ತೆರಿಗೆ ಕಳ್ಳತನ ಭಾರತದಲ್ಲಿರುವ ಬಹಳ ಸಾಮಾನ್ಯ ಸಮಸ್ಯೆ ಹಾಗೂ ಸರ್ಕಾರಕ್ಕೆ ಸದಾ ಇರುವ ತಲೆನೋವು. ಜಿಎಸ್ಟಿ ಬಂದ ಬಳಿಕವೂ ತೆರಿಗೆ ಕಳ್ಳತನ (tax evasion) ನಡೆಯುವುದು ನಿಂತಿಲ್ಲ. ಬಹಳಷ್ಟು ವ್ಯಾಪಾರಿಗಳು ಬಿಲ್ ಜನರೇಟ್ ಮಾಡುವುದೇ ಇಲ್ಲ. ಗ್ರಾಹಕರು ಕೇಳದಿದ್ದರಂತೂ ಬಿಲ್ ಕೊಡುವ ಮಾತೇ ಇಲ್ಲ. ಹಾಗೆಯೇ, ನಕಲಿ ಬಿಲ್ ಸೃಷ್ಟಿಸಿ ಗ್ರಾಹಕರಿಗೆ ಕೊಡುವ ವ್ಯಾಪಾರಿಗಳೂ ಇದ್ದಾರೆ. ಇನ್ನು, ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಲು ಅನುವಾಗುವ ರೀತಿಯಲ್ಲಿ ನಕಲಿ ಇನ್ವಾಯ್ಸ್ (fake GST invoice) ಸೃಷ್ಟಿಸುವ ವ್ಯಾಪಾರಿಗಳೂ ಬಹಳ ಇದ್ದಾರೆ. ಈ ಅಕ್ರಮಗಳಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂ ಆದಾಯ ಕೈಪ್ಪುತ್ತಿದೆ ಎಂದು ಹೇಳಲಾಗುತ್ತಿದೆ.
ಸರಕು ಅಥವಾ ಸೇವೆಗೆ ವಿಧಿಸಲಾಗುವ ದರಕ್ಕೆ ಜಿಎಸ್ಟಿ ತೆರಿಗೆ ಅನ್ವಯ ಆಗುತ್ತದೆ. ಅಂಗಡಿಯಲ್ಲಿ ನಾವು ವಸ್ತು ಖರೀದಿಸಿದಾಗ ಬಿಲ್ ಮೊತ್ತಕ್ಕೆ ನಿರ್ದಿಷ್ಟ ಭಾಗದಷ್ಟು ಜಿಎಸ್ಟಿಯನ್ನು ಸೇರಿಸಲಾಗುತ್ತದೆ. ಈ ಜಿಎಸ್ಟಿ ಹಣ ಸರ್ಕಾರಕ್ಕೆ ಸಂದಾಯವಾಗುತ್ತದೆ. ಆದರೆ, ಯಾವುದೇ ಸರಕು ಅಥವಾ ಸೇವೆ ಒದಗಿಸದೇ ಹೋದರೂ ಜಿಎಸ್ಟಿ ಇನ್ವಾಯ್ಸ್ ಸೃಷ್ಟಿಸುವವರು ಇರುತ್ತಾರೆ. ಇದನ್ನು ನಕಲಿ ಇನ್ವಾಯ್ಸ್ ಎಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: ಸೈಬರ್ ವಂಚನೆ ಪ್ರಕರಣಗಳ ಬಗ್ಗೆ ಚರ್ಚಿಸಲು ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ಸಭೆ ಕರೆದ ಸರ್ಕಾರ
ಸರಕು ಅಥವಾ ಸೇವೆಗಳನ್ನು ಒದಗಿಸುವ ಪ್ರತಿಯೊಂದು ನೊಂದಾಯಿತ ಸಂಸ್ಥೆಗೂ ಜಿಎಸ್ಟಿಐಎನ್ ನೀಡಲಾಗುತ್ತದೆ. ಜಿಎಸ್ಟಿನ್ ಎಂಬುದು ರಾಜ್ಯದ ಕೋಡ್ ನಂಬರ್, ಪ್ಯಾನ್ ನಂಬರ್ ಮತ್ತು ಯೂನಿಕ್ ರಿಜಿಸ್ಟ್ರೇಶನ್ ನಂಬರ್ನ ಸಂಯೋಜನೆ ಆಗಿರುತ್ತದೆ. ಇದು 15 ಅಂಕಿಯ ಒಂದು ವಿಶೇಷ ಸಂಖ್ಯೆ.
ಜಿಎಸ್ಟಿ ಪೋರ್ಟಲ್ಗೆ ಹೋದರೆ ಅಲ್ಲಿ (www.gst.gov.in/) ಜಿಎಸ್ಟಿನ್ ಸಂಖ್ಯೆಯನ್ನು ಪರಿಶೀಲಿಸಬಹುದು. ಪೋರ್ಟಲ್ನಲ್ಲಿ ಸರ್ಚ್ ಟ್ಯಾಕ್ಸ್ಪೇಯರ್ ಸೆಕ್ಷನ್ಗೆ ಹೋಗಿ ಅಲ್ಲಿ ಅ ಸಂಖ್ಯೆ ಹಾಗಿ ಶೋಧಿಸಬಹುದು. ಈ ಸಂಖ್ಯೆ ನೈಜವಾಗಿದ್ದರೆ ಯಾರ ಹೆಸರಲ್ಲಿ ಅದು ನೊಂದಾಯಿತವಾಗಿದೆ ಮತ್ತು ಅವರ ವಿಳಾಸ ಯಾವುದು ಎಂಬುದು ಕಾಣುತ್ತದೆ.
ಇನ್ನು, ಜಿಎಸ್ಟಿ ಬಿಲ್ನಲ್ಲಿ ಇನ್ವಾಯ್ಸ್ ನಂಬರ್ ಮತ್ತು ದಿನಾಂಕ ಸರಿಯಾಗಿದೆಯಾ ಎಂಬುದನ್ನು ಗಮನಿಸಿ. ಹಾಗೆಯೇ, ಸರಕುಗಳ ಮಾರಾಟಕ್ಕೆ ಎಚ್ಎಸ್ಎನ್ ಕೋಡ್ ಇರುತ್ತದೆ. ಸರ್ವಿಸ್ ಮಾರಾಟಕ್ಕೆ ಸರ್ವಿಸಸ್ ಅಕೌಂಟಿಂಗ್ ಕೋಡ್ (ಎಸ್ಎಸಿ) ಅನ್ನು ನೀಡಲಾಗುತ್ತದೆ. ಈ ಎರಡು ಕೋಡ್ ಸಂಖ್ಯೆಯನ್ನು ಜಿಎಸ್ಟಿ ಪೋರ್ಟಲ್ನಲ್ಲಿ ವೆರಿಫೈ ಮಾಡಬಹುದು.
ಹಾಗೆಯೇ, ಮಾರಾಟಗಾರನ ತೆರಿಗೆ ಪಾವತಿ ಇತಿಹಾಸವನ್ನೂ ಜಿಎಸ್ಟಿ ಪೋರ್ಟಲ್ನಲ್ಲಿ ಪರಿಶೀಲಿಸಬಹುದು. ಒಂದು ನಿರ್ದಿಷ್ಟ ಬಿಲ್ನಲ್ಲಿ ನಮೂದಾದಷ್ಟು ತೆರಿಗೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆಯಾ ಇಲ್ಲವಾ ಎಂಬುದನ್ನು ಕಂಡುಕೊಳ್ಳಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ