Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 14ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಈ ಲೇಖನದಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಕೂಡ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 14ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಂಡು, ನಿಮ್ಮ ದಿನವನ್ನು ಪ್ರಾರಂಭಿಸಿ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):
ಶಿಸ್ತಿನ ಕೆಲವು ನಿಯಮಗಳು ನಿಮ್ಮ ಮೇಲೆ ಬಲವಂತವಾಗಿ ಕೆಲವರು ಹೇರಬಹುದು. ಸಮಯ ಹಾಗೂ ಗಡುವು ಮತ್ತಿತರ ನಿಯಮಗಳ ಅನುಸಾರ ಕೆಲಸ ಮಾಡಬೇಕು ಹಾಗೂ ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕೆಲಸಕ್ಕೆ ಮುಂಚಿತವಾಗಿಯೋ ಅಥವಾ ಮುಗಿದ ಮೇಲೆ ನೀಡಬೇಕು ಅಂತ ಕಡ್ಡಾಯ ಮಾಡಬಹುದು. ನಿಮ್ಮಲ್ಲಿ ಕೆಲವರು ಸಣ್ಣದಾದರೂ ಚಿನ್ನ ಅಥವಾ ಬೆಳ್ಳಿ ಒಡವೆ ಖರೀದಿ ಮಾಡುವಂಥ ಯೋಗ ಇದೆ. ಸಣ್ಣ- ಪುಟ್ಟ ಹೊಂದಾಣಿಕೆ ಮಾಡಿಕೊಂಡು, ಕುಟುಂಬದ ಒಳಗಿನ ಕೆಲವು ಜಗಳ- ಕಲಹಗಳನ್ನು ನಿವಾರಣೆ ಮಾಡಿಕೊಳ್ಳಬೇಕು ಎಂಬ ಸನ್ನಿವೇಶ ನಿರ್ಮಾಣ ಆಗಲಿದೆ. ನೀವು ನೇರವಾಗಿ ಪಾಲ್ಗೊಳ್ಳದೇ ಇದ್ದರೂ ನಿಮ್ಮ ಸುತ್ತಮುತ್ತ ನಡೆದ ಕೆಲವು ಬೆಳವಣಿಗೆಗೆ ನೀವೇ ಕಾರಣ ಎಂಬ ಆರೋಪ ಹೊರೆಸಬಹುದು. ವಿನಾಕಾರಣವಾಗಿ ಪ್ರಯಾಣ ಮಾಡುವಂತಾಗಿ ಕೈಯಿಂದ ಬಹಳ ಹಣ ಖರ್ಚಾಗಲಿದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):
ನೀವು ಹಾಸಿಗೆ ಬಿಟ್ಟು ಎದ್ದ ಕ್ಷಣದಿಂದಲೂ ಹಲವು ವಿಷಯಗಳಿಗೆ ಧಾವಂತ ಇದ್ದೇ ಇರುತ್ತದೆ. ನಿಮ್ಮ ಸ್ನೇಹಿತರು- ಸಂಬಂಧಿಕರು ಅವರು ಸಹ ಒತ್ತಡವನ್ನು ಹಾಕುವ ಸಾಧ್ಯತೆ ಇದೆ. ಆತುರ ಎಂಬ ಕಾರಣಕ್ಕೆ ಕೆಲವು ಮುಖ್ಯ ವಿಷಯಗಳನ್ನು ಮರೆತು, ಆ ನಂತರದಲ್ಲಿ ಬೇಸರ ಪಡುವಂತೆ ಆಗಲಿದೆ. ಸ್ವಚ್ಛತೆ ಕಡೆಗೆ ಹೆಚ್ಚಿನ ಆದ್ಯತೆ ನೀಡಲಿದ್ದೀರಿ. ಕೂಡಿಟ್ಟಿದ್ದ ಹಣವನ್ನು ಇತರರಿಗೆ ನೀಡಬೇಕಾದ ಸನ್ನಿವೇಶ ಉದ್ಭವ ಆಗಬಹುದು. ಮನೆ ನಿರ್ಮಾಣ ಅಂತಲೋ ಮದುವೆ ಮಾಡಬೇಕಿದೆ ಅಂತಲೋ ಅಥವಾ ಬೇರೆ ಯಾವುದೋ ಸಮಾರಂಭ- ಕಾರ್ಯಕ್ರಮಗಳು ಆಯೋಜನೆ ಮಾಡಬೇಕು, ಅದಕ್ಕಾಗಿ ನೀವು ಓಡಾಟ ನಡೆಸಬೇಕು ಎಂದು ಸ್ನೇಹಿತರು ಅಥವಾ ಸಂಬಂಧಿಕರು ಕೇಳಿಕೊಂಡು ಬರಲಿದ್ದಾರೆ. ದೇಹದ ತೂಕ ಇಳಿಸಿಕೊಳ್ಳುವುದಕ್ಕಾಗಿ ನಿಮ್ಮಲ್ಲಿ ಕೆಲವರು ತೀರ್ಮಾನ ಮಾಡಿ, ಅದಕ್ಕೆ ಬೇಕಾದ ಆಹಾರ ಪಥ್ಯ, ವ್ಯಾಯಾಮ ಇತ್ಯಾದಿಗಳನ್ನು ಆರಂಭಿಸಲಿದ್ದೀರಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):
ನಿಮ್ಮಲ್ಲಿ ಕೆಲವರಿಗೆ ಚರ್ಮದ ಅಲರ್ಜಿ ಕಾಡಲಿದೆ. ಮೈ- ಕೈ ತುರಿಕೆ ಅಥವಾ ಚರ್ಮದ ಮೇಲೆ ಕೆಂಪು ಬಣ್ಣದ ದದ್ದುಗಳು ಏಳುವುದು ಈ ರೀತಿಯ ತೊಂದರೆಗಳು ಕಾಣಿಸಿಕೊಳ್ಳಬಹುದು. ಒಂದು ವೇಳೆ ಕಳೆದ ಕೆಲವು ದಿನದಿಂದಲೇ ಇಂಥ ಸಮಸ್ಯೆಗಳು ನಿಮಗೆ ಇದೆ ಎಂದಾದಲ್ಲಿ ತಕ್ಷಣವೇ ವೈದ್ಯರ ಬಳಿ ತೆರಳುವುದು ಉತ್ತಮ. ಇನ್ನು ಕೃಷಿಕರು ಮನೆಗೆ ಇನ್ವರ್ಟರ್/ಯುಪಿಎಸ್ ಇಂಥವು, ಅಂದರೆ ವಿದ್ಯುತ್ ಗೆ ಸಂಬಂಧಿಸಿದ ಉಪಕರಣಗಳನ್ನು ಅಳವಡಿಸಿಕೊಳ್ಳುವ ಯೋಗ ಈ ದಿನ ಇದೆ. ಈ ಹಿಂದಿನ ನಿಮ್ಮ ಪರಿಚಯ/ಪ್ರಭಾವವನ್ನು ಬಳಸಿಕೊಂಡು ಸರ್ಕಾರದಲ್ಲಿ ಆಗಬೇಕಾದ ಕೆಲಸ- ಕಾರ್ಯಗಳನ್ನು ಪೂರ್ಣಗೊಳಿಸುವುದಕ್ಕೆ ಮುಂದಾಗಲಿದ್ದೀರಿ. ಷೇರು ಮಾರುಕಟ್ಟೆಯಲ್ಲಿ ಈಗಾಗಲೇ ಹಣ ಹೂಡಿಕೆ ಮಾಡಿದ್ದೀರಿ ಅಂತಾದಲ್ಲಿ ಗಾಬರಿ ಬಿದ್ದು, ಹಣ ಹಿಂತೆಗೆದುಕೊಳ್ಳುವಂತೆ ಕೆಲವು ಬೆಳವಣಿಗೆಗಳು ಆಗಲಿವೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):
ದೇವತಾ ಆರಾಧನೆಗೆ ಈ ದಿನ ಹೆಚ್ಚಿನ ಆದ್ಯತೆ ನೀಡಲಿದ್ದೀರಿ. ಇನ್ನು ಮನೆ ದೇವರು ಅಥವಾ ಗ್ರಾಮ ದೇವತೆಗೆ ಹರಕೆ ಹೊತ್ತಿದ್ದಲ್ಲಿ ಅದನ್ನು ಪೂರ್ಣಗೊಳಿಸುವುದಕ್ಕೆ ಅಂತ ಹೆಚ್ಚು ಸಮಯ, ಹಣವನ್ನು ಮೀಸಲು ಇಡಲಿದ್ದೀರಿ. ವೈಯಕ್ತಿಕವಾಗಿ ನಿಮ್ಮ ಮೇಲೆ ಹಗೆ ಸಾಧಿಸುತ್ತಾ ಬಂದವರು, ಅದರಲ್ಲೂ ಉದ್ಯೋಗ ಸ್ಥಳದಲ್ಲಿ ನಿಮ್ಮ ಮೇಲೆ ಆರೋಪ- ದೂರುಗಳು ಹಾಗೂ ಸಮಯ ಸಿಕ್ಕಾಗಲೆಲ್ಲ ತೊಂದರೆ ಕೊಡುತ್ತಾ ಬಂದವರು ಈ ದಿನ ತಾವಾಗಿಯೇ ಸಮಸ್ಯೆಯಲ್ಲಿ ಸಿಲುಕಿಕೊಳ್ಳಲಿದ್ದಾರೆ. ನಿಮ್ಮಲ್ಲಿ ಕೆಲವರು ಡಿಸ್ಟ್ರಿಬ್ಯೂಷನ್ ಏಜೆನ್ಸಿ ತೆಗೆದುಕೊಳ್ಳುವುದಕ್ಕೆ ಹಣ ಹೊಂದಿಸುವುದಕ್ಕೆ ಪ್ರಯತ್ನಿಸಬಹುದು. ಮುಖ್ಯವಾಗಿ ಮಸಾಲೆ ಪದಾರ್ಥಗಳು, ಬಿಸ್ಕೆಟ್ ಈ ರೀತಿಯಾದದ್ದರ ವಿತರಣೆಗೆ ಪ್ರಯತ್ನಿಸುವ ಯೋಗ ಇದೆ. ಉನ್ನತ ಶಿಕ್ಷಣ ಪಡೆಯುತ್ತಾ ಇರುವವರು ಲ್ಯಾಪ್ ಟಾಪ್ ಅಥವಾ ಬೇರೆ ಯಾವುದಾದರೂ ಗ್ಯಾಜೆಟ್ ಖರೀದಿಸುವ ಆಲೋಚನೆ ಮಾಡಲಿದ್ದೀರಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):
ತೀರಾ ತಮಾಷೆಯಾಗಿ ಶುರು ಆದ ಮಾತುಕತೆಯೊಂದು ಗಂಭೀರ ಸ್ವರೂಪವನ್ನು ಪಡೆದುಕೊಳ್ಳಲಿದೆ. ಅದರಲ್ಲೂ ವಿವಾಹಿತ ಸ್ತ್ರೀಯರಾಗಿದ್ದಲ್ಲಿ ಅತ್ತೆ- ಮಾವ, ನಾದಿನಿ ಜೊತೆ ಮಾತನಾಡುವಾಗ ಬಹಳ ಎಚ್ಚರಿಕೆ ವಹಿಸಿ. ಬೇರೆಯವರ ಮನೆಯಲ್ಲಿ ಇರುವಂಥ ಪದ್ಧತಿ ಹಾಗೂ ಕ್ರಮವನ್ನು ಮೆಚ್ಚುವ ಭರದಲ್ಲಿ ಸಹಜವಾಗಿ ನೀವು ಹೇಳಿದ ವಿಷಯವನ್ನು ತಪ್ಪಾಗಿ ಅರ್ಥೈಸುವ ಸಾಧ್ಯತೆ ಇದೆ. ನರಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಾ ಇದ್ದಲ್ಲಿ ಅದರ ಫಾಲೋ ಅಪ್ ಚೆಕ್ ಅಪ್ ಸರಿಯಾಗಿ ಮಾಡಿಸಿಕೊಂಡಿದ್ದೀರಾ ಇಲ್ಲವಾ ಎಂಬುದು ಈ ದಿನ ಚರ್ಚೆಯ ವಿಷಯ ಆಗಲಿದೆ. ಸಂಗಾತಿಯ ಹಣಕಾಸು ವ್ಯವಹಾರ ನಿಮ್ಮಲ್ಲಿ ಕೆಲವರಿಗೆ ಸಂದೇಹ ಹಾಗೂ ಬೇಸರ ಉಂಟು ಮಾಡಬಹುದು. ಅದೇನು ಸಂಗತಿ ನಿಮ್ಮ ಮನಸ್ಸಿಗೆ ಬಂದರೂ ತಾಳ್ಮೆಯಿಂದ ಆಲೋಚಿಸಿದ ನಂತರವಷ್ಟೇ ತೀರ್ಮಾನಕ್ಕೆ ಬನ್ನಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):
ಬಳಕೆ ಮಾಡಿದ ವಸ್ತುಗಳು ಖರೀದಿಗಾಗಿ ಹುಡುಕುತ್ತಾ ಇದ್ದಲ್ಲಿ ನಿಮ್ಮ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಯೋಗ ನಿಮ್ಮ ಪಾಲಿಗೆ ಇದೆ. ಸಿನಿಮಾ ಅಥವಾ ರಂಗಭೂಮಿಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಟ್ಯಾಟೂ ಹಾಕುವುದನ್ನೇ ವೃತ್ತಿಯಾಗಿ ಮಾಡಿಕೊಂಡವರಿಗೆ ಆದಾಯದಲ್ಲಿ ಹೆಚ್ಚಳ ಆಗುವ ಯೋಗ ಇದೆ. ತಾಯಿಯ ಅಣ್ಣ ಅಥವಾ ತಮ್ಮನ ಜೊತೆಗೆ ಸಣ್ಣ- ಪುಟ್ಟ ವಿಚಾರಕ್ಕಾದರೂ ಭಿನ್ನಾಭಿಪ್ರಾಯ ತಲೆದೋರುವ ಸಾಧ್ಯತೆ ಇದ್ದು, ಅದರಲ್ಲೂ ಆಸ್ತಿ ವಿಚಾರ ಅಂತಾದರೆ ಮಾತು ಮುಂದುವರಿಸದಂತೆ ನೋಡಿಕೊಳ್ಳುವುದು ಮುಖ್ಯವಾಗುತ್ತದೆ. ಭಾಷಾ ಶಾಸ್ತ್ರಜ್ಞರು, ವಿಜ್ಞಾನಿಗಳು, ಕೌನ್ಸೆಲಿಂಗ್ ಮಾಡುವುದನ್ನೇ ವೃತ್ತಿಯಾಗಿ ಸ್ವೀಕರಿಸಿದವರಿಗೆ ಕೆಲಸದ ಒತ್ತಡ ಹೆಚ್ಚಾಗಿರುತ್ತದೆ. ಕೆಲ ಸಮಯ ಬೇರೆ ಊರಿಗೆ ತೆರಳಿ, ಅಲ್ಲಿ ಕೆಲಸ ಮಾಡಬೇಕಾದ ಸನ್ನಿವೇಶ ಎದುರಾಗಬಹುದು.
ಇದನ್ನೂ ಓದಿ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 9ರಿಂದ 15ರ ತನಕ ವಾರಭವಿಷ್ಯ
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):
ಬಾಯಿ ಹುಣ್ಣು, ತೀವ್ರತರವಾದ ಹಲ್ಲು ನೋವು, ಒಸಡು ಊದಿಕೊಳ್ಳುವುದು ಈ ರೀತಿಯ ಅನಾರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಅಧ್ಯಾತ್ಮ ಪ್ರವಚನಕಾರರಾಗಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ಏಕಾಗ್ರತೆಯಿಂದ ತೊಡಗಿಸಿಕೊಳ್ಳುವುದು ಕಷ್ಟ ಆಗಲಿದೆ. ನೀವು ಬಹಳ ಪ್ರೀತಿಯಿಂದ- ಅಕ್ಕರೆಯಿಂದ ನೋಡುತ್ತಿದ್ದ ವ್ಯಕ್ತಿಯೊಬ್ಬರು ಆಡಿದ ಮಾತಿನಿಂದ ಮನಸ್ಸಿಗೆ ಬಹಳ ಬೇಸರ ಆಗಲಿದೆ. ಇದೊಂದು ಸಂಗತಿಯನ್ನು ಯಾವತ್ತಿಗೂ ಚರ್ಚಿಸಬಾರದು ಎಂಬ ಷರತ್ತು ಹಾಕಿ, ನೀವು ಹಂಚಿಕೊಂಡಿದ್ದಂಥ ವಿಷಯವನ್ನು ಎಲ್ಲರೆದುರು ಮಾತನಾಡುವ ಮೂಲಕ ಆಪ್ತರೇ ಸಂಘರ್ಷವೊಂದರ ಆರಂಭಕ್ಕೆ ಕಾರಣ ಆಗಲಿದ್ದಾರೆ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ನಡೆಯುವಂಥ ಬೆಳವಣಿಗೆಯಿಂದ ಮಾನಸಿಕವಾಗಿ ಕುಗ್ಗಿ ಹೋಗುವಂತೆ ಆಗಬಹುದು. ಸಂಗಾತಿಯ ಆರೋಗ್ಯದ ವಿಚಾರಕ್ಕೆ ಈ ದಿನ ಹೆಚ್ಚಿನ ಗಮನ ನೀಡುವುದು ಮುಖ್ಯವಾಗುತ್ತದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):
ಆಮೇಲೆ ಮಾಡಿದರಾಯಿತು, ಪರಿಸ್ಥಿತಿ- ಸನ್ನಿವೇಶ ಹೇಗಾಗುತ್ತದೆ ಎಂಬುದನ್ನು ಆಲೋಚಿಸಿ, ಮುಂದುವರಿದರೆ ಆಯಿತು ಎಂದೆನ್ನುತ್ತಾ ಮುಂದಕ್ಕೆ ಹಾಕಿಕೊಂಡು ಬಂದಂಥ ಕೆಲಸಗಳು ಕುತ್ತಿಗೆಗೆ ಬಂದಂಥ ಸನ್ನಿವೇಶ ಈ ದಿನ ಎದುರಾಗಲಿದೆ. ಮನೆಯ ಯಜಮಾನಿಕೆ ಯಾರದಾಗಬೇಕು ಎಂಬ ಬಗ್ಗೆ ಚರ್ಚೆಯು ನಿಮ್ಮಲ್ಲಿ ಕೆಲವರಿಗೆ ನೆಮ್ಮದಿ ಹಾಳು ಮಾಡುವ ಮಟ್ಟಿಗೆ ಆಗಲಿದೆ. ನೀವು ಗೌರವ ತೋರಿಸುವುದನ್ನೇ ಕೆಲವರು ದುರಪಯೋಗ ಮಾಡಿಕೊಂಡು, ತುಂಬ ಸಲುಗೆ ತೆಗೆದುಕೊಂಡು ವರ್ತಿಸುತ್ತಿದ್ದಾರೆ ಎಂದು ಬಲವಾಗಿ ಅನ್ನಿಸುವುದಕ್ಕೆ ಶುರು ಆಗಲಿದೆ. ನೀವು ಕೆಲವು ವಿಚಾರಗಳನ್ನು ನಿಭಾಯಿಸಿದ ರೀತಿಗೆ ಹಾಗೂ ತೆಗೆದುಕೊಂಡ ತೀರ್ಮಾನಗಳಿಗೆ ಸ್ನೇಹಿತರು- ಸಹೋದ್ಯೋಗಿಗಳು ಮೆಚ್ಚುಗೆ ವ್ಯಕ್ತಪಡಿಸಲಿದ್ದಾರೆ. ಆಯುರ್ವೇದ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ಹೊಸ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):
ನೀವು ತೆಗೆದುಕೊಂಡ ಜವಾಬ್ದಾರಿ, ಮಾಡಿದ ಕೆಲಸಗಳಲ್ಲಿನ ಅಚ್ಚುಕಟ್ಟುತನ ಹಾಗೂ ಪರಿಶ್ರಮಕ್ಕೆ ಮೇಲಧಿಕಾರಿಗಳಿಂದ ಮೆಚ್ಚುಗೆ ದೊರೆಯಲಿದೆ. ನಿಮ್ಮಲ್ಲಿ ಕೆಲವರಿಗೆ ಬಡ್ತಿ ಅಥವಾ ವೇತನ ಹೆಚ್ಚಳ ಆಗುವಂಥ ಯೋಗ ಕಂಡು ಬರುತ್ತಿದೆ. ಕೃಷಿಕರಿಗೆ ಜಮೀನಿನಲ್ಲಿ ಹಲವು ಕೆಲಸಗಳನ್ನು ಆರಂಭ ಮಾಡುವುದಕ್ಕೆ ಹಣಕಾಸು ಹಾಗೂ ಜನರ ಬೆಂಬಲ ದೊರೆಯಲಿದೆ. ಆದಾಯದಲ್ಲಿನ ಸ್ವಲ್ಪ ಪಾಲನ್ನು ದೀರ್ಘಾವಧಿ ದೃಷ್ಟಿಯಿಂದ ಹೂಡಿಕೆ ಮಾಡುವುದಕ್ಕೆ ನಿಮ್ಮಲ್ಲಿ ಕೆಲವರು ಮುಂದಾಗಲಿದ್ದೀರಿ. ಇನ್ಷೂರೆನ್ಸ್ ಕ್ಲೇಮ್ ಗಾಗಿ ಅರ್ಜಿ ಹಾಕಿಕೊಂಡವರಿಗೆ ಸ್ವಲ್ಪ ಮಟ್ಟಿಗೆ ಅಲೆದಾಟ ಹಾಗೂ ಸಂಬಂಧಪಟ್ಟ ವ್ಯಕ್ತಿಗಳ ಜೊತೆಗಿನ ಮಾತುಕತೆಗೆ ಹೆಚ್ಚಿನ ಸಮಯ ಹೋಗಲಿದೆ. ನಿಮ್ಮಲ್ಲಿ ಕೆಲವರು ಮನಸ್ಸಿನಲ್ಲಿ ಇರುವ ಪ್ರೇಮ ನಿವೇದನೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಈ ದಿನ ಹಳದಿ ಬಣ್ಣದ ಬಳಕೆಯನ್ನು ಹೆಚ್ಚೆಚ್ಚು ಮಾಡಿದರೆ ಒಳ್ಳೆಯದು.
ಲೇಖನ- ಎನ್.ಕೆ.ಸ್ವಾತಿ




