ಗೃಹಸಾಲ ಪಡೆಯುತ್ತಿದ್ದೀರಾ? 50 ಲಕ್ಷ ರೂ ಸಾಲ ಪಡೆಯಲು ನಿಮ್ಮ ಸಂಬಳ ಎಷ್ಟಿರಬೇಕು ಗೊತ್ತಾ? ಇಲ್ಲಿದೆ ಲೆಕ್ಕಾಚಾರ

Things to remember before applying for home loan: ಸಾಲ ಇಲ್ಲದೇ ಮನೆ ಕಟ್ಟುವುದು ಅಥವಾ ಕೊಳ್ಳುವುದು ಬಹಳ ಕಷ್ಟ. ಸಾಲ ಅನಿವಾರ್ಯ. ಗೃಹಸಾಲ ನೀಡುವಾಗ ಬ್ಯಾಂಕುಗಳು ಸ್ಥಿರ ಆದಾಯ ಅನುಪಾತ ಗಮನಿಸುತ್ತವೆ. ಹಾಗೆಯೇ, ನೀವೂ ಕೂಡ ಸಾಲ ಪಡೆಯುವ ಮುನ್ನ ಎಷ್ಟು ಇಎಂಐ ಆಗುತ್ತೆ, ಅದಕ್ಕೆ ನಿಮ್ಮ ಆದಾಯ ಎಷ್ಟು ಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಗೃಹಸಾಲ ಪಡೆಯುತ್ತಿದ್ದೀರಾ? 50 ಲಕ್ಷ ರೂ ಸಾಲ ಪಡೆಯಲು ನಿಮ್ಮ ಸಂಬಳ ಎಷ್ಟಿರಬೇಕು ಗೊತ್ತಾ? ಇಲ್ಲಿದೆ ಲೆಕ್ಕಾಚಾರ
ಹಣ
Image Credit source: Getty Images

Updated on: Jul 13, 2026 | 3:14 PM

ಸ್ವಂತ ಮನೆ ಪ್ರತಿಯೊಬ್ಬರ ಕನಸಾಗಿರುತ್ತದೆ. ಆದರೆ ಇಂದಿನ ದಿನಗಳಲ್ಲಿ ಮನೆ ಮಾಡುವುದು ಅಷ್ಟು ಸುಲಭವಲ್ಲ. ನಿವೇಶನ ಖರೀದಿಸಿ, ಮನೆ ಕಟ್ಟಬೇಕೆಂದರೆ ಕೋಟಿ ಮೀರುತ್ತದೆ. ಫ್ಲಾಟ್ ತೆಗೆದುಕೊಂಡರೂ 35 ಲಕ್ಷ ರೂಗಿಂತ ಕಡಿಮೆ ಇರೋದಿಲ್ಲ. ಹೀಗಾಗಿ, ಸಾಲ ಮಾಡದೆ ಮನೆ ಮಾಡಿಕೊಳ್ಳಲು ಆಗದೇ ಇರುವಂತಹ ದುಬಾರಿ ದುನಿಯಾ ಇದು. ಮನೆ ಖರೀದಿಸಲು, ಕಟ್ಟಲು ಇರುವ ಸುಲಭ ಉಪಾಯ ಮತ್ತು ಮಾರ್ಗ ಗೃಹಸಾಲ ಅಥವಾ ಹೋಮ್ ಲೋನ್. ಆದರೆ, ನಿಮಗೆ ಜೀರ್ಣಿಸಿಕೊಳ್ಳಲು ಆಗುಷ್ಟೇ ಆಹಾರ ಸೇವಿಸುವುದು ನಿಸರ್ಗ ನಿಯಮ. ಅಂತೆಯೇ, ವಾಪಸ್ ತೀರಿಸಲು ಶಕ್ತಿ ಇರುವಷ್ಟು ಮಾತ್ರ ಸಾಲ ಮಾಡಬೇಕು. ಅದು ಹಣಕಾಸು ನಿಯಮ. ನೀವು ಗೃಹ ಸಾಲ (Home Loan) ಪಡೆಯುವಾಗ ಎಷ್ಟು ಇಎಂಐ ಕಟ್ಟಬೇಕು, ಎಷ್ಟು ಸಂಬಳ ಇರಬೇಕು ಎಂಬಿತ್ಯಾದಿ ವಿವರ ಇಲ್ಲಿದೆ.

FOIR ನಿಯಮ: ಬ್ಯಾಂಕುಗಳು ಸಾಲ ನೀಡುವಾಗ ಸ್ಥಿರ ಆದಾಯದ ಅನುಪಾತವಾದ FOIR (Fixed Obligation-to-Income Ratio) ಅನ್ನು ಪರಿಗಣಿಸುತ್ತವೆ. ಇದರ ಪ್ರಕಾರ, ಒಬ್ಬ ವ್ಯಕ್ತಿಯ ಒಟ್ಟು ಮಾಸಿಕ ಆದಾಯದಲ್ಲಿ ಇಎಂಐ ಮೊತ್ತವು ಶೇ. 50 ಕ್ಕಿಂತ ಹೆಚ್ಚಿರಬಾರದು. ಅಂದರೆ ನಿಮ್ಮ ಸಂಬಳದ ಅರ್ಧದಷ್ಟು ಭಾಗ ನಿಮ್ಮ ಜೀವನೋಪಾಯಕ್ಕೆ ಉಳಿಯಬೇಕು.

ಇದನ್ನೂ ಓದಿ: ತಿಂಗಳಿಗೆ ಕೇವಲ 5,000 ರೂ ಹೂಡಿಕೆಯಿಂದ 21 ವರ್ಷದಲ್ಲಿ 1 ಕೋಟಿ ಸಂಪತ್ತು ಸೃಷ್ಟಿ ಸಾಧ್ಯ

30 ವರ್ಷಗಳ ಲೋನ್ ಅವಧಿಗೆ ಲೆಕ್ಕಾಚಾರ

  • ಶೇ. 9 ರ ಬಡ್ಡಿದರ ಇದ್ದರೆ: 50 ಲಕ್ಷ ರೂ. ಸಾಲಕ್ಕೆ ಮಾಸಿಕ ಇಎಂಐ ಅಂದಾಜು 40,231 ರೂ. ಆಗುತ್ತದೆ.
  • ಶೇ. 8 ರ ಬಡ್ಡಿದರ ಇದ್ದರೆ: ಮಾಸಿಕ ಇಎಂಐ ಅಂದಾಜು 36,688 ರೂ. ಆಗುತ್ತದೆ.

35 ವರ್ಷಗಳ ದೀರ್ಘಾವಧಿಗೆ ಇಎಂಐ ಲೆಕ್ಕಾಚಾರ

  • ಶೇ. 9 ರ ಬಡ್ಡಿದರ: ಮಾಸಿಕ ಇಎಂಐ ಅಂದಾಜು 39,200 ರೂ. ಇರಲಿದೆ.
  • ಶೇ. 8 ರ ಬಡ್ಡಿದರ: ಮಾಸಿಕ ಇಎಂಐ ಅಂದಾಜು 35,514 ರೂ. ಆಗುತ್ತದೆ.

ಇಷ್ಟು ಇಎಂಐ ಪಾವತಿಸಬೇಕೆಂದರೆ ನಿಮಗೆ ಎಷ್ಟು ಸಂಬಳ ಇರಬೇಕು?

ಹಣಕಾಸು ತಜ್ಞರ ಪ್ರಕಾರ, ನಿಮ್ಮ ಒಟ್ಟು ಆದಾಯದಲ್ಲಿ ಸಾಲ ಪಾವತಿ ಮೊತ್ತ ಶೇ. 50 ಮೀರುವಂತಿಲ್ಲ. ಅಂದರೆ, ನಿಮಗೆ ಸಂಬಳ 50,000 ರೂ ಬರುತ್ತಿದ್ದರೆ ಒಟ್ಟು ಇಎಂಐ ಮತ್ತು ಸಾಲ ಪಾವತಿ ಮೊತ್ತ 25,000 ರೂ ಮೀರುವಂತಿಲ್ಲ. ಇದರಲ್ಲಿ ಲೋನ್​ಗೆ ಕಟ್ಟುವ ಇಎಂಐ, ಕ್ರೆಡಿಟ್ ಕಾರ್ಡ್ ಬಿಲ್, ಇತರ ಸಾಲದ ಕೈಕಂತುಗಳು ಯಾವುದೇ ಇದ್ದರೂ ಒಳಗೊಳ್ಳುತ್ತದೆ.

ಈ ಲೆಕ್ಕಾಚಾರದಲ್ಲಿ ನೀವು ಶೇ. 8ರ ಬಡ್ಡಿದರದಲ್ಲಿ 35 ವರ್ಷದ ಮರುಪಾವತಿ ಅವಧಿಗೆ 50 ಲಕ್ಷ ರೂ ಸಾಲ ಪಡೆದರೆ ಮಾಸಿಕ ಇಎಂಐ 35,514 ರೂ ಇರುತ್ತದೆ. ಇದನ್ನು ಪಡೆಯಲು ನಿಮ್ಮ ಸಂಬಳ ಅಥವಾ ಮಾಸಿಕ ಆದಾಯ ಕನಿಷ್ಠ 70,000 ರೂ ಇರಬೇಕು.

ಶೇ. 9ರ ಬಡ್ಡಿದರದಲ್ಲಿ 30 ವರ್ಷ ಅವಧಿಗೆ ಸಾಲ ಪಡೆಯಬೇಕೆಂದರೆ ನಿಮಗೆ ಕನಿಷ್ಠ ಸಂಬಳ 81,000 ರೂ ಆದರೂ ಇರಬೇಕು.

ಇದನ್ನೂ ಓದಿ: ಮಲ್ಟಿ ಅಸೆಟ್ ಫಂಡ್​ಗಳಿಗೆ ಹೂಡಿಕೆ ಒಳಹರಿವು ಶೇ. 22 ಹೆಚ್ಚಳ; ಏನಿದು ಈ ರೀತಿಯ ಫಂಡ್?

ಸಾಲ ಪಡೆಯುವಾಗ ಗಮನಿಸಬೇಕಾದ ಇತರ ಅಂಶಗಳು

ಬ್ಯಾಂಕುಗಳು ಲೋನ್ ಬಗ್ಗೆ ಪ್ರಚಾರ ಮಾಡುವಾಗ ಬಡ್ಡಿದರ ಶೇ. 7, ಶೇ. 8ರಿಂದ ಆರಂಭವಾಗುತ್ತದೆ ಹೇಳಿಕೊಳ್ಳುತ್ತವೆ. ವಾಸ್ತವದಲ್ಲಿ ಅಷ್ಟು ಕಡಿಮೆ ಬಡ್ಡಿದರದಲ್ಲಿ ಎಲ್ಲರಿಗೂ ಸಾಲ ಸಿಕ್ಕೋದಿಲ್ಲ. ಕ್ರೆಡಿಟ್ ಸ್ಕೋರ್, ನಿಮ್ಮ ಮಾಸಿಕ ಆದಾಯ, ಇತರ ಸಾಲಗಳ ಹೊರೆ, ವಯಸ್ಸು, ಕೆಲಸದ ಸ್ಥಿರತೆ ಇತ್ಯಾದಿ ವಿವಿಧ ಅಂಶಗಳನ್ನು ಗಮನಿಸಲಾಗುತ್ತದೆ. ನೀವು ದೀರ್ಘಾವಧಿ ಸಾಲ ಮರುಪಾವತಿ ಸಾಮರ್ಥ್ಯ ಇರುವುದು ಖಚಿತವಾದಲ್ಲಿ ನಿಮಗೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಬ್ಯಾಂಕ್ ಕೊಡುತ್ತದೆ.

ಸಾಲ ಮರುಪಾವತಿ ಕಷ್ಟಸಾಧ್ಯವಿದೆ ಎನಿಸಿದಲ್ಲಿ ಹೆಚ್ಚು ಬಡ್ಡಿದರ ವಿಧಿಸಲಾಗುತ್ತದೆ. ಹೆಚ್ಚಿನ ಮೊತ್ತದ ಸಾಲ ಕೂಡ ಮಂಜೂರಾಗುವುದಿಲ್ಲ. ಹೀಗಾಗಿ, ನಿಮ್ಮ ಕ್ರೆಡಿಟ್ ಹಿಸ್ಟರಿಯನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ.

ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಆನ್‌ಲೈನ್‌ನಲ್ಲಿ ಲಭ್ಯವಿರುವ ‘EMI Calculator’ ಬಳಸಿ ನಿಮ್ಮ ಆದಾಯಕ್ಕೆ ಹೊಂದುವ ಇಎಂಐ ಅನ್ನು ಮೊದಲೇ ಯೋಜಿಸಿಕೊಳ್ಳುವುದು ಭವಿಷ್ಯದ ಆರ್ಥಿಕ ಸ್ಥಿರತೆಗೆ ಒಳ್ಳೆಯದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us