ನವದೆಹಲಿ, ಏಪ್ರಿಲ್ 11: ಡಿಜಿಟಲ್ ಆಗಿ ಸೇವೆಗಳನ್ನು ಒದಗಿಸುವ ಬಿಸಿನೆಸ್ನಲ್ಲಿ ಭಾರತ ವಿಶ್ವದ ಪ್ರಮುಖ ಹಬ್ಗಳಲ್ಲಿ ಒಂದಾಗಿದೆ. ಜಾಗತಿಕ ಸರ್ವಿಸ್ ಉದ್ಯಮದಲ್ಲಿ ಡಿಜಿಟಲ್ ಆಗಿ ತಲುಪಿಸುವ ಸರ್ವಿಸ್ (Digitally delivered services) ಬಿಸಿನೆಸ್ ಪಾಲು ಶೇ. 20ರಷ್ಟಿದೆ. ಒಟ್ಟಾರೆ ಸರಕು ಮತ್ತು ಸೇವೆ ರಫ್ತಿನಲ್ಲಿ ಇದರ ಪಾಲು ಶೇ. 13.8ರಷ್ಟಿದೆ. ಜಾಗತಿಕವಾಗಿ ಈ ಉದ್ಯಮ 2023ರಲ್ಲಿ 4.25 ಟ್ರಿಲಿಯನ್ ಡಾಲರ್ ಇದೆ. ಈ ಪೈಕಿ ಭಾರತದ ರಫ್ತು 257 ಬಿಲಿಯನ್ ಡಾಲರ್ ಇದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 17ರಷ್ಟು ರಫ್ತು ಹೆಚ್ಚಳವಾಗಿದೆ. ಭಾರತಕ್ಕೆ ಹೋಲಿಸಿದರೆ ಚೀನಾ, ಜರ್ಮನಿ ಶೇ. 4ರಷ್ಟು ಮಾತ್ರವೇ ಬೆಳವಣಿಗೆ ತೋರಿರುವುದು.
ಡಿಜಿಟಲ್ ಆಗಿ ತಲುಪಿಸುವ ಸರ್ವಿಸ್ ರಫ್ತು ಉದ್ಯಮದಲ್ಲಿ ವೃತ್ತಿಪರ ಮತ್ತು ತಾಂತ್ರಿಕ ಸೇವೆ ಶೇ. 41.2ರಷ್ಟಿದೆ. ಕಂಪ್ಯೂಟರ್ ಸರ್ವಿಸ್ ಶೇ 20.5, ಫೈನಾನ್ಷಿಯಲ್ ಸರ್ವಿಸ್ ಶೇ. 16, ಬೌದ್ಧಿಕ ಆಸ್ತಿ ಸಂಬಂಧಿತ ಸೇವೆ ಶೇ. 10.9, ಇನ್ಷೂರೆನ್ಸ್ ಮತ್ತು ಪೆನ್ಷನ್ ಸರ್ವಿಸ್ ಶೇ. 5.2, ಟೆಲಿಕಮ್ಯೂನಿಕೇಶನ್ಸ್ ಸರ್ವಿಸ್ ಶೇ. 2.6 ಹಾಗೂ ಇತರೆ ಶೇ. 3.6ರಷ್ಟಿದೆ. ಇದು ಡಬ್ಲ್ಯುಟಿಒ ಬಿಡುಗಡೆ ಮಾಡಿದ 2023ರ ಅಂಕಿ ಅಂಶ.
ಇದನ್ನೂ ಓದಿ: ಅಮೆರಿಕದ ಇನ್ವೆಸ್ಕೋ ಭಾರತದ ಮ್ಯೂಚುವಲ್ ಫಂಡ್ ಬಿಸಿನೆಸ್ನಿಂದ ನಿರ್ಗಮನ; ಇದರಲ್ಲಿ ನೀವು ಮಾಡಿದ ಹೂಡಿಕೆ ಏನಾಗುತ್ತೆ?
2023ರಲ್ಲಿ ಜಾಗತಿಕವಾಗಿ ಸರಕುಗಳ ರಫ್ತು ಶೆ. 1.2ರಷ್ಟು ಕಡಿಮೆ ಆಗಿದೆ. ಆದರೆ ಡಿಜಿಟಲ್ ಆಗಿ ಸರಬರಾಜು ಆಗುವ ಸೇವೆಗಳು ಮಾತ್ರ ಹುಲುಸಾಗಿ ಬೆಳೆಯುತ್ತಿವೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಬಳಕೆ ಕೂಡ ಡಿಜಿಟಲ್ ಸೇವೆಗಳಿಗೆ ಪುಷ್ಟಿ ಕೊಡಬಹುದು ಎಂದು ಹೇಳಲಾಗಿದೆ. ಇನ್ಫೋಸಿಸ್, ಟಿಸಿಎಸ್ ಮೊದಲಾದ ಭಾರತೀಯ ಐಟಿ ಕಂಪನಿಗಳು ಎಐ ತಂತ್ರಜ್ಞಾನವನ್ನು ಬಳಸಿ ತಮ್ಮ ಸೇವೆಗೆ ಮೊನಚು ತರುವ ಕೆಲಸ ಮಾಡುತ್ತಿವೆ. 2024ರಲ್ಲಿ ಭಾರತದ ರಫ್ತು ಮಾರುಕಟ್ಟೆಗೆ ಇದು ಉತ್ತೇಜನ ನೀಡಲಿದೆ.
ಇನ್ಫಾರ್ಮೇಶನ್ ಮತ್ತು ಕಮ್ಯೂನಿಕೇಶನ್ಸ್ ಟೆಕ್ನಾಲಜಿ (ಐಸಿಟಿ) ನೆಟ್ವರ್ಕ್ ಮೂಲಕ ತಲುಪಿಸುವ ಸೇವೆಗಳಲ್ಲಿ ಮಾರ್ಕೆಟಿಂಗ್ ಸರ್ವಿಸ್, ಫೈನಾನ್ಷಿಯಲ್ ಸರ್ವಿಸ್, ಪ್ರೊಫೆಷನಲ್ ಸರ್ವಿಸ್, ಶಿಕ್ಷಣ ತರಬೇತಿ ಸೇವೆ ಮೊದಲಾದವೂ ಒಳಗೊಂಡಿರುತ್ತವೆ. 2023ರಲ್ಲಿ ಈ ರಫ್ತಿನಲ್ಲಿ ಚೀನಾ ಮತ್ತು ಜರ್ಮನಿಯನ್ನು ಭಾರತ ಹಿಂದಿಕ್ಕಿದೆ. ವಿಶ್ವದ ಅತಿದೊಡ್ಡ ಸರ್ವಿಸ್ ರಫ್ತುದಾರ ಎನಿಸಿರುವ ಅಮೆರಿಕ ಈಗಲೂ ಕೂಡ ಡಿಜಿಟಲ್ ಸರ್ವಿಸ್ನಲ್ಲಿ ಅಗ್ರಗಣ್ಯ ದೇಶವಾಗಿದೆ. ಬ್ರಿಟನ್ ಮತ್ತು ಐರ್ಲೆಂಡ್ ಟಾಪ್-3 ದೇಶಗಳಾಗಿವೆ. ಭಾರತದ ನಂತರದ ಐದನೇ ಸ್ಥಾನ ಜರ್ಮನಿಯದ್ದಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ