ರೋಹಿತ್ 264 ರನ್‌ಗಳ ರೌದ್ರಾವತಾರಕ್ಕೆ ಭರ್ತಿ 11 ವರ್ಷ; ವಿಡಿಯೋ ನೋಡಿ
Rohit Sharma 264:ನವೆಂಬರ್ 13, 2014 ರಂದು ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ 264 ರನ್ ಗಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಈ ಐತಿಹಾಸಿಕ ಇನ್ನಿಂಗ್ಸ್‌ನಲ್ಲಿ 33 ಬೌಂಡರಿ ಮತ್ತು 9 ಸಿಕ್ಸರ್‌ಗಳಿದ್ದವು. 4 ರನ್‌ಗಳಿದ್ದಾಗ ಸಿಕ್ಕ ಜೀವದಾನವನ್ನು ಬಳಸಿಕೊಂಡು ರೋಹಿತ್ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ದೊಡ್ಡ ವೈಯಕ್ತಿಕ ಸ್ಕೋರ್ ಅನ್ನು ಬಾರಿಸಿ ಕ್ರಿಕೆಟ್ ಅಭಿಮಾನಿಗಳನ್ನು ರೋಮಾಂಚನಗೊಳಿಸಿದರು.
ನವೆಂಬರ್ 13, 2014 ಅಂದರೆ ಬರೋಬ್ಬರಿ 11 ವರ್ಷಗಳ ಹಿಂದೆ ಇದೇ ದಿನ ರೋಹಿತ್ ಶರ್ಮಾ ಎಂಬ ಬಿರುಗಾಳಿಯ ಆರ್ಭಟಕ್ಕೆ ಕ್ರಿಕೆಟ್ ಲೋಕ ಹುಚ್ಚೆದ್ದು ಕುಣಿದಿತ್ತು. ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಶ್ರೀಲಂಕಾ ವಿರುದ್ಧ ನಡೆದಿದ್ದ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಏಕದಿನ ಇತಿಹಾಸದಲ್ಲಿಯೇ ಅತಿದೊಡ್ಡ ಇನ್ನಿಂಗ್ಸ್ ಆಡಿ ವಿಶ್ವ ದಾಖಲೆ ನಿರ್ಮಿಸಿದ್ದರು.
ಅಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೂರನೇ ವಿಕೆಟ್‌ಗೆ 202 ರನ್‌ಗಳ ಅದ್ಭುತ ಜೊತೆಯಾಟವಾಡಿದರು. ಕೊಹ್ಲಿ 66 ರನ್ ಗಳಿಸಿ ಔಟಾದರೆ, ರೋಹಿತ್ ಶರ್ಮಾ 50 ನೇ ಓವರ್‌ನ ಕೊನೆಯ ಎಸೆತದಲ್ಲಿ ಔಟಾದರು. ಅಷ್ಟರಲ್ಲಾಗಲೇ ಇತಿಹಾಸ ಸೃಷ್ಟಿಸಿದ್ದ ಹಿಟ್‌ಮ್ಯಾನ್ ಬರೋಬ್ಬರಿ 264 ರನ್ ಬಾರಿಸಿ ತಂಡವನ್ನು 404 ರನ್‌ಗಳ ಬೃಹತ್ ಮೊತ್ತಕ್ಕೆ ಕೊಂಡೊಯ್ದಿದ್ದರು. ರೋಹಿತ್ ಶರ್ಮಾ ತಮ್ಮ ಇನ್ನಿಂಗ್ಸ್‌ನಲ್ಲಿ 173 ಎಸೆತಗಳನ್ನು ಎದುರಿಸಿ 264 ರನ್ ಬಾರಿಸಿದರು. 152.60 ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ ರೋಹಿತ್ ಅವರ ಇನ್ನಿಂಗ್ಸ್‌ನಲ್ಲಿ 33 ಬೌಂಡರಿಗಳು ಮತ್ತು 9 ಸಿಕ್ಸರ್‌ಗಳು ಸೇರಿದ್ದವು.
ವಾಸ್ತವವಾಗಿ ಈ ಪಂದ್ಯದಲ್ಲಿ ರೋಹಿತ್ 4 ರನ್ಗಳಿಗೆ ಕ್ಯಾಚ್ ನೀಡಿದ್ದರು. ಆದರೆ ಲಂಕಾ ಆಟಗಾರ ತಿಸಾರ ಪೆರೆರಾ ಸುಲಭ ಕ್ಯಾಚ್ ಕೈಚೆಲ್ಲಿದರು. ಈ ಜೀವದಾನವನ್ನು ಸಂಪೂರ್ಣವಾಗಿ ಬಳಿಸಿಕೊಂಡ ಹಿಟ್‌ಮ್ಯಾನ್ 72 ಎಸೆತಗಳಲ್ಲಿ 39 ಡಾಟ್ ಬಾಲ್ಗಳನ್ನು ಎದುರಿಸಿ ಅರ್ಧಶತಕ ಪೂರೈಸಿದರು. ಮುಂದಿನ 50 ರನ್ಗಳನ್ನು ಕೇವಲ 28 ಎಸೆತಗಳನ್ನು ಪೂರೈಸಿದರು. ನಂತರ 100 ರಿಂದ 150 ರನ್ ಪೂರೈಸಲು 25 ಎಸೆತ ಮತ್ತು 150 ರಿಂದ 200 ರನ್ ಪೂರೈಸಲು 26 ಎಸೆತಗಳನ್ನು ತೆಗೆದುಕೊಂಡಿದ್ದರಯ. ಹಾಗೆಯೇ 200 ರಿಂದ 250 ರನ್ ಪೂರೈಸಲು ರೋಹಿತ್ ಶರ್ಮಾ ಕೇವಲ 15 ಎಸೆತಗಳನ್ನು ಎದುರಿಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

