S&P Global Ratings: ಈ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 6.4ರಷ್ಟು ಹೆಚ್ಚಳ: ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಅಂದಾಜು

India GDP at 2023-24: ಅಮೆರಿಕದ ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಸಂಸ್ಥೆ ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ಹೊಸ ಅಂದಾಜು ಮಾಡಿದೆ. 2023-24ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 6.4ರಷ್ಟು ಬೆಳೆಯಬಹುದು ಎಂದು ಎಸ್ ಅಂಡ್ ಪಿ ಹೇಳಿದೆ. 2024-25ರ ಹಣಕಾಸು ವರ್ಷದಲ್ಲಿ ಭಾರತದ ಬೆಳವಣಿಗೆಯ ನಿರೀಕ್ಷೆಯನ್ನು ಶೇ. 6.9ರಿಂದ ಶೇ. 6.4ಕ್ಕೆ ತಗ್ಗಿಸಿದೆ.

S&P Global Ratings: ಈ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 6.4ರಷ್ಟು ಹೆಚ್ಚಳ: ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಅಂದಾಜು
ಭಾರತದ ಆರ್ಥಿಕತೆ
Follow us
|

Updated on: Nov 28, 2023 | 10:44 AM

ನವದೆಹಲಿ, ನವೆಂಬರ್ 28: ಜಾಗತಿಕ ಆರ್ಥಿಕ ಹಿನ್ನಡೆಯ ನಡುವೆಯೂ ಭಾರತದ ಆರ್ಥಿಕತೆ ಉತ್ತಮವಾಗಿ ಬೆಳೆಯಬಹುದು ಎಂದು ಎಲ್ಲಾ ತಜ್ಞ ಸಂಸ್ಥೆಗಳೂ ಹೇಳುತ್ತಿವೆ. ಅಮೆರಿಕದ ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಸಂಸ್ಥೆ (S&P Global Ratings) ಈ ಹಣಕಾಸು ವರ್ಷಕ್ಕೆ ಮಾಡಿದ ಅಂದಾಜು ಕೂಡ ಈ ಅಭಿಪ್ರಾಯವನ್ನು ಪುರಸ್ಕರಿಸುತ್ತದೆ. ಇದರ ಪ್ರಕಾರ ಈ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ (Indian Economy) ಶೇ. 6.4ರಷ್ಟು ಬೆಳೆಯಬಹುದು. ಹೆಚ್ಚುತ್ತಿರುವ ಆಹಾರ ಹಣದುಬ್ಬರ, ಕಡಿಮೆ ಆಗುತ್ತಿರುವ ರಫ್ತಿನ ನಡುವೆಯೂ ಭಾರತದ ಜಿಡಿಪಿ ಉತ್ತಮವಾಗಿ ಬೆಳೆಯಲು ದೇಶೀಯವಾಗಿ ಇರುವ ಬೇಡಿಕೆ ಕಾರಣ ಎಂದು ಹೇಳಲಾಗಿದೆ.

ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್​ನ ಈ ಹಿಂದಿನ ಅಂದಾಜಿನಲ್ಲಿ 2023-24ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 6ರಷ್ಟು ಬೆಳೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಈಗ ಅಂದಾಜನ್ನು ಪರಿಷ್ಕರಿಸಿದ್ದು, ನಿರೀಕ್ಷೆ ಹೆಚ್ಚಿಸಲಾಗಿರುವುದು ಗಮನಾರ್ಹ. ಆದರೆ, ಈ ಹಣಕಾಸು ವರ್ಷದ ದ್ವಿತೀಯಾರ್ಧ, ಅಂದರೆ, 2023ರ ಅಕ್ಟೋಬರ್​ನಿಂದ 2024ರ ಮಾರ್ಚ್​ವರೆಗಿನ ಅರ್ಧವಾರ್ಷಿಕ ಅವಧಿಯಲ್ಲಿ ಆರ್ಥಿಕತೆ ಕುಂಠಿತಗೊಳ್ಳಬಹುದು. ಇಲ್ಲದೇ ಹೋಗಿದ್ದರೆ ಇನ್ನೂ ಹೆಚ್ಚಿನ ವೃದ್ಧಿ ಸಾಧ್ಯತೆ ಇರುತ್ತಿತ್ತು. ಜೊತೆಗೆ ಮುಂದಿನ ಹಣಕಾಸು ವರ್ಷದ ಬೆಳವಣಿಗೆಯ ವೇಗಕ್ಕೂ ಇದೇ ಅಂಶ ಕಡಿವಾಣ ಹಾಕಬಹುದು ಎಂದು ಈ ಅಮೆರಿಕನ್ ರೇಟಿಂಗ್ ಏಜೆನ್ಸಿ ಹೇಳಿದೆ.

ಇದನ್ನೂ ಓದಿ: ವಿದೇಶದಲ್ಲಿರುವ ಹೂಡಿಕೆದಾರನ ಕಣ್ಣಿಗೆ ಭಾರತದ ನಾಗರಿಕತೆ ಮತ್ತು ಆರ್ಥಿಕ ಬೆಳವಣಿಗೆ ಹೇಗೆ ಕಾಣುತ್ತೆ? ಕುತೂಹಲ ಮೂಡಿಸುತ್ತೆ ಬಾಲಾಜಿ ಪೋಸ್ಟ್

ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಸಂಸ್ಥೆ ಮುಂದಿನ ಹಣಕಾಸು ವರ್ಷ, ಅಂದರೆ 2024-25ರ ವರ್ಷದಲ್ಲಿ ಭಾರತದ ಜಿಡಿಪಿ ಶೇ. 6.9ರಷ್ಟು ಬೆಳೆಯಬಹುದು ಎಂದು ಈ ಹಿಂದಿನ ಅಂದಾಜಿನಲ್ಲಿ ಅಭಿಪ್ರಾಯಪಟ್ಟಿತ್ತು. ಆದರೆ, ಹೊಸ ಅಂದಾಜು ಪ್ರಕಾರ ಜಿಡಿಪಿ ಶೇ. 6.4ರಷ್ಟು ಮಾತ್ರವೆ ಬೆಳೆಯಬಹುದು ಎಂದಿದೆ.

2022-23ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 7.2ರಷ್ಟು ಬೆಳೆದಿದೆ. ವಿಶ್ವದ ಪ್ರಮುಖ ಆರ್ಥಿಕತೆಗಳ ಪೈಕಿ ಭಾರತದ್ದು ಹೆಚ್ಚಿನ ವೇಗ. ಮುಂದಿನ ಎರಡು ವರ್ಷವೂ ಭಾರತವೇ ಹೆಚ್ಚಿನ ಜಿಡಿಪಿ ಬೆಳವಣಿಗೆ ಕಾಣುವುದು ಎನ್ನಲಾಗಿದೆ. ಈ ಹಣಕಾಸು ವರ್ಷದ ಮೊದಲ ಕ್ವಾರ್ಟರ್ ಆದ ಏಪ್ರಿಲ್​ನಿಂದ ಜೂನ್​ವರೆಗಿನ ಅವಧಿಯಲ್ಲಿ ಭಾರತದ ಜಿಡಿಪಿ ಶೇ. 7.8ರಷ್ಟು ಬೆಳೆದಿದೆ. ಎರಡನೇ ಕ್ವಾರ್ಟರ್​ನ ವರದಿ ನವೆಂಬರ 30ರಂದು ಬರುವ ನಿರೀಕ್ಷೆ ಇದೆ. ವಿವಿಧ ಆರ್ಥಿಕ ತಜ್ಞರು ಈ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಶೇ. 6.5ರ ಆಸುಪಾಸಿನಲ್ಲಿ ಇರಬಹುದು ಎಂದು ಅಂದಾಜಿಸಿರುವುದು ವಿಶೇಷ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ