
ಐಟಿ ಕಂಪನಿಗಳಲ್ಲಿ ಬೆಂಚ್ ಸಿಟ್ಟರ್ಸ್ ಇರ್ತಾರೆ, ಇವರಿಗೆ ಯಾವ ಪ್ರಾಜೆಕ್ಟ್ ಕೂಡ ಅಸೈನ್ ಆಗಿರೋದಿಲ್ಲ. ಅವರು ವೇಟಿಂಗ್ ಲಿಸ್ಟ್ನಂತೆ ಕಾಯುತ್ತಿರಬೇಕಾಗುತ್ತದೆ. ಅವರು ಬೆಂಚ್ ಸಿಟ್ಟರ್ಸ್ ಎಂಬುದು ಮ್ಯಾನೇಜರ್ನಿಂದ ಹಿಡಿದು ಎಚ್ಆರ್ವರೆಗೆ ಎಲ್ಲರಿಗೂ ಗೊತ್ತಿರುತ್ತದೆ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಉದ್ಯೋಗಿಯೊಬ್ಬರು ವಿಚಿತ್ರ ಅನುಭವ ಹಂಚಿಕೊಂಡಿದ್ದಾರೆ. ಇವರು ಕೆಲಸಕ್ಕೆ ಸೇರಿ ಒಂದು ವರ್ಷ ಆಗಿದೆ. ಆದರೆ, ಕೆಲಸ ಹೇಳೋರಿಲ್ಲ, ಕೇಳೋರಿಲ್ಲ. ಸಂಬಳ ಮಾತ್ರ ತಪ್ಪಿಲ್ಲ. ಮುಂದೇನು ಮಾಡ್ಲಿ ಅನ್ನೋ ವ್ಯಥೆ ಈತನದು.
ರೆಡ್ಡಿಟ್ನಲ್ಲಿ ಈ ವ್ಯಕ್ತಿ ಹಾಕಿದ ಪೋಸ್ಟ್ನ ಹೆಡ್ಲೈನ್ ಹೀಗಿದೆ: ‘ನನ್ನನ್ನೇ ಮರೆತುಬಿಟ್ಟ ಕಂಪನಿ’. ಈತ ದೊಡ್ಡ ಕಂಪನಿಯೊಂದರಲ್ಲಿ ಸರ್ವಿಸ್ನೌ ಡೆವಲಪರ್ ಆಗಿ ವರ್ಷದ ಹಿಂದೆ ಕೆಲಸಕ್ಕೆ ಸೇರಿರುತ್ತಾನೆ. ನಿಗದಿತ ತರಬೇತಿ ಪಡೆಯುವಂತೆ ಆತನ ಮ್ಯಾನೇಜರ್ ತಿಳಿಸಿರುತ್ತಾರೆ. ಬೇರೆ ಟೀಮ್ ಸದಸ್ಯರಿಗೂ ಪರಿಚಯಿಸಿರುವುದಿಲ್ಲ. ಇದಾಗಿ ಒಂದೆರಡು ವಾರದಲ್ಲಿ ಮ್ಯಾನೇಜರ್ ಕೆಲಸ ಕಳೆದುಕೊಳ್ಳುತ್ತಾರೆ.
ತನಗೆ ಬೇರೆ ಮ್ಯಾನೇಜರ್ ನಿಗದಿ ಮಾಡಬಹುದು ಎಂದು ಈ ಉದ್ಯೋಗಿ ಸುಮ್ಮನಾಗಿದ್ದಾನೆ. ಎಷ್ಟು ದಿನಗಳಾದರೂ ಯಾರೂ ಹೇಳೋರಿಲ್ಲ, ಕೇಳೋರಿಲ್ಲ. ಆಫೀಸ್ಗೆ ಬರುವುದು, ಕಂಪ್ಯೂಟರ್ ಓಪನ್ ಮಾಡಿ ಬ್ರೌಸಿಂಗ್ ಮಾಡುತ್ತಾ ಕಾಲ ವ್ಯಯ ಮಾಡುವುದು, ಇದೇ ಈತನ ನಿತ್ಯದ ಕರ್ಮವಾಗಿತ್ತು.
ಕೊನೆಗೆ, ತನ್ನ ಹಿಂದಿನ ಮ್ಯಾನೇಜರ್ನ ಡೈರೆಕ್ಟರ್ ಅನ್ನು ಈತ ಸಂಪರ್ಕಿಸಿ ಪರಿಸ್ಥಿತಿ ವಿವರಿಸಿದ್ದಾನೆ. ಈತನಿಗೆ ಕೆಲಸ ಹೇಳುವಂತೆ ಒಬ್ಬರನ್ನು ಅಸೈನ್ ಮಾಡುತ್ತೀನಿ ಎಂದು ಆ ನಿರ್ದೇಶಕಿ ಹೇಳಿ ತಿಂಗಳುಗಳಾದರ ಯಾರೂ ಈತನ ಬಳಿ ಬಂದು ಮಾತಾಡಲಿಲ್ಲ.
ಈ ವಿಷಯವನ್ನು ಎಚ್ಆರ್ ವಿಭಾಗಕ್ಕೆ ತಿಳಿಸಿದರೆ ಕೆಲಸ ಹೋಗುತ್ತದೆ ಎನ್ನುವ ಭಯ ಈ ಉದ್ಯೋಗಿಯದ್ದು. ಆದರೂ ಕೂಡ ಕೆಲಸವನ್ನೇ ಮಾಡದೆ ಬಿಟ್ಟಿಯಾಗಿ ಸಂಬಳ ಬರುತ್ತಿದೆ. ಆದರೆ, ನೈಜ ಕೆಲಸದ ಅನುಭವವೇ ಸಿಗುತ್ತಿಲ್ಲ. ಎಚ್ಆರ್ಗೆ ತಿಳಿಸಿದರೆ ಕೆಲಸ ಹೋಗುತ್ತದೆ. ತಾನೇ ಕೆಲಸ ಬಿಟ್ಟರೆ ಇಷ್ಟು ದಿನ ಕೆಲಸ ಮಾಡಿದ್ದಕ್ಕೆ ನೈಜ ಅನುಭವ ಇಲ್ಲವಾಗುತ್ತದೆ, ಅಥವಾ ಯಾರ ರೆಫರೆನ್ಸ್ ಕೂಡ ಇಲ್ಲದಂತಾಗುತ್ತದೆ.
ಇದನ್ನೂ ಓದಿ: ಎನ್ವಿಡಿಯಾ ನನ್ನ ಜೀವಮಾನದ ಕಾರ್ಯ; ನಾನು ತಪ್ಪು ಮಾಡಿಬಿಟ್ಟೆ ಎಂದ ಜೆನ್ಸೆನ್ ಹುವಾಂಗ್; ವಾಪಸ್ ಕರೆಸಿಕೊಳ್ಳಲು ಕಂಪನಿ ಹಿಂದೇಟು
ಈ ಸಂದಿಗ್ಧತೆಯಲ್ಲಿರುವ ಉದ್ಯೋಗಿ, ಮುಂದೇನು ಮಾಡಲಿ ಎಂದು ರೆಡ್ಡಿಟ್ ಸಮುದಾಯದವರನ್ನು ಕೇಳಿದ್ದಾನೆ. ಬಹಳ ಜನರು, ಕಂಪನಿಯವರೇ ಕೆಲಸದಿಂದ ತೆಗೆದುಹಾಕುವ ಮೊದಲು ರಾಜೀನಾಮೆ ಕೊಟ್ಟು ಹೊರಬರುವಂತೆ ಸಲಹೆ ನೀಡಿದ್ದಾರೆ. ಇನ್ನೂ ಕೆಲವರು, ಅಲ್ಲಿದ್ದಷ್ಟು ದಿನ ಅಗತ್ಯ ಆನ್ಲೈನ್ ಕೋರ್ಸ್ಗಗಳ ಮೂಲಕ ಹೊಸ ಹೊಸ ಸ್ಕಿಲ್ಸ್ ಕಲಿತುಕೊಳ್ಳುವಂತೆ ಕಿವಿಮಾತು ತಿಳಿಸಿದ್ದಾರೆ. ಮತ್ತಷ್ಟು ಜನರು, ಬಿಟ್ಟಿ ಸಂಬಳ ಬರುವವರೆಗೂ ಮಾಡುತ್ತಾ ಇರಿ ಎಂದು ತಮಾಷೆ ಮಾಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ