AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 9ರಿಂದ 15ರ ತನಕ ವಾರಭವಿಷ್ಯ  

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 9ರಿಂದ 15ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 9ರಿಂದ 15ರ ತನಕ ವಾರಭವಿಷ್ಯ  
numerology weekly horoscope
ಸ್ವಾತಿ ಎನ್​ಕೆ
| Updated By: ರಮೇಶ್ ಬಿ. ಜವಳಗೇರಾ|

Updated on: Nov 08, 2025 | 1:30 AM

Share

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಕೆಲವು ತೀರ್ಮಾನ ತೆಗೆದುಕೊಳ್ಳುವುದರಲ್ಲಿ ಕಠಿಣವಾಗಿ ವರ್ತಿಸಲಿದ್ದೀರಿ. ಸ್ನೇಹಿತರು- ಸಂಬಂಧಿಗಳು ಎಂಬ ಯಾವ ಮುಲಾಜು ಸಹ ನೋಡದೆ ಎದುರಿಗೇ ಎಲ್ಲವನ್ನೂ ಹೇಳಿ ಮುಗಿಸಲಿದ್ದೀರಿ. ಡೆಡ್ ಲೈನ್ ಒಳಗಾಗಿ ಮಾಡಿ ಮುಗಿಸಬೇಕಾದ ಕೆಲಸ- ಕಾರ್ಯಗಳ ಕಡೆಗೆ ನಿಮ್ಮ ಆದ್ಯತೆ ಇರುತ್ತದೆ. ಶ್ವಾಸಕೋಶಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸೂಕ್ತ ವೈದ್ಯೋಪಚಾರಗಳು ದೊರೆಯಲಿವೆ. ನಿಮ್ಮಲ್ಲಿ ಕೆಲವರು ಸ್ನೇಹಿತರ ಬಳಿ ಸಾಲ ಮಾಡಬೇಕಾದ ಸನ್ನಿವೇಶಗಳು ಎದುರಾಗಲಿವೆ. ಹಿಂತಿರುಗಿಸುವ ಸಮಯದ ಬಗ್ಗೆ ಸ್ಪಷ್ಟತೆ ಇರಿಸಿಕೊಳ್ಳುವುದು ಉತ್ತಮ. ನಿಮ್ಮ ವರ್ತನೆ ಅಥವಾ ನೀವು ಈ ಹಿಂದೆ ಬಳಸಿದ ಪದಗಳ ಬಗ್ಗೆ ಉದ್ಯೋಗ ಸ್ಥಳದಲ್ಲಿ ಆಕ್ಷೇಪಗಳು ವ್ಯಕ್ತವಾಗಬಹುದು. ಅದರ ಬಗ್ಗೆ ನೀವು ಏನೇ ಸ್ಪಷ್ಟನೆ ನೀಡಿದರೂ ಅದನ್ನು ಕೇಳಿಸಿಕೊಳ್ಳುವ ಪರಿಸ್ಥಿತಿಯಲ್ಲಿ ನಿಮ್ಮೆದುರು ಇರುವಂಥ ವ್ಯಕ್ತಿಗಳು ಇರುವುದಿಲ್ಲ. ನಿಮ್ಮಲ್ಲಿ ಕೆಲವರು ಮನೆಯಲ್ಲಿ ಇರುವಂಥ ಹಳೇ ವಸ್ತುಗಳನ್ನು ಮಾರಾಟ ಮಾಡುವುದಕ್ಕೆ ಅಥವಾ ಹೊಸದರ ಜೊತೆಗೆ ವಿನಿಮಯ ಮಾಡಿಕೊಳ್ಳುವುದಕ್ಕೆ ಮುಂದಾಗಲಿದ್ದೀರಿ. ಕೃಷಿಕರಿಗೆ ದೃಷ್ಟಿ ದೋಷ ತಗುಲುವ ಸಾಧ್ಯತೆಗಳಿವೆ. ಹೊಸದಾಗಿ ಕಾರು ಖರೀದಿ ಮಾಡಿದವರು ಅಥವಾ ಮನೆಗೆ ದುಬಾರಿ ವಸ್ತುಗಳನ್ನು ಖರೀದಿಸಿ ತಂದಿರುವವರು, ನವ ವಿವಾಹಿತರು ಈ ಬಗ್ಗೆ ಎಚ್ಚರಿಕೆಯನ್ನು ವಹಿಸುವುದು ಒಳಿತು. ಇಷ್ಟು ಸಮಯ ನಿಮ್ಮ ಜತೆಗೆ ವ್ಯಾಜ್ಯಗಳನ್ನು ಮಾಡುತ್ತಾ ಬಂದಂಥ ಸೋದರ ಸಂಬಂಧಿಗಳು ರಾಜೀ ಮಾಡಿಕೊಳ್ಳುವ ಮಾತನ್ನು ಆರಂಭಿಸಲಿದ್ದಾರೆ. ಮೂರನೇ ವ್ಯಕ್ತಿಗಳ ಮಧ್ಯಸ್ಥಿಕೆಯಲ್ಲಿ ಅದು ಸಾಧ್ಯವೂ ಆಗಬಹುದು. ಆದರೆ ನೀವು ಮುಕ್ತ ಮನಸ್ಸಿನಿಂದ ಆಲೋಚನೆ ಮಾಡುವುದು ಮುಖ್ಯವಾಗುತ್ತದೆ. ವೃತ್ತಿನಿರತರು ನಿಮ್ಮ ವೃತ್ತಿಗೆ ಸಂಬಂಧಿಸಿದಂತೆ ಹೊಸದಾದ ಕೋರ್ಸ್ ಗೆ ಸೇರುವ ಅಥವಾ ವೃತ್ತಿಯ ವಿಸ್ತರಣೆಗೆ ಸಂಬಂಧಿಸಿದಂತೆ ವಿದೇಶಕ್ಕೆ ತೆರಳುವ ಆಲೋಚನೆಯನ್ನು ಮಾಡಲಿದ್ದೀರಿ. ಇದಕ್ಕೆ ನಿಮ್ಮ ಸ್ನೇಹಿತರ ನೆರವನ್ನು ಪಡೆಯುವ ಸಾಧ್ಯತೆಗಳಿವೆ. ಈ ಹಿಂದೆ ಕಾರ್ಯಕ್ರಮವೋ ಅಥವಾ ಸಮಾರಂಭದಲ್ಲಿ ಭೇಟಿಯಾದ ವ್ಯಕ್ತಿಯೊಬ್ಬರಿಂದ ಭವಿಷ್ಯದಲ್ಲಿ ಅನುಕೂಲ ಆಗುವಂಥ ಆರ್ಡರ್ ಗಳು ದೊರೆಯುವ ಅವಕಾಶಗಳಿವೆ. ಇನ್ನು ನಿಮ್ಮಲ್ಲಿ ಯಾರಿಗೆ ಕಾಲಿಗೆ ಸಂಬಂಧಿಸಿದ ನೋವು- ತೀವ್ರತರದ ಸಮಸ್ಯೆಗಳು ಇವೆಯೋ ಅಂಥವರು ಆಪರೇಷನ್ ಮಾಡಿಸಿಕೊಳ್ಳುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳು ತಮ್ಮ ಲ್ಯಾಪ್ ಟಾಪ್, ಡೆಸ್ಕ್ ಟಾಪ್, ಟ್ಯಾಬ್ ಲೆಟ್ ಇಂಥವುಗಳನ್ನು ಜೋಪಾನವಾಗಿ ನೋಡಿಕೊಳ್ಳುವ ಕಡೆಗೆ ಲಕ್ಷ್ಯವನ್ನು ನೀಡಬೇಕು. ಒಂದು ವೇಳೆ ನೀವು ಇತರರ ವಸ್ತುಗಳನ್ನು ಬಳಸುತ್ತೀರಿ ಅಂತಾದಲ್ಲಿ ಅದರ ಸದ್ಯದ ಸ್ಥಿತಿ ಹಾಗೂ ನೀವು ಎಂಥ ಸ್ಥಳ- ಸನ್ನಿವೇಶದಲ್ಲಿ ಆ ವಸ್ತುಗಳನ್ನು ಬಳಸುತ್ತಿದ್ದೀರಿ ಎಂಬ ಕಡೆಗೂ ಗಮನವನ್ನು ನೀಡಿದರೆ ಕ್ಷೇಮ. ಇಲ್ಲದಿದ್ದರೆ ನೀವು ಹಣ ಕಟ್ಟಿಕೊಡುವ ಪರಿಸ್ಥಿತಿ ಬರಬಹುದು. ಮಹಿಳೆಯರಿಗೆ ವಿಪರೀತ ಮರೆವಿನ ಸಮಸ್ಯೆ ಕಾಡಬಹುದು. ಆದ್ದರಿಂದ ಒಡವೆ- ವಸ್ತುಗಳೋ ಅಥವಾ ನಿಮ್ಮ ಜವಾಬ್ದಾರಿಯಲ್ಲಿ ಇರುವಂಥ ಹಣಕಾಸು- ಮುಖ್ಯವಾದ ದಾಖಲೆಪತ್ರಗಳನ್ನು ಜತನವಾಗಿ ಇಟ್ಟುಕೊಳ್ಳುವುದು ಮುಖ್ಯವಾಗುತ್ತದೆ. ಒಂದು ವೇಳೆ ನಿಮ್ಮ ಉದ್ಯೋಗದಲ್ಲಿನ ಜವಾಬ್ದಾರಿಯೇ ಅಂಥದ್ದಾಗಿದ್ದಲ್ಲಿ ಸಾಮಾನ್ಯವಾಗಿ ನೀವು ಅನುಸರಿಸುವ ಎಚ್ಚರಿಕೆ- ಮುಂಜಾಗ್ರತೆಗಿಂತ ಜಾಸ್ತಿ ನಿಗಾ ವಹಿಸಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಪ್ರೀತಿ -ಪ್ರೇಮ ವಿಚಾರಗಳು ಆದ್ಯತೆ ಪಡೆದುಕೊಳ್ಳಲಿವೆ. ನಿಮ್ಮ ಸ್ನೇಹಿತರು- ಸಂಬಂಧಿಗಳ ಅಭಿಪ್ರಾಯಕ್ಕೆ ಬಹಳ ಮಹತ್ವವನ್ನು- ಮುಖ್ಯತ್ವವನ್ನು ನೀಡಲಿದ್ದೀರಿ. ನಿಮ್ಮಲ್ಲಿ ಯಾರು ಉದ್ಯೋಗ ಸ್ಥಳದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಇದ್ದೀರಿ, ಅಂಥವರು ತುಂಬ ಅಚ್ಚುಕಟ್ಟಾಗಿ ಅವುಗಳ ನಿರ್ವಹಣೆಯನ್ನು ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ಸಮಯಕ್ಕೆ ಸರಿಯಾಗಿ ನೀವು ತೆಗೆದುಕೊಂಡ ಮುಂಜಾಗ್ರತೆ ಹಾಗೂ ಎಚ್ಚರಿಕೆಗಳಿಂದ ದೊಡ್ಡ ರೀತಿಯಲ್ಲಿ ಸಹಾಯ ಆಗಲಿದೆ. ಸ್ವಂತ ಬಸ್, ಟೆಂಪೋ ಟ್ರಾವಲರ್, ಮಿನಿ ಬಸ್ ಇಂಥದ್ದನ್ನು ಇಟ್ಟುಕೊಂಡು ಯಾರು ಆದಾಯದ ಮೂಲವಾಗಿ ಮಾಡಿಕೊಂಡಿರುತ್ತೀರೋ ಅಂಥವರಿಗೆ ಬಹಳ ಒಳ್ಳೆಯ ಅವಧಿ ಇದಾಗಲಿದೆ. ಇನ್ನು ನಿಮಗೆ ಬರಬೇಕಾದ ಬಾಕಿ ಉಳಿದುಕೊಂಡಿದ್ದಲ್ಲಿ ಅದನ್ನು ವಸೂಲಿ ಮಾಡುವುದು ಸಹ ಸಾಧ್ಯವಾಗಲಿದೆ. ನಿಮ್ಮಲ್ಲಿ ಕೆಲವರಿಗೆ ಆಹಾರ ಪಥ್ಯಕ್ಕೆ ಹೆಚ್ಚಿನ ಖರ್ಚು ಬರಲಿದೆ. ಸಾವಯವ ಆಹಾರ ಪದಾರ್ಥಗಳು, ಹಣ್ಣು- ಹಂಪಲು, ಬಾದಾಮಿ- ಗೋಡಂಬಿ, ನಟ್ಸ್ ಇಂಥವುಗಳಿಗಾಗಿ ಹೆಚ್ಚಿನ ಖರ್ಚನ್ನು ಮಾಡಲಿದ್ದೀರಿ. ಮಕ್ಕಳ ಜೊತೆಗೆ ಅವರ ವಿದ್ಯಾಭ್ಯಾಸ, ಇತ್ತೀಚೆಗೆ ಅವರ ಮಾತು- ನಡೆಯಲ್ಲಿ ಆಗಿರುವಂಥ ಬದಲಾವಣೆಗೆ ಸಂಬಂಧಿಸಿದಂತೆ ಸಣ್ಣ ಮಟ್ಟಿಗಾದರೂ ಮಾತುಕತೆ ಆಗಲಿದೆ. ಕೃಷಿಕರಿಗೆ ಸಂಘ- ಸಂಸ್ಥೆಗಳಿಂದ ಸನ್ಮಾನ- ಗೌರವಗಳು ದೊರೆಯುವ ಅವಕಾಶಗಳಿವೆ. ನಿಮ್ಮಲ್ಲಿ ಕೆಲವರು ಭೂಮಿಯನ್ನು ದೇವಸ್ಥಾನಕ್ಕೋ ಅಥವಾ ಶಾಲೆಗೋ ಬಿಟ್ಟುಕೊಡುವ ಅಥವಾ ಬಹಳ ಕಡಿಮೆ ಬೆಲೆಗೆ ಕೊಡುವ ನಿರ್ಧಾರಕ್ಕೆ ಬರಲಿದ್ದೀರಿ. ಇನ್ನು ಕೆಲವರು ಈ ಹಿಂದೆ ನಿಮ್ಮ ಕುಟುಂಬದವರು ನೀಡಿದ ಮಾತನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿಯೂ ಕೆಲವು ತೀರ್ಮಾನಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ. ವೃತ್ತಿನಿರತರಿಗೆ ಆತುರದ ಕಾರಣಕ್ಕೆ ಕೆಲವು ಅವಕಾಶಗಳು ಕೈ ತಪ್ಪಿ ಹೋಗಬಹುದು. ಇತರರ ಮೂಲಕ ನಿಮ್ಮ ಕಿವಿಗೆ ಬಿದ್ದ ಸುದ್ದಿಯನ್ನು ಕೇಳಿಸಿಕೊಂಡು ಅತ್ಯುತ್ಸಾಹವನ್ನು ತೋರಿಸಬೇಡಿ. ಯಾವುದೇ ವಿಷಯವು ಅಧಿಕೃತವಾಗಿ ನಿಮಗೆ ತಲುಪುವ ತನಕ ಸಂಭ್ರಮಾಚರಣೆಯು ಸಹ ಬೇಡ. ನಿಮಗೆ ಎಷ್ಟೇ ಆಪ್ತ ಗೆಳೆಯರೇ ಆದರೂ ತುಂಬ ಒಳ್ಳೆಯ ಹುದ್ದೆಯಲ್ಲಿ ಇರುವವರ ಜೊತೆಗೆ ಈ ವಾರ ಅತಿಯಾದ ಸಲುಗೆ ತೆಗೆದುಕೊಂಡರೆ ನಿಮಗೇ ನಷ್ಟವಾಗುವ ಸಾಧ್ಯತೆಗಳು ಇರುತ್ತವೆ. ವಿದ್ಯಾರ್ಥಿಗಳು ಪೋಷಕರಿಗೆ ಹೆಮ್ಮೆ ಮತ್ತು ಸಮಾಧಾನ ದೊರಕಿಸಿಕೊಡಲಿದ್ದಾರೆ. ಪೋಷಕರು ಏನನ್ನು ನಿರೀಕ್ಷೆ ಮಾಡುತ್ತಿರುವರೋ ಅದಕ್ಕೆ ತಕ್ಕಂತೆ ನಡೆದುಕೊಳ್ಳಲಿದ್ದೀರಿ. ಸಂಬಂಧಿಕರ ಎದುರಿಗೆ ಸಹ ನಿಮ್ಮ ಸಾಧನೆಯು ಮೆಚ್ಚುಗೆಗೆ ಪಾತ್ರವಾಗಲಿದೆ. ಮಹಿಳೆಯರಿಗೆ ಅದರಲ್ಲೂ ವಿವಾಹ ವಯಸ್ಕರಿಗೆ ಪ್ರೇಮ ಪ್ರಸ್ತಾವ ಬರಲಿದೆ. ಜೊತೆಯಲ್ಲಿಯೇ ಕೆಲಸ ಮಾಡುವಂಥವರು ಅಥವಾ ಸಂಬಂಧಿಕರ ಪೈಕಿಯ ಹುಡುಗನ ಕಡೆಯಿಂದ ಪ್ರಸ್ತಾವ ಬರುವ ಸಾಧ್ಯತೆ ಇದೆ. ಈ ವಿಚಾರವಾಗಿ ಆರಂಭದಲ್ಲಿ ನಿಮಗೆ ಗೊಂದಲ ಉಂಟಾಗಲಿದೆ. ಆದರೆ ನಿಮ್ಮ ಸ್ನೇಹಿತರ ಸಹಾಯದಿಂದ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲಿದ್ದೀರಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಕಾನೂನು-ಕಟ್ಟಳೆ ವಿಚಾರಗಳಲ್ಲಿ ಇರುಸು ಮುರುಸಾಗುವ ಸಾಧ್ಯತೆಗಳಿವೆ. ಈ ವಾರ ವಾಹನ ಚಾಲನೆ ಮಾಡುವಂಥವರು ಸಂಚಾರ ನಿಯಮ ಪಾಲನೆಯ ಕಡೆಗೆ ಹೆಚ್ಚಿನ ಲಕ್ಷ್ಯವನ್ನು ವಹಿಸುವುದು ಉತ್ತಮ. ಬ್ಯೂಟಿ ಪಾರ್ಲರ್ ನಡೆಸುತ್ತಿರುವವರು, ಸಿನಿಮಾ ರಂಗದಲ್ಲಿ ಇರುವವರು, ಲೇವಾದೇವಿ ವ್ಯವಹಾರ ಮಾಡುತ್ತಿರುವವರು, ಸೆಕೆಂಡ್ ಹ್ಯಾಂಡ್ ಕಾರುಗಳ ಖರೀದಿ- ಮಾರಾಟ ಮಾಡುತ್ತಿರುವವರಿಗೆ ಆದಾಯದಲ್ಲಿ ಏರುಪೇರಾಗಲಿದೆ. ನಿಮಗೆ ಯಾರು ಭರವಸೆ ನೀಡಿದ್ದರೋ ಅಥವಾ ಯಾರು ನಿಮಗೆ ಹಣ ನೀಡಬೇಕೋ ಅವರೇ ಸಮಸ್ಯೆಗೆ ಸಿಲುಕಿಕೊಳ್ಳುವುದರಿಂದ ಅದರ ಪರಿಣಾಮ ನಿಮ್ಮ ಮೇಲೆ ಆಗಲಿದೆ. ಒಂದು ವೇಳೆ ಅದನ್ನು ನಂಬಿಕೊಂಡು, ಬೇರೆಯವರಿಗೆ ನೀವು ಕೆಲಸವನ್ನು ವಹಿಸಿದ್ದಲ್ಲಿ ಅದರ ಹಣವನ್ನು ನೀವು ಕಟ್ಟಿಕೊಡಬೇಕಾದ ಸನ್ನಿವೇಶ ಸೃಷ್ಟಿ ಆಗಬಹುದು. ಸಾಕುಪ್ರಾಣಿಗಳಿಂದ ಅಲರ್ಜಿಯೋ ಕಡಿತವೋ ಅಥವಾ ಇನ್ಯಾವುದಾದರೂ ರೀತಿಯಲ್ಲಿ ನಿಮಗೆ ಸಮಸ್ಯೆಗಳಾಗುವ ಸಾಧ್ಯತೆಗಳು ಸಹ ಇವೆ. ಇದರ ಬಗ್ಗೆ ಕೂಡ ಹೆಚ್ಚಿನ ಗಮನವನ್ನು ನೀಡುವುದು ಮುಖ್ಯ. ಕೃಷಿಕರು ಒಂದೇ ವಿಷಯವನ್ನು ಪದೇಪದೇ ಹೇಳುವುದಕ್ಕೆ ಹೋಗಬೇಡಿ. ಇದರಿಂದ ಕುಟುಂಬ ಸದಸ್ಯರಲ್ಲಿ, ಸ್ನೇಹಿತರಲ್ಲಿ ಮನಸ್ತಾಪ, ಅಭಿಪ್ರಾಯ ಭೇದಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತದೆ. ನಿಮಗೇ ಖಾತ್ರಿಯಾಗಿ ಗೊತ್ತಾಗುವ ತನಕ ಇತರರ ಆರೋಗ್ಯ, ಹಣಕಾಸು ವಿಚಾರ ಅಥವಾ ಮದುವೆ- ಪ್ರೇಮ ಸಂಬಂಧಗಳ ಬಗ್ಗೆ ಮಾತನಾಡುವುದಕ್ಕೆ ಹೋಗಬೇಡಿ. ಇನ್ನು ಸೋಷಿಯಲ್ ಮೀಡಿಯಾ ಪೋಸ್ಟ್ ಗಳನ್ನೋ ಅಥವಾ ವಿಡಿಯೋಗಳನ್ನೋ ಹಂಚಿಕೊಳ್ಳುವುದಕ್ಕಂತೂ ಹೋಗಲೇ ಬೇಡಿ. ವೃತ್ತಿನಿರತರ ಹೊಸದಾಗಿ ಪಾರ್ಟನರ್ ಷಿಪ್ ನಲ್ಲಿ ತೊಡಗಿಕೊಳ್ಳುವ ಹಾಗೂ ಆ ಮೂಲಕವಾಗಿ ಆದಾಯ- ಲಾಭವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಆರಂಭಿಸಲಿದ್ದೀರಿ. ನಿಮ್ಮ ಕಾಂಟ್ಯಾಕ್ಟ್ ವ್ಯಾಪ್ತಿ ಹೆಚ್ಚಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ದುಬಾರಿ ಉಡುಗೊರೆಗಳನ್ನು ನೀಡುವುದಕ್ಕೆ ನಿಮ್ಮಲ್ಲಿ ಕೆಲವರು ಮುಂದಾಗಲಿದ್ದೀರಿ. ಈ ತಂತ್ರವು ಫಲ ನೀಡುವುದಕ್ಕೆ ಸಹ ಆರಂಭವಾಗಲಿದೆ. ಫೋನ್ ಪೇ, ಗೂಗಲ್ ಪೇ, ಪೇಟಿಎಂನಂಥ ವ್ಯಾಲೆಟ್ ಬಳಸುತ್ತಿರುವವರು ಪಾವತಿ ಮಾಡುವ ವೇಳೆ ಜಾಗ್ರತೆಯಿಂದ ಇರಿ. ಏಕೆಂದರೆ ಬೇರೆ ಖಾತೆಗೆ ಜಮೆ ಆಗುವ ಅಥವಾ ಮೊತ್ತದಲ್ಲಿ ಏರುಪೇರಾಗಿ ಆತಂಕಕ್ಕೆ ಕಾರಣವಾಗುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳು ಮುಖ್ಯವಾದ ವಸ್ತುಗಳನ್ನು ಅಥವಾ ದಾಖಲೆಪತ್ರಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ಸಾರ್ವಜನಿಕ ಸಾರಿಗೆಯಲ್ಲಿ ಸಂಚರಿಸುವವರಂತೂ ಸಾಮಾನ್ಯಕ್ಕಿಂತ ಹೆಚ್ಚಿನ ಲಕ್ಷ್ಯ ವಹಿಸುವುದು ಮುಖ್ಯವಾಗುತ್ತದೆ. ಇನ್ನು ಇತರರ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮುಂಚೆ ಸಾವಿರ ಸಲ ಆಲೋಚಿಸಿ. ಏಕೆಂದರೆ, ನೀವು ಅವರಿಗೆ ಸಹಾಯ ಆಗಲಿ ಎಂದು ಅಂದುಕೊಳ್ಳುವುದು ನಿಮಗೇ ಸಮಸ್ಯೆಯಾಗಿ ಮಾರ್ಪಡಬಹುದು. ಮಹಿಳೆಯರಿಗೆ ಕಿವಿ, ಮೂಗು ಹಾಗೂ ಗಂಟಲಿಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಡಬಹುದು. ಈ ವಿಚಾರವಾಗಿ ಯಾವುದೇ ಕಾರಣಕ್ಕೂ ಸ್ವಯಂ ವೈದ್ಯ ಮಾಡಿಕೊಳ್ಳುವುದಕ್ಕೆ ಹೋಗಬೇಡಿ. ಸೂಕ್ತ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳುವುದಕ್ಕೆ ಆದ್ಯತೆಯನ್ನು ನೀಡಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನೀವು ಬಹಳ ಸಮಯದಿಂದ ಅಂದುಕೊಳ್ಳುತ್ತಿದ್ದ ಕೆಲಸ- ಕಾರ್ಯಗಳನ್ನು ಮುಗಿಸುವುದಕ್ಕೆ ಸಾಧ್ಯವಾಗಲಿದೆ. ಅದರಲ್ಲೂ ಯಾರು ಫ್ರೀಲ್ಯಾನ್ಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೀರಿ ಅಂಥವರು ಶಿಸ್ತಿನಿಂದ ಕೆಲಸ- ಕಾರ್ಯಗಳನ್ನು ಮಾಡಿ ಮುಗಿಸಲಿದ್ದೀರಿ. ಸಂಬಂಧಿಗಳಿಂದ ಸಾಲವನ್ನು ಪಡೆದುಕೊಂಡಿದ್ದಲ್ಲಿ ಅದನ್ನು ವಾಪಸ್ ಮಾಡುವಂತೆ ಕೇಳಲಿದ್ದಾರೆ. ಇನ್ನು ನಿಮಗೆ ಬರಬೇಕಾದ ಟ್ಯಾಕ್ಸ್ ಫಂಡ್ ಅಥವಾ ಬೇರೆ ಯಾವುದಾದರೂ ಹಣ ಈ ವಾರ ನಿಮ್ಮ ಕೈ ಸೇರುವಂಥ ಸಾಧ್ಯತೆಗಳಿವೆ. ನೀವು ಒಂದು ಸಲ ಮಾಡಿದ ತೀರ್ಮಾನಕ್ಕೆ ಗಟ್ಟಿಯಾಗಿ ನಿಲ್ಲುವುದಕ್ಕೆ ಪ್ರಯತ್ನಿಸಿ. ಹಾಗೆ ಮಾಡುವುದು ನಿಮಗೆ ಲಾಭದಾಯಕವಾಗಿ ಪರಿಣಮಿಸಲಿದೆ. ಒಂದು ವೇಳೆ ಯಾವುದೇ ಒತ್ತಡಕ್ಕೆ ಸಿಲುಕಿ ಮನಸ್ಸು ಬದಲಾಯಿಸಿದಲ್ಲಿ ಅದು ನಿಮಗೇ ನಷ್ಟವನ್ನು ತಂದೊಡ್ಡುವ ಸಾಧ್ಯತೆಗಳಿವೆ. ನಿಮ್ಮಲ್ಲಿ ಯಾರು ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೀರಿ ಅಂಥವರಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಅಥವಾ ನೀವು ಈಗಾಗಲೇ ಕಾರ್ಯ ನಿರ್ವಹಿಸಿದ ಪ್ರಾಜೆಕ್ಟ್ ಗೆ ಪ್ರಶಸ್ತಿ, ಗೌರವ, ಸನ್ಮಾನ ಹಾಗೂ ದೊಡ್ಡ ಮೊತ್ತದ ಹಣ ದೊರೆಯುವ ಸಾಧ್ಯತೆಗಳಿವೆ. ಕೃಷಿಕರಿಗೆ ಸ್ವಾಭಿಮಾನದ ವಿಷಯವು ಪ್ರಾಧಾನ್ಯ ಪಡೆದುಕೊಳ್ಳಲಿದೆ. ಈಗಾಗಲೇ ಪೊಲೀಸ್ ಠಾಣೆ ಅಥವಾ ಕೋರ್ಟ್ ಮೆಟ್ಟಿಲೇರಿರುವ ವಿಚಾರವನ್ನು ರಾಜೀ- ಸಂಧಾನದ ಮೂಲಕವಾಗಿ ಬಗೆಹರಿಸಿಕೊಳ್ಳುವಂತೆ ನಿಮ್ಮೆದುರು ಪ್ರಸ್ತಾವ ಬಂದರೂ ಅದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ನೀವು ಇರುವುದಿಲ್ಲ. ನಿಮ್ಮನ್ನು ಹೆದರಿಸಿ, ಬೆದರಿಸಿಯಾದರೂ ನೋಡೋಣ ಎಂದು ಕೆಲವರು ಪ್ರಯತ್ನವನ್ನು ಮಾಡಲಿದ್ದಾರೆ. ಆದರೆ ನೀವು ಯಾವುದಕ್ಕೂ ಜಗ್ಗದೆ ಗಟ್ಟಿಯಾಗಿ ನಿಲ್ಲುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ಈ ವಾರ ನೀವು ಬೆಳೆದ ಕೃಷಿ ಉತ್ಪನ್ನಗಳಿಗೆ ಅತ್ಯುತ್ತಮವಾದ ಬೇಡಿಕೆ ಬಂದು, ಒಳ್ಳೆ ಬೆಲೆಯೂ ಸಿಗಲಿದೆ. ಇದರಿಂದಾಗಿ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ವೃತ್ತಿನಿರತರಿಗೆ ಹಳೇ ವಿಚಾರ- ಹಳೇ ಸಂಗತಿಗಳು ತಲೆ ನೋವಾಗಿ ಮಾರ್ಪಡಲಿದೆ. ಇನ್ನು ಅದರ ಬಗ್ಗೆ ಏನೂ ಚರ್ಚೆಯಾಗಲ್ಲ, ಆ ವಿವರಗಳು ಬೇಕಾಗುವುದಿಲ್ಲ ಎಂದುಕೊಂಡಿರುವುದು ಈಗ ಮತ್ತೆ ಬೇಕಾಗುತ್ತದೆ ಎಂಬ ಸನ್ನಿವೇಶ ಸೃಷ್ಟಿಯಾಗಲಿದೆ. ನಿಮ್ಮ ಪ್ರಭಾವ ಬಳಸಿ ಇದರಿಂದ ಹೊರಬರುವುದಕ್ಕೆ ತೀವ್ರ ಪ್ರಯತ್ನ ಮಾಡಲಿದ್ದೀರಿ. ವಿದ್ಯಾರ್ಥಿಗಳಿಗೆ ಮನೆಯ ವಾತಾವರಣದಲ್ಲಿ ಕಿರಿಕಿರಿ ಆಗಲಿದೆ. ಮೂರನೇ ವ್ಯಕ್ತಿಗಳು ನಿಮ್ಮ ಪೋಷಕರ ಬಳಿ ಹೇಳುವ ದೂರಿನ ವಿಚಾರದಿಂದ ನೆಮ್ಮದಿ ಹಾಳಾಗಬಹುದು. ಯಾರನ್ನು ಮತ್ತೆ ಭೇಟಿ ಆಗಬಾರದು, ಯಾರ ಜತೆ ಮಾತನಾಡಬಾರದು ಎಂದುಕೊಂಡಿರುತ್ತೀರೋ ಅಂಥವರೇ ಇಡೀ ವಾರ ನಿಮಗೆ ಕಿರಿಕಿರಿ ಮಾಡಲಿದ್ದಾರೆ. ಮಹಿಳೆಯರಿಗೆ ತೀರ್ಥಕ್ಷೇತ್ರ ಪ್ರವಾಸ ಮಾಡುವಂಥ ಯೋಗ ಇದೆ. ಇನ್ನು ವಿದೇಶದಲ್ಲಿ ಮಕ್ಕಳು ವ್ಯಾಸಂಗವನ್ನೋ ಅಥವಾ ಉದ್ಯೋಗವನ್ನೋ ಮಾಡುತ್ತಿದ್ದಾರೆ ಎಂದಾದಲ್ಲಿ ಅವರನ್ನು ಭೇಟಿ ಆಗುವ ಸಲುವಾಗಿ ತೆರಳುವ ಸಾಧ್ಯತೆಗಳಿವೆ. ನಿಮ್ಮಲ್ಲಿ ಕೆಲವರಿಗೆ ಸಂಘ- ಸಂಸ್ಥೆಗಳಲ್ಲಿ ಹುದ್ದೆ ದೊರೆಯುವ, ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳುವ ಯೋಗ ಇದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಯಾವುದಾದರೂ ಕೆಲಸ ನಿಮ್ಮಿಂದ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಯಾರಾದರೂ ಸವಾಲು ಹಾಕಿದಲ್ಲಿ ಅವರೊಂದಿಗೆ ಪಂಥಕ್ಕೆ ಇಳಿಯುವುದಕ್ಕೆ ಹೋಗಬೇಡಿ. ಇಂಥದ್ದೊಂದು ಸನ್ನಿವೇಶ ಈ ವಾರ ಎದುರಾಗಲಿದ್ದು, ಇದರಿಂದ ನಿಮ್ಮದೇ ಸಮಯ, ನೆಮ್ಮದಿ ಹಾಳಾಗುತ್ತದೆ ವಿನಾ ಬೇರೆ ಯಾವುದೇ ರೀತಿಯಲ್ಲೂ ಪ್ರಯೋಜನ ಆಗದು. ನಿಮ್ಮಲ್ಲಿ ಕೆಲವರಿಗೆ ತೀವ್ರತರವಾದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು. ಹುಲುಕಡ್ಡಿ, ದದ್ದು, ಕಜ್ಜಿ, ವಿಪರೀತ ನವೆ- ಕೆರೆತದಿಂದ ಗಾಯವಾಗುವುದು ಈ ರೀತಿಯ ಸಮಸ್ಯೆಗಳು ಕಾಡಬಹುದು. ಇಂಥದ್ದೊಂದು ಸಮಸ್ಯೆ ಕಾಣಿಸಿಕೊಂಡಲ್ಲಿ ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪಡೆಯುವುದಕ್ಕೆ ಆದ್ಯತೆಯನ್ನು ನೀಡಿ. ನೀವೇನಾದರೂ ಹೊಸದಾಗಿ ವ್ಯಾಪಾರ- ವ್ಯವಹಾರ ಶುರು ಮಾಡಬೇಕು ಎಂದುಕೊಂಡು ಪ್ರಾಜೆಕ್ಟ್ ಹಾಕಿಕೊಂಡು ಹಾಗೂ ಅದಕ್ಕೆ ಸಂಬಂಧಿಸಿದ ಖರ್ಚು- ವೆಚ್ಚದ ವಿವರ ಹಾಕಿಕೊಂಡಿದ್ದೀರಿ ಅಂತಾದಲ್ಲಿ ಅಲ್ಲಿಂದ ಮುಂದಕ್ಕೆ ಅಗತ್ಯವಿರುವ ಬೆಳವಣಿಗೆಗಳು ಆಗಲಿವೆ. ರಾಜಕಾರಣದಲ್ಲಿ ಇರುವಂಥವರಿಗೆ ಬಹಳ ಒತ್ತಡದ ಸಮಯ ಇದಾಗಿರುತ್ತದೆ. ಕಣ್ಣಳತೆಯಲ್ಲೇ ಇರುವಂಥ ಅವಕಾಶ ಸ್ವಲ್ಪದರಲ್ಲಿಯೇ ತಪ್ಪಿಹೋಗುವ ಸಾಧ್ಯತೆಗಳಿವೆ. ಫೋನ್ ನಲ್ಲಿ ಇನ್ನೊಬ್ಬರ ಜತೆ ಮಾತನಾಡುವಾಗ- ಸಾರ್ವಜನಿಕ ಸಮಾರಂಭದಲ್ಲಿ ಇರುವಾಗ ಮಾತಿನ ಮೇಲೆ ಹಿಡಿತ ಇರಲಿ. ಕೃಷಿಕರು ಹೈನುಗಾರಿಕೆಯಲ್ಲಿ ಇರುವವರಿಗೆ, ಹೂವಿನ ಬೆಳೆ ಬೆಳೆದು, ಅದನ್ನು ಆದಾಯದ ಮೂಲವಾಗಿ ಇರಿಸಿಕೊಂಡವರಿಗೆ ಒಳ್ಳೆಯ ಸಮಯ ಇದಾಗಲಿದೆ. ದೀರ್ಘಾವಧಿಗೆ ಆರ್ಡರ್ ಗಳು ನಿಮಗೆ ಬರಬಹುದು. ಸಾಗಾಣಿಕೆ ವೆಚ್ಚ ಸೇರಿದಂತೆ ಇತರ ಖರ್ಚುಗಳು ಉಳಿದು, ಲಾಭದಲ್ಲಿ ಹೆಚ್ಚಳವಾಗುವ ಯೋಗ ನಿಮ್ಮ ಪಾಲಿಗೆ ಇದೆ. ಇದೇ ಮೊದಲ ಬಾರಿಗೆ ಎಂದು ನೀವು ಮಾಡಿದಂಥ ಪ್ರಯತ್ನಗಳಲ್ಲಿ ಒಳ್ಳೆ ಯಶಸ್ಸು ದೊರೆಯಲಿದೆ. ವೃತ್ತಿನಿರತರಿಗೆ ಯಶಸ್ಸಿನ ಗ್ರಾಫ್ ಮೇಲೇರುವ ಕಾಲ ಇದಾಗಿರುತ್ತದೆ. ಹೊಸ ಕಚೇರಿ ಆರಂಭ, ಹೊಸದಾಗಿ ಪಾರ್ಟನರ್ ಷಿಪ್ ಆಗುವುದು, ಈಗಿರುವ ಸೇವೆಗಳ ಜೊತೆಗೆ ಇನ್ನಷ್ಟು ಸೇವೆಗಳನ್ನು ಹೊಸದಾಗಿ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಆದಾಯ- ಲಾಭದಲ್ಲಿ ಹೆಚ್ಚಳ ಇವೇ ಮೊದಲಾದ ಶುಭ ಫಲಗಳನ್ನು ಕಾಣಲಿದ್ದೀರಿ. ವಿದ್ಯಾರ್ಥಿಗಳಿಗೆ ಮೈಗ್ರೇನ್ ಸಮಸ್ಯೆ ಬಹಳ ಕಾಡಬಹುದು. ಅದೇ ರೀತಿ ನಿಮ್ಮಲ್ಲಿ ಯಾರು ಈಗಾಗಲೇ ಕಣ್ಣಿನ ಸಮಸ್ಯೆಗಾಗಿ ಕನ್ನಡಕ ಬಳಸುತ್ತಿದ್ದೀರಿ ಅಂಥವರಿಗೆ ಪವರ್ ತೊಂದರೆ ಜಾಸ್ತಿ ಆಗಿದೆ ಎಂಬುದು ಗಮನಕ್ಕೆ ಬರಬಹುದು. ಜಂಕ್ ಫುಡ್ ಹಾಗೂ ಕೂಲ್ ಡ್ರಿಂಕ್ಸ್ ಗಳಲ್ಲಿ ಕಾರ್ಬೊನೇಟೆಡ್ ವಾಟರ್ ಹೆಚ್ಚು ಸೇವನೆ ಮಾಡುವವರು ಅಭ್ಯಾಸ ನಿಯಂತ್ರಿಸದಿದ್ದರೆ ಅದರಿಂದಲೂ ತೊಂದರೆ ಕಾಣಿಸಿಕೊಳ್ಳಲಿದೆ. ಮಹಿಳೆಯರಿಗೆ ನೀವು ಯಾರನ್ನು ಬಹಳ ನಂಬಿರುತ್ತೀರೋ ಹಾಗೂ ವಿಶ್ವಾಸಕ್ಕೆ ತೆಗೆದುಕೊಂಡಿರುತ್ತೀರೋ ಅಂಥವರೇ ನಿಮ್ಮ ವಿರುದ್ಧ ಇತರರನ್ನು ಎತ್ತಿಕಟ್ಟುತ್ತಿದ್ದಾರೆ ಎಂಬ ಸಂಗತಿ ತಿಳಿದು ಬರಲಿದೆ. ಹಣಕಾಸಿನ ವಿಚಾರದಲ್ಲಿ ನಿಮ್ಮ ಸೋದರ ಸಂಬಂಧಿಗಳ ಜೊತೆಗೆ ಜಗಳ- ಕಲಹಗಳು ಆಗುವ ಸಾಧ್ಯತೆಗಳಿವೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ನಿಮ್ಮ ಜೀವನದಲ್ಲಿ ಆಗುವ ಬದಲಾವಣೆಗಳಿಗೆ ಹೊಂದಾಣಿಕೆ ಆಗುವುದು ಬಹಳ ಮುಖ್ಯವಾಗುತ್ತದೆ. ಹೊಸ ಸ್ಥಳ, ಹೊಸ ಉದ್ಯೋಗ, ಹೊಸ ವ್ಯಾಪಾರ, ಹೊಸ ವ್ಯವಹಾರ ಹೀಗೆ ಏನು ಬೇಕಾದರೂ ಹೊಸದು ಈ ವಾರದಲ್ಲಿ ಆಗಬಹುದು ಅಥವಾ ಈಗಾಗಲೇ ಆಗಿರಬಹುದು. ಕೇವಲ ಹಣಕಾಸಿನ ಆಧಾರದಲ್ಲಿಯೇ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಹೋಗಬೇಡಿ. ಇನ್ನು ಇತರರ ಜವಾಬ್ದಾರಿಯನ್ನು ನಿಮ್ಮ ಮೇಲೆ ಹಾಕಿಕೊಳ್ಳದಿರುವುದು ಕ್ಷೇಮ. ನಿಮ್ಮಲ್ಲಿ ಯಾರು ಹೋಟೆಲ್ ಅಥವಾ ಮನೆಯ ಹೊರಗಿನ ಆಹಾರ ಪದಾರ್ಥಗಳನ್ನು ನಿರಂತರವಾಗಿ ಸೇವಿಸುತ್ತಾ ಇದ್ದೀರೋ ಅಂಥವರಿಗೆ ಹೊಟ್ಟೆಗೆ ಸಂಬಂಧಿಸಿದಂತೆ ತೀವ್ರತರವಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇನ್ನು ಮತ್ತೆ ಕೆಲವರಿಗೆ ಕಿಡ್ನಿ ಸ್ಟೋನ್ ಆಗಿದೆ ಎಂದು ಕಂಡುಬರಬಹುದು. ಆದ್ದರಿಂದ ಇಂಥ ಯಾವುದೇ ಸಮಸ್ಯೆಯ ಲಕ್ಷಣಗಳು ಕಂಡುಬಂದಲ್ಲಿ ನಿರ್ಲಕ್ಷ್ಯ ಮಾಡದಂತೆ ಕೂಡಲೇ ಎಚ್ಚೆತ್ತುಕೊಳ್ಳುವುದು ಉತ್ತಮ. ನಿಮ್ಮಲ್ಲಿ ಯಾರು ಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವಿರೋ ಅಂಥವರನ್ನು ಹೆದರಿಸಿ- ಬೆದರಿಸಿ ಕೆಲಸ ಮಾಡಿಸಿಕೊಳ್ಳುವುದಕ್ಕೆ ಕೆಲವರು ಪ್ರಯತ್ನ ಮಾಡಲಿದ್ದಾರೆ. ಕೃಷಿಕರು ನಿಮ್ಮ ಮನೆಯಲ್ಲಿ ಶುಭ ಕಾರ್ಯಗಳನ್ನು ನೆರವೇರಿಸಲು ಹಣಕಾಸು ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಗಮನ ನೀಡಬೇಕಾಗುತ್ತದೆ. ಸ್ವಲ್ಪ ಸಮಯಕ್ಕಾಗಿ ಹಣಕಾಸು ಹೊಂದಾಣಿಕೆ ಮಾಡಬೇಕಿದೆ ಎಂದು ಕೆಲವರು ನಿಮ್ಮ ಬಳಿ ಸಹಾಯವನ್ನು ಕೇಳಿಕೊಂಡು ಬರುವ ಸಾಧ್ಯತೆ ಇದೆ. ನಿಮ್ಮಲ್ಲಿ ಕೆಲವರು ನಿಮ್ಮದೇ ಒಡವೆ ಅಥವಾ ಆಸ್ತಿ ಪತ್ರವನ್ನು ಅಡವಿಟ್ಟು ಸಾಲ ಕೊಡಿಸುವುದಕ್ಕೆ ಸಹ ಮುಂದಾಗಬಹುದು. ಇನ್ನು ನಿಮಗೆ ಪೂರ್ತಿ ಮಾಹಿತಿ ಇಲ್ಲದ ವಿಚಾರದ ಬಗ್ಗೆ ಯಾರ ಬಳಿಯೂ ಚರ್ಚೆ ಮಾಡುವುದಕ್ಕೆ ಹೋಗಬೇಡಿ. ಇದರಿಂದ ಸ್ನೇಹ- ಸಂಬಂಧಗಳು ಹಾಳಾಗಬಹುದು, ಎಚ್ಚರ. ವೃತ್ತಿನಿರತರಿಗೆ ಬ್ಯಾಂಕ್ ವ್ಯವಹಾರಗಳಿಗೆ ವಿಪರೀತ ಓಡಾಟ ಆಗಲಿದೆ. ನಿಮ್ಮದಲ್ಲದ ಕೆಲಸಗಳಿಗೂ ನೀವು ತಲೆ ಕೊಡುವಂತೆ ಆಗಲಿದೆ. ಇದನ್ನು ಬಾಯಿ ಬಿಟ್ಟು ಹೇಳಿದಲ್ಲಿ ನೀವು ಜವಾಬ್ದಾರಿಯನ್ನು ಬೇರೆಯವರ ಹೆಗಲಿಗೆ ಆನಿಸುತ್ತಿದ್ದೀರಿ ಎಂಬ ಆರೋಪವನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ನಿಮ್ಮ ಬಳಿ ಇರುವ ಗ್ಯಾಜೆಟ್ ಗಳಲ್ಲಿ ಸೇವ್ ಮಾಡಿಟ್ಟುಕೊಂಡಿರುವಂಥ ದಾಖಲೆಗಳು ಇದ್ದಲ್ಲಿ ಅವುಗಳನ್ನು ಜೋಪಾನವಾಗಿ ಇಟ್ಟುಕೊಳ್ಳುವ ಕಡೆಗೆ ಗಮನವನ್ನು ನೀಡಿ. ಅದರಲ್ಲೂ ಲಾಗಿನ್ ಐಡಿ- ಪಾಸ್ ವರ್ಡ್ ಇಂಥವುಗಳ ಬಗ್ಗೆ ಹೆಚ್ಚಿನ ಲಕ್ಷ್ಯವಿರಲಿ. ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೆಚ್ಚೆಚ್ಚು ಪಾಲ್ಗೊಳ್ಳುವ ಯೋಗ ಇದೆ. ಮತ್ತೆ ಕೆಲವರಿಗೆ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಅಥವಾ ಅದರಲ್ಲಿ ಭಾಗೀ ಆಗುವುದಕ್ಕೆ ಸಿದ್ಧತೆ ನಡೆಸಬೇಕಾಗುವುದಕ್ಕೆ ಹೆಚ್ಚಿನ ಸಮಯ ಮೀಸಲಿಡಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ನಿಮಗಿಂತ ಹಿರಿಯರ ಬಗ್ಗೆ ಹಗುರವಾಗಿ ಮಾತನಾಡುವುದಕ್ಕೆ ಹೋಗಬೇಡಿ. ನೀವು ಯಾರ ಬಳಿ ಅಂಥ ಮಾತನಾಡಿರುತ್ತೀರೋ ಅವರೇ ನಿಮ್ಮ ಬಗ್ಗೆ ಚಾಡಿ ಹೇಳುವ ಸಾಧ್ಯತೆಗಳಿವೆ. ಮಹಿಳೆಯರು ನೀವು ಅಡುಗೆ ಮಾಡುವ ವೇಳೆ ಬಳಸುವಂಥ ಪದಾರ್ಥಗಳ ಬಗ್ಗೆ ಹೆಚ್ಚಿನ ಗಮನವನ್ನು ನೀಡಿ. ಇಲ್ಲದಿದ್ದರೆ ಆಹಾರದಲ್ಲಿ ಏರುಪೇರಾಗಿ ನಿಮ್ಮನ್ನೂ ಸೇರಿದಂತೆ ಕುಟುಂಬ ಸದಸ್ಯರಿಗೆ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಇನ್ನು ಮನೆಯಲ್ಲಿನ ಸ್ವಚ್ಛತೆ ಕಡೆಗೂ ನೀರು ಶುದ್ಧವಾಗಿದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳುವ ಕಡೆಗೂ ಲಕ್ಷ್ಯ ನೀಡಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಉದ್ಯೋಗ ಬದಲಾವಣೆ ಮಾಡಬೇಕು ಎಂದು ಪ್ರಯತ್ನ ಮಾಡುತ್ತಿರುವವರಿಗೆ ಸೂಕ್ತ ಅವಕಾಶಗಳು ಹುಡುಕಿಕೊಂಡು ಬರಲಿವೆ. ತರಕಾರಿ- ಹಣ್ಣು ಬೆಳೆದು, ಅದನ್ನು ಮಾರಾಟ ಮಾಡುವ ಮೂಲಕ ಆದಾಯದ ಮೂಲ ಮಾಡಿಕೊಂಡಿರುವವರಿಗೆ ಅದನ್ನು ಹೆಚ್ಚು ಮಾಡಿಕೊಳ್ಳುವುದಕ್ಕೆ ಅವಕಾಶಗಳು ದೊರೆಯಲಿವೆ. ನಿಮ್ಮಲ್ಲಿ ಯಾರು ಸೈಟ್ ಖರೀದಿಗಾಗಿ ಪ್ರಯತ್ನವನ್ನು ಮಾಡುತ್ತಿದ್ದೀರಿ ಅಂಥವರಿಗೆ ಮನಸ್ಸಿಗೆ ಒಪ್ಪುವಂಥ ಸ್ಥಳ ದೊರೆಯುವ ಸಾಧ್ಯತೆಗಳು ಹೆಚ್ಚಿವೆ. ಮನೆಗೆ ದೇವರ ಪೂಜಾ ಸಾಮಗ್ರಿಗಳನ್ನು ಅಥವಾ ದೊಡ್ಡ ಅಳತೆಯ ದೇವರ ಚಿತ್ರಗಳನ್ನು ಖರೀದಿಸಿ ತರುವ ಯೋಗ ನಿಮ್ಮ ಪಾಲಿಗೆ ಇದೆ. ಈ ವಾರವಿಡೀ ನಿಮ್ಮ ದೈನಂದಿನ ಕೆಲಸ- ಕಾರ್ಯಗಳಲ್ಲಿ ಯಾವುದೇ ಏರುಪೇರಾಗದಂತೆ ಎಚ್ಚರಿಕೆಯನ್ನು ವಹಿಸಿ. ಏಕೆಂದರೆ, ಅರೆಬರೆಯಾಗಿ ಕೆಲಸ- ಕಾರ್ಯಗಳು ಮುಗಿದು, ಅದರಿಂದ ಮಾನಸಿಕ ಕ್ಷೋಭೆ ಉಂಟಾಗುತ್ತದೆ. ಆರ್ಥಿಕ ವಿಚಾರವಾಗಿ ನೀವು ಧೈರ್ಯವಾಗಿ ತೆಗೆದುಕೊಂಡ ನಿರ್ಧಾರಗಳು ಉತ್ತಮವಾದ ಫಲಗಳನ್ನು ನೀಡಲಿವೆ. ನಿಮ್ಮ ಸಲಹೆ- ಸೂಚನೆಗಳನ್ನು ಪಡೆದು, ಅದರ ಅನುಷ್ಠಾನ ಮಾಡಿದವರಿಗೆ ಆದಾಯ- ಲಾಭದ ಪ್ರಮಾಣ ಜಾಸ್ತಿಯಾಗಲಿದ್ದು, ನಿಮ್ಮನ್ನು ಕೃತಜ್ಞತಾ ಭಾವದಿಂದ ನೋಡಲಿದ್ದಾರೆ. ಕೃಷಿಕರಿಗೆ ಅದರಲ್ಲೂ ಅಡಿಕೆ ಬೆಳೆಗಾರರಿಗೆ ಬಹಳ ಮುಖ್ಯವಾದ ವಾರ ಇದಾಗಿರಲಿದೆ. ಫಸಲು ಕಾಯ್ದುಕೊಳ್ಳುವುದಕ್ಕೆ, ತೋಟದಲ್ಲಿ ಕ್ರಿಮಿ- ಕೀಟಗಳಿಂದ ಆಗುವ ಹಾನಿಯನ್ನು ತಡೆಯುವುದಕ್ಕೆ ನೀವು ತೆಗೆದುಕೊಂಡ ನಿರ್ಧಾರಗಳು ಭವಿಷ್ಯದಲ್ಲಿ ದೊಡ್ಡ ಮಟ್ಟದ ಅನುಕೂಲವಾಗಿ ಮಾರ್ಪಡಲಿದೆ. ಇನ್ನು ಯಾರು ನೀರಿನ ತೊಂದರೆ ಅನುಭವಿಸುತ್ತಿರುವಿರೋ ಅಂಥವರಿಗೆ ಸಮಸ್ಯೆ ಪರಿಹಾರಕ್ಕೆ ಮಾರ್ಗೋಪಾಯಗಳು ದೊರೆಯಲಿವೆ. ಮನೆಯಲ್ಲಿ ಶುಭ ಕಾರ್ಯಗಳನ್ನು ಆಯೋಜಿಸುವುದಕ್ಕೆ ತೀರ್ಮಾನವನ್ನು ಮಾಡಲಿದ್ದೀರಿ. ವೃತ್ತಿನಿರತರಿಗೆ ಕೆಲಸ- ಕಾರ್ಯಗಳಲ್ಲಿ ಸ್ವಲ್ಪ ಮಟ್ಟಿಗೆ ಆಲಸ್ಯವು ಆವರಿಸಲಿದೆ. ವಿರಾಮ ಪಡೆಯೋಣ, ಕೆಲಸ- ಕಾರ್ಯದಿಂದ ಒಂದೆರಡು ದಿನದ ಮಟ್ಟಿಗಾದರೂ ವಿಶ್ರಾಂತಿ ತೆಗೆದುಕೊಳ್ಳೋಣ ಎಂದೆನಿಸಲಿದೆ. ಈ ಹಿಂದೆ ನೀವು ನೋಡಿಕೊಂಡು ಬಂದಿದ್ದ ಆಸ್ತಿಯೋ ಅಥವಾ ವಾಹನವನ್ನೋ ಈ ವಾರ ಖರೀದಿ ಮಾಡುವ ತೀರ್ಮಾನ ಮಾಡುವ, ಅದಕ್ಕಾಗಿ ಒಂದು ಸಣ್ಣ ಮೊತ್ತವಾದರೂ ಅಡ್ವಾನ್ಸ್ ನೀಡುವಂಥ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಕೆಲವು ಸ್ನೇಹಿತರ ಜೊತೆಗೆ ಇರುಸು ಮುರುಸಾಗುವ ಸಾಧ್ಯತೆಗಳಿವೆ. ಒಂದೇ ವಿಚಾರಕ್ಕೆ ವ್ಯಕ್ತವಾಗುವ ಅಭಿಪ್ರಾಯಗಳಲ್ಲಿ ಭೇದ ತಲೆದೋರುವುದರಿಂದ ಮಾತಿಗೆ ಮಾತು ಬೆಳೆದು, ವಿರಸ ಆಗಲಿದೆ. ಇದು ತಕ್ಷಣವೇ ಬಗೆಹರಿಯದೆ ಬಹಳ ದಿನದ ತನಕ ಎಳೆದುಕೊಂಡು ಹೋಗಬಹುದು, ಎಚ್ಚರಿಕೆ ಇರಲಿ. ಮಹಿಳೆಯರಿಗೆ ಸಂಗಾತಿಯಿಂದ ಸರ್ ಪ್ರೈಸ್ ದೊರೆಯುವ ಯೋಗ ಇದೆ. ಈ ಹಿಂದೆ ನೀವು ಯಾವಾಗಲೋ ನೋಡಿದ್ದ ಒಡವೆಯೋ ಸೀರೆಯೋ ಅಥವಾ ಫ್ಯಾಷನ್ ಡಿಸೈನ್ ದಿರಿಸನ್ನೋ ಸಂಗಾತಿಯು ಗಿಫ್ಟ್ ಆಗಿ ನೀಡಬಹುದು. ಅಥವಾ ನಿಮಗೆ ದ್ವಿಚಕ್ರ ವಾಹನವನ್ನೋ ಕಾರನ್ನೋ ಕೊಡಿಸುವ ಸಾಧ್ಯತೆಗಳು ನಿಮ್ಮಲ್ಲಿ ಕೆಲವರಿಗೆ ಇದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನಿಮ್ಮಲ್ಲಿ ಕೆಲವರು ಉದ್ಯೋಗವನ್ನು ಬಿಟ್ಟು, ಸ್ವಂತ ವ್ಯಾಪಾರ- ವ್ಯವಹಾರವನ್ನು ಆರಂಭಿಸುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ಆಗುವಂಥ ಬೆಳವಣಿಗೆಗಳಿಂದ ಮನಸ್ಸಿಗೆ ಬೇಸರ ಆಗಲಿದೆ. ತಂದೆ- ತಾಯಿಗಾಗಿ ಹೆಲ್ತ್ ಇನ್ಷೂರೆನ್ಸ್ ಮಾಡಿಸುವುದಕ್ಕೋ ಅಥವಾ ಅದರ ರಿನೀವಲ್ ಗಾಗಿಯೋ ಹಣ ಖರ್ಚು ಮಾಡುವಂಥ ಯೋಗ ಇದೆ. ಅಥವಾ ನಿಮ್ಮಲ್ಲಿ ಕೆಲವರು ಅತ್ತೆ- ಮಾವನಿಗಾಗಿ ಸಹ ಇನ್ಷೂರೆನ್ಸ್ ಮಾಡಿಸುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಇನ್ನು ಪ್ರಕೃತಿ ಚಿಕಿತ್ಸೆಗಾಗಿ ಹಣ ಖರ್ಚಾಗುವಂಥ ಯೋಗ ಕಂಡುಬರುತ್ತಿದೆ. ನಿಮ್ಮಲ್ಲಿ ಕೆಲವರು ಮಾಸ್ಟರ್ ಚೆಕ್ ಅಪ್ ಮಾಡಿಸಿಕೊಳ್ಳಬಹುದು. ಯಾರು ವೈದ್ಯರಾಗಿರುವಿರೋ ಅಂಥವರು ಸ್ವಂತ ಕ್ಲಿನಿಕ್ ಅಥವಾ ಆಸ್ಪತ್ರೆ ಆರಂಭಿಸುವ ಬಗ್ಗೆ ಆಲೋಚನೆಯನ್ನು ಮಾಡಲಿದ್ದೀರಿ. ಈ ಅವಧಿಯಲ್ಲಿ ನಿಮ್ಮಲ್ಲಿ ಕೆಲವರಿಗೆ ದೊಡ್ಡ ಮೊತ್ತದ ಹಣ ಕೈ ಸೇರುವಂಥ ಯೋಗ ಇದೆ. ಒಂದೋ ಅದು ನಿಮ್ಮದೇ ಹೂಡಿಕೆ ಆಗಿರಬಹುದು ಅಥವಾ ಉಳಿತಾಯದ ಹಣ ಸಹ ಆಗಿರಬಹುದು. ನಿಮಗೆ ಈ ಹಿಂದೆ ಯಾರು ಸಹಾಯ ಮಾಡಿದ್ದರೋ ಅವರಿಗೆ ನಿಮ್ಮ ಕೈಲಿಂದ ಆದ ಗಿಫ್ಟ್ ನೀಡಲಿದ್ದೀರಿ. ಕೃಷಿಕರಿಗೆ ಹೊಸದಾಗಿ ಕೆಲವು ಬೆಳೆಗಳನ್ನು ಹಾಕುವ ನಿರ್ಧಾರ ಮಾಡುವ ಸಾಧ್ಯತೆಗಳಿವೆ. ಇನ್ನು ನಿಮ್ಮಲ್ಲಿ ಕೆಲವರು ಈಗಿರುವ ಗದ್ದೆಯನ್ನು ತೋಟವಾಗಿ ಮಾರ್ಪಡಿಸುವ ಆಲೋಚನೆ ಮಾಡಲಿದೆ. ಒಂದು ವೇಳೆ ಸೋದರ ಸಂಬಂಧಿಗಳ ಜೊತೆಗೆ ಜಮೀನು ವ್ಯಾಜ್ಯಗಳಿದ್ದರೆ ಅದನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಬೇಕಾದ ವೇದಿಕೆ ದೊರೆಯಲಿದೆ. ದೂರ ಪ್ರಯಾಣಗಳು ಮಾಡಬೇಕಿದ್ದವರು ಅನಿವಾರ್ಯ ಅಲ್ಲ ಅಂತಾದರೆ ಮುಂದಕ್ಕೆ ಹಾಕುವುದು ಉತ್ತಮ. ನಿಮ್ಮ ಬಳಿ ಹಣ ಇಲ್ಲದಿದ್ದಲ್ಲಿ ಅಥವಾ ಬೇರೆಯವರಿಂದ ಬರಬೇಕಾದ ಹಣವನ್ನು ನೆಚ್ಚಿಕೊಂಡು ಯಾರಿಗೂ ಮಾತು ನೀಡುವುದಕ್ಕೆ ಹೋಗಬೇಡಿ. ವೃತ್ತಿನಿರತರಿಗೆ ಪ್ರತಿಸ್ಪರ್ಧಿಗಳಿಂದ ತೀವ್ರತರದ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ. ನೀವು ನಿರೀಕ್ಷೆ ಕೂಡ ಮಾಡದ ರೀತಿಯಲ್ಲಿ ಖರ್ಚು- ವೆಚ್ಚಗಳು ಎದುರಾಗಲಿವೆ. ನಿಮ್ಮಲ್ಲಿ ಕೆಲವರು ಹಣಕಾಸಿನ ತುರ್ತಿಗಾಗಿ ಬ್ಯಾಂಕ್ ನಲ್ಲಿ ಓವರ್ ಡ್ರಾಫ್ಟ್ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಲಿದೆ. ವಿದ್ಯಾರ್ಥಿಗಳಿಗೆ ಇಡೀ ವಾರ ಉತ್ತಮವಾದ ಊಟ- ತಿಂಡಿಗಳನ್ನು ಸವಿಯುವಂಥ ಯೋಗ ಇದೆ. ವಿವಿಧ ಕಾರ್ಯಕ್ರಮಗಳಿಗೆ ತೆರಳಲಿದ್ದು, ಸಂತೋಷದಿಂದ ಕಾಲ ಕಳೆಯಲಿದ್ದೀರಿ. ಆಟೋಟಗಳಲ್ಲಿ ಆಸಕ್ತಿ ಇರುವಂಥವರು ಹೆಚ್ಚಿನ ಸಾಧನೆ ಮಾಡುವುದಕ್ಕೆ ಬೇಕಾದ ವೇದಿಕೆ ದೊರೆಯಲಿದೆ. ಒಂದು ವೇಳೆ ಪ್ರಾಯೋಜಕತ್ವಕ್ಕಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ದೊರೆಯುವ ಸಾಧ್ಯತೆ ಇದೆ. ಮಹಿಳೆಯರು ರಕ್ತಕ್ಕೆ ಸಂಬಂಧಿಸಿದ ತೊಂದರೆಗಳನ್ನು ಎದುರಿಸುವಂತಾಗಬಹುದು. ನಿಮ್ಮ ಹೆಸರಿನಲ್ಲಿ ಆಸ್ತಿ ಇದ್ದಲ್ಲಿ ಅದಕ್ಕೆ ಸಂಬಂಧಿಸಿದಂತೆ ವ್ಯಾಜ್ಯಗಳು ಎದುರಾಗುವಂಥ ಸನ್ನಿವೇಶ ಸೃಷ್ಟಿ ಆಗಲಿದೆ. ದಾಖಲೆ- ಪತ್ರಗಳನ್ನು ಸರಿಯಾಗಿ ಹೊಂದಿಸಿಕೊಂಡಿರುವುದು ಉತ್ತಮ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ವಿವಿಧ ಕಾರ್ಯಕ್ರಮಗಳಲ್ಲಿ ಭಾಗೀ ಆಗಬೇಕಾದ ಒತ್ತಡದಲ್ಲಿ ಇರುತ್ತೀರಿ. ಊರಿಂದ ಊರಿಗೆ ಪ್ರಯಾಣ, ತರಾತುರಿ, ಸಂಬಂಧಿಕರು- ಸ್ನೇಹಿತರ ಭೇಟಿ, ಮನಸ್ಸಿಗೆ ಉಲ್ಲಾಸ ಇವೆಲ್ಲವೂ ಈ ವಾರ ಅನುಭವಕ್ಕೆ ಬರಲಿದೆ. ಹಣಕಾಸು ವಿಚಾರಗಳಲ್ಲಿ ಮಾತ್ರ ನೀವಂದುಕೊಂಡಂತೆ ಏನೂ ಆಗುತ್ತಿಲ್ಲ ಎಂಬುದು ಬೇಸರಕ್ಕೆ ಕಾರಣವಾಗಲಿದೆ. ಹಳೇ ವಿಚಾರಗಳು ಕೆಲವು ನೆನಪಾಗಿ, ನಿಮ್ಮ ಆಲೋಚನೆ ವಿಧಾನದಲ್ಲಿ, ಕೆಲಸ ಮಾಡುವ ರೀತಿಯಲ್ಲಿ ಬದಲಾವಣೆ ಮಾಡಿಕೊಳ್ಳಲೇಬೇಕು ಎಂದುಕೊಳ್ಳಲಿದ್ದೀರಿ. ಮಕ್ಕಳ ಶಿಕ್ಷಣದ ಸಲುವಾಗಿ ಉಳಿತಾಯ ಯೋಜನೆಗಳಲ್ಲಿ ಹಣ ತೊಡಗಿಸಬೇಕು ಎಂಬ ಯೋಚನೆ ನಿಮ್ಮಲ್ಲಿ ಕೆಲವರಿಗೆ ಬರಲಿದೆ. ಸರ್ಕಾರಿ ದಾಖಲೆಪತ್ರಗಳಿಗೆ ಸಂಬಂಧಿಸಿದಂತೆ ಇಷ್ಟು ಸಮಯ ನಿಮ್ಮನ್ನು ಕಾಡುತ್ತಿದ್ದ ಚಿಂತೆ ದೂರವಾಗಲಿದೆ. ನಿಮ್ಮಲ್ಲಿ ಯಾರು ದೇವರಿಗೆ ಹರಕೆ ಹೊತ್ತುಕೊಂಡಿದ್ದೀರೋ ಅಥವಾ ತೀರ್ಥಕ್ಷೇತ್ರಗಳಿಗೆ ತೆರಳಬೇಕು ಎಂದು ಬಹಳ ಸಮಯದಿಂದಲೇ ಅಂದುಕೊಳ್ಳುತ್ತಿದ್ದೀರೋ ಅಂಥವರಿಗೆ ನೆಮ್ಮದಿ ದೊರೆಯುವ ರೀತಿಯಲ್ಲಿ ದೇವತಾ ದರ್ಶನ, ಹರಕೆ ಪೂರೈಸುವುದು ಸಾಧ್ಯವಾಗುತ್ತದೆ. ಕೃಷಿಕರಿಗೆ ಕಣ್ಣಿಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ದಲ್ಲಿ ಅದನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ಸೂಕ್ತ ವೈದ್ಯಫಚಾರ ದೊರೆಯಲಿದೆ. ಒಂದು ವೇಳೆ ಕಣ್ಣಿನ ಪೊರೆ ತೊಂದರೆ ಕಾಡುತ್ತಾ ಇದ್ದಲ್ಲಿ ಅದರ ಆಪರೇಷನ್ ಮಾಡಿಸಿಕೊಳ್ಳುವುದಕ್ಕೆ ಮುಂದಾಗಲಿದ್ದೀರಿ. ಕೃಷಿಗೆ ಬೇಕಾದ ವಾಹನ- ಸಲಕರಣೆಗಳನ್ನು ಖರೀದಿ ಮಾಡುವುದಕ್ಕೆ ಬೇಕಾದ ಹಣಕಾಸಿನ ಹೊಂದಾಣಿಕೆ ಆಗಲಿದೆ. ಯಾರು ಮಕ್ಕಳ ಉದ್ಯೋಗದ ಸಲುವಾಗಿ ಪ್ರಭಾವವನ್ನು, ಶಿಫಾರಸನ್ನು ಬಳಸಿ ಪ್ರಯತ್ನ ಮಾಡುತ್ತಿದ್ದಲ್ಲಿ ಅಂಥವರಿಗೆ ಯತ್ನ ಕಾರ್ಯದಲ್ಲಿ ಯಶಸ್ಸು ದೊರೆಯಲಿದೆ. ವೃತ್ತಿನಿರತರಿಗೆ ಕೆಲಸದ ಒತ್ತಡ ಹೆಚ್ಚಾಗಲಿದೆ. ಹೊಸ ಕ್ಲೈಂಟ್ ಗಳು ದೊರೆತು, ತಮಗೆ ಕೊನೆ ಕ್ಷಣದಲ್ಲಿ ಸೇವೆ ಒದಗಿಸಿಕೊಡಲೇ ಬೇಕು ಎಂದು ಪಟ್ಟು ಹಿಡಿಯಲಿದ್ದಾರೆ. ಆದಾಯ ಮತ್ತು ಭವಿಷ್ಯದ ದೃಷ್ಟಿಯಿಂದ ಇದನ್ನು ಮುಖ್ಯ ಎಂದು ಪರಿಗಣಿಸಿ, ಕೆಲಸ ಒಪ್ಪಿಕೊಳ್ಳುವುದರಿಂದ ಬಿಡುವಿಲ್ಲದಷ್ಟು ಕಾರ್ಯಗಳಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಗಳಿವೆ. ನೀವು ಸ್ವಂತಕ್ಕಾಗಿ ಇಟ್ಟುಕೊಂಡಿದ್ದ ಹಣವನ್ನು ವೃತ್ತಿಗಾಗಿ ಬಳಸುವುದಕ್ಕೆ ತೀರ್ಮಾನ ಮಾಡಬೇಕಾಗಲಿದೆ. ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳುವಂಥ ಯೋಗ ಇದೆ. ಅಚಾನಕ್ ಆಗಿ ನಿಗದಿಯಾದಂಥ ಸ್ಥಳಕ್ಕೆ ಹೋಗುವುದರಿಂದ ಮನಸ್ಸಿಗೆ ಉಲ್ಲಾಸ, ಹೊಸ ಹುಮ್ಮಸ್ಸು ಬರಲಿದೆ. ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳಬೇಕು ಎಂದು ವೀಸಾಗಾಗಿ ಪ್ರಯತ್ನ ಮಾಡಿದ್ದು, ಇಷ್ಟು ಸಮಯ ಅಡೆತಡೆಗಳು ಬಾಧಿಸುತ್ತಿದ್ದಲ್ಲಿ ಅದು ನಿವಾರಣೆ ಆಗಲಿದೆ. ಮಹಿಳೆಯರಿಗೆ ಫ್ಲ್ಯಾಟ್ ಖರೀದಿ ಮಾಡುವಂಥ ಯೋಗ ಕಂಡುಬರುತ್ತಿದ್ದು, ಈಗಾಗಲೇ ಹುಡುಕಾಟದಲ್ಲಿ ಇದ್ದೀರಿ ಅಂತಾದರೆ ಅಡ್ವಾನ್ಸ್ ಪಾವತಿ ಮಾಡುವ ಸಾಧ್ಯತೆಗಳಿವೆ. ಇನ್ನು ಅದೇ ರೀತಿ ಬ್ಯಾಂಕ್ ಲೋನ್ ಗಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಎಲ್ಲ ಪ್ರಕ್ರಿಯೆಗಳು ಪೂರ್ತಿಯಾಗಿ ಸಾಲ ಮಂಜೂರು ಆಗಿಬಿಡುವ ಸಾಧ್ಯತೆ ಇದೆ.

ಲೇಖನ- ಎನ್‌.ಕೆ.ಸ್ವಾತಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ