Gold Demand In India: ಕೊರೊನಾ ಎರಡನೇ ಅಲೆಯಲ್ಲಿ ಏನಾಗಿದೆ ಭಾರತದ ಗ್ರಾಹಕರ ಚಿನ್ನದ ಬೇಡಿಕೆ?

|

Updated on: May 29, 2021 | 5:42 PM

ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಭಾರತದಲ್ಲಿ ಚಿನ್ನ ಖರೀದಿಸುವ ಗ್ರಾಹಕರ ಸ್ವಭಾವದಲ್ಲಿ ಆಗಿರುವ ಬದಲಾವಣೆ ಏನು ಎಂಬುದರ ವಿವರ ಇಲ್ಲಿದೆ.

Gold Demand In India: ಕೊರೊನಾ ಎರಡನೇ ಅಲೆಯಲ್ಲಿ ಏನಾಗಿದೆ ಭಾರತದ ಗ್ರಾಹಕರ ಚಿನ್ನದ ಬೇಡಿಕೆ?
ಸಾಂದರ್ಭಿಕ ಚಿತ್ರ
Follow us on

ಚಿನ್ನ ಹಾಗೂ ಭಾರತೀಯರನ್ನು ಪ್ರತ್ಯೇಕವಾಗಿ ಯೋಚನೆ ಮಾಡೋದು ಕಷ್ಟ. ಏಕೆಂದರೆ, ಚಿನ್ನದ ಆಭರಣಗಳನ್ನು ಮೈಮೇಲೆ ಹೇರಿಕೊಂಡು ಓಡಾಡಬೇಕು ಅಂದುಕೊಳ್ಳುವುದಕ್ಕಿಂತ ಕಷ್ಟ ಕಾಲಕ್ಕೆ ಆಗುತ್ತದೆ ಎಂದು ಖರೀದಿಸುವವರೇ ಹೆಚ್ಚು. ಆದರೆ ಕೊರೊನಾ ಬಿಕ್ಕಟ್ಟು ಕಾಣಿಸಿಕೊಂಡ ಮೇಲೆ ಭಾರತೀಯರು ಚಿನ್ನವನ್ನು ಖರೀದಿಸುವ ವಿಧಾನದಲ್ಲಿ ಆಧುನಿಕತೆಗೆ ಬದಲಾಗಲು ಸಾಧ್ಯವಾಗದೆ ಈಗಲೂ ರೀಟೇಲ್ ಸ್ಟೋರ್​ಗಳ ಕಡೆಗೆ ನೋಡುವವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಹಾಗೇ ಇದೆ. ನಿಧಾನಕ್ಕೆ ಸಾಂಪ್ರದಾಯಿಕ ವಿಧಾನದಿಂದ ಸ್ವಲ್ಪಸ್ವಲ್ಪವೇ ಬದಲಾಗುತ್ತಿರುವ ಕುಟುಂಬಗಳ ಸಂಖ್ಯೆ ಇರುವುದು ಹೌದು ಎಂದು ಒಪ್ಪಿಕೊಳ್ಳಬಹುದಾದರೂ ವಿಶ್ವದ ಎರಡನೇ ಅತಿದೊಡ್ಡ ಚಿನ್ನದ ಮಾರುಕಟ್ಟೆಯಾದ ಭಾರತವು ಈಗಲೂ ಆಭರಣ ಮಳಿಗೆಗಳ ಹಿಡಿತದಲ್ಲಿಯೇ ಇದೆ. ಆದರೆ ಬದಲಾಗುವ ಪ್ರಕ್ರಿಯೆ ವೇಗ ಪಡೆದಿದೆ ಎಂದು ಕಲ್ಯಾಣ್​ ಜ್ಯುವೆಲ್ಲರ್ಸ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್ ಕಲ್ಯಾಣರಾಮನ್ ಅಭಿಪ್ರಾಯ ಪಟ್ಟಿದ್ದಾರೆ.

ಕಳೆದ ತ್ರೈಮಾಸಿಕದಲ್ಲಿ ಚಿನ್ನ ಖರೀದಿಸುವ ವಿಧಾನದಲ್ಲಿನ ಬದಲಾವಣೆ ಭಾರೀ ವೇಗ ಪಡೆದುಕೊಂಡಿರುವುದು ನೋಡುತ್ತಿದ್ದೇವೆ ಎಂದು ಸಂದರ್ಶನವವೊಂದರಲ್ಲಿ ಅವರು ಹೇಳಿದ್ದಾರೆ. ಮೊದಲ ಬಾರಿಗೆ ಖರೀದಿ ಮಾಡುತ್ತಿರುವವರು ಸ್ಟೋರ್​ಗಳಿಗೆ ಬರುತ್ತಿದ್ದಾರೆ. ವರ್ಷಕ್ಕೆ ಹಿಂದಿನ ಸಂಖ್ಯೆಗಿಂತ ಶೇ 50ಕ್ಕಿಂತ ಹೆಚ್ಚು ಬರುತ್ತಿದ್ದಾರೆ. ಈಗಿನ ಕೋವಿಡ್ ಸನ್ನಿವೇಶದಲ್ಲಿ ಸಿಕ್ಕಾಪಟ್ಟೆ ಜನರಿರುವ ರಸ್ತೆಗಳಿಗೆ ಮತ್ತು ಸಣ್ಣ ಸಣ್ಣ ಅಂಗಡಿಗಳಿಗೆ ಹೋಗುವ ಅಗತ್ಯ ಇಲ್ಲ. ತುಂಬ ದೊಡ್ಡ ಆಭರಣ ಮಳಿಗೆಗಳಿಗೆ, ಸಾಮಾಜಿಕ ಅಂತರ ಇಟ್ಟುಕೊಂಡು ಕೊಳ್ಳಬಹುದು ಎಂದು ರಮೇಶ್ ಕಲ್ಯಾಣ್​ರಾಮನ್ ಅಭಿಪ್ರಾಯ ಪಡುತ್ತಾರೆ.

ಆಭರಣ ವಲಯಕ್ಕೆ ಉತ್ತೇಜನ:
ಭಾರತದಲ್ಲಿ ಕೊರೊನಾ ಎರಡನೇ ಅಲೆ ಪ್ರಭಾವ ತೀವ್ರವಾಗಿದೆ. ಆ ಕಾರಣಕ್ಕೆ ದೇಶದ ಹಲವು ರಾಜ್ಯಗಳಲ್ಲಿ ಕಠಿಣ ನಿರ್ಬಂಧಗಳು ಹೇರಿದ್ದು, ಸಂಚಾರಕ್ಕೆ ಸಂಪೂರ್ಣ ಮುಕ್ತವಾಗೇನೂ ಇಲ್ಲ. ಕಳೆದ ವರ್ಷ ಚಿನ್ನದ ಬೇಡಿಕೆಯು ಎರಡು ದಶಕಗಳಲ್ಲಿ ಕನಿಷ್ಠ ಮಟ್ಟಕ್ಕೆ ಇಳಿದಿತ್ತು. ಆ ನಂತರ 2021ರ ಮೊದಲ ಮೂರು ತಿಂಗಳಲ್ಲಿ ದರ ಇಳಿಕೆ ಆದ ಮೇಲೆ ಆರ್ಥಿಕ ಚೇತರಿಕೆ ಜತೆಗೆ ಬೇಡಿಕೆ ಸಹ ಚಿಗಿತುಕೊಂಡಿತ್ತು. ಚಿನ್ನ ಖರೀದಿಸುವವರ ಸ್ವಭಾವದಲ್ಲಿನ ಆದ ಬದಲಾವಣೆ ಮತ್ತು ಮದುವೆಗಾಗಿ ಚಿನ್ನದಾಭರಣ ಕೊಳ್ಳುವುದನ್ನು ಶುರು ಮಾಡಿದ ಮೇಲೆ ಆಭರಣ ವಲಯಕ್ಕೆ ಉತ್ತೇಜನ ಸಿಕ್ಕಿದೆ. ಅದಕ್ಕೆ ಮತ್ತೊಂದು ಉದಾಹರಣೆ ಅಂದರೆ, ಕಲ್ಯಾಣ್ ಜ್ಯುವೆಲ್ಲರ್ಸ್ ಲಾಭದ ಪ್ರಮಾಣ ಜನವರಿಯಿಂದ ಮಾರ್ಚ್ ತ್ರೈಮಾಸಿಕದಲ್ಲಿ ಶೇ 54ರಷ್ಟು ಹೆಚ್ಚಾಗಿದೆ.

ಗುಣಮಟ್ಟದ ಆಭರಣ ಖರೀದಿಗೆ ಗ್ರಾಹಕರು ಉತ್ಸುಕ:
ಗುಣಮಟ್ಟದ ವಿಷಯದಲ್ಲಿ ಗ್ರಾಹಕರು ಬ್ರ್ಯಾಂಡ್​ಗಳ ಆಭರಣ ಖರೀದಿಗೆ ಉತ್ಸುಕರಾಗಿದ್ದಾರೆ. ಏಕೆಂದರೆ, ಗುಣಮಟ್ಟ ಅಂದಾಕ್ಷಣ ಅವುಗಳ ಮೇಲೆ ನಂಬಿಕೆ ಇರಿಸಿರುವುದು ಹೆಚ್ಚಿದೆ. ಈ ವಿಷಯದಲ್ಲಿ ಸರ್ಕಾರದ ನಿಯಮಗಳನ್ನು ಸಣ್ಣ ಮಟ್ಟದ ಆಭರಣ ಮಾರಾಟಗಾರರು ಅಳವಡಿಸಿಕೊಳ್ಳಬೇಕು ಎಂದು ಗ್ರಾಹಕರು ನಿರೀಕ್ಷಿಸುತ್ತಾರೆ ಎಂದು ಅದೇ ಕ್ಷೇತ್ರದಲ್ಲಿ ಇರುವವರು ಅಭಿಪ್ರಾಯ ಪಡುತ್ತಾರೆ. ಇನ್ನು ಸರ್ಕಾರದಿಂದ ಕೂಡ ದೇಶದಲ್ಲಿ ಡಿಜಿಟೈಸೇಷನ್, ಜಿಎಸ್​ಟಿ ಪರಿಣಾಮಕಾರಿ ಜಾರಿ, ಗುಣಮಟ್ಟದ ಖಾತ್ರಿಗ ಪ್ರಯತ್ನ ತೀವ್ರವಾಗಿದೆ. ಆ ಕಾರಣಕ್ಕೆ ಈಗಾಗಲೇ ಜನಪ್ರಿಯವಾದ ಬ್ರ್ಯಾಂಡ್​ಗಳಾದ ಟಾಟಾ ಸಮೂಹದ ಟೈಟನ್, ಕಲ್ಯಾಣ್ ಮತ್ತು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್​ ಮಾರುಕಟ್ಟೆ ಪಾಲು ಹೆಚ್ಚಾಗುತ್ತಿದೆ.

ಮತ್ತೊಂದು ತ್ರೈಮಾಸಿಕದಲ್ಲಿಯಾದರೂ ಚೇತರಿಕೆ:
ಇನ್ನೊಂದು ವಿಚಾರ ಏನೆಂದರೆ. ಕಲ್ಯಾಣ ಜ್ಯುವೆಲ್ಲರಿಯ ಶೇ 60ರಷ್ಟು ದೇಶೀಯ ಮಳಿಗೆಗಳು ದಕ್ಷಿಣ ಭಾರತದಲ್ಲೇ ಇದೆ. ಕೇರಳ ಮೂಲದ ಕಲ್ಯಾಣ್ ಜ್ಯುವೆಲ್ಲರ್ಸ್, ದೇಶದಲ್ಲಿ 10ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯುವ ಉದ್ದೇಶ ಇಟ್ಟುಕೊಂಡಿದೆ. ಕೊರೊನಾ ಎರಡನೇ ಅಲೆಯ ಹೊರತಾಗಿಯೂ ಬೇಡಿಕೆ ಮತ್ತೆ ಚಿಗಿತುಕೊಳ್ಳಬಹುದು ಎಂಬ ವಿಶ್ವಾಸ ಈ ಸಂಸ್ಥೆಯದು. ಜತೆಗೆ ಆದಾಯ ಹೆಚ್ಚು ಮಾಡಿಕೊಳ್ಳುವ ನಿಟ್ಟಿನಲ್ಲಿ ದಕ್ಷಿಣ ಭಾರತದ ಹೊರಗೂ ಹೆಚ್ಚೆಚ್ಚು ಮಳಿಗೆಗಳನ್ನು ತೆರೆಯಬೇಕು ಎಂಬುದು ಉದ್ದೇಶವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸ್ಥಳೀಯ ಲಾಕ್​ಡೌನ್ ಹಾಕಲಾಗಿದೆ. ಆದರೆ ಸಾವಿನ ಪ್ರಕರಣಗಳು ಹೆಚ್ಚಾಗಿವೆ ಎಂದು ಕಲ್ಯಾಣ್​ರಾಮನ್ ಆತಂಕ ವ್ಯಕ್ತಪಡಿಸುತ್ತಾರೆ. ಐಪಿಒ ನಂತರ ನಮ್ಮ ಬ್ಯಾಲೆನ್ಸ್ ಶೀಟ್ ಬಲಗೊಂಡಿದೆ. ನಮಗೆ ಗೊತ್ತಿದೆ ಬೇಡಿಕೆ ಹೋಗುವುದಿಲ್ಲ. ಆದರೆ ಬೇರೆ ತ್ರೈಮಾಸಿಕದಲ್ಲಿ ಬರುತ್ತದೆ ಎಂಬ ವಿಶ್ವಾಸ ಅವರದು.

ಇದನ್ನೂ ಓದಿ: ಸಾಲಗಾರರಿಗೆ ಸೇರಿದ ರೂ. 404 ಕೋಟಿ ರೂ. ಮೌಲ್ಯದ ಚಿನ್ನವನ್ನು ಹರಾಜು ಹಾಕಿದ ಮಣಪ್ಪುರಂ ಫೈನಾನ್ಸ್

(How corona virus second wave changed gold buying behavior of Indian consumers? Explained here)