ಚತ್ತೀಸ್ಗಡ್ನಲ್ಲಿ ನಕ್ಸಲರ ಅಟ್ಟಹಾಸ; ಗುಂಡಿನ ಚಕಮಕಿಯಲ್ಲಿ 22 ಯೋಧರು ಹುತಾತ್ಮ
ಹುತಾತ್ಮರಾದ 22 ಯೋಧರ ಪೈಕಿ 17 ಜನರ ಮೃತದೇಹವನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿದ್ದು, ನಿನ್ನೆ ನಾಪತ್ತೆಯಾಗಿದ್ದವರಲ್ಲಿ ಬಹುತೇಕರು ಸಾವಿಗೀಡಾಗಿರುವುದು ಈ ಮೂಲಕ ಖಚಿತವಾಗಿದೆ. ನಿನ್ನೆ ಒಟ್ಟು ಐದು ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದ್ದು, ಇಂದು ಆ ಸಂಖ್ಯೆ 22 ಕ್ಕೆ ಏರಿಕೆಯಾಗಿದೆ.
ಚತ್ತೀಸ್ಗಡ್: ಚತ್ತೀಸ್ಗಡ್ನ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಒಟ್ಟು 22 ಯೋಧರು ಹುತಾತ್ಮರಾಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಚತ್ತೀಸ್ಗಡ್ನ ಎಸ್ಪಿ ಕಶ್ಯಪ್ ಘಟನೆಯಲ್ಲಿ 22 ಯೋಧರು ಹುತಾತ್ಮರಾಗಿದ್ದು, 23 ಯೋಧರು ಬಿಜಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಗೂ 7 ಯೋಧರಿಗೆ ರಾಯಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ.
ಹುತಾತ್ಮರಾದ 22 ಯೋಧರ ಪೈಕಿ 17 ಜನರ ಮೃತದೇಹವನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿದ್ದು, ನಿನ್ನೆ ನಾಪತ್ತೆಯಾಗಿದ್ದವರಲ್ಲಿ ಬಹುತೇಕರು ಸಾವಿಗೀಡಾಗಿರುವುದು ಈ ಮೂಲಕ ಖಚಿತವಾಗಿದೆ. ನಿನ್ನೆ ಒಟ್ಟು ಐದು ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದ್ದು, ಇಂದು ಆ ಸಂಖ್ಯೆ 22 ಕ್ಕೆ ಏರಿಕೆಯಾಗಿದೆ.
ಸಿಆರ್ಪಿಎಫ್ ಯೋಧರ ಮೇಲೆ ರಾಕೆಟ್ ಲಾಂಚರ್ ಬಳಸಿ ದಾಳಿ ನಡೆಸಿದ್ದ ನಕ್ಸಲರು ಅಟ್ಟಹಾಸ ಮೆರೆದಿದ್ದು, ಘಟನೆಯಲ್ಲಿ 30ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದಾರೆ. ಅಲ್ಲದೇ, ಓರ್ವ ನಕ್ಸಲ್ ಯುವತಿ ಸಾವಿಗೀಡಾಗಿದ್ದು ಆಕೆಯ ಮೃತದೇಹವೂ ಪತ್ತೆಯಾಗಿದೆ.
ನಿನ್ನೆಯ ವರದಿಯಲ್ಲಿ ಏನಿತ್ತು? ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರ ಅಟ್ಟಹಾಸಕ್ಕೆ 5 ಮಂದಿ ಸೈನಿಕರು ಹುತಾತ್ಮರಾಗಿದ್ದು, 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಬೆಳಗ್ಗೆಯಿಂದಲೂ ರಕ್ಷಣಾ ಸಿಬ್ಬಂದಿ ಮತ್ತು ನಕ್ಸಲರ ನಡುವೆ ಎನ್ಕೌಂಟರ್ ನಡೆದಿತ್ತು. ಭದ್ರತಾ ಪಡೆಗಳ ದಾಳಿಗೆ ಇಬ್ಬರು ನಕ್ಸಲರು ಬಲಿಯಾಗಿದ್ದು, ಅದರಲ್ಲಿ ಮಹಿಳೆಯೂ ಒಬ್ಬಳಿದ್ದಾಳೆ. ಹುತಾತ್ಮರಾದ ಯೋಧರಲ್ಲಿ ಇಬ್ಬರು ಕೇಂದ್ರೀಯ ಮೀಸಲು ಪಡೆ(CRPF)ಗೆ ಸೇರಿದವರು. ಮತ್ತೆ ಮೂವರು ಜಿಲ್ಲಾ ರಿಸರ್ವ್ ಗಾರ್ಡ್ (DRG)ನವರಾಗಿದ್ದಾರೆ.
ಬಿಜಾಪುರದ ತಾರೆಮ್ನ ಸಿಲ್ಗರ್ ಅರಣ್ಯದಲ್ಲಿ ಅಡಗಿದ್ದ ನಕ್ಸಲರ ವಿರುದ್ಧ ಸಿಆರ್ಪಿಎಫ್, ಡಿಆರ್ಜಿ, ಎಸ್ಟಿಎಫ್ಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದರು. ಸುಮಾರು 400 ಸಿಬ್ಬಂದಿ ಇದ್ದ ಭದ್ರತಾ ಪಡೆಗಳ ಮೇಲೆ ನಕ್ಸಲರು ಗುಂಡಿನ ದಾಳಿ ನಡೆಸಿದ ಪರಿಣಾಮ ಐವರ ಜೀವ ಹೋಗಿದೆ ಎಂದು ಚತ್ತೀಸ್ಗಡ ಡಿಜಿಪಿ ಡಿಎಂ ಅಶ್ವಥಿ ತಿಳಿಸಿದ್ದಾರೆ. ಘಟನೆ ನಡೆಯುತ್ತಿದ್ದಂತೆ ತಾರೆಮ್ಗೆ 9 ಆಂಬುಲೆನ್ಸ್ಗಳು, ಎರಡು ಎಂಐ-17 ಹೆಲಿಕಾಪ್ಟರ್ಗಳು ತೆರಳಿವೆ.
ಇದನ್ನೂ ಓದಿ: ಚತ್ತೀಸಗಡ್ನಲ್ಲಿ ನಕ್ಸಲರ ಗುಂಡಿನ ದಾಳಿಗೆ ಐವರು ಯೋಧರು ಹುತಾತ್ಮ: ಇಬ್ಬರನ್ನು ಹೊಡೆದುರುಳಿಸಿದ ರಕ್ಷಣಾ ಪಡೆ