Forbes Richest Billionaires List: ಸತತ ನಾಲ್ಕನೇ ವರ್ಷ ಫೋರ್ಬ್ಸ್ ವಾರ್ಷಿಕ ಪಟ್ಟಿಯಲ್ಲಿ ಬೆಜೋಸ್ ನಂಬರ್ 1 ಶ್ರೀಮಂತ
ಫೋರ್ಬ್ಸ್ನಿಂದ ವಿಶ್ವ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಸತತ ನಾಲ್ಕನೇ ವರ್ಷ ಜೆಫ್ ಬೆಜೋಸ್ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಮುಕೇಶ್ ಅಂಬಾನಿ ಈ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದ್ದಾರೆ.
ವಿಶ್ವದ ಅತ್ಯಂತ ಸಿರಿವಂತರ ಫೋರ್ಬ್ಸ್ನ ವಾರ್ಷಿಕ ಪಟ್ಟಿಯಲ್ಲಿ ದಾಖಲೆಯ 2,755 ಮಂದಿ ಶತಕೋಟ್ಯಧಿಪತಿಗಳು ಇದ್ದಾರೆ. ಅದರಲ್ಲಿ ಅಮೆಜಾನ್.ಕಾಮ್ ಕಂಪೆನಿಯ ಸ್ಥಾಪಕ ಜೆಫ್ ಬೆಜೋಸ್ ಸತತ ನಾಲ್ಕನೇ ವರ್ಷ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ ಎಂದು ಮಂಗಳವಾರದಂದು ಕಂಪೆನಿ ತಿಳಿಸಿದೆ. ಜಾಗತಿಕ ಮಟ್ಟದಲ್ಲಿಯೇ ಜನರ ಬದುಕು ತತ್ತರವಾಗಿರುವ ಕೊರೊನಾಪೀಡಿತ ವರ್ಷದಲ್ಲಿ ಅತ್ಯಂತ ಸಿರಿವಂತರ ಆಸ್ತಿಯಲ್ಲಿ ವಿಸ್ತರಣೆ ಆಗಿರುವುದು ಸಹ ಕಂಡುಬಂದಿದೆ.
ಈ ವರ್ಷ ಶತಕೋಟ್ಯಧಿಪತಿಗಳ ಎಲ್ಲರ ಒಟ್ಟು ಆಸ್ತಿ ಸೇರಿ 13.1 ಲಕ್ಷ ಕೋಟಿ ಅಮೆರಿಕನ್ ಡಾಲರ್ ಆಗಿದೆ. ಕಳೆದ ವರ್ಷ ಈ ಪ್ರಮಾಣ 8 ಲಕ್ಷ ಕೋಟಿ ಅಮೆರಿಕನ್ ಡಾಲರ್ ಇತ್ತು ಎಂದು ಫೋರ್ಬ್ಸ್ ಹೇಳಿದೆ. ಅತಿ ಅತಿ ಶ್ರೀಮಂತರು ಇನ್ನಷ್ಟು ಅತಿ ಅತಿ ಶ್ರೀಮಂತರಾಗಿದ್ದಾರೆ ಎಂದು ಮಾಧ್ಯಮ ಸಂದರ್ಶನವೊಂದರಲ್ಲಿ ಫೋರ್ಬ್ಸ್ ಚೀಫ್ ಕಂಟೆಂಟ್ ಆಫೀಸರ್ ತಿಳಿಸಿದ್ದಾರೆ.
ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಕಳೆದ ವರ್ಷ 31ನೇ ಸ್ಥಾನದಲ್ಲಿದ್ದ ಎಲಾನ್ ಮಸ್ಕ್ ಈ ವರ್ಷ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ. ಬರ್ನಾರ್ಡ್ ಅರ್ನಾಲ್ಟ್, ಬಿಲ್ ಗೇಟ್ಸ್, ಮಾರ್ಕ್ ಝುಕರ್ಬರ್ಗ್ ವಿಶ್ವದ ಅತಿ ಶ್ರೀಮಂತರ ಟಾಪ್ 5ರ ಪಟ್ಟಿಯೊಳಗಿದ್ದಾರೆ. ಕಳೆದ ಇಪ್ಪತ್ತು ವರ್ಷದಲ್ಲಿ ಇದೇ ಮೊದಲ ಬಾರಿಗೆ ಟಾಪ್ 5 ಶ್ರೀಮಂತರ ಪಟ್ಟಿಯಲ್ಲಿ ಹೂಡಿಕೆದಾರ ವಾರೆನ್ ಬಫೆಟ್ ಹೊರಬಿದ್ದಿದ್ದಾರೆ. ಫೋರ್ಬ್ಸ್ ಶ್ರೇಯಾಂಕದ ಪಟ್ಟಿಯಲ್ಲಿ ತಾಂತ್ರಿಕ ಕ್ಷೇತ್ರದ ಅಧಿಕಾರಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಈ ವರ್ಷ ಪಟ್ಟಿಯಲ್ಲಿ ಇರುವವರಲ್ಲಿ 493 ಮಂದಿ ಹೊಸಬರಿದ್ದಾರೆ.
ಫೋರ್ಬ್ಸ್ ವಾರ್ಷಿಕ ಪಟ್ಟಿಯಲ್ಲಿನ ಟಾಪ್ 10 ಹೆಸರು, ಆಸ್ತಿ ಮೌಲ್ಯದ ವಿವರ 1. ಜೆಫ್ ಬೆಜೋಸ್- 17,700 ಕೋಟಿ ಅಮೆರಿಕನ್ ಡಾಲರ್ 2. ಎಲಾನ್ ಮಸ್ಸ್- 15,100 ಕೋಟಿ ಅಮೆರಿಕನ್ ಡಾಲರ್ 3. ಬರ್ನಾರ್ಡ್ ಅರ್ನಾಲ್ಟ್- 15,000 ಕೋಟಿ ಅಮೆರಿಕನ್ ಡಾಲರ್ 4. ಬಿಲ್ ಗೇಟ್ಸ್- 12,400 ಕೋಟಿ ಅಮೆರಿಕನ್ ಡಾಲರ್ 5. ಮಾರ್ಕ್ ಝಕರ್ಬರ್ಗ್- 9700 ಕೋಟಿ ಅಮೆರಿಕನ್ ಡಾಲರ್ 6. ವಾರೆನ್ ಬಫೆಟ್- 9600 ಕೋಟಿ ಅಮೆರಿಕನ್ ಡಾಲರ್ 7. ಲ್ಯಾರಿ ಎಲಿಸನ್- 9300 ಕೋಟಿ ಅಮೆರಿಕನ್ ಡಾಲರ್ 8. ಲ್ಯಾರಿ ಪೇಜ್- 9150 ಕೋಟಿ ಅಮೆರಿಕನ್ ಡಾಲರ್ 9. ಸೆರ್ಗಿ ಬ್ರಿನ್- 8900 ಕೋಟಿ ಅಮೆರಿಕನ್ ಡಾಲರ್ 10. ಮುಕೇಶ್ ಅಂಬಾನಿ- 8450 ಕೋಟಿ ಅಮೆರಿಕನ್ ಡಾಲರ್
ಈ ಸಿರಿವಂತರ ಪಟ್ಟಿಯನ್ನು ತಯಾರು ಮಾಡುವುದಕ್ಕೆ ನಿವ್ವಳ ಆಸ್ತಿಯನ್ನು ಲೆಕ್ಕ ಹಾಕುವ ಸಲುವಾಗಿ ಮಾರ್ಚ್ 5, 2021ರ ಷೇರಿನ ಬೆಲೆ ಹಾಗೂ ವಿದೇಶಿ ವಿನಿಮಯ ಮೌಲ್ಯವನ್ನು ಫೋರ್ಬ್ಸ್ ಗಣನೆಗೆ ತೆಗೆದುಕೊಳ್ಳಲಾಗಿದೆ. ಅಂದಹಾಗೆ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯ ಪಟ್ಟ ಅಲಂಕರಿಸಿರುವುದು ಮುಕೇಶ್ ಅಂಬಾನಿ. ವಿಶ್ವ ಶ್ರೀಮಂತರ ಸಾಲಿನಲ್ಲಿ ಅವರಿಗೆ 10ನೇ ಸ್ಥಾನ. ಒಂದು ವರ್ಷದ ಹಿಂದೆ ಏಷ್ಯಾದ ಶ್ರೀಮಂತ ಎನಿಸಿಕೊಂಡಿದ್ದ ಜಾಕ್ ಮಾ ಅವರನ್ನು ತಮ್ಮ 8450 ಕೋಟಿ ಅಮೆರಿಕನ್ ಡಾಲರ್ ಆಸ್ತಿಯೊಂದಿಗೆ ಪಕ್ಕಕ್ಕೆ ಸರಿಸಿದ್ದಾರೆ ಮುಕೇಶ್.
ಕಳೆದ ವರ್ಷ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 17ನೇ ಸ್ಥಾನದಲ್ಲಿ ಇದ್ದ ಜಾಕ್ ಮಾ ಆಸ್ತಿಯಲ್ಲಿ 1000 ಕೋಟಿ ಅಮೆರಿಕನ್ ಡಾಲರ್ ಆಸ್ತಿ ಹೆಚ್ಚಾಗಿ, 4840 ಕೋಟಿ ಅಮೆರಿಕನ್ ಡಾಲರ್ ಮುಟ್ಟಿದರೂ ಈ ವರ್ಷ 26ಕ್ಕೆ ಕುಸಿದಿದ್ದಾರೆ. ಈ ವರ್ಷ ಅತಿ ದೊಡ್ಡ ಗಳಿಕೆ ಕಂಡಿರುವ ವ್ಯಕ್ತಿ ಚೀನಾದ ಝೋಂಗ್ ಶನ್ಷನ್. ಅವರ ಆಸ್ತಿ ಶೇಕಡಾ 3,345ರಷ್ಟು ಮೇಲೇರಿ 6890 ಕೋಟಿ ಅಮೆರಿಕನ್ ಡಾಲರ್ ತಲುಪಿದೆ. ಕಳೆದ ವರ್ಷ ಅವರ ಆಸ್ತಿ 200 ಕೋಟಿ ಅಮೆರಿಕನ್ ಡಾಲರ್ ಇತ್ತು.
ಇದನ್ನೂ ಓದಿ: ವಿಶ್ವದ ಅತ್ಯಂತ ಶ್ರೀಮಂತರನ್ನೂ ಮೀರಿಸಿದ ಗೌತಮ್ ಅದಾನಿ; ಇವರ ಮುಂದೆ ಬೆಜೋಸ್, ಮಸ್ಕ್ ಕೂಡ ಮಸುಕು
(Forbes 35th Annual World’s Billionaires List released on Tuesday. Amazon founder Jeff Bezos continued at number 1 position for consecutive 4th year.)
Published On - 6:53 pm, Tue, 6 April 21