ಮುಂಬೈ, ಆಗಸ್ಟ್ 29: ಜಿಯೋ ಬಳಕೆದಾರರಿಗೆ ಉಚಿತವಾಗಿ 100 ಜಿಬಿವರೆಗೂ ಕ್ಲೌಡ್ ಸ್ಟೋರೇಜ್ ಸೌಲಭ್ಯ ಸಿಗಲಿದೆ. ಈ ವಿಷಯವನ್ನು ರಿಲಾಯನ್ಸ್ ಇಂಡಸ್ಟ್ರೀಸ್ನ 47ನೇ ವಾರ್ಷಿಕ ಮಹಾಸಭೆಯಲ್ಲಿ ಕಂಪನಿಯ ಛೇರ್ಮನ್ ಮುಕೇಶ್ ಅಂಬಾನಿ ಘೋಷಿಸಿದ್ದಾರೆ. ದೀಪಾವಳಿ ಹಬ್ಬದಿಂದ ಈ ಆಫರ್ ಅನ್ನು ಎಲ್ಲಾ ಜಿಯೋ ಬಳಕೆದಾರರಿಗೂ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಹಾಗೆಯೇ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ತಮ್ಮ ಕಾರ್ಯಾಚರಣೆಗೆಗಳಲ್ಲಿ ಅಳವಡಿಸಲು ಅಂಬಾನಿ ಅವರು ಜಿಯೋ ಬ್ರೇನ್ ಯೋಜನೆಯನ್ನು ಪ್ರಕಟಿಸಿದ್ದಾರೆ.
ಕ್ಲೌಡ್ ಸ್ಟೋರೇಜ್ನಲ್ಲಿ ನಮ್ಮ ಫೋಟೋ, ವಿಡಿಯೋ, ಫೈಲ್ಸ್ ಸೇರಿದಂತೆ ಎಲ್ಲಾ ರೀತಿಯ ಡಿಜಿಟಲ್ ಕಂಟೆಂಟ್ ಅನ್ನು ಸಂಗ್ರಹಿಸಬಹುದು. ಜಿಯೋದ ಕ್ಲೌಡ್ ಸ್ಟೋರೇಜ್ನಲ್ಲಿ 100 ಜಿಬಿವರೆಗಿನ ಡಾಟಾವನ್ನು ಉಚಿತವಾಗಿ ಸಂಗ್ರಹಿಸಬಹುದು. ಮುಕೇಶ್ ಅಂಬಾನಿ ನೀಡಿದ ಮಾಹಿತಿ ಪ್ರಕಾರ ಇದಕ್ಕಿಂತ ಹೆಚ್ಚಿನ ಕ್ಲೌಡ್ ಸ್ಟೋರೇಜ್ಗೆ ಶುಲ್ಕ ನೀಡಬೇಕಾಗಬಹುದು.
ಇದನ್ನೂ ಓದಿ: ಶ್ರೀಮಂತಿಕೆಯಲ್ಲಿ ಅಂಬಾನಿಯನ್ನು ಹಿಂದಿಕ್ಕಿದ ಅದಾನಿ; ಬಿಲಿಯನೇರ್ಸ್ ಪಟ್ಟಿಗೆ ಶಾರುಖ್ ಸೇರ್ಪಡೆ
ಬೇರೆ ಕಂಪನಿಗಳು ಹೆಚ್ಚಿನ ಕ್ಲೌಡ್ ಸ್ಟೋರೇಜ್ಗೆ ಶುಲ್ಕ ವಿಧಿಸುತ್ತವೆ. ಗೂಗಲ್ನಲ್ಲಿ 100 ಜಿಬಿ ಕ್ಲೌಡ್ ಸ್ಟೋರೇಜ್ಗೆ ತಿಂಗಳಿಗೆ 130 ರೂ ದರ ವಿಧಿಸಲಾಗುತ್ತದೆ. ಆ್ಯಪಲ್ ಕಂಪನಿ 50ಜಿಬಿ ಸ್ಟೋರೇಜ್ಗೆ ತಿಂಗಳಿಗೆ 75 ರೂ ವಿಧಿಸುತ್ತದೆ. 200 ಜಿಬಿ ಸ್ಟೋರೇಜ್ಗೆ 219 ರೂ ಶುಲ್ಕ ಇದೆ. ಜಿಯೋದಲ್ಲಿ 100 ಜಿಬಿಗಿಂತ ಹೆಚ್ಚು ಸ್ಟೋರೇಜ್ಗೆ ಶುಲ್ಕ ವಿಧಿಸಲಾಗುತ್ತದಾದರೂ ಬೇರೆ ಪ್ರಮುಖ ಕಂಪನಿಗಳ ದರಕ್ಕಿಂತ ಕಡಿಮೆ ಇರುತ್ತದೆ ಎಂದಿದ್ದಾರೆ.
ರಿಲಾಯನ್ಸ್ ಗ್ರೂಪ್ನ ಎಲ್ಲಾ ಉದ್ದಿಮೆಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಬಳಕೆ ಮಾಡಿ ಉತ್ಕೃಷ್ಟ ಸೇವೆ ಒದಗಿಸುವಂತೆ ಮಾಡಲು ಅನುವಾಗುವಂತೆ ಜಿಯೋ ಬ್ರೇನ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ರಿಯಲ್ ಟೈಮ್ನಲ್ಲಿ ಕಸ್ಟಮರ್ ಸರ್ವಿಸ್ ಉತ್ತಮ ಗೊಳಿಸುವುದು, ಎಐ ಬಳಕೆ ಹೆಚ್ಚಿಸುವುದು, ವರ್ಕ್ಫ್ಲೋ ಸುಗಮಗೊಳಿಸುವುದು ಇವೇ ಮುಂತಾದ ಕೆಲಸಗಳತ್ತ ಜಿಯೋ ಬ್ರೇನ್ ಗಮನ ಹರಿಸಲಿದೆ. ಈ ವಿಚಾರವನ್ನು ಆರ್ಐಎಲ್ನ ವಾರ್ಷಿಕ ಮಹಾಸಭೆಯಲ್ಲಿ ಮುಕೇಶ್ ಅಂಬಾನಿ ತಿಳಿಸಿದ್ದಾರೆ.
ಜಿಯೋ ಬ್ರೇನ್ ಮೊದಲಿಗೆ ರಿಲಾಯನ್ಸ್ ಗ್ರೂಪ್ಗೆ ಸೀಮಿತವಾಗಿರುತ್ತದಾದರೂ, ಅದು ಪರಿಪಕ್ವಗೊಂಡ ಬಳಿಕ ಬೇರೆ ಸಂಸ್ಥೆಗಳಿಗೂ ಅದರ ಸೇವೆ ವಿಸ್ತರಿಸುವ ಆಲೋಚನೆ ಇರುವುದನ್ನು ಅಂಬಾನಿ ಬಹಿರಂಗಪಡಿಸಿದ್ದಾರೆ.
ಮುಕೇಶ್ ಅಂಬಾನಿ ಪ್ರಕಾರ ಎಐ ಟೆಕ್ನಾಲಜಿಯು ಕೃಷಿಗಾರಿಕೆ, ಶಿಕ್ಷಣ, ಹೆಲ್ತ್ಕೇರ್ ಕ್ಷೇತ್ರಗಳಲ್ಲಿ ಗಣನೀಯ ಸುಧಾರಣೆ ತರಬಲ್ಲುದು. ಸಣ್ಣ ಉದ್ದಿಮೆಗಳಿಗೆ ಅದು ವರದಾನವಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ