತ್ತಿದ್ದೀರಿ ಎಂಬುದರಿಂದ ಹಿಡಿದು ಹಲವು ಮಾನದಂಡಗಳನ್ನು ಆಧರಿಸಿ ಕ್ರೆಡಿಟ್ ಸ್ಕೋರ್ ನಿರ್ಧರಿಸಲಾಗುತ್ತದೆ. ಕೆಲ ಬಿಲ್ಗಳನ್ನು ಸಕಾಲಕ್ಕೆ ತುಂಬದಿದ್ದರೆ ನಿಮಗೆ ದಂಡದಂಥ ಹೊರೆ ಇರುವುದಿಲ್ಲ. ಆದರೆ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಾಗುವ ಅಪಾಯವಂತೂ ಇದ್ದೇ ಇರುತ್ತದೆ. ಒಂದು ವೇಳೆ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಿದ್ದರೂ ಸಾಲ ಪಡೆಯಲು ಕೆಲವು ಅವಕಾಶಗಳಿವೆ. ಅಂಥ ಸಾಧ್ಯತೆಗಳ ಮಾಹಿತಿ ಇಲ್ಲಿದೆ.
ಎನ್ಬಿಎಫ್ಸಿ ಮೂಲಕ ಸಾಲ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಿದ್ದರೆ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್ ಬದಲು ಬ್ಯಾಂಕೇಂತರ ಹಣಕಾಸು ಸಂಸ್ಥೆಗಳು (Non Banking Financial Institutions – NBFC) ಮೂಲಕ ಸಾಲ ಪಡೆಯಲು ಪ್ರಯತ್ನಿಸಬಹುದು. ಬ್ಯಾಂಕ್ಗಳಿಗೆ ಹೋಲಿಸಿದರೆ ಎನ್ಬಿಎಫ್ಸಿ ಸಂಸ್ಥೆಗಳು ಕ್ರೆಡಿಟ್ ಸ್ಕೋರ್ ವಿಚಾರದಲ್ಲಿ ತುಸು ಉದಾರವಾಗಿ ವರ್ತಿಸುತ್ತವೆ. ಕಡಿಮೆ ಕ್ರೆಡಿಟ್ ಸ್ಕೋರ್ ಇದ್ದರೂ ಸಾಲ ನೀಡಲು ಮುಂದಾಗುತ್ತವೆ. ಸಾಲಕ್ಕೆ ಸಲ್ಲಿಕೆಯಾಗುವ ಪ್ರತಿ ಅರ್ಜಿಯನ್ನೂ ಈ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸುತ್ತವೆ. ನಿಮ್ಮ ಆದಾಯ, ವಾಸ ಮಾಡುವ ಮನೆ ವಿವರ, ಕೆಲಸ ಮಾಡುವ ಸ್ಥಳ ಸೇರಿದಂತೆ ಹಲವು ಮಾಹಿತಿಗಳನ್ನು ನಿರ್ದಾಕ್ಷಿಣ್ಯವಾಗಿ ಕಲೆಹಾಕುತ್ತವೆ. ಈ ಸಂಸ್ಥೆಗಳ ಪ್ರತಿನಿಧಿಗಳು ಕೇಳುವ ಕೆಲ ಪ್ರಶ್ನೆಗಳು ನಿಮಗೆ ಇರಿಸುಮುರಿಸು ಉಂಟುಮಾಡಬಹುದು. ಮತ್ತೊಂದು ವಿಷಯ ಗಮನದಲ್ಲಿರಿಸಿಕೊಳ್ಳಿ, ಎನ್ಬಿಎಫ್ಸಿಗಳಲ್ಲಿ ಬ್ಯಾಂಕ್ಗಳಿಗಿಂತಲೂ ಸಾಲದ ಮೇಲಿನ ಬಡ್ಡಿದರ ತುಸು ಹೆಚ್ಚಾಗಿರುತ್ತದೆ.
ಅಡಮಾನ ಸಾಲ ಕ್ರೆಡಿಟ್ ಸ್ಕೋರ್ ಕಡಿಮೆಯಿದ್ದರೂ ಸಾಲ ಪಡೆಯಲು ಇರುವ ಮತ್ತೊಂದು ಅವಕಾಶ ಅಡಮಾನ ಸಾಲ. ಈ ವ್ಯವಸ್ಥೆಯಲ್ಲಿ ನಿಮ್ಮ ಚಿನ್ನ, ಮನೆ, ನಿವೇಶನ ಅಥವಾ ಯಾವುದೇ ಆಸ್ತಿಯನ್ನು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯು ಅಡಮಾನ (ಮಾರ್ಟ್ಗೇಜ್) ಇರಿಸಿಕೊಂಡು ಸಾಲ ನೀಡುತ್ತದೆ. ಗೋಲ್ಡ್ ಲೋನ್ ಬಗ್ಗೆ ನೀವು ಕೇಳಿಯೇ ಇರುತ್ತೀರಿ. ಇದು ಸಹ ಅಡಮಾನ ಸಾಲದ ಮತ್ತೊಂದು ವಿಧಾನ. ಅಡಮಾನ ಸಾಲಗಳನ್ನು ನೀಡುವಾಗ ಕ್ರೆಡಿಟ್ ಸ್ಕೋರ್ ಬಗ್ಗೆ ಹಣಕಾಸು ಸಂಸ್ಥೆಗಳು ಹೆಚ್ಚು ಗಮನ ನೀಡುವುದಿಲ್ಲ. ಅಡಮಾನವಾಗಿ ಇರಿಸುವ ಆಸ್ತಿಯ ಮೌಲ್ಯವನ್ನು ಮಾತ್ರ ಪರಿಶೀಲಿಸುತ್ತವೆ.
ಜಂಟಿ ಸಾಲ ಕಡಿಮೆ ಕ್ರೆಡಿಟ್ ಸ್ಕೋರ್ ಇರುವವರು ಉತ್ತಮ ಕ್ರೆಡಿಟ್ ಸ್ಕೋರ್ ಇರುವ ತಮ್ಮ ಸಂಗಾತಿ ಅಥವಾ ಕುಟುಂಬದ ಇತರ ಸದಸ್ಯರನ್ನು ಸಹಸಾಲಗಾರರಾಗಿ ಮಾಡಬಹುದು. ಕೆಲವೊಮ್ಮೆ ಇಂಥವರು ಜಾಮೀನುದಾರರಾಗಿ ನಿಮ್ಮ ಸಾಲದ ಅರ್ಜಿಗೆ ಸಹಿಹಾಕಿದರೂ ಸಾಲ ಸಿಗುವ, ಸಾಲದ ಮೇಲಿನ ಬಡ್ಡಿ ಕಡಿಮೆಯಾಗುವ ಸಾಧ್ಯತೆ ಹೆಚ್ಚಾಗುತ್ತದೆ.
ಕಿರು ಸಾಲ ಕಡಿಮೆ ಕ್ರೆಡಿಟ್ ಸ್ಕೋರ್ ಇರುವವರಿಗೆ ದೊಡ್ಡಮೊತ್ತದ ಸಾಲ ನೀಡಲು ಬ್ಯಾಂಕ್ಗಳು ಹಿಂಜರಿಯುತ್ತವೆ. ಇಂಥವರು ಸಾಲ ಕೇಳುವ ಮೊತ್ತವನ್ನು ಕಡಿಮೆ ಮಾಡಲು ಯತ್ನಿಸಬಹುದು. ಸಾಲ ಮರುಪಾವತಿಗೂ ಇದು ನೆರವಾಗುತ್ತದೆ. ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಸಹ ಉತ್ತಮಗೊಳ್ಳುತ್ತದೆ. ಒಮ್ಮೆ ನಿಮ್ಮ ಸಾಲಮರುಪಾವತಿ ಇತಿಹಾಸ ಉತ್ತಮಗೊಂಡರೆ ನೀವು ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಯಿಂದ ದೊಡ್ಡಮೊತ್ತದ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.
ನಿಮ್ಮ ಕ್ರೆಡಿಟ್ ಸ್ಕೋರ್ ಎನ್ನುವುದು ಹಲವು ಅಂಶಗಳನ್ನು ಆಧರಿಸಿರುತ್ತದೆ. ಯಾವುದೇ ಬಿಲ್ ಪಾವತಿಯಲ್ಲಿ ತಡವಾಗುವುದು, ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡದಿರುವುದು ಸೇರಿ ಹಲವು ಅಂಶಗಳು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್ ಇದ್ದರೆ ನಿಮ್ಮ ಸಾಲದ ಅರ್ಜಿ ಬೇಗ ಅನುಮೋದನೆಗೊಳ್ಳುತ್ತದೆ ಮಾತ್ರವಲ್ಲ ಹಣವೂ ಬೇಗ ನಿಮ್ಮ ಕೈಸೇರುತ್ತದೆ.
ಇದನ್ನೂ ಓದಿ: Tax Saving: ತೆರಿಗೆ ಉಳಿತಾಯದ 10 ಉತ್ತಮ ಯೋಜನೆಗಳು ಇಲ್ಲಿವೆ
ಇದನ್ನೂ ಓದಿ: SBI home loan: ಗೃಹ ಸಾಲ ಬಡ್ಡಿ ದರ ಹೆಚ್ಚಿಸಿದ ಎಸ್ಬಿಐನಿಂದ ಪ್ರೊಸೆಸಿಂಗ್ ಶುಲ್ಕ ಮನ್ನಾ ಕೂಡ ಇಲ್ಲ
(Loan application rejected due to low credit score Here’s how you can still get a loan)