ಪುಣೆ ಪಾಲಿಕೆ ಅಸ್ಪತ್ರೆಗಳಲ್ಲಿ ಬೆಡ್ ಕೊರತೆ, ಸೋಂಕಿತರಿಗೆ ಕುರ್ಚಿಯಲ್ಲಿ ಕೂರಿಸಿ ವೆಂಟಿಲೇಟರ್ ವ್ಯವಸ್ಥೆ!
ಪುಣೆ ಮಹಾನಗರಸಭೆ ಅಧೀನದಲ್ಲಿರುವ ಜಂಬೋ ಆಸ್ಪತ್ರೆಯಲ್ಲಿ 400 ಬೆಡ್ಗಳು ಲಭ್ಯವಿವೆ ಅದರೆ ಆಮ್ಲಜನಕ ವ್ಯವಸ್ಥೆಯಿರುವ ಒಂದು ಬೆಡ್ ಕೂಡ ಅಲ್ಲಿ ಲಭ್ಯವಿಲ್ಲ.
ಪುಣೆ: ನಗರದ ಹೊರವಲಯದಲ್ಲಿನ ನಗರ ಪೌರಾಡಳಿತ ಸ್ವಾಮ್ಯದ ವೈಸಿಎಮ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಅಕ್ಷರಶಃ ಬೆಡ್ಗಳಿಲ್ಲದಂತಾಗಿದ್ದು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಸೋಂಕಿತರಿಗೆ ಅಸ್ಪತ್ರೆಯ ಪ್ರವೇಶ ಪ್ರದೇಶದಲ್ಲಿರುವ ಕುರ್ಚಿಗಳ ಮೇಲೆ ಕುಳ್ಳಿರಿಸಿ ಆಮ್ಲಜನಕ ಒದಗಿಸಲಾಗುತ್ತಿದೆ. ವೈಸಿಎಮ್ ಆಸ್ಪತ್ರೆಯ ವಿವಿಧ ವಿಭಾಗಗಲ್ಲಿ 400 ಬೆಡ್ಗಳ ವ್ಯವಸ್ಥೆಯಿದ್ದರೂ ಶನಿವಾರದವರೆಗೆ ಒಂದೇ ಒಂದು ಬೆಡ್ ಲಭ್ಯವಿರಲಿಲ್ಲ. ಹಾಗೆಯೇ, ತೀವ್ರನಿಗಾ ಘಟಕದಲ್ಲಿನ ಎಲ್ಲ 55 ಬೆಡ್ಗಳನ್ನು ರೋಗಿಗಳಿಗೆ ನೀಡಲಾಗಿದೆ. ಹಾಗಾಗಿ, ಹಲವಾರು ರೋಗಿಗಳನ್ನು ಪ್ರವೇಶ ದ್ವಾರದ ಬಳಿಯಿರುವ ಕುರ್ಚಿಗಳ ಮೇಲೆ ಕೂರಿಸಿ ಅಮ್ಲಜನಕ ಒದಗಿಸಲಾಗುತ್ತಿದೆ.
ಸುದ್ದಿಸಂಸ್ಥೆಯೊಂದರ ಜೊತೆ ಮಾತಾಡಿದ ಆಸ್ಪತ್ರೆಯ ಡಾ. ರಾಜೇಂದ್ರ ವಾಬ್ಲೆ ಅವರು ಆಸ್ಪತ್ರೆಯಲ್ಲಿ ಒಂದೇ ಒಂದು ಬೆಡ್ ಲಭ್ಯವಿಲ್ಲದ ಕಾರಣ ಅನಿವಾರ್ಯತೆಗಳ ಮೊರೆ ಹೋಗಬೇಕಾಗಿದೆ ಎಂದು ಹೇಳಿದರು ‘ಪುಣೆ ನಗರ ಪಾಲಿಕೆ ವ್ಯಾಪ್ತಿಯ ಮತ್ತು ಹೊರಭಾಗದಿಂದ ಚಿಕಿತ್ಸೆಗಾಗಿ ಬರುತ್ತಿರುವ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದ್ದು, ರೋಗಿಗಳಿಗೆ ಬೆಡ್ ಸಿಗುತ್ತಿಲ್ಲ. ಹಾಗಾಗಿ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಪ್ರವೇಶ ದ್ವಾರದ ಬಳಿಯಿರುವ ಕುರ್ಚಿಗಳ ಮೇಲೆ ಕೂರಿಸಿ ಆಕ್ಸಿಜನ್ ಒದಗಿಸಲಾಗುತ್ತಿದೆ. ಅವರಿಗೆ ಬೆಡ್ ಸಿಗುವವರೆಗೆ ನಾವು ಹಾಗೆ ಮಾಡದೆ ವಿಧಿಯಿಲ್ಲ. ಸೋಂಕಿತನೊಬ್ಬನ ಅನಾರೋಗ್ಯದ ತೀವ್ರತೆಯನ್ನು ಆಧರಸಿ ನಾವು ಆಮ್ಲಜನಕ ಒದಗಿಸುವ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದೇವೆ. ತೀರ ಸಂಕಷ್ಟದಲ್ಲಿರುವ ಸೋಂಕಿತನಿಗೆ ನಾವು ಚಿಕಿತ್ಸೆ ಒದಗಿಸದಿರುವುದು ಸಾಧ್ಯವಿಲ್ಲ. ಅಂಥವರಿಗೆ ನಾವು ಕೂಡಲೇ ಆಕ್ಸಿಜನ್ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ. ಎಂದು ಡಾ. ವಾಬ್ಲೆ ಹೇಳಿದರು.
ಈ ಸ್ಥಿತಿ ಹೀಗೆಯೇ ಮುಂದುವರಿದರೆ, ಪೌರಾಡಳಿತ ಸ್ವಾಮ್ಯದಲ್ಲಿರುವ ನಗರದ ಇತರ ಆಸ್ಪತ್ರೆಗಳಲ್ಲಿ ಅವರಿಗೆ ಚಿಕಿತ್ಸೆ ಒದಗಿಸುವ ವ್ಯವಸ್ಥೆ ಮಾಡಲಾಗುವುದೆಂದು ಡಾ. ವಾಬ್ಲೆ ಹೇಳಿದರು. ಪುಣೆ ಮಹಾನಗರಸಭೆ ಅಧೀನದಲ್ಲಿರುವ ಜಂಬೋ ಆಸ್ಪತ್ರೆಯಲ್ಲಿ 400 ಬೆಡ್ಗಳು ಲಭ್ಯವಿವೆ ಅದರೆ ಆಮ್ಲಜನಕ ವ್ಯವಸ್ಥೆಯಿರುವ ಒಂದು ಬೆಡ್ ಕೂಡ ಅಲ್ಲಿ ಲಭ್ಯವಿಲ್ಲ. ‘ನಮ್ಮಲ್ಲಿ 400 ಬೆಡ್ಗಳಿವೆ, ಆದರೆ ಅಕ್ಸಿಜನ್ ವ್ಯವಸ್ಥೆ ಹೊಂದಿರುವ 200 ಬೆಡ್ ಮತ್ತು ಐಸಿಯುನಲ್ಲಿನ 60 ಬೆಡ್ಗಳು ರೋಗಿಗಳಿಂದ ಆಕ್ರಮಿಸಲ್ಪಟ್ಟಿವೆ. ಆದರೆ, ಹೆಚ್ ಡಿ ಯು (ಹೈ ಡಿಪೆಂಡೆನ್ಸಿ ಯುನಿಟ್) ನಲ್ಲಿ 100 ಬೆಡ್ಗಳು ಲಭ್ಯವಿವೆ’ ಎಂದು ಅಸ್ಪತ್ರೆಯ ಸಿಇಒ ಡಾ ಸಂಗ್ರಾಮ್ ಕಪಾಲೆ ಹೇಳಿದರು.
ಪ್ರತಿದಿನ ಆಸ್ಪತ್ರೆಗೆ 100 ಹೊಸ ಸೋಂಕಿತರು ದಾಖಲಾಗುತ್ತಿದ್ದಾರೆ ಎಂದು ಡಾ ಕಪಾಲೆ ಹೇಳಿದರು. ಆಸ್ಪತ್ರೆಗೆ ಬರುವ ವ್ಯಕ್ತಿಯ ಸೋಂಕಿನ ತೀವ್ರತೆ ಮೇಲೆ ದಾಖಲು ಮಾಡಿಕೊಳ್ಳುವ ನಿರ್ಧಾರವನ್ನು ನಾವು ತೆಗೆದುಕೊಳ್ಳುತ್ತಿದ್ದೇವೆ. ರೋಗಿಯಲ್ಲಿ ಗಂಬೀರವಲ್ಲದ ರೋಗಲಕ್ಷಣಗಳು ಕಾಣಿಸಿದರೆ ಮನೆಯಲ್ಲೇ ಕ್ವಾರಂಟೈನ್ ಆಗುವ ಸಲಹೆಯನ್ನು ನಾವು ನೀಡುತ್ತಿದ್ದೇವೆ. ಒಂದು ಪಕ್ಷ ಅವರಿಗೆ ವೆಂಟಿಲೇಟರ್ ಅವಶ್ಯಕತೆಯಿದೆ ಎಂದು ನಮಗೆ ಅನಿಸಿದರೆ ದಾಖಲು ಮಾಡಿಕೊಳ್ಳುತ್ತೇವೆ ಇಲ್ಲವೇ ಸೌಲಭ್ಯಗಳು ಲಭ್ಯವಿರುವ ಅಸ್ಪತ್ರೆಗೆ ರೆಫರ್ ಮಾಡುತ್ತಿದ್ದೇವೆ,’ ಎಂದು ಡಾ ಕಪಾಲೆ ಹೇಳಿದರು.
ಅಸ್ಪತ್ರೆಯ ಸಾಮರ್ಥ್ಯವನ್ನು ಹಂತಹಂತವಾಗಿ ಹೆಚ್ಚಿಸಿಲಾಗುವುದೆಂದು ವೈದ್ಯರು ಹೇಳಿದರು. ಏತನ್ಮಧ್ಯೆ, ಭಾರತದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಸಾಗಿದ್ದು ಕಳೆದ 24 ಗಂಟೆಗಳಲ್ಲಿ 96,982 ಹೊಸ ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರ, ಛತ್ತೀಸ್ಗಡ್, ಕರ್ನಾಟಕ, ಉತ್ತರ ಪ್ರದೇಶ, ತಮಿಳುನಾಡು, ದೆಹಲಿ, ಮಧ್ಯಪ್ರದೇಶ, ಹಾಗೂ ಗುಜರಾತ್ನಲ್ಲಿ ಮೊದಲಾದ ಎಂಟು ರಾಜ್ಯಗಳಲ್ಲಿ ಸಹ ಹೊಸ ಪ್ರಕರಣಗಳು ಹೆಚ್ಚಿದ್ದು ದೇಶದ ಪ್ರಕರಣಗಳ ಪೈಕಿ ಶೇಕಡಾ 80ರಷ್ಟು ಈ ರಾಜ್ಯಗಳಲ್ಲೇ ಕಂಡುಬರುತ್ತಿವೆ, ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಲಭ್ಯವಾಗಿರುವ ಮಾಹಿತಿ ತಿಳಿಸುತ್ತದೆ.
Published On - 7:35 pm, Tue, 6 April 21