ಭಾರತ್​ಜೆನ್ ಎಐನಿಂದ ಸ್ಕೈಏರ್​ವರೆಗೂ ದೆಹಲಿ ಶೃಂಗಸಭೆಯಲ್ಲಿ ಭಾರತೀಯರ ಎಐ ಶಕ್ತಿ ಪ್ರದರ್ಶನ

Great India AI growth story on display at Bharat Mandapam: ದೆಹಲಿಯ ಭಾರತ್ ಮಂಟಪಂನಲ್ಲಿ ಫೆಬ್ರುವರಿ 16ರಿಂದ 20ರವರೆಗೆ ನಡೆಯುತ್ತಿರುವ ಎಐ ಸಮಿಟ್​ನಲ್ಲಿ ಭಾರತೀಯರ ನೂರಾರು ಎಐ ಆವಿಷ್ಕಾರಗಳು ಅನಾವರಣಗೊಂಡಿವೆ. ಸರ್ವಮ್ ಎಐ, ಭಾರತ್ ಜೆನ್ ಎಐ, ಸ್ಕೈ ಏರ್, ಸೋವರಿನ್ ಏರ್ ಬಾಕ್ಸ್ ಇತ್ಯಾದಿ ವಿವಿಧ ಕ್ಷೇತ್ರಗಳ ಏಐ ಇನ್ನೋವೇಶನ್​ಗಳನ್ನು ಇಲ್ಲಿ ಕಾಣಬಹುದು.

ಭಾರತ್​ಜೆನ್ ಎಐನಿಂದ ಸ್ಕೈಏರ್​ವರೆಗೂ ದೆಹಲಿ ಶೃಂಗಸಭೆಯಲ್ಲಿ ಭಾರತೀಯರ ಎಐ ಶಕ್ತಿ ಪ್ರದರ್ಶನ
ಸ್ಕೈ ಏರ್

Updated on: Feb 18, 2026 | 12:46 PM

ನವದೆಹಲಿ, ಫೆಬ್ರುವರಿ 18: ಎಐ ಇಂಪ್ಯಾಕ್ಟ್ ಸಮಿಟ್​ನಲ್ಲಿ (AI Impact Summit) ಜಾಗತಿಕವಾಗಿ ಅಭಿವೃದ್ಧಿಯಾಗಿರುವ, ಅಭಿವೃದ್ಧಿಯಾಗುತ್ತಿರುವ ಎಐ ತಂತ್ರಜ್ಞಾನಗಳು, ನಾವೀನ್ಯತೆ, ಆವಿಷ್ಕಾರಗಳ ಪ್ರದರ್ಶನವಾಗುತ್ತಿದೆ. ಭಾರತದ ವತಿಯಿಂದ ನೂರಾರು ಸ್ಟಾಲ್​ಗಳಲ್ಲಿ ದೇಶದ ಎಐ ಭವಿಷ್ಯದ ದಿಗ್ಸೂಚಿಯನ್ನು ಕಾಣಬಹುದಾಗಿದೆ. ದೇಶೀಯವಾಗಿ ಅಭಿವೃದ್ಧಿಯಾದ ಎಐ ಫೌಂಡೇಶನಲ್ ಮಾಡಲ್​ಗಳಿಂದ ಹಿಡಿದು ರೋಬೋಟಿಕ್ಸ್​ವರೆಗೆ ನೂರಾರು ಇನ್ನೋವೇಶನ್​ಗಳನ್ನು ಭಾರತೀಯರು ಜಗತ್ತಿಗೆ ತೋರ್ಪಡಿಸಿದ್ದಾರೆ. ಮುಂಬರುವ ವರ್ಷಗಳಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ಎಐ ಆವಿಷ್ಕಾರಗಳು ನಡೆಯುವುದು ನಿಶ್ಚಿತವೆನಿಸಿದೆ.

ದೆಹಲಿಯ ಗಲ್ಗೋಟಿಯಾ ಯೂನಿವರ್ಸಿಟಿ ಇದೇ ಶೃಂಗಸಭೆಯಲ್ಲಿ ಸ್ಟಾಲ್ ಸ್ಥಾಪಿಸಿ, ಚೀನಾ ನಿರ್ಮಿತ ರೋಬೋನಾಯಿಯನ್ನು ಆವಿಷ್ಕರಿಸಿದ್ದು ತಾನೆಂದು ಹೇಳಿಕೊಂಡು ವಿವಾದ ಹುಟ್ಟುಹಾಕಿದೆ. ಈ ಘಟನೆಯು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ. ಗಲ್ಗೋಟಿಯಾ ಯೂನಿವರ್ಸಿಟಿಯ ಒಂದು ಪ್ರಮಾದ ಇಟ್ಟುಕೊಂಡು ಭಾರತದ ಎಐ ಸಾಧನೆಗಳನ್ನು ಹೀಗಳೆಯುವುದು ಸರಿಯಲ್ಲ ಎನ್ನುವ ವಾದ ಇದೆ. ಪತ್ರಕರ್ತ ತಪಸ್ ಭಟ್ಟಾಚಾರಿ ಅವರು ಸಮಿಟ್​ನಲ್ಲಿ ಪ್ರದರ್ಶನಗೊಂಡಿರುವ ಭಾರತದ ಇತರ ಎಐ ಆವಿಷ್ಕಾರಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ಕೆಲ ಮಹತ್ವದ ಎಐ ಆವಿಷ್ಕಾರಗಳು ಈ ಕೆಳಕಂಡಂತಿವೆ:

ಇದನ್ನೂ ಓದಿ: ಎಐ ಸಮಿಟ್​​ನಲ್ಲಿ ರಾರಾಜಿಸಿದ ಜಿಯೋ ಸ್ಟಾಲ್; ವಿವಿಧ ಮಾಡಲ್​ಗಳನ್ನು ಪ್ರಧಾನಿಗಳೆದುರು ತೆರೆದಿಟ್ಟ ಆಕಾಶ್ ಅಂಬಾನಿ

ಭಾರತ್ ಜೆನ್ ಎಐ

ಭಾರತ್ ಜೆನ್ ಸಂಸ್ಥೆ 22 ಭಾರತೀಯ ಭಾಷೆಗಳನ್ನು ಬೆಂಬಲಿಸುವಂತಹ 17 ಬಿಲಿಯನ್ ಪ್ಯಾರಾಮೀಟರ್​ನ ಮಲ್ಟಿಲಿಂಗ್ವಲ್ ಮಾಡಲ್ ಆದ ಪರಮ್ 27ಬಿ ಅನ್ನು ಅನಾವರಣಗೊಳಿಸಿದೆ. ಭಾರತದ ದತ್ತಾಂಶ ಬಳಸಿ ನಿರ್ಮಿತವಾಗಿರುವ ಈ ಎಐ ಮಾಡಲ್, ಆರೋಗ್ಯ, ಫಿನ್​ಟೆಕ್, ಆಡಳಿತ ಇತ್ಯಾದಿ ಕ್ಷೇತ್ರಗಳಲ್ಲಿ ಎಐ ಅಳವಡಿಕೆಯನ್ನು ಸುಲಭಗೊಳಿಸುತ್ತದೆ.

ParadigmIT ಸೋವರಿನ್ ಎಐ ಬಾಕ್ಸ್

ಪ್ಯಾರಾಡಿಗಮ್​ಐಟಿ ಕಂಪನಿಯ ಸೋವರಿನ್ ಎಐ ಬಾಕ್ಸ್ ಬಹುತೇಕ ದೇಶೀಯವಾಗಿ ನಿರ್ಮಿತಗೊಂಡ ಮಾಡಲ್. ಇದಕ್ಕೆ ಬೇಕಾಗುವ ದತ್ತಾಂಶವೆಲ್ಲವೂ ಭಾರತದ ಒಳಗೆಯೇ ಇರುತ್ತದೆ. ಸೂಕ್ಷ್ಮ ದತ್ತಾಂಶದ ರಕ್ಷಣೆ ಆಗುತ್ತದೆ.

ತಪಸ್ ಭಟ್ಟಾಚಾರಿ ಅವರ ಎಕ್ಸ್ ಪೋಸ್ಟ್

ಸ್ಕೈ ಏರ್ ಮೊಬಿಲಿಟಿ

ಸ್ಕೈ ಏರ್, ಅರೈವ್ ಎಐ ಮತ್ತು ಆಟ್ಟೋನಮಿ ಕಂಪನಿಗಳು ಜೊತೆಯಾಗಿ ಸೇರಿ ವಿಶ್ವದ ಮೊದಲ ಎಂಡ್-ಟು-ಎಂಡ್ ಆಟೊನಾಮಸ್ ಕಾಮರ್ಸ್ ಡೆಲಿವರಿ ಸಿಸ್ಟಂ ಅನ್ನು ನಿರ್ಮಿಸಿವೆ. ಇದರಲ್ಲಿ ಡ್ರೋನ್​ಗಳು ಪಾರ್ಸಲ್​ಗಳನ್ನು ಮನೆಬಾಗಿಲಿಗೆ ಸಾಗಿಸಬಲ್ಲವು. ಪ್ರಯೋಗಾವಧಿಯಲ್ಲಿ 36 ಲಕ್ಷಕ್ಕೂ ಅಧಿಕ ಡೋರ್ ಡೆಲಿವರಿ ಮಾಡಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಸ್ಕೈ ಏರ್ ಮೊಬಿಲಿಟಿ ಭಾರತೀಯ ಮೂಲದ ಕಂಪನಿಯಾಗಿದೆ. ಆಟ್ಟೋನಮಿ ಅಮೆರಿಕನ್ ಕಂಪನಿಯಾದರೂ ಭಾರತೀಯ ಮೂಲದವರು ಕಟ್ಟಿದ ಸಂಸ್ಥೆ.

ಇದನ್ನೂ ಓದಿ: ಭಾರತದಲ್ಲಿ ಬರಲಿವೆ 50ಕ್ಕೂ ಹೆಚ್ಚು ಡೀಪ್​ಟೆಕ್ ಕಂಪನಿಗಳು: ಅಶ್ವಿನಿ ವೈಷ್ಣವ್

ತಾರಕರಾಮ್ ಮಾರಂ

ತಾರಕರಾಮ್ ಮಾರಮ್ ನೇತೃತ್ವದ ವಿಶನ್ ಡಿಜಿಟಲ್ ಇಂಡಿಯಾದಿಂದ ಭಾರತದ ಮೊದಲ ಎಐ ಟ್ರೈನರ್ ಮೆಷೀನ್ ಅನಾವರಣಗೊಂಡಿದೆ. ಇಂಟೆಲ್ ನೆರವಿನಿಂದ ನಿರ್ಮಿಸಲಅದ ಎಐ ಲ್ಯಾಬ್ ಇದಾಗಿದೆ.

ಹಾಗೆಯೇ, ಸ್ಟಾರ್ಟಪ್ ಸನಾತನ ಎನ್ನುವ ಬೆಂಗಳೂರು ಮೂಲದ ಸಂಸ್ಥೆಯು ಭಾರತದ ಸಾಂಸ್ಕೃತಿಕ ಪರಂಪರೆ ರಕ್ಷಿಸಲು ಎಐ ಅಳವಡಿಕೆ ಮಾಡುತ್ತಿದೆ. ಇದೂ ಕೂಡ ಎಐ ಇಂಪ್ಯಾಕ್ಟ್ ಸಮಿಟ್​ನಲ್ಲಿ ಗಮನ ಸೆಳೆದ ಆವಿಷ್ಕಾರವಾಗಿದೆ.

ಅಗ್ನೀವ ಮತ್ತು ಆದಿತ್ಯ ಎನ್ನುವ ಯುವ ವಿದ್ಯಾರ್ಥಿಗಳು ಸ್ಥಾಪಿಸಿದ ಡ್ರುಬ್ಲೆಟ್ ಇನ್ನೋವೇಶನ್ ಪ್ರೈ ಲಿ ಸಂಸ್ಥೆಯ ರೋಬೋಟಿಕ್ಸ್ ತಂತ್ರಜ್ಞಾನ, ಸರ್ವಮ್ ಎಐನ ಭಾರತೀಯ ಭಾಷೆಗಳ ಎಐ ಮಾಡಲ್​ಗಳು, ರಿಲಾಯನ್ಸ್ ಜಿಯೋದ ವಿವಿಧ ಎಐ ಆವಿಷ್ಕಾರಗಳು ಹೀಗೆ ನೂರಾರು ಭಾರತೀಯರ ಎಐ ಸಾಧನೆಗಳು ಸಮಿಟ್​ನಲ್ಲಿ ಅನಾವರಣಗೊಂಡಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ