Future Retail Limited: ದೆಹಲಿ ಹೈಕೋರ್ಟ್ ಅಮೆಜಾನ್ ಆದೇಶದ ವಿರುದ್ಧ ಫ್ಯೂಚರ್ ರೀಟೇಲ್ ಸುಪ್ರೀಂ ಮೊರೆ

| Updated By: Srinivas Mata

Updated on: Aug 28, 2021 | 10:23 PM

ರಿಲಯನ್ಸ್ ಹಾಗೂ ಫ್ಯೂಚರ್ ರೀಟೇಲ್ ವಹಿವಾಟಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ, ಫ್ಯೂಚರ್ ರೀಟೇಲ್ ಲಿಮಿಟೆಡ್ ಸುಪ್ರೀಮ್ ಕೋರ್ಟ್ ಮೊರೆ ಹೋಗಿದೆ.

Future Retail Limited: ದೆಹಲಿ ಹೈಕೋರ್ಟ್ ಅಮೆಜಾನ್ ಆದೇಶದ ವಿರುದ್ಧ ಫ್ಯೂಚರ್ ರೀಟೇಲ್ ಸುಪ್ರೀಂ ಮೊರೆ
ಸುಪ್ರೀಂ​ ಕೋರ್ಟ್
Follow us on

ಕಿಶೋರ್ ಬಿಯಾನಿ ನೇತೃತ್ವದ ಫ್ಯೂಚರ್ ರೀಟೇಲ್ ಲಿಮಿಟೆಡ್ ಶನಿವಾರ ನೀಡಿದ ಮಾಹಿತಿ ಪ್ರಕಾರ, ದೆಹಲಿ ಹೈಕೋರ್ಟ್​ನ ಆದೇಶದ ವಿರುದ್ಧ ಸುಪ್ರೀಮ್ ಕೋರ್ಟ್​ ಮೊರೆ ಹೋಗಿದೆ. ರಿಲಯನ್ಸ್ ರಿಟೇಲ್ ಜತೆಗಿನ 24,713 ಕೋಟಿ ರೂಪಾಯಿಯ ವಹಿವಾಟಿಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ, ಸಿಂಗಾಪೂರ್ ಮೂಲದ ತುರ್ತು ಮಧ್ಯಸ್ಥಿಕೆ ಕೇಂದ್ರ ನೀಡಿದ ಆದೇಶ ಜಾರಿಗೆ ದೆಹಲಿ ಕೋರ್ಟ್ ತಿಳಿಸಿತ್ತು. ರೆಗ್ಯುಲೇಟರಿ ಫೈಲಿಂಗ್​ನಲ್ಲಿ ಫ್ಯೂಚರ್ ರೀಟೇಲ್ ತಿಳಿಸಿರುವಂತೆ, ಫೆಬ್ರವರಿ 2, 2021 ಹಾಗೂ ಮಾರ್ಚ್ 18, 2021ರಂದು ಹೊರಡಿಸಿದ ಆದೇಶದ ವಿರುದ್ಧ ಸುಪ್ರೀಮ್​ ಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. “ಈ ಅಹವಾಲನ್ನು ತುರ್ತಾಗಿ ಆಲಿಸಬೇಕು” ಹಾಗೂ ಈ ಹಿಂದಿನ ಆಕ್ಷೇಪಾರ್ಹ ಆದೇಶದ ವಿರುದ್ಧ ತಡೆ ನೀಡಬೇಕು ಎಂದು ಮನವಿ ಮಾಡಲಾಗಿದೆ. ತನ್ನ ಅರ್ಜಿಯಲ್ಲಿ ಫ್ಯೂಚರ್ ಲಿಮಿಟೆಡ್ ತಿಳಿಸಿರುವಂತೆ, ಸೇರ್ಪಡೆ ಯೋಜನೆಯು ಎನ್​ಸಿಎಲ್​ಟಿ ಮುಂದೆ ಲಿಸ್ಟ್ ಆಗಿದೆ. ಹೈಕೋರ್ಟ್​ ಆದೇಶದ ಕಾರಣಕ್ಕೆ ಅದು ಮುಂದಕ್ಕೆ ಸಾಗುತ್ತಿಲ್ಲ ಎಂದು ತಿಳಿಸಿದೆ.

ಇದರ ಪರಿಣಾಮವಾಗಿ ಯೋಜನೆಯಿಂದ ಅನುಕೂಲ ಆಗಬೇಕಾದ ಸಾರ್ವಜನಿಕರು, ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳಿಗೂ ತೊಂದರೆ ಆಗಿದೆ. ಒಂದು ವೇಳೆ ಇದರಲ್ಲಿ ಅಂದುಕೊಂಡಂತೆ ಆಗದಿದ್ದಲ್ಲಿ ಫ್ಯೂಚರ್ ರಿಟೇಲ್ ಲಿಮಿಟೆಡ್ ಲಿಕ್ವಿಡೇಷನ್ (ವ್ಯವಹಾರದ ಪರಿಸಮಾಪ್ತಿ)ಗೆ ಹೋಗುವುದು ಅನಿವಾರ್ಯ ಆಗಲಿದೆ ಎಂದಿದೆ. ಇದರ ಹೊರತಾಗಿ, ಅಂದಾಜು 28,000 ಕೋಟಿ ರೂಪಾಯಿಯಷ್ಟಿರುವ ಸಾರ್ವಜನಿಕರ ಹಣ, ಅದು ಬ್ಯಾಂಕ್ ಸಾಲ ಮತ್ತು ಎಫ್​ಆರ್​ಎಲ್​ ಹಾಗೂ ಅದರ ಸಮೂಹ ಕಂಪೆನಿಗಳು ವಿತರಿಸಿದ ಡಿಬೆಂಚರ್​ಗಳು ಸಹ ಅಪಾಯಕ್ಕೆ ಸಿಲುಕುತ್ತವೆ ಎಂದು ಅರ್ಜಿಯಲ್ಲಿ ಕೇಳಿಕೊಳ್ಳಲಾಗಿದೆ.

ಸಾರ್ವಜನಿಕರಿಗೆ ಇದರಿಂದ ಆಗುವ ನಷ್ಟದ ಪ್ರಮಾಣ ತುಂಬ ದೊಡ್ಡದು. ಅದನ್ನು ಊಹಿಸಲು ಕೂಡ ಸಾಧ್ಯವಿಲ್ಲ. ಈ ಯೋಜನೆಯ ಭಾಗವಾಗಿರುವ ಎಫ್​ಆರ್​ಎಲ್ ಮತ್ತು ಇತರ ಕಂಪೆನಿಗಳ 35,575ಕ್ಕೂ ಹೆಚ್ಚು ಸಿಬ್ಬಂದಿ ಬದುಕು ಸಂಕಷ್ಟಕ್ಕೆ ಸಿಲುಕಿದಂತಾಗುತ್ತದೆ ಎಂದು ಹೇಳಲಾಗಿದೆ. ಸದ್ಯಕ್ಕೆ ಯೋಜನೆಯು ಮುಂಬೈ ಎನ್​ಸಿಎಲ್​ಟಿ ಮುಂದಿದೆ. ಮೊದಲಿಗೆ ಫ್ಯೂಷರ್ ಸಮೂಹದ ರೀಟೇಲ್ ವ್ಯವಹಾರ ಮತ್ತು ಹೋಲ್​ಸೇಲ್ ವಹಿವಾಟನ್ನು ಒಟ್ಟುಗೂಡಿಸುವುದು. ಮತ್ತು ಲಾಜಿಸ್ಟಿಕ್ಸ್ ಹಾಗೂ ವೇರ್​ಹೌಸಿಂಗ್ ಉದ್ಯಮವನ್ನು ಫ್ಯೂಚರ್ ಎಂಟರ್​ಫ್ರೈಸಸ್​ ಲಿಮಿಟೆಡ್​ನಲ್ಲಿ ಒಗ್ಗೂಡಿಸಿ, ಆ ನಂತರ ಅದನ್ನು ರಿಲಯನ್ಸ್ ರೀಟೇಲ್ ವೆಂಚರ್ಸ್​ಗೆ ಮಾರಾಟ ಮಾಡುವುದು ಯೋಜನೆಯಾಗಿತ್ತು. ಅದಕ್ಕೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನಿಂದ 24,731 ಕೋಟಿ ರೂಪಾಯಿ ಪಾವತಿಸುವ ಒಪ್ಪಂದವಾಗಿತ್ತು.

ಆದರೆ, ಈ ವ್ಯವಹಾರ ಒಪ್ಪಂದಕ್ಕೆ ಅಮೆಜಾನ್ ವಿರೋಧಿಸಿತ್ತು. ಅಂದಹಾಗೆ ಫ್ಯೂಚರ್ ಕೂಪನ್ಸ್​ನಲ್ಲಿ ಹೂಡಿಕೆದಾರ ಆಗಿದ್ದ ಅಮೆಜಾನ್, ಫ್ಯೂಚರ್ ರೀಟೇಲ್ ಲಿಮಿಟೆಡ್​ನಲ್ಲಿ ಷೇರುದಾರ ಆಗಿತ್ತು. ಆ ನಂತರ ಅಮೆಜಾನ್​ನಿಂದ ಸಿಂಗಾಪೂರ್ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ (SIAC) ಮೊರೆ ಹೋಗಲಾಗಿತ್ತು. ಕಳೆದ ಅಕ್ಟೋಬರ್ 25ರಂದು ಅಲ್ಲಿ ಫ್ಯೂಚರ್ ಹಾಗೂ ರಿಲಯನ್ಸ್ ವ್ಯವಹಾರಕ್ಕೆ ತಡೆ ನೀಡಲಾಗಿತ್ತು. ಅದಾದ ಮೇಲೆ ಈ ವಿಚಾರವನ್ನು ದೆಹಲಿ ಹೈ ಕೋರ್ಟ್​ಗೆ ಒಯ್ಯಲಾಗಿತ್ತು. ಅಲ್ಲಿ ಏಕಪೀಠದ ನ್ಯಾಯಮೂರ್ತಿ ಆರ್. ಮಿಧಾ ಅವರು ರಿಲಯನ್ಸ್- ಫ್ಯೂಚರ್ ವ್ಯವಹಾರ ಯಥಾಸ್ಥಿತಿ ಕಾಯ್ದುಕೊಳ್ಳಲು ಫೆ. 2ಕ್ಕೆ ಆದೇಶಿಸಿದ್ದರು. ಆ ನಂತರ ಮಾರ್ಚ್ 18ಕ್ಕೆ ಸಿಂಗಾಪೂರ್ ಮಧ್ಯಸ್ಥಿಕೆ ಕೇಂದ್ರದ ಆದೇಶ ಪಾಲಿಸುವಂತೆ ಸೂಚಿಸಿದ್ದರು.

ಇದನ್ನೂ ಓದಿ: Reliance- Future Deal: ಸುಪ್ರೀಮ್​ ಕೋರ್ಟ್​ನಲ್ಲಿ ಅಮೆಜಾನ್​ ಪರ ಆದೇಶ; ರಿಲಯನ್ಸ್​- ಫ್ಯೂಚರ್​ ಡೀಲ್​ಗೆ ಕಲ್ಲು

(Future Retail Limited Moves To Supreme Court Against Delhi High Court Order In Reliance And Future Deal)