Sri Lanka Financial Crisis: ಆರ್ಥಿಕ ಬಿಕ್ಕಟ್ಟಿನಲ್ಲಿ ದ್ವೀಪರಾಷ್ಟ್ರ ಶ್ರೀಲಂಕಾ; ಅಕ್ಕಿ, ಹಾಲಿನ ಪುಡಿಯಿಂದ ಎಲ್ಲವೂ ಪರಮ ದುಬಾರಿ

| Updated By: Srinivas Mata

Updated on: Mar 25, 2022 | 11:59 AM

ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ವಿಪರೀತಕ್ಕೆ ಹೋಗಿದೆ. ಆಹಾರ ಪದಾರ್ಥಗಳೂ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯಲ್ಲಿ ಭಾರೀ ಪ್ರಮಾಣದ ಏರಿಕೆ ಆಗಿದೆ. ಜನರು ಭಾರತಕ್ಕೆ ವಲಸೆ ಬರುವುದಕ್ಕೆ ಆರಂಭಿಸಿದ್ದಾರೆ.

Sri Lanka Financial Crisis: ಆರ್ಥಿಕ ಬಿಕ್ಕಟ್ಟಿನಲ್ಲಿ ದ್ವೀಪರಾಷ್ಟ್ರ ಶ್ರೀಲಂಕಾ; ಅಕ್ಕಿ, ಹಾಲಿನ ಪುಡಿಯಿಂದ ಎಲ್ಲವೂ ಪರಮ ದುಬಾರಿ
ಶ್ರೀಲಂಕಾ ಬಾವುಟ
Follow us on

ಶ್ರೀಲಂಕಾದಲ್ಲಿ (Sri Lanka) ಆರ್ಥಿಕ ಬಿಕ್ಕಟ್ಟು ತೀವ್ರವಾಗಿದ್ದು, ಅಗತ್ಯ ವಸ್ತುಗಳ ಬೆಲೆ ಸಿಕ್ಕಾಪಟ್ಟೆ ಜಾಸ್ತಿ ಆಗಿದೆ. ಹಾಲು ಮತ್ತು ಅಕ್ಕಿ ಬೆಲೆ ಕೇಳುವುದೇ ಬೇಡ. ತೈಲ ಭರ್ತಿ ಮಾಡಿಸುವುದಕ್ಕೆ ಜನರು ಸರತಿಯಲ್ಲಿ ನಿಲ್ಲುತ್ತಿದ್ದಾರೆ. ದ್ವೀಪ ರಾಷ್ಟ್ರದ ಹಲವೆಡೆ ವಿದ್ಯುತ್​ ಪೂರೈಕೆ ಸಮರ್ಪಕವಾಗಿಲ್ಲ. ಕೊನೆಗೆ ಪ್ರಶ್ನೆಪತ್ರಿಕೆ ಮುದ್ರಣ ಮಾಡುವುದಕ್ಕೆ ಅಗತ್ಯ ಪ್ರಮಾಣದ ಕಾಗದಗಳಿಲ್ಲ ಎಂಬ ಕಾರಣಕ್ಕೆ ಶಾಲೆಗಳಿಗೆ ಪರೀಕ್ಷೆಗಳನ್ನು ಮಾಡಲಿಕ್ಕೆ ಆಗುತ್ತಿಲ್ಲ. ಇನ್ನು ದೇಶದಲ್ಲಿ ಜೀವನ ಕಷ್ಟ ಎಂದು ಕೆಲವರು ಭಾರತಕ್ಕೆ ಬರುತ್ತಿದ್ದಾರೆ. 16 ಶ್ರೀಲಂಕನ್ನರು ಎರಡು ತಂಡಗಳಾಗಿ ಮಂಗಳವಾರ ತಮಿಳುನಾಡು ಪ್ರವೇಶಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಐಎಎನ್​ಎಸ್​ ಹೇಳಿದೆ. ಯಾರು ಹೀಗೆ ಶ್ರೀಲಂಕಾ ಬಿಟ್ಟು ಭಾರತಕ್ಕೆ ಬರುತ್ತಿದ್ದಾರೋ ಅವರು ನಿರುದ್ಯೋಗಿಗಳಾಗಿದ್ದಾರೆ. ತಮ್ಮ ದೇಶದಲ್ಲಿನ ಹಣದುಬ್ಬರದ ಕಾರಣಕ್ಕೆ ಅವರಿಗೆ ಅಗತ್ಯ ವಸ್ತುಗಳ ಖರೀದಿ ಮಾಡುವುದಕ್ಕೆ ಆಗುತ್ತಿಲ್ಲ ಮತ್ತು ಕಾಳಸಂತೆಯಲ್ಲಿನ ಬೆಲೆಗಳು ಕೊಡುವುದಕ್ಕೆ ಆಗದಷ್ಟು ಮೇಲೇರಿ ಕೂತಿದೆ.

ಶ್ರೀಲಂಕಾದ ಅಂಥದ್ದೇ ಒಬ್ಬ ವಲಸಿಗರು ದೋಣಿ ಮೂಲಕ ಭಾರತದ ರಾಮೇಶ್ವರಂ ತಲುಪಿಸಲು ಅಲ್ಲಿನ ರೂಪಾಯಿ ಲೆಕ್ಕದಲ್ಲಿ 50,000 ತೆತ್ತಿದ್ದಾರೆ. ಅವರನ್ನು ಭಾರತದ ಕೋಸ್ಟ್ ಗಾರ್ಡ್​ ರಕ್ಷಣೆ ಮಾಡಿದ್ದಾರೆ. ಇನ್ನೂ 10 ಜನ ತಮಿಳುನಾಡು ಪ್ರವೇಶಿಸಿದ್ದು, ಮಾಹಿತಿ ಲಭ್ತವಾಗಿಲ್ಲ ಎನ್ನಲಾಗಿದೆ. ಇಂಡಿಯನ್​ ಎಕ್ಸ್​ಪ್ರೆಸ್​ನಲ್ಲಿ ಈ ಬಗ್ಗೆ ವರದಿಯೊಂದು ಬಂದಿದ್ದು, ಮನ್ನಾರ್ ಮೂಲದ ವಿ.ಎಸ್.ಶಿವಕರ ಹೇಳುವಂತೆ, ಇದು ಮಹಾ ವಲಸೆಯ ಆರಂಭ ಮಾತ್ರ. ಹೆಚ್ಚುತ್ತಿರುವ ಬೆಲೆಯ ಬಗ್ಗೆ ಕೂಡ ಅವರು ಹೇಳಿರುವುದೇನೆಂದರೆ, ಇನ್ನೊಂದು ವಾರದಲ್ಲಿ ಒಂದು ಕೇಜಿ ಅಕ್ಕಿ ಬೆಲೆ 500 ಶ್ರೀಲಂಕನ್ ರೂಪಾಯಿ ಆಗುತ್ತದೆ. ಭಾರತದ ರೂಪಾಯಿ ಲೆಕ್ಕದಲ್ಲಿ 130 ಅಂದುಕೊಳ್ಳಿ. ಇವತ್ತಿಗೆ ಕೇಜಿ ಅಕ್ಕಿಗೆ 290 ರೂ., ಸಕ್ಕರೆ 290, ಕೇವಲ 400 ಗ್ರಾಮ್ ಹಾಲಿನ ಪುಡಿಗೆ ರೂ. 790 ಇದೆ. ಪೆಟ್ರೋಲ್ ಬೆಲೆ ಲೀಟರ್​ಗೆ 283 ರೂಪಾಯಿಗೆ ಏರಿಕೆಯಾಗಿದೆ. ಇವೆಲ್ಲವೂ ಶ್ರೀಲಂಕಾದ ರೂಪಾಯಿ ಲೆಕ್ಕದಲ್ಲಿ. ಶ್ರೀಲಂಕಾದ 1 ರೂಪಾಯಿ ಅಂದರೆ, ಭಾರತದ ಲೆಕ್ಕದಲ್ಲಿ 26 ಪೈಸೆ.

ಈ ಬೆಲೆ ಏರಿಕೆಯಿಂದ ರಸ್ಟೋರೆಂಟ್​ಗಳಲ್ಲೂ ದರ ಹೆಚ್ಚಳಕ್ಕೆ ಕಾರಣ ಆಗಿದೆ. ಒಂದು ಲೋಟ ಟೀ ಬೆಲೆ ಅಲ್ಲಿನ ರೂಪಾಯಿ ಲೆಕ್ಕದಲ್ಲಿ 100 ಅನ್ನು ಮುಟ್ಟಿದೆ. ದೇಶದ ಹೊರ ಭಾಗದಿಂದ ಅಗತ್ಯ ವಸ್ತುಗಳನ್ನು ತರುವುದಕ್ಕೆ ಶ್ರೀಲಂಕಾದ ಬಳಿ ದುಡ್ಡಿಲ್ಲ. ವಿಪರೀತ ದುಬಾರಿ ಆಗುತ್ತಿರುವ ಇಂಧನಕ್ಕೆ ಪಾವತಿಸಲು ಡಾಲರ್​ನ ಕೊರತೆ ಇದ್ದು, ಫೆಬ್ರವರಿ ತಿಂಗಳಲ್ಲಿ ಅದರ ಬಳಿ 2.31 ಬಿಲಿಯನ್​ ಡಾಲರ್​ ಮಾತ್ರ ಮೀಸಲು ಇತ್ತು. ಇನ್ನು ಫೆಬ್ರವರಿಯಲ್ಲಿ ಹಣದುಬ್ಬರ ದರ ಶೇ 15.1ರಷ್ಟಾಗಿದ್ದು, ಇದು ಏಷ್ಯಾದಲ್ಲೇ ಅತಿ ಹೆಚ್ಚಿನದಾಗಿದೆ. ಆಹಾರ ಹಣದುಬ್ಬರವನ್ನು ಶೇ 25.7 ತಲುಪಿದೆ.

ಶ್ರೀಲಂಕಾ ಸರ್ಕಾರದ ತಪ್ಪು ಆರ್ಥಿಕ ನೀತಿಗಳಿಂದಲೇ ದೇಶ ದಿವಾಳಿ ಆಗಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ. ದೇಶದಲ್ಲಿ ರಾಸಾಯನಿಕ ಗೊಬ್ಬರ ಬಳಕೆ ಸಂಪೂರ್ಣವಾಗಿ ನಿಲ್ಲಿಸಿ, ಸಾವಯವ ಆಹಾರ ಉತ್ಪನ್ನ ಬೆಳೆಯಲು ಒತ್ತು ನೀಡಿದ್ದರಿಂದ ಆಹಾರ ಉತ್ಪಾದನೆ ತೀವ್ರ ಕುಸಿತ ಕಂಡಿತು. ಸರ್ಕಾರವು ಅಂದುಕೊಂಡಂತೆ ನಿರೀಕ್ಷಿತ ಫಲ ನೀಡದ ಸಾವಯವ ಪದ್ಧತಿಯಿಂದಾಗಿ ಸಂಕಷ್ಟ ಎದುರಾಯಿತು. ಇನ್ನು ಶ್ರೀಲಂಕಾದ ವಿದೇಶೀ ವಿನಿಮಯ ಸಂಗ್ರಹ ಶೇ 80ರಷ್ಟು ಖಾಲಿ ಆಗಿದ್ದು, ಕೊವಿಡ್​ನಿಂದಾಗಿ ಶ್ರೀಲಂಕಾದ ಪ್ರವಾಸೋದ್ಯಮಕ್ಕೂ ಹೊಡೆತ ಬಿದ್ದಿದೆ. ಪ್ರವಾಸೋದ್ಯಮ 3 ವರ್ಷದಿಂದ ಸಂಪೂರ್ಣ ನೆಲ ಕಚ್ಚಿದೆ. ತನ್ನ ಆದಾಯಕ್ಕೆ ಪ್ರಮುಖವಾಗಿ ಪ್ರವಾಸೋದ್ಯಮ ನಂಬಿದ್ದ ಶ್ರೀಲಂಕಾಗೆ ಕೊವಿಡ್​​ನಿಂದ ಭಾರೀ ಹೊಡೆತ ಬಿದ್ದಿದ್ದು, ಆರ್ಥಿಕವಾಗಿ ದಿವಾಳಿಯಾಗಿದೆ. ಅಗತ್ಯ ವಸ್ತುಗಳನ್ನು ವಿದೇಶದಿಂದ ಖರೀದಿಸಲು ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ.

ಇದನ್ನೂ ಓದಿ: ಮುದ್ರಣ ಕಾಗದದ ಕೊರತೆ: ಲಕ್ಷಾಂತರ ಶಾಲಾ ವಿದ್ಯಾರ್ಥಿಗಳ ಪರೀಕ್ಷೆ ರದ್ದುಗೊಳಿಸಿದ ಶ್ರೀಲಂಕಾ