ಭಾರತ-ಅಮೆರಿಕ ಟ್ರೇಡ್ ಡೀಲ್ ಮಾತುಕತೆ ಬಹುತೇಕ ಪೂರ್ಣ: ವಾಣಿಜ್ಯ ಕಾರ್ಯದರ್ಶಿ

India US trade deal talks near completion, says commerce secretary Rajesh Agarwal: ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದ ಸದ್ಯದಲ್ಲೇ ಅಂತಿಮಗೊಳ್ಳುವ ಸಾಧ್ಯತೆ ಕಾಣುತ್ತಿದೆ. ಟ್ರೇಡ್ ಡೀಲ್​ಗೆ ಮಾತುಕತೆ ಪೂರ್ಣಗೊಳ್ಳಲು ಸಮೀಪ ಇದೆ ಎಂದು ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಹೇಳಿದ್ದಾರೆ. ಅಮೆರಿಕ ದೊಡ್ಡ ಆರ್ಥಿಕತೆಯಾಗಿರುವುದರಿಂದ ವಿಸ್ತೃತವಾದ ವ್ಯಾಪಾರ ಒಪ್ಪಂದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ ಎಂದಿದ್ದಾರೆ ಅವರು.

ಭಾರತ-ಅಮೆರಿಕ ಟ್ರೇಡ್ ಡೀಲ್ ಮಾತುಕತೆ ಬಹುತೇಕ ಪೂರ್ಣ: ವಾಣಿಜ್ಯ ಕಾರ್ಯದರ್ಶಿ
ಅಮೆರಿಕ

Updated on: Feb 02, 2026 | 7:44 PM

ನವದೆಹಲಿ, ಫೆಬ್ರುವರಿ 2: ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (India US trade deal) ಅಂತಿಮ ಹಂತದಲ್ಲಿದ್ದು, ಬಹುತೇಕ ಪೂರ್ಣಗೊಂಡಿದೆ ಎಂದು ವಾಣಿಜ್ಯ ಕಾರ್ಯದರ್ಶಿ ಹಾಗೂ ಈ ಡೀಲ್​ಗೆ ಭಾರತದ ಮುಖ್ಯ ಸಂಧಾನಕಾರರಾದ ರಾಜೇಶ್ ಅಗರ್ವಾಲ್ ಹೇಳಿದ್ದಾರೆ. ಡೀಲ್ ಮುಗಿದೇ ಹೋಯಿತು ಎಂದು ಆಗಾಗ್ಗೆ ಮಿಂಚಿ ಮಾಯವಾಗುತ್ತಿದ್ದ ಭರವಸೆಗೆ ರಾಜೇಶ್ ಅಗರ್ವಾಲ್ ಜೀವ ತುಂಬಿದ್ದಾರೆ. ಎರಡು ದೇಶಗಳ ನಡುವೆ ವ್ಯಾಪಾರ ಸಂಧಾನ ಸರಿಯಾದ ದಿಸೆಯಲ್ಲಿದೆ ಎನ್ನುವ ಸುಳಿವನ್ನು ಅವರು ನೀಡಿದ್ದಾರೆ.

ದೊಡ್ಡ ಡೀಲ್​ಗೆ ಹೆಚ್ಚು ಸಮಯ ಬೇಕು

ದೊಡ್ಡ ಆರ್ಥಿಕತೆಗಳ ನಡುವೆ ವ್ಯಾಪಾರ ಒಪ್ಪಂದ ಏರ್ಪಡಲು ಸಮಯ ಹಿಡಿಯುತ್ತದೆ ಎಂದು ವಾಣಿಜ್ಯ ಕಾರ್ಯದರ್ಶಿಗಳು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. ‘ಅಮೆರಿಕವು ದೊಡ್ಡ ಆರ್ಥಿಕತೆಯಾದ್ದರಿಂದ ಸಮಗ್ರವಾದ ಮುಕ್ತ ವ್ಯಾಪಾರ ಒಪ್ಪಂದವನ್ನು ಅಂತಿಮ ಗೊಳಿಸಲು ಹೆಚ್ಚು ಸಮಯ ಹಿಡಿಯುತ್ತದೆ’ ಎಂದಿದ್ದಾರೆ ಅವರು. ಆದರೆ, ವಿಸ್ತೃತವಾದ ಒಪ್ಪಂದ ಯಾವಾಗ ಪೂರ್ಣಗೊಳ್ಳುತ್ತದೆ ಎಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

ಭಾರತ ಕಳೆದ ತಿಂಗಳಷ್ಟೇ ಐರೋಪ್ಯ ಒಕ್ಕೂಟದ ಜೊತೆ ಬಹಳ ದೊಡ್ಡ ಒಪ್ಪಂದ ಮಾಡಿಕೊಂಡಿದೆ. ಬ್ರಿಟನ್, ಇಎಫ್​ಟಿಎ ದೇಶಗಳೊಂದಿಗೂ ಭಾರತ ಕಳೆದ ವರ್ಷ ಒಪ್ಪಂದ ಮಾಡಿಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜೇಶ್ ಅಗರ್ವಾಲ್, ‘ಈ ಎಲ್ಲಾ ಒಪ್ಪಂದಗಳು ಚಾಲನೆಗೆ ಬಂದ ಬಳಿಕ ಶೇ. 55-60ರಷ್ಟು ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತದ ರಫ್ತಿಗೆ ಆದ್ಯತೆಯ ಪ್ರವೇಶ ಸಿಗುತ್ತದೆ. ಇದರಿಂದ ಭಾರತದ ರಫ್ತು ಸ್ಪರ್ಧಾತ್ಮಕತೆ ಬಲಗೊಳ್ಳುತ್ತದೆ’ ಎಂದು ವಾಣಿಜ್ಯ ಕಾರ್ಯದರ್ಶಿಯಾದ ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಭಾರತದ ಬಗ್ಗೆ ಇಲಾನ್ ಮಸ್ಕ್ ಟ್ವೀಟ್; ರಾಹುಲ್ ಮತ್ತು ವಿಪಕ್ಷಗಳನ್ನು ಝಾಡಿಸಿದ ಕೇಂದ್ರ ಸಚಿವರು

ಭಾರತ 2024-25ರಲ್ಲಿ 825 ಬಿಲಿಯನ್ ಡಾಲರ್​ನಷ್ಟು ರಫ್ತು ಮಾಡಿತ್ತು. 2025-26ರಲ್ಲಿ 850 ಬಿಲಿಯನ್ ಡಾಲರ್ ರಫ್ತಿಗೆ ಗುರಿ ಇಡಲಾಗಿದೆ. ಭಾರತದ ರಫ್ತಿಗೆ ಅಮೆರಿಕವೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಆದರೆ, ಶೇ. 50ರಷ್ಟು ಟ್ಯಾರಿಫ್ ಇರುವ ಪರಿಣಾಮ ಭಾರತದ ರಫ್ತು ಹೆಚ್ಚಳಕ್ಕೆ ಪ್ರಮುಖ ತಡೆಯಾಗಿದೆ. ಐರೋಪ್ಯ ಒಕ್ಕೂಟ ಸೇರಿದಂತೆ ವಿವಿಧ ದೇಶಗಳ ನಡುವೆ ಮಾಡಿಕೊಂಡಿರುವ ಟ್ರೇಡ್ ಡೀಲ್​ಗಳು ಭಾರತದ ರಫ್ತಿಗೆ ಹೆಚ್ಚಿನ ವೈವಿಧ್ಯತೆ ಮತ್ತು ವಿಸ್ತೃತತೆ ತರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ