SBI home loan: ಗೃಹ ಸಾಲ ಬಡ್ಡಿ ದರ ಹೆಚ್ಚಿಸಿದ ಎಸ್ಬಿಐನಿಂದ ಪ್ರೊಸೆಸಿಂಗ್ ಶುಲ್ಕ ಮನ್ನಾ ಕೂಡ ಇಲ್ಲ
SBI home loan: ಭಾರತದ ಅತಿ ದೊಡ್ಡ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಏಪ್ರಿಲ್ 1ರಿಂದ ಗೃಹ ಸಾಲದ ಮೇಲಿನ ಬಡ್ಡಿ ದರವನ್ನು ಹೆಚ್ಚಳ ಮಾಡಿದೆ. ಅಷ್ಟೇ ಅಲ್ಲ, ಪ್ರೊಸೆಸಿಂಗ್ ಶುಲ್ಕ ಮನ್ನಾ ಕೂಡ ಇಲ್ಲ.
ಭಾರತದ ಅತಿ ದೊಡ್ಡ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಏಪ್ರಿಲ್ 1, 2021ರಿಂದ ಅನ್ವಯ ಆಗುವಂತೆ ಗೃಹ ಸಾಲದ (ಹೋಮ್ ಲೋನ್) ಮೇಲಿನ ಬಡ್ಡಿ ದರವನ್ನು ಪರಿಷ್ಕರಣೆ ಮಾಡಿದೆ. ಈಗಿನ ಹೊಸ ದರದ ಪ್ರಕಾರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗೃಹ ಸಾಲವು ದುಬಾರಿ ಆಗಲಿದೆ. ಜತೆಗೆ ಗೃಹ ಸಾಲದ ಮೇಲಿನ ಬಡ್ಡಿ ದರವನ್ನು ಶೇ 6.70ಯಿಂದ ಶೇ 6.95ಕ್ಕೆ ಏರಿಕೆ ಮಾಡಲಾಗಿದೆ. ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ನೆಲ ಕಚ್ಚಿದ್ದ ರಿಯಲ್ ಎಸ್ಟೇಟ್ ವಲಯದಲ್ಲಿ ಬೇಡಿಕೆ ಹೆಚ್ಚಾಗಲಿ ಎಂಬ ಕಾರಣಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಈ ಹಿಂದೆ ಗೃಹ ಸಾಲದ ಮೇಲಿನ ಆರಂಭಿಕ ಬಡ್ಡಿ ದರವನ್ನು ಶೇ 6.70ಗೆ ಇಳಿಕೆ ಮಾಡಿತ್ತು.
75 ಲಕ್ಷ ರೂಪಾಯಿವರೆಗಿನ ಗೃಹ ಸಾಲಕ್ಕೆ ಆರಂಭಿಕ ಬಡ್ಡಿ ದರ ಶೇ 6.70 ಇದ್ದರೆ, 75 ಲಕ್ಷ ರೂಪಾಯಿ ಮೇಲ್ಪಟ್ಟು, ರೂ. 5 ಕೋಟಿ ತನಕದ ಗೃಹ ಸಾಲಕ್ಕೆ ಆರಂಭದ ಬಡ್ಡಿ ದರ ಶೇ 6.75 ಇತ್ತು. ಆದರೆ ಈ ಸೀಮಿತ ಅವಧಿಯ ಆಫರ್ ಈಚಿನ ತಿದ್ದುಪಡಿಯೊಂದಿಗೆ ಮಾರ್ಚ್ 31, 2021ಕ್ಕೆ ಕೊನೆಯಾಯಿತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವೆಬ್ಸೈಟ್ನ ಮಾಹಿತಿ ಆಧರಿಸಿ ಹೇಳುವುದಾದರೆ, ಗೃಹ ಸಾಲದ ಮೇಲಿನ ಹೊಸ ಪರಿಷ್ಕೃತ ದರವು ಏಪ್ರಿಲ್ 1, 2021ರಿಂದ ಅನ್ವಯ ಆಗುತ್ತದೆ. ಅದು ಶೇಕಡಾ 6.95 ಆಗಿರುತ್ತದೆ.
ದೇಶದ ಅತಿ ದೊಡ್ಡ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ನಿಂದಲೇ ಹೀಗೆ ಬಡ್ಡಿ ದರ ಹೆಚ್ಚಳ ಆದ ಮೇಲೆ ಇತರ ಹಲವು ಬ್ಯಾಂಕ್ಗಳು, ಹೌಸಿಂಗ್ ಫೈನಾನ್ಸ್ ಕಂಪೆನಿಗಳು ಸಹ ಈಗ ಗೃಹ ಸಾಲದ ಮೇಲಿನ ಬಡ್ಡಿ ದರವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಇನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಗೃಹ ಸಾಲದ ಮೇಲೆ ಪ್ರೊಸೆಸಿಂಗ್ ಶುಲ್ಕವನ್ನು ಸಹ ವಿಧಿಸಲಿದೆ. ಬ್ಯಾಂಕ್ನಿಂದ ಒದಗಿಸಿರುವ ಮಾಹಿತಿ ಅನ್ವಯ, ಒಟ್ಟು ಸಾಲದ ಮೊತ್ತದ ಮೇಲೆ ಶೇ 0.40 ಶುಲ್ಕವನ್ನು ಪ್ರೊಸೆಸಿಂಗ್ ಶುಲ್ಕವಾಗಿ ವಿಧಿಸಲಾಗುತ್ತದೆ. ಇದರ ಜತೆಗೆ ಜಿಎಸ್ಟಿಯನ್ನು ಸಹ ಪಾವತಿಸಬೇಕಾಗುತ್ತದೆ. ಹೀಗೆ ಬ್ಯಾಂಕ್ನಿಂದ ಕನಿಷ್ಠ ರೂ. 10,000 ಹಾಗೂ ಗರಿಷ್ಠ ರೂ. 30,000 ಮತ್ತು ಜಿಎಸ್ಟಿಯನ್ನು ಪ್ರೊಸೆಸಿಂಗ್ ಶುಲ್ಕವಾಗಿ ಪಾವತಿಸಬೇಕಾಗುತ್ತದೆ.
ಕಳೆದ ತಿಂಗಳು ಹಬ್ಬದ ಋತುವನ್ನು ಗಮನದಲ್ಲಿ ಇಟ್ಟುಕೊಂಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಗೃಹಸಾಲದ ಮೇಲಿನ ಪ್ರೊಸೆಸಿಂಗ್ ಶುಲ್ಕ ಮನ್ನಾವನ್ನು ಮುಂದುವರಿಸಿತ್ತು. ಗೃಹ ಸಾಲದ ಬಡ್ಡಿ ದರವು ಕಳೆದ ಹದಿನೈದು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ತಲುಪಿದ್ದರಿಂದ ಕಳೆದ ಎರಡು ತ್ರೈ ಮಾಸಿಕದಿಂದ ರಿಯಲ್ ಎಸ್ಟೇಟ್ ವಲಯದಲ್ಲಿ ಚೇತರಿಕೆ ಕಾಣಿಸಿಕೊಂಡಿತ್ತು.
ಇದನ್ನೂ ಓದಿ: Housing Loan: ಮನೆ ಕಟ್ಟಲು, ಖರೀದಿ ಮಾಡಲು ಸಾಲ ಮಾಡುವ ಮುನ್ನ ತಿಳಿಯಲೇಬೇಕಾದ ಸಂಗತಿಗಳು
(India’s leading lender State Bank Of India increased the home loan rate of interest from April 1, 2021. Processing fee waives off also taken back.)