Go First: ಗೋಫಸ್ಟ್​ಗೆ ತಿಂಗಳಿಗೆ 5 ಎಂಜಿನ್ ಒದಗಿಸಿ: ಪಿಅಂಡ್​ಡಬ್ಲ್ಲ್ಯೂಗೆ ಸಿಂಗಾಪುರ ಕೋರ್ಟ್ ಆದೇಶ

|

Updated on: Jul 07, 2023 | 10:49 AM

Singapore Court Orders P&W To Supply Engines To Go First: ಆಗಸ್ಟ್ 1ರಿಂದ ಡಿಸೆಂಬರ್ 31ರವರೆಗೂ ತಿಂಗಳಿಗೆ 5 ಎಂಜಿನ್​ಗಳನ್ನು ಗೋಫಸ್ಟ್ ಏರ್​ಲೈನ್​ಗೆ ಒದಗಿಸುವಂತೆ ಪಿ ಅಂಡ್ ಡಬ್ಲ್ಯೂ ಕಂಪನಿಗೆ ಸಿಂಗಾಪುರ ಕೋರ್ಟ್​ವೊಂದು ಆದೇಶಿಸಿದೆ.

Go First: ಗೋಫಸ್ಟ್​ಗೆ ತಿಂಗಳಿಗೆ 5 ಎಂಜಿನ್ ಒದಗಿಸಿ: ಪಿಅಂಡ್​ಡಬ್ಲ್ಲ್ಯೂಗೆ ಸಿಂಗಾಪುರ ಕೋರ್ಟ್ ಆದೇಶ
ಗೋಫಸ್ಟ್ ಏರ್​ಲೈನ್
Follow us on

ನವದೆಹಲಿ: ಹಣಕಾಸು ಸಂಕಷ್ಟಕ್ಕೆ ಸಿಲುಕಿ ಸ್ಥಗಿತಗೊಂಡಿರುವ ಗೋಫಸ್ಟ್ ಏರ್​ಲೈನ್ ಸಂಸ್ಥೆ (Go First Airline) ಪುನಶ್ಚೇತನದ ಪ್ರಕ್ರಿಯೆ ಚಾಲನೆಯಲ್ಲಿದೆ. ಇದೇ ಹೊತ್ತಿನಲ್ಲಿ ಸಿಂಗಾಪುರದ ಅಂತಾರಾಷ್ಟ್ರೀಯ ವ್ಯಾಜ್ಯಪರಿಹಾರ ಕೇಂದ್ರ (SIAC- Singapore International Arbitration Center) ಇದೀಗ ಗೋಫಸ್ಟ್​ನ ವಿಮಾನಗಳ ಎಂಜಿನ್ ಸಮಸ್ಯೆಗೆ ಪರಿಹಾರ ಒದಗಿಸಿದೆ. ಗೋಫಸ್ಟ್ ವಿಮಾನಗಳಿಗೆ ಪ್ರತೀ ತಿಂಗಳು 5 ಎಂಜಿನ್​ಗಳನ್ನು ಪೂರೈಸುವಂತೆ ಪ್ರ್ಯಾಟ್ ಅಂಡ್ ವಿಟ್ನೀ (P&W- Pratt and Whitney) ಕಂಪನಿಗೆ ಸಿಂಗಾಪುರದ ಈ ನ್ಯಾಯಮಂಡಳಿ ಆದೇಶಿಸಿದೆ. ಆಗಸ್ಟ್ 1ರಿಂದ ಆರಂಭಗೊಂಡು ಡಿಸೆಂಬರ್ 31ರವರೆಗೂ ಈ ಕ್ರಮದಲ್ಲಿ ಎಂಜಿನ್​ಗಳನ್ನು ಪಿ ಅಂಡ್ ಡಬ್ಲ್ಯೂ ಒದಗಿಸಬೇಕಾಗುತ್ತದೆ. ತಿಂಗಳಿಗೆ 5ರಂತೆ ಐದು ತಿಂಗಳಲ್ಲಿ ಪಿ ಅಂಡ್ ಡಬ್ಲ್ಯೂ 25 ಎಂಜಿನ್​ಗಳನ್ನು ಗೋಫಸ್ಟ್ ವಿಮಾನಗಳಿಗೆ ನೀಡಬೇಕಾಗುತ್ತದೆ.

ಗೋಫಸ್ಟ್ ಸಂಸ್ಥೆ ಕಾರ್ಯಾಚರಿಸುತ್ತಿದ್ದ 52 ವಿಮಾನಗಳ ಪೈಕಿ 25ಕ್ಕೂ ಹೆಚ್ಚು ವಿಮಾನಗಳು ಎಂಜಿನ್ ಸಮಸ್ಯೆಯಿಂದ ಹಾರಾಟ ನಿಲ್ಲಿಸಿದ್ದವು. ವಿಶ್ವದ ಹಲವು ವಿಮಾನಗಳಿಗೆ ಎಂಜಿನ್​ಗಳನ್ನು ತಯಾರಿಸಿ ಸರಬರಾಜು ಮಾಡುವ ಅಮೆರಿಕದ ಪ್ರಾಟ್ ಅಂಡ್ ವಿಟ್ನೀ ಸಂಸ್ಥೆ ಗೋಫಸ್ಟ್​ಗೂ ಎಂಜಿನ್ ಪೂರೈಸುತ್ತಿತ್ತು. ಆದರೆ, ಎಂಜಿನ್ ಸಮಸ್ಯೆಯಾಗಿ ಬದಲೀ ಎಂಜಿನ್ ಕೊಡುವಂತೆ ಅಥವಾ ದುರಸ್ತಿ ಮಾಡುವಂತೆ ಅನೇಕ ಬಾರಿ ಮನವಿ ಮಾಡಿಕೊಂಡರೂ ಏನೂ ಸ್ಪಂದನೆ ಸಿಕ್ಕಿಲ್ಲ ಎಂದು ಗೋಫಸ್ಟ್ ಸಂಸ್ಥೆ ತನ್ನ ಇನ್ಸಾಲ್ವೆನ್ಸಿ ಅರ್ಜಿ ವೇಳೆ ಅಲವತ್ತುಕೊಂಡಿತ್ತು. ಎಂಜಿನ್ ವೈಫಲ್ಯದಿಂದ ವಿಮಾನಗಳ ಹಾರಾಟ ನಿಂತ ಕಾರಣ ತಾನು ಬಹಳ ನಷ್ಟ ಅನುಭವಿಸಬೇಕಾಯಿತು ಎಂದು ಹೇಳಿ ಮೇ 3ರಿಂದ ಗೋಫಸ್ಟ್ ಏರ್​ಲೈನ್ ಸಂಸ್ಥೆ ತನ್ನ ಕಾರ್ಯಾಚರಣೆ ಪೂರ್ತಿ ನಿಲ್ಲಿಸಿತು.

ಇದನ್ನೂ ಓದಿSIM Cards: ಒಬ್ಬರಿಗೆ ಹೆಚ್ಚು ಸಿಮ್ ಕಾರ್ಡ್​ಗಳು ಸಿಗದು; ಈ ವರ್ಷ ಜಾರಿಗೆ ಬರುವ ಟೆಲಿಕಾಂ ಸುಧಾರಣೆಗಳ ಮುಖ್ಯಾಂಶಗಳನ್ನು ತಿಳಿದಿರಿ

ಭಾರತದ ಪ್ರಾಧಿಕಾರದ ಸಹಾಯದಿಂದ ಮರುಚೇತರಿಕೆಯ ಹಾದಿಯಲ್ಲಿರುವ ಗೋಫಸ್ಟ್ ಏರ್​ಲೈನ್ ಸಂಸ್ಥೆ ತನ್ನ ಕಾರ್ಯಾಚರಣೆ ಪುನಾರಂಭ ಸಾಧ್ಯವಾಗುವ ನಿಟ್ಟಿನಲ್ಲಿ 450 ಕೋಟಿ ರೂ ಹೆಚ್ಚುವರಿ ಸಾಲ ಕೊಡುವಂತೆ ಬ್ಯಾಂಕುಗಳಿಗೆ ಮನವಿ ಮಾಡಿತ್ತು. ಅದಕ್ಕೆ ಬ್ಯಾಂಕುಗಳ ಕೂಟ ಒಪ್ಪಿಕೊಂಡಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಇದೀಗ ಸಿಂಗಾಪುರದ ನ್ಯಾಯಮಂಡಳಿಯ ಆದೇಶ ಗೋಫಸ್ಟ್​ಗೆ ನಿರಾಳ ತಂದಿದೆ.

ವಿಮಾನ ಗುತ್ತಿಗೆ ಕೊಟ್ಟ ಸಂಸ್ಥೆಗಳೂ ನಿರಾಳ

ಇದೇ ವೇಳೆ, ಗೋಫಸ್ಟ್ ಏರ್​ಲೈನ್​ಗೆ ವಿಮಾನಗಳನ್ನು ಗುತ್ತಿಗೆ ಕೊಟ್ಟ ಸಂಸ್ಥೆಗಳಿಗೆ ತಮ್ಮ ವಿಮಾನಗಳ ಪಾಲನೆಗೆ ದೆಹಲಿ ಹೈಕೋರ್ಟ್ ಅವಕಾಶ ಕೊಟ್ಟಿದೆ. ತಿಂಗಳಿಗೆ ಎರಡು ಬಾರಿಯಾದರೂ ಬಂದು ವಿಮಾನಗಳ ಮೈಂಟೆನೆನ್ಸ್ ಮಾಡಲು ಈ ಕಂಪನಿಗಳಿಗೆ ಅನುವು ಮಾಡಿಕೊಡಬೇಕೆಂದು ಡಿಜಿಸಿಎ ಮತ್ತು ಸಂಬಂಧಿತ ಏರ್​ಪೋರ್ಟ್ ಪ್ರಾಧಿಕಾರಗಳಿಗೆ ಕೋರ್ಟ್ ತಿಳಿಸಿದೆ. ಗುತ್ತಿಗೆದಾರ ಕಂಪನಿಗಳ ಲಿಖಿತ ಒಪ್ಪಿಗೆ ಇಲ್ಲದೆಯೇ ವಿಮಾನದ ಯಾವುದೇ ಭಾಗವನ್ನು ತೆಗೆಯುವುದಾಗಲೀ, ಬದಲಿಸುವುದಾಗಲೀ ಮಾಡುವಂತಿಲ್ಲ ಎಂದು ಗೋಫಸ್ಟ್ ಮತ್ತು ಐಆರ್​ಪಿಗೆ ಕೋರ್ಟ್ ಸೂಚಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ