ನವದೆಹಲಿ, ನವೆಂಬರ್ 6: ಭಾರತದ ರಕ್ಷಣಾ ವಲಯದಲ್ಲಿ (defense sector) ಮೊದಲ ಬಾರಿಗೆ ಪೂರ್ಣಪ್ರಮಾಣದ ಎಫ್ಡಿಐಗೆ (100% FDI) ಸರ್ಕಾರ ಅನುಮತಿಸಿದೆ. ಸ್ವೀಡನ್ನ ಸಾಬ್ ಸಂಸ್ಥೆ ಭಾರತದಲ್ಲಿ ರಾಕೆಟ್ ಉತ್ಪಾದಿಸಲು ಭಾರತ ಅವಕಾಶ ಕೊಟ್ಟಿದೆ. ಎಕನಾಮಿಕ್ ಟೈಮ್ಸ್ ಪತ್ರಿಕೆಯ ವರದಿ ಪ್ರಕಾರ ಅಕ್ಟೋಬರ್ ತಿಂಗಳಲ್ಲಿ ಸಾಬ್ ಕಂಪನಿಯ (Sweden’s Saab) ಪ್ರಸ್ತಾಪಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿರುವುದು ತಿಳಿದುಬಂದಿದೆ. ಇದೂವರೆಗೂ ವಿದೇಶೀ ಕಂಪನಿಗೂ ಭಾರತದಲ್ಲಿ ರಕ್ಷಣಾ ವಲಯದಲ್ಲಿ ಪೂರ್ಣ ಹೂಡಿಕೆ ಮಾಡಲು ಅನುಮತಿ ಸಿಕ್ಕಿರಲಿಲ್ಲ.
ಭಾರತದಲ್ಲಿ ಸದ್ಯ ಇರುವ ನಿಯಮದ ಪ್ರಕಾರ, ರಕ್ಷಣಾ ವಲಯದಲ್ಲಿ ಶೇ. 74ರವರೆಗೆ ಎಫ್ಡಿಐಗೆ ಅನುಮತಿ ಇದೆ. ಅದಾದ ಬಳಿಕ ಯೋಜನೆ ಆಧಾರವಾಗಿ ಪೂರ್ಣ ಹೂಡಿಕೆ ಬೇಕೆಂದರೆ ಅದನ್ನು ಪರಿಗಣಿಸುವ ಅವಕಾಶವೂ ಕಾನೂನಿನಲ್ಲಿ ಇದೆ. ಆದರೆ, ನೂರು ಪ್ರತಿಶತದಷ್ಟು ಹೂಡಿಕೆ ಇದುವರೆಗೆ ಸಾಧ್ಯವಾಗಿರಲಿಲ್ಲ. ಈಗ ಸ್ವೀಡನ್ನ ಸಾಬ್ಗೆ ಈ ಭಾಗ್ಯ ಸಿಕ್ಕಿದೆ.
ಸ್ವೀಡನ್ ದೇಶದ ಸಾಬ್ ಕಂಪನಿ ಹರ್ಯಾಣದಲ್ಲಿ ತನ್ನ ರಾಕೆಟ್ಗಳನ್ನು ತಯಾರಿಸಲಿದೆ. ಸಾಬ್ ಎಫ್ಎಫ್ವಿ ಇಂಡಿಯಾ (Saab FFV India) ಎಂಬ ಹೊಸ ಉಪಸಂಸ್ಥೆಯನ್ನು ನೊಂದಣಿ ಮಾಡಲಾಗಿದೆ. ಹೆಗಲ ಮೇಲೆ ಇಟ್ಟು ಹೊಡೆಯಬಹುದಾದ ಕಾರ್ಲ್ ಗುಸ್ತಾಫ್ ಎಂ4 ಸಿಸ್ಟಂನ ಇತ್ತೀಚಿನ ರಾಕೆಟ್ಗಳನ್ನು ಹರ್ಯಾಣದ ಘಟಕದಲ್ಲಿ ತಯಾರಿಸಲಾಗುತ್ತದೆ. ಇದಕ್ಕೆ ಸುಮಾರು 500 ಕೋಟಿ ರೂನಷ್ಟು ಬಂಡವಾಳ ಹೂಡಿಕೆಯಾಗುವ ಸಾಧ್ಯತೆ ಇದೆ. ಕುತೂಹಲವೆಂದರೆ ಕಾರ್ಲ್ ಗುಸ್ತಾಫ್ ಎಂ4 ಸಿಸ್ಟಂ ಅನ್ನು ಸ್ವೀಡನ್ ದೇಶದಿಂದ ಹೊರಗೆ ತಯಾರಿಸಲಿರುವುದು ಇದೇ ಮೊದಲ ಬಾರಿ ಎನ್ನಲಾಗಿದೆ.
ಇದನ್ನೂ ಓದಿ: ಅತಿಹೆಚ್ಚು ಸರಕು ನಿರ್ವಹಣೆ, ಮುಂದ್ರಾ ಪೋರ್ಟ್ ಹೊಸ ದಾಖಲೆ; ಅದಾನಿ ಪೋರ್ಟ್ ಷೇರಿಗೆ ಹೆಚ್ಚಿದ ಬೇಡಿಕೆ
ಮುಂದಿನ ವರ್ಷದಿಂದ ಹರ್ಯಾಣದ ಘಟಕದಲ್ಲಿ ಸಾಬ್ ತನ್ನ ಹೊಸ ರಾಕೆಟ್ಗಳ ಉತ್ಪಾದನೆ ಶುರು ಮಾಡಲಿದೆ. ಇವೇ ರಾಕೆಟ್ಗಳನ್ನು ಭಾರತೀಯ ಸೇನೆಯಲ್ಲಿ ಹೆಚ್ಚೆಚ್ಚು ಬಳಸಲಾಗುತ್ತಿದೆ. ಇಷ್ಟು ದಿನ ಇವುಗಳನ್ನು ಸ್ವೀಡನ್ನಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಈಗ ಭಾರತದಲ್ಲೇ ಈ ರಾಕೆಟ್ಗಳು ತಯಾರಾಗುತ್ತಿವೆ. ಭಾರತೀಯ ಸೇನೆಗೆ ಮಾತ್ರವಲ್ಲ, ಇವುಗಳನ್ನು ಬೇರೆ ದೇಶಕ್ಕೆ ರಫ್ತು ಮಾಡಲೂ ಸಾಬ್ ಆಲೋಚಿಸುತ್ತಿದೆ. ಕಾರ್ಲ್ ಗುಸ್ತಾಫ್ ಎಂ4 ರಾಕೆಟ್ ಸಿಸ್ಟಂ ಅನ್ನು ಭಾರತೀಯ ಸೇನೆ ಮಾತ್ರವಲ್ಲ, ಅಮೆರಿಕ ಮತ್ತು ಯೂರೋಪಿಯನ್ ದೇಶಗಳೂ ಬಳಸುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ