ವಿಕ್ಕಿ ಕೌಶಲ್ – ಕತ್ರಿನಾ ಕೈಫ್ ಮಗುವಿನ ಜಾತಕದಲ್ಲಿ ಅವೆಷ್ಟು ಯೋಗಗಳಿವೆಯೋ!
ತಾರಾ ದಂಪತಿಯಾದ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ಗೆ ನವೆಂಬರ್ 7ನೇ ತಾರೀಕಿನ ಶುಕ್ರವಾರ ಬೆಳಗ್ಗೆ 8 ಗಂಟೆ 23 ನಿಮಿಷ 18 ಸೆಕೆಂಡ್ಗೆ ಗಂಡು ಮಗು ಜನನವಾಗಿದೆ. ಆ ಮಗುವಿನ ಜನ್ಮ ಸಮಯದ ಆಧಾರದಲ್ಲಿ ಜ್ಯೋತಿಷ್ಯದ ಬಗ್ಗೆ ಅಕೆಡಮಿಕ್ ಆದಂಥ ಆಸಕ್ತಿಯಿಂದ ವಿಶ್ಲೇಷಣೆಯನ್ನು ಇಲ್ಲಿ ನೀಡಲಾಗಿದೆ. ಜ್ಯೋತಿಷ್ಯದ ಬಗ್ಗೆ ಕುತೂಹಲ, ಪ್ರಶ್ನೆಗಳು ಹಾಗೂ ಆಸಕ್ತಿ ಇರುವವರು ಕಡ್ಡಾಯವಾಗಿ ಗಮನಿಸಬೇಕಾದ ಲೇಖನ ಇದು. ಏಕೆಂದರೆ ವೃತ್ತಿಯಿಂದ ಜ್ಯೋತಿಷಿಗಳು ಹಾಗೂ ಅಧ್ಯಾತ್ಮ ಚಿಂತಕರೂ ಆದಂಥ ಪಂಡಿತ್ ವಿಠ್ಠಲ್ ಭಟ್ ಅವರು ಈ ಲೇಖನವನ್ನು ಬರೆದಿದ್ದಾರೆ. ಅವರು ಇಲ್ಲಿಯ ತನಕ ಒಂದು ಲಕ್ಷಕ್ಕೂ ಹೆಚ್ಚು ಜಾತಕಗಳ ವಿಶ್ಲೇಷಣೆ ಮಾಡಿದ್ದಾರೆ ಎಂಬುದು ಉಲ್ಲೇಖಿಸಲೇ ಬೇಕಾದ ಅಂಶ.

ಮುಂಬೈನ ಎಚ್.ಎನ್.ರಿಲಯನ್ಸ್ ಆಸ್ಪತ್ರೆಯಲ್ಲಿ ನವೆಂಬರ್ 7ನೇ ತಾರೀಕಿನ ಶುಕ್ರವಾರ ಬೆಳಗ್ಗೆ 8 ಗಂಟೆ 23 ನಿಮಿಷ 18 ಸೆಕೆಂಡ್ಗೆ ತಾರಾ ದಂಪತಿಯಾದ ವಿಕ್ಕಿ ಕೌಶಲ್ (Vicky Kaushal) ಹಾಗೂ ಕತ್ರಿನಾ ಕೈಫ್ಗೆ (Katrina Kaif) ಗಂಡು ಮಗುವಿನ ಜನನವಾಗಿದೆ. ಆ ಮಗುವಿನ ಜನ್ಮ ಸಮಯದ ಆಧಾರದಲ್ಲಿ ಈ ಜ್ಯೋತಿಷ್ಯ ವಿಶ್ಲೇಷಣೆ (Astrology analysis) ಮಾಡಲಾಗುತ್ತಿದೆ. ಪ್ರಾಥಮಿಕ ಮಾಹಿತಿ ಅಂತ ನೋಡುವುದಾದರೆ, ಈ ಮಗುವಿನದು ರೋಹಿಣಿ ನಕ್ಷತ್ರ ಒಂದನೇ ಪಾದ, ವೃಷಭ ರಾಶಿ (Taurus Zodiac) ಹಾಗೂ ವೃಶ್ಚಿಕ ಲಗ್ನ (Scorpio ascendant).
ಇನ್ನು ಜನನ ಸಮಯಕ್ಕೆ ಗ್ರಹ ಹಾಗೂ ಲಗ್ನ ಸ್ಥಿತಿಯನ್ನು ನೋಡುವುದಾದರೆ ಹೀಗಿದೆ:
- ಅನೂರಾಧಾ ನಕ್ಷತ್ರ ಮೂರನೇ ಪಾದದ ವೃಶ್ಚಿಕ ಲಗ್ನ.
- ರೋಹಿಣಿ ಒಂದನೇ ಪಾದದಲ್ಲಿ ವೃಷಭ ರಾಶಿಯಲ್ಲಿ ಚಂದ್ರ
- ವಿಶಾಖ ನಕ್ಷತ್ರ ಒಂದನೇ ಪಾದ ತುಲಾ ರಾಶಿಯಲ್ಲಿ ರವಿ
- ಅನೂರಾಧಾ ನಕ್ಷತ್ರ ಮೂರನೇ ಪಾದ ವೃಶ್ಚಿಕದಲ್ಲಿ ಬುಧ
- ಚಿತ್ತಾ ನಕ್ಷತ್ರ ನಾಲ್ಕನೇ ಪಾದ ತುಲಾ ರಾಶಿಯಲ್ಲಿ ಶುಕ್ರ
- ಅನೂರಾಧಾ ನಕ್ಷತ್ರ ಎರಡನೇ ಪಾದ ವೃಶ್ಚಿಕ ರಾಶಿಯಲ್ಲಿ ಕುಜ
- ಪುನರ್ವಸು ನಕ್ಷತ್ರ ನಾಲ್ಕನೇ ಪಾದ ಕರ್ಕಾಟಕ ರಾಶಿಯಲ್ಲಿ ಗುರು
- ಪೂರ್ವಾಭಾದ್ರಾ ನಕ್ಷತ್ರ ನಾಲ್ಕನೇ ಪಾದ ಮೀನ ರಾಶಿಯಲ್ಲಿ ವಕ್ರ ಶನಿ
- ಪೂರ್ವಾಭಾದ್ರಾ ನಕ್ಷತ್ರ ಒಂದನೇ ಪಾದ ಕುಂಭ ರಾಶಿಯಲ್ಲಿ ರಾಹು
- ಪೂರ್ವಫಲ್ಗುಣಿ ನಕ್ಷತ್ರ ಒಂದನೇ ಪಾದ ಸಿಂಹ ರಾಶಿಯಲ್ಲಿ ಕೇತು
- ಜ್ಯೇಷ್ಠಾ ನಕ್ಷತ್ರ ಎರಡನೇ ಪಾದ ವೃಶ್ಚಿಕ ರಾಶಿಯಲ್ಲಿ ಮಾಂದಿ
ಈ ಜಾತಕಕ್ಕೆ ಚಂದ್ರ ದಶೆಯು 7 ವರ್ಷ, 7 ತಿಂಗಳು ಹಾಗೂ 25 ದಿನಗಳು ಇನ್ನೂ ಬಾಕಿ ಇದೆ. ಆ ನಂತರ ಕ್ರಮವಾಗಿ ಕುಜ, ರಾಹು, ಗುರು, ಶನಿ, ಬುಧ, ಕೇತು, ಶುಕ್ರ, ರವಿ ದಶೆಗಳು ನಡೆಯುತ್ತವೆ.
ವಿಕ್ಕಿ ಕೌಶಲ್ – ಕತ್ರಿನಾ ಕೈಫ್ ಮಗುವಿನ ಜಾತಕದಲ್ಲಿ ಇರುವಂಥ ಯೋಗಗಳ ಪಟ್ಟಿ ಹೀಗಿದೆ:
- ರುಚಕ ಯೋಗ
- ನೀಚಭಂಗ ರಾಜ ಯೋಗ
- ರಾಜ ಯೋಗ
- ಪಾಶ ಯೋಗ
- ವಿಮಲ ಯೋಗ
- ಸ್ವವೀರ್ಯದ್ಧನ ಯೋಗ
- ಬಂಧು ಪೂಜ್ಯ ಯೋಗ
- ಮಾತೃಸ್ನೇಹ ಯೋಗ
- ವಾಹನ ಯೋಗ
- ಪಾರಿಜಾತ ಯೋಗ
- ದ್ವಿಗ್ರಹ ಯೋಗ
ಉಚ್ಚ-ಪರಮೋಚ್ಚ- ಸ್ವಕ್ಷೇತ್ರದಲ್ಲಿನ ಗ್ರಹಗಳು
ಈ ಜಾತಕ ಬಹಳ ವಿಶೇಷಗಳಿಂದ ಕೂಡಿದೆ. ಚಂದ್ರ ತನ್ನ ಉಚ್ಚ ಸ್ಥಿತಿಯಲ್ಲಿ, ಗುರು ಗ್ರಹ ಪರಮೋಚ್ಚ ಸ್ಥಿತಿಯಲ್ಲಿ ಹಾಗೂ ವೈಶೇಷಿಕಾಂಶದಲ್ಲಿ (ರಾಶಿಕುಂಡಲಿ ಹಾಗೂ ನವಾಂಶ ಕುಂಡಲಿ ಎರಡರಲ್ಲೂ ಕರ್ಕಾಟಕ ರಾಶಿಯಲ್ಲಿಯೇ ಗುರು ಸ್ಥಿತವಾಗಿದೆ), ಶುಕ್ರ ತನ್ನದೇ ಸ್ವಕ್ಷೇತ್ರ ತುಲಾ ರಾಶಿಯಲ್ಲಿ, ಕುಜ ತನ್ನದೇ ಸ್ವಕ್ಷೇತ್ರ ವೃಶ್ಚಿಕದಲ್ಲಿಯೂ ಸ್ಥಿತವಾಗಿದೆ. ಇಷ್ಟು ವಿಶೇಷ ಇರುವಂಥ ಈ ಮಗುವಿನ ಜಾತಕದ ತುಂಬ ಪ್ರಾಥಮಿಕ ಅಂಶಗಳನ್ನು ಮಾತ್ರ ಇಲ್ಲಿ ತಿಳಿಸಲಾಗುತ್ತಾ ಇದೆ. ಇನ್ನು ಮಗುವಿನ ಜನನ ಕಾಲದಲ್ಲಿ ಯಾವುದನ್ನು ಪರಾಂಬರಿಸಬೇಕು ಅದನ್ನು ಮಾತ್ರ ತಿಳಿಸಲಾಗುವುದು.
ಪಂಚಮಾರಿಷ್ಟ ದೋಷ ಶಾಂತಿ ಆಗಬೇಕು
ಜನನ ಕಾಲಕ್ಕೆ ಮೊದಲು ನೋಡುವುದು ಲಗ್ನಕ್ಕೆ ಐದನೇ ಮನೆಯಲ್ಲಿ ಪಾಪ ಗ್ರಹಗಳು ಇವೆಯಾ? ಹೌದು, ಈ ಜಾತಕದಲ್ಲಿ ಐದನೇ ಮನೆಯಲ್ಲಿ ಶನಿ ಗ್ರಹ ಇರುವುದರಿಂದ ಪಂಚಮಾರಿಷ್ಟ ದೋಷ ಇದೆ. ಅದಕ್ಕಾಗಿ ಪಂಚಮಾರಿಷ್ಟ ಜನನದ ಶನಿ ಶಾಂತಿಯನ್ನು ಮಾಡಿಸಿಕೊಳ್ಳಬೇಕು. ಮಗುವಿನ ಆರೋಗ್ಯ ಹಾಗೂ ಆಯುಷ್ಯ ತುಂಬ ಚೆನ್ನಾಗಿದೆ. ಆದ್ದರಿಂದ ಆ ಬಗ್ಗೆ ಆಲೋಚಿಸುವ ಅಗತ್ಯವಿಲ್ಲ. ಮಾತೃಕಾರಕನಾದ ಚಂದ್ರನು ಉಚ್ಚ ಸ್ಥಿತಿಯಲ್ಲಿ ಇರುವುದರಿಂದ ತಾಯಿಗೆ ಅನುಕೂಲ ಇದೆ. ಆದರೆ ತಾಯಿಯ ಆರೋಗ್ಯಕ್ಕೆ ಅಲ್ಪ- ಸ್ವಲ್ಪ ಸಮಸ್ಯೆಗಳು ಆಗಬಹುದು. ಅದಕ್ಕೆ ಕಾರಣ ಏನೆಂದರೆ, ಮಗುವಿನ ಜನನ ಕಾಲಕ್ಕೆ ಚಂದ್ರನಿರುವ ವೃಷಭ ರಾಶಿಯಿಂದ ನಾಲ್ಕನೇ ಮನೆಯಲ್ಲಿ ಕೇತು ಗ್ರಹ ಇದೆ. ಆ ಕೇತು ಗ್ರಹ ಇರುವಂಥ ಸಿಂಹ ರಾಶಿಯ ಅಧಿಪತಿ ರವಿ ಗ್ರಹವು ತುಲಾ ರಾಶಿಯಲ್ಲಿ ನೀಚ ಸ್ಥಿತಿಯಲ್ಲಿದೆ. ಆ ನಂತರ ವೃಶ್ಚಿಕ ಲಗ್ನಕ್ಕೆ ನಾಲ್ಕನೇ ಮನೆಯಾದ ಕುಂಭದಲ್ಲಿ ರಾಹು ಇದೆ. ಇವೆಲ್ಲದರ ಕಾರಣಕ್ಕೆ ತಾಯಿಗೆ ಚರ್ಮ ವ್ಯಾಧಿಯೋ ಮಾನಸಿಕ ಕಿರಿಕಿರಿಯೋ ಇಂಥವು ತುಂಬ ಸಣ್ಣ ಮಟ್ಟದಲ್ಲಿಯಾದರೂ ಕಾಡಬಹುದು.
ತಂದೆಗೆ ಅನುಕೂಲಗಳು
ಲಗ್ನಕ್ಕೆ ಒಂಬತ್ತನೇ ಮನೆಯಲ್ಲಿ ಗುರು ಪರಮೋಚ್ಚ ಸ್ಥಿತಿಯಲ್ಲಿ ಇದ್ದು, ಅದೇ ರೀತಿ ಆ ಒಂಬತ್ತನೇ ಮನೆಯಾದ ಕರ್ಕಾಟಕ ರಾಶಿಯ ಅಧಿಪತಿಯಾದ ಚಂದ್ರ ಸಹ ವೃಷಭದಲ್ಲಿ ಉಚ್ಚ ಸ್ಥಿತಿಯಲ್ಲಿದೆ. ಚಂದ್ರ ಇರುವ ವೃಷಭ ರಾಶಿಯಿಂದ ಒಂಬತ್ತನೇ ಮನೆಯಾಗುವಂಥ ಮಕರ ರಾಶಿಯ ಅಧಿಪತಿಯಾದ ಶನಿ ಚಂದ್ರ ಲಗ್ನಕ್ಕೆ ಏಕಾದಶದಲ್ಲಿ ಲಾಭ ಸ್ಥಾನದಲ್ಲಿ ಇದೆ. ಈ ಎಲ್ಲ ಯೋಗಗಳ ಕಾರಣಕ್ಕೆ ರವಿಯು ನೀಚ ಸ್ಥಿತಿಯಲ್ಲಿ ಇರುವುದರ ಹೊರತಾಗಿಯೂ ಈ ಮಗುವಿನ ತಂದೆಗೆ ಅನುಕೂಲಗಳು ಆಗುತ್ತವೆ.
ದೀರ್ಘಾಯುಷ್ಯ- ಆರೋಗ್ಯವಿದೆ
ಈ ಮಗುವಿನ ಜಾತಕದಲ್ಲಿ ದೋಷಗಳು ಇರುವುದರ ಹೊರತಾಗಿಯೂ ತುಂಬ ಒಳ್ಳೆ ಜಾತಕ ಇದು. ಮೊದಲನೆಯದು ಮಗುವಿಗೆ ದೀರ್ಘಾಯುಷ್ಯವಿದೆ. ಚಂದ್ರ ಇರುವಂಥ ವೃಷಭ ರಾಶಿಗೆ ಅಷ್ಟಮ ಸ್ಥಾನವಾದ ಧನುಸ್ಸು ರಾಶಿಯ ಅಧಿಪತಿ ಗುರು ಗ್ರಹವು ಪರಮೋಚ್ಚ ಸ್ಥಿತಿಯಲ್ಲಿದೆ. ಚಂದ್ರನಿಂದ ಅಷ್ಟಮ ಸ್ಥಾನಕ್ಕೆ ಶುದ್ಧಿ ಇದೆ. ಇನ್ನು ವೃಶ್ಚಿಕ ಲಗ್ನಕ್ಕೆ ಅಷ್ಟಮ ಸ್ಥಾನದ ಅಧಿಪತಿಯಾದ ಬುಧ ಗ್ರಹವು ವೃಶ್ಚಿಕ ಲಗ್ನದಲ್ಲಿ ಮಿತ್ರ ಗ್ರಹವಾದ ಕುಜನ ಯುತಿಯಲ್ಲಿ ಇದೆ. ಈ ಗ್ರಹ ಸ್ಥಿತಿಗಳಿಂದಾಗಿ ಮಗುವಿಗೆ ದೀರ್ಘಾಯುಷ್ಯವನ್ನು ದಯಪಾಲಿಸುತ್ತದೆ.
ವಿದ್ಯೆ- ಜ್ಞಾನ ಅಗಾಧ
ಜ್ಞಾನ ಕಾರಕ ಎಂದು ಕರೆಯಲಾಗುವ ಗುರು ಗ್ರಹವು ಪರಮೋಚ್ಚ ಸ್ಥಿತಿಯಲ್ಲಿ ಇರುವುದರಿಂದ ಒಳ್ಳೆ ಜ್ಞಾನ, ಸಂಸ್ಕಾರ, ತಿಳಿವಳಿಕೆ ಇರುತ್ತದೆ. ಗುರು- ಬುಧ ಎರಡೂ ಗ್ರಹ ಉತ್ತಮ ಸ್ಥಿತಿಯಲ್ಲಿ ಇರುವುದರಿಂದ ವಿದ್ಯೆ ತುಂಬ ಚೆನ್ನಾಗಿ ಇರುತ್ತದೆ. ಈ ಜಾತಕದಲ್ಲಿ ಶುಕ್ರ ತನ್ನ ಸ್ವಕ್ಷೇತ್ರವಾದ ತುಲಾ ರಾಶಿಯಲ್ಲಿಯೇ ಇದ್ದು, ಉತ್ತಮ ಸ್ಥಿತಿಯಲ್ಲಿ ಇದ್ದಾನೆ. ಇನ್ನು ಈ ಜಾತಕದ ವಿಚಾರಕ್ಕೆ ಬಂದರೆ ಜನ್ಮ ರಾಶಿಯಾದ ವೃಷಭ ರಾಶಿಗೂ ಶುಕ್ರನೇ ಅಧಿಪತಿಯಾಗಿ, ತನ್ನದೇ ಕ್ಷೇತ್ರ ಎನಿಸಿದ ತುಲಾ ರಾಶಿಯಲ್ಲಿ ಇರುತ್ತಾನೆ. ಜನನ ಕಾಲಕ್ಕೆ ಚಂದ್ರ ದಶೆ ನಡೆಯುತ್ತಿದ್ದು, ವೃಷಭ ರಾಶಿಯಲ್ಲಿ ಉಚ್ಚ ಸ್ಥಿತಿಯಲ್ಲಿ ಇರುವುದರಿಂದ ಹತ್ತಿರ ಹತ್ತಿರ ಎಂಟು ವರ್ಷಗಳಂತೂ ಮಾನಸಿಕ- ದೈಹಿಕ ಆರೋಗ್ಯಕ್ಕೆ, ತಾಯಿ ಪ್ರೀತಿಗೆ ಬಹಳ ಅನುಕೂಲ ಇರುತ್ತದೆ.
ಎಲ್ಲಿ ಜನನವಾಗಿದೆಯೋ ಅದೇ ದೇಶದಲ್ಲಿ ಬೆಳೆಯಬೇಕು
ಈ ಮಗುವಿನ ಜನ್ಮ ಲಗ್ನ ವೃಶ್ಚಿಕದ ಅಧಿಪತಿಯಾದ ಕುಜ ಗ್ರಹವು ಅದೇ ರಾಶಿಯಲ್ಲಿಯೇ ಇರುವುದರಿಂದ ಸಿಟ್ಟು, ಹಠವನ್ನು ತಡೆಯುವುದಕ್ಕೆ ಸಾಧ್ಯವಿಲ್ಲದಷ್ಟು ಇರಲಿದ್ದು, ವೃಷಭ ರಾಶಿಯಾಗಿ, ಚಂದ್ರನು ಅಲ್ಲಿಯೇ ಉಚ್ಚ ಸ್ಥಿತಿಯಲ್ಲಿ ಇರುವುದರಿಂದ ಬಹಳ ಸೌಂದರ್ಯವನ್ನು ಆ ಗ್ರಹ ಸ್ಥಿತಿಯು ದಯಪಾಲಿಸುತ್ತದೆ ಎಂಬುದನ್ನು ಜ್ಯೋತಿಷ್ಯ ಗ್ರಂಥಗಳು ಒತ್ತಿ ಹೇಳುತ್ತವೆ, ಈ ಮಗು ಹುಟ್ಟಿರುವ ಸ್ಥಳದಲ್ಲಿಯೇ ಬೆಳೆಯಬೇಕು. ಭಾರತದಲ್ಲಿ ಹುಟ್ಟಿರುವಂಥ ಈ ಮಗು ಇಲ್ಲಿಯೇ ಬೆಳವಣಿಗೆ ಆಗಬೇಕು. ರಾಹು ದೆಶೆ ಬರುವ ತನಕ ಈ ದೇಶದಿಂದ ಹೊರಗೆ ಹೋಗಬಾರದು. ಎಲ್ಲಿ ಹುಟ್ಟಿದೆಯೋ ಅದೇ ರಾಜ್ಯ, ಸ್ಥಳ, ದೇಶದಲ್ಲಿಯೇ ಬೆಳೆಯಬೇಕು. ಹಾಗೊಂದು ವೇಳೆ ಹೊರ ದೇಶದಲ್ಲಿ ಬೆಳೆಸಬೇಕು ಅಂದುಕೊಂಡಲ್ಲಿ ಆ ಮಗುವಿಗೆ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಪೋಷಕರಿಗೆ ಮತ್ತೊಂದು ಮಗು ಆಗುವ ಯೋಗವಿದೆ
ಈ ಜಾತಕದ ಲಗ್ನದ ಮೂರನೇ ಮನೆಯ ಮೇಲೆ ಪರಮೋಚ್ಚ ಗುರುವಿನ ದೃಷ್ಟಿ, ಚಂದ್ರ ಇರುವ ರಾಶಿಯಿಂದ ಮೂರನೇ ಮನೆಯಲ್ಲಿ ಪರಮೋಚ್ಚ ಗುರು- ಈ ಗ್ರಹ ಸ್ಥಿತಿಯಿಂದಾಗಿ ಮಗುವಿಗೆ ಸೋದರ ಯೋಗವಿದೆ. ಅಂದರೆ ಈ ಮಗುವಿನ ಬೆನ್ನಿಗೆ ಮತ್ತೊಂದು ಮಗು ಹುಟ್ಟುವ ಯೋಗ ಕಂಡುಬರುತ್ತದೆ. ಅದು ಕೂಡ ಹೆಣ್ಣುಮಗುವಿಗಿಂತ ಮತ್ತೊಂದು ಗಂಡು ಮಗು ಆಗುವ ಯೋಗವೇ ಹೆಚ್ಚು ಕಂಡು ಬರುತ್ತದೆ. ಏಕೆಂದರೆ ಲಗ್ನ ಮೂರನೇ ಮನೆಯ ಅಧಿಪತಿ ಶನಿ ಇರುವುದನ್ನು ಬಿಟ್ಟರೆ ಉಳಿದೆಲ್ಲ ಸ್ಥಿತಿಯು ಮತ್ತೊಂದು ಗಂಡು ಮಗುವಿನ ಜನನವನ್ನೇ ಸೂಚಿಸುತ್ತಾ ಇದೆ. ಆದರೆ ಹೆಚ್ಚು ಸಮಯ ತೆಗೆದುಕೊಳ್ಳುವಂತೆ ಕಾಣುತ್ತಿದೆ. ಅದಕ್ಕೆ ಕಾರಣ ಸಹ ಲಗ್ನಕ್ಕೆ ತೃತೀಯದಲ್ಲಿ ಇರುವ ಶನಿ ಗ್ರಹ. ಆದ್ದರಿಂದ ಮತ್ತೊಂದು ಮಗು ಈ ಕುಟುಂಬದಲ್ಲಿ ಕಾಲಿಡುವ ಯೋಗವಿದೆ.
ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ಪೂಜೆಯ ಫಲ: ಪೋಷಕರಾದ ವಿಕ್ಕಿ ಕೌಶಲ್-ಕತ್ರಿನಾ ಕೈಫ್
ಒಟ್ಟಾರೆಯಾಗಿ ಈ ಮಗುವಿನ ಜಾತಕ ಜ್ಯೋತಿಷ್ಯ ಕಲಿಯುವವರಿಗೆ ಹಾಗೂ ಆಸಕ್ತರಿಗೆ ಒಂದೊಳ್ಳೆ ಪಠ್ಯದಂತೆ ಇದೆ. ಈ ಮೇಲೆ ಕಾಣಿಸಿದಂತೆ ಮಾಡಿದ ವಿಶ್ಲೇಷಣೆಯನ್ನು ಅಕಾಡೆಮಿಕ್ ಆದಂಥ ಹಿನ್ನೆಲೆಯಲ್ಲಿಯೇ ನೋಡಬೇಕು ಅನ್ನುವುದು ಜ್ಯೋತಿಷಿಯಾಗಿ ನನ್ನ ಕಳಕಳಿಯ ಮನವಿ. ಆ ತಾರಾ ದಂಪತಿ ಹಾಗೂ ಮಗುವಿಗೆ ಭಗವಂತನು ಸಕಲ ಆಯುರ್-ಆರೋಗ್ಯ-ಐಶ್ವರ್ಯ- ಸುಖ- ನೆಮ್ಮದಿ ಎಲ್ಲವನ್ನೂ ದಯ ಪಾಲಿಸಲಿ ಎಂದು ಪ್ರಾರ್ಥಿಸುತ್ತಾ ಲೇಖನವನ್ನು ಪೂರ್ಣಗೊಳಿಸುತ್ತೇನೆ.
(ಈ ಲೇಖನವನ್ನು ಜ್ಯೋತಿಷಿಗಳು ಜ್ಯೋತಿಷ್ಯದ ಆಧಾರದಲ್ಲಿ ಬರೆದಿದ್ದಾರೆ. ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯವು ಸಂಪೂರ್ಣವಾಗಿ ಲೇಖಕರದು. ಇದನ್ನು ಟಿವಿ9 ಕನ್ನಡ ವೆಬ್ ಸೈಟ್ ಆಗಲೀ ಅಥವಾ ಸೋದರ ಸಂಸ್ಥೆಯಾಗಲೀ ಅನುಮೋದಿಸುವುದಿಲ್ಲ ಹಾಗೂ ಈ ಲೇಖನಕ್ಕೆ ಜವಾಬ್ದಾರಿ ಅಲ್ಲ. ಇದು ನಂಬಿಕೆ ಆಧಾರದಲ್ಲಿ ಪ್ರಚಲಿತದಲ್ಲಿ ಇರುವ ಪದ್ಧತಿಯಂತೆ ಬರೆದಿರುವ ಲೇಖನವಾಗಿದೆ.- ಸಂಪಾದಕ)
ಲೇಖನ- ಪಂಡಿತ್ ವಿಠ್ಠಲ್ ಭಟ್
ನಿರೂಪಣೆ- ಸ್ವಾತಿ ಎನ್.ಕೆ.
Published On - 9:24 am, Sat, 8 November 25




