Naxal Attack Mastermind Madvi Hidma: ನಕ್ಸಲ್ ದಾಳಿಯ ಮಾಸ್ಟರ್ ಮೈಂಡ್ ಮಾದ್ವಿ ಹಿದ್ಮಾ ಯಾರೀತ?
ಛತ್ತೀಸ್ಗಢದಲ್ಲಿ ನಕ್ಸಲ್ ದಾಳಿ ನಡೆದು, ಕನಿಷ್ಠ 22 ಮಂದಿ ಭದ್ರತಾ ಪಡೆಯ ಸಿಬ್ಬಂದಿ ಮೃತಪಟ್ಟರಲ್ಲಾ ಆ ದಾಳಿಯ ಮಾಸ್ಟರ್ ಮೈಂಡ್ ಮಾದ್ವಿ ಹಿದ್ಮಾ. ಆತನ ಬಗ್ಗೆ ಮಾಹಿತಿ ಈ ಲೇಖನದಲ್ಲಿ ಇದೆ.
ಆತನ ಹೆಸರು ಮಾದ್ವಿ ಹಿದ್ಮಾ. ವಯಸ್ಸು 38. ಮೊನ್ನೆ ಶನಿವಾರದಂದು (ಏಪ್ರಿಲ್ 3, 2021) ಭದ್ರತಾ ಪಡೆಗಳ ಮೇಲೆ ನಕ್ಸಲರ ದಾಳಿ ನಡೆದು, ಕನಿಷ್ಠ 22 ಸೈನಿಕರು ಹುತಾತ್ಮರಾದರಲ್ಲಾ, ಆ ದಾಳಿಯ ಮಾಸ್ಟರ್ ಮೈಂಡ್ ಇದೇ ಮಾವೋವಾದಿ ಕಮ್ಯಾಂಡರ್- ಮಾದ್ವಿ ಹಿದ್ಮಾ. ಛತ್ತೀಸ್ಗಢ ರಾಜ್ಯದ ಬಿಜಾಪುರ್- ಸುಕ್ಮಾ ಜಿಲ್ಲೆ ಗಡಿ ಭಾಗದಲ್ಲಿ ಶನಿವಾರ ನಡೆದ ಈ ಪೈಶಾಚಿಕ ದಾಳಿಯಲ್ಲಿ ಸಿಪಿಐ (ಮಾವೋವಾದಿ) ಮಿಲಿಟರಿ ಬೆಟಾಲಿಯನ್- 1 ನೇತೃತ್ವ ವಹಿಸಿದ್ದವನು ಈತನೇ. ಈ ಘಟನೆಯ ಬೆಳವಣಿಗೆ ಬಗ್ಗೆ ಮಾಹಿತಿ ಇರುವ ಭದ್ರತಾ ಅಧಿಕಾರಿಗಳ ಪ್ರಕಾರ, ಕಾಡಿನಲ್ಲಿ ಆತನ ಇರುವಿಕೆ ಬಗ್ಗೆ ಭದ್ರತಾ ಪಡೆಗಳಿಗೆ ತಪ್ಪಾದ ಗುಪ್ತಚರ ಮಾಹಿತಿ ದೊರೆಯುವಂತೆ ಮಾಡಿ, ಇಂಥದ್ದೊಂದು ಹೀನ ಕೃತ್ಯ ಎಸಗಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
“ಭದ್ರತಾ ಪಡೆಗಳಿಗೆ ಹಿದ್ಮಾ ಆಮಿಷವೊಡ್ಡಲು ಯೋಜನೆ ರೂಪಿಸಿದ್ದ. ಆದರೆ ಹದಿನೈದು ದಿನಗಳಿಂದ ಭದ್ರತಾ ಪಡೆಗಳು ಆ ಪ್ರದೇಶಕ್ಕೆ ಹೋಗಿರಲಿಲ್ಲ. ಇದರಿಂದ ಆತ ಹತಾಶನಾಗಿದ್ದ,” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇನ್ನೂ ಮುಂದುವರಿದು, “ಬಸ್ತರ್ನ ವಿವಿಧ ಭಾಗಗಳಿಂದ 300 ಸಶಸ್ತ್ರ ಕೇಡರ್ಗಳನ್ನು ಎನ್ಕೌಂಟರ್ ಸ್ಥಳದ ಬಳಿ ಕಲೆಹಾಕಿದ್ದ,” ಎಂದಿದ್ದಾರೆ. ಹಿದ್ಮಾ ಹೆಣೆದಿದ್ದ ಬಲೆಗೆ ಬಿದ್ದ ಭದ್ರತಾ ಪಡೆಯ ಸಿಬ್ಬಂದಿ ಮೇಲೆ ಶನಿವಾರದ ಮಧ್ಯಾಹ್ನದ ಹೊತ್ತಿಗೆ ನಕ್ಸಲರು ಮುಗಿಬಿದ್ದಿದ್ದಾರೆ.
ಹಿದ್ಮಾನಿಗೆ ಫಿಲಿಪೈನ್ಸ್ನಲ್ಲಿ ತರಬೇತಿ ಬಸ್ತರ್ನ ಬಹಳ ಅಪಾಯಕಾರಿ ಮಾವೋ ನಾಯಕನ ಪೈಕಿ ಒಬ್ಬ ಎಂದು ಗುರುತಿಸಿಕೊಂಡಿರುವ ಹಿದ್ಮಾ, ಮೂಲತಃ ದಕ್ಷಿಣ ಸುಕ್ಮಾದ ಪುರ್ವತಿ ಹಳ್ಳಿಯಲ್ಲಿ ಜನಿಸಿದವನು. ಆತನನ್ನು ಹಿದ್ಮಲು ಮತ್ತು ಸಂತೋಷ್ ಅಂತಲೂ ಕರೆಯಲಾಗುತ್ತದೆ. ಬಹಳ ಕ್ರೂರಿ- ಕ್ರಾಂತಿಕಾರಿ ನಾಯಕ ಎಂಬ ಹೆಸರು ಪಡೆದಿರುವ ಹಿದ್ಮಾನಿಗೆ ಈ ಪ್ರಾದೇಶಿಕ ಭಾಗದಲ್ಲಿ ನಿಷ್ಠರಾದ ಬಾತ್ಮೀದಾರರಿದ್ದಾರೆ. ಅಂದಹಾಗೆ ಬಸ್ತರ್ ಭಾಗದ ಮುರಿಯಾ ಬುಡಕಟ್ಟು ಜನಾಂಗಕ್ಕೆ ಸೇರಿದವನು ಈ ಹಿದ್ಮಾ. ಈಗಲೂ ಆತನ ಹಳ್ಳಿಯು ಪೊಲೀಸರ ವ್ಯಾಪ್ತಿಗೆ ನಿಲುಕುವಂತೆ ಇಲ್ಲ. ವರದಿಗಳ ಪ್ರಕಾರ, ಹಿದ್ಮಾನಿಗೆ ಗೆರಿಲ್ಲಾ ತರಬೇತಿ ಆಗಿರುವುದು ಫಿಲಿಪೈನ್ಸ್ನಲ್ಲಿ. ಜತೆಗೆ ಕಳೆದ ಒಂದು ದಶಕದಲ್ಲಿ ಹಲವು ದಾಳಿಗಳನ್ನು ಆತ ಸಂಘಟಿಸಿದ್ದಾನೆ ಎನ್ನಲಾಗುತ್ತದೆ.
ಬಸ್ತರಿಯಾ ಮುರಿಯಾ ಬುಡಕಟ್ಟು ಆಕ್ರಮಣಕಾರಿ ಧೋರಣೆ ಹೊಂದಿದೆ. ಹಿದ್ಮಾ ಈಗಾಗಲೇ ಅದ್ಭುತ ವ್ಯೂಹ ರಚಿಸುವಂಥವನು ಎಂಬ ಹೆಸರು ಪಡೆದಿದ್ದಾನೆ. ಜತೆಗೆ ಯಶಸ್ವು ಕಾರ್ಯನಿರ್ವಹಣೆ ಕಮ್ಯಾಂಡರ್ ಅಂತಲೂ ಗುರುತಿಸಿಕೊಂಡಿದ್ದಾನೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು. ಇನ್ನು ಹಿದ್ಮಾ ಮಾಧ್ಯಮಗಳಿಂದಲೂ ದೂರ. ಬಹಳ ವರ್ಷಗಳ ಹಿಂದೆ ಆತನನ್ನು ಭೇಟಿ ಮಾಡಿದ್ದ ಪತ್ರಕರ್ತರೊಬ್ಬರು ಹೇಳುವ ಪ್ರಕಾರ, ಆತನ ಸಮೀಪ ಸದಾ ಶಸ್ತ್ರಸಜ್ಜಿತ ಯುವಪಡೆ ಇರುತ್ತದೆ. ಅವರೆಲ್ಲ ಬಹುತೇಕ ಆತನ ಬಾಲ್ಯಸ್ನೇಹಿತರು.
ದಾಳಿಗೆ ಕಾರಣ ಏನು? ನೂರಾರು ಮಾವೋ ನಕ್ಸಲರ ಜತೆಗೂಡಿ ಹಿದ್ಮಾ ಈ ಬಾರಿ ನಡೆಸಿದ ಕ್ರೂರ ದಾಳಿಯಿಂದಾಗಿ ಭದ್ರತಾ ಪಡೆಗಳು ತಮ್ಮ ರಣತಂತ್ರವನ್ನು ಮತ್ತೊಮ್ಮೆ ಆಲೋಚಿಸುವಂತೆ ಮಾಡಿದೆ ಎಂದು ಹೆಸರು ಹೇಳಲು ಇಚ್ಛಿಸದ ಛತ್ತೀಸ್ಗಢದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮತ್ತೊಬ್ಬರು ಪೊಲೀಸ್ ಅಧಿಕಾರಿ ಹೇಳುವ ಪ್ರಕಾರ, ಸಿಲ್ಗರ್ ಹಳ್ಳಿಯಲ್ಲಿ ಭದ್ರತಾ ಕ್ಯಾಂಪ್ ತೆರೆಯಲು ಯೋಜನೆ ರೂಪಿಸಿದ್ದೇ ಈ ದಾಳಿಯ ಹಿಂದಿನ ಕಾರಣ.
ಏಕೆಂದರೆ, ಇದು ಮಾವೋವಾದಿ ನಕ್ಸಲರ ಪ್ರಮುಖ ಪ್ರದೇಶ. ಭದ್ರತಾ ಪಡೆಯ ಈ ನೆಲೆಯಿಂದ ಬಿಜಾಪುರ ಹಾಗೂ ಸುಕ್ಮಾಗೆ ಸಂಪರ್ಕ ಕಲ್ಪಿಸುವ ಮಾರ್ಗ ಕಡಿದುಹೋದಂತಾಗುತ್ತದೆ. ಇದರಿಂದ ಈ ಪ್ರದೇಶದಲ್ಲಿ ಹಿಡಿತ ಕಳೆದುಕೊಳ್ಳುವಂತಾಗುತ್ತದೆ. ಸಣ್ಣ ಪ್ರಮಾಣದಲ್ಲಿ ಇರುವ ಬುಡಕಟ್ಟು ಜನಾಂಗದ ಭೂಮಿ ಹಕ್ಕುಗಳಿಗಾಗಿ ಹೋರಾಟ ಮಾಡುವುದಾಗಿ ಹೇಳಿಕೊಳ್ಳುವ ಮಾವೋವಾದಿಗಳು 10 ರಾಜ್ಯಗಳಲ್ಲಿ ಸಕ್ರಿಯರಾಗಿದ್ದಾರೆ. ಆ ಪೈಕಿ ಛತ್ತೀಸ್ಗಢ ರಾಜ್ಯವು ಮಾವೋವಾದಿಗಳ ಪಾಲಿಗೆ ಕೊನೆಯದಾಗಿ ಉಳಿದುಕೊಂಡಿರುವ ಬಲಿಷ್ಠ ನೆಲೆಯಾಗಿದೆ.
ಇದನ್ನೂ ಓದಿ: ಚತ್ತೀಸ್ಗಡ್ನಲ್ಲಿ ನಕ್ಸಲರ ಅಟ್ಟಹಾಸ; ಗುಂಡಿನ ಚಕಮಕಿಯಲ್ಲಿ 22 ಯೋಧರು ಹುತಾತ್ಮ
(Who is Madvi Hidma, Naxal attack mastermind, which took place recently in Chattisgarh.)