ಕೇಂದ್ರ ಸರ್ಕಾರವು ತಾಳೆಎಣ್ಣೆಯೂ ಸೇರಿದಂತೆ ಖಾದ್ಯ ತೈಲಗಳ ಆಮದಿನ ಮೇಲಿನ ಸುಂಂಕವನ್ನು ಇಳಿಕೆ ಮಾಡಿದೆ. ಒಂದು ಟನ್ಗೆ 112 ಅಮೆರಿಕನ್ ಡಾಲರ್ ತನಕ ಇಳಿಕೆ ಮಾಡಿದೆ. ಈ ನಡೆಯಿಂದಾಗಿ ದೇಶೀಯವಾಗಿ ಖಾದ್ಯ ತೈಲಗಳ ದರಗಳಲ್ಲಿ ಇಳಿಕೆ ಆಗಲಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಕೇಂದ್ರೀಯ ನೇರ ತೆರಿಗೆ ಮಂಡಳಿ ಹಾಗೂ ಸೀಮಾಸುಂಕ (ಸಿಬಿಐಸಿ) ಅಧಿಸೂಚನೆಯನ್ನು ಹೊರಡಿಸುವ ಮೂಲಕವಾಗಿ ಕಚ್ಚಾ ತಾಳೆ ಎಣ್ಣೆ ಮೇಲಿನ ಆಮದು ತೆರಿಗೆಯನ್ನು ಟನ್ಗೆ 86 ಯುಎಸ್ಡಿ ಕಡಿಮೆ ಮಾಡಿದೆ. ಆರ್ಬಿಡಿ ಮತ್ತು ಕಚ್ಚಾ ಪಾಮೋಲಿಮನ್ ತಲಾ 112 ಯುಎಸ್ಡಿ ಇಳಿಸಿದೆ. ಇದರ ಜತೆಗೆ ಕಚ್ಚಾ ಸೋಯಾಬಿನ್ ತೈಲದ ಎಣ್ಣೆ ಮೂಲ ಆಮದು ದರವನ್ನು ಟನ್ಗೆ 37 ಯುಎಸ್ಡಿಗೆ ಕಡಿಮೆ ಮಾಡಿದೆ. ಈ ಬದಲಾವಣೆಯು ಜೂನ್ 17, 2021ರ ಗುರುವಾರದಿಂದ ಜಾರಿಗೆ ಬರಲಿದೆ. ಯಾವಾಗ ಆಮದು ಮೂಲ ಬೆಲೆ ಮೇಲೆ ಪಾವತಿಸುವ ತೆರಿಗೆಯೇ ಕಡಿಮೆ ಆಗುತ್ತದೋ ಆಗ ದೇಶೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲದ ಬೆಲೆಯು ಕಡಿಮೆ ಆಗುತ್ತದೆ ಎಂದು ತೆರಿಗೆ ತಜ್ಞರು ಅಭಿಪ್ರಾಯ ಪಡುತ್ತಾರೆ.
ಭಾರತದಲ್ಲಿ ದೇಶೀಯವಾಗಿ ತಯಾರಾಗುವ ಖಾದ್ಯ ತೈಲಕ್ಕೂ ಹಾಗೂ ಬಳಕೆ ಮಾಡಿಕೊಳ್ಳವ ಪ್ರಮಾಣಕ್ಕೂ ಮಧ್ಯೆ ಭಾರೀ ವ್ಯತ್ಯಾಸ ಇದೆ. ಆ ಕಾರಣಕ್ಕೆ ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗುತ್ತದೆ. ಕಳೆದ ಕೆಲ ತಿಂಗಳಿಂದ ನಿರಂತರವಾಗಿ ಮೇಲೇರುತ್ತಲೇ ಸಾಗಿದೆ ಎನ್ನುತ್ತಾರೆ ವಿಷಯ ತಜ್ಞರು. ಕಳೆದ ಒಂದು ವರ್ಷದಲ್ಲಿ ಭಾರತದಲ್ಲಿ ಖಾದ್ಯ ತೈಲದ ಬೆಲೆ ಹತ್ತಿರ ಹತ್ತಿರ ದುಪ್ಪಟ್ಟಿಗಿಂತ ಹೆಚ್ಚೇ ಆಗಿದೆ. ಭಾರತಕ್ಕೆ ಅಗತ್ಯ ಇರುವ ಖಾದ್ಯ ತೈಲದಲ್ಲಿ ಮೂರನೇ ಎರಡು ಭಾಗದಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಕಳೆದ ತಿಂಗಳಿಂದ ಖಾದ್ಯ ಎಣ್ಣೆ ಬೆಲೆಯಲ್ಲಿ ಇಳಿಕೆ ಆಗುತ್ತಾ ಬರುತ್ತಿದೆ. ಹಲವು ಮಧ್ಯಮಾವಧಿ ಹಾಗೂ ದೀರ್ಘಾವಧಿ ಕ್ರಮಗಳ ಮೂಲಕ ದೇಶವು ಈ ಸೆಗ್ಮೆಂಟ್ನಲ್ಲಿ ಸ್ವಾವಲಂಬಿ ಆಗಲು ಪ್ರಯತ್ನಿಸುತ್ತಿದೆ ಎಂದು ಸರ್ಕಾರ ಹೇಳಿದೆ.
ದತ್ತಾಂಶಗಳ ಪ್ರಕಾರವಾಗಿ ಹೇಳಬೇಕು ಅಂದರೆ, ಒಟ್ಟಾರೆಯಾಗಿ ಖಾದ್ಯ ಮತ್ತು ಖಾದ್ಯೇತರ ತೈಲಗಳು 2020ರ ನವೆಂಬರ್ನಿಂದ 2021ರ ಮೇ ತಿಂಗಳ ಮಧ್ಯೆ 76,77,998 ಟನ್ಗಳು ಆಮದಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 70,61,749 ಟನ್ಗಳು ಆಗಿದ್ದವು. ಅಂದರೆ ಶೇಕಡಾ 9ರಷ್ಟು ಹೆಚ್ಚಾಗಿ ಆಮದಾಗಿದೆ. ಅಂದಹಾಗೆ ಖಾದ್ಯ ಎಣ್ಣೆಯ ಲೆಕ್ಕಾಚಾರದ ವರ್ಷ ಎಂದು ನವೆಂಬರ್ನಿಂದ ಅಕ್ಟೋಬರ್ ತಿಂಗಳನ್ನು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: Cooking oil: ಅಡುಗೆಗೆ ಬಳಸುವ ಎಣ್ಣೆ ಬೆಲೆಯಲ್ಲಿ ವರ್ಷದಲ್ಲಿ ಶೇ 62ರಷ್ಟು ಏರಿಕೆ; ಒಂದಲ್ಲ, ಎರಡರಲ್ಲೂ ಇದು ಎಲ್ಲದರ ಕಥೆ
(Indian govt slashes tariff on edible oil with effect from June 17th, 2021)